ಪದ್ಯ ೫೮: ಭೀಮನು ಆನೆಗಳ ಮೇಲೆ ಹೇಗೆ ಆಕ್ರಮಣ ಮಾಡಿದನು?

ಗುಳವನುಗಿದಾರೋಹಕರ ಮುಂ
ದಲೆಯ ಸೆಳೆದೊಡಮೆಟ್ಟಿದನು ಮಂ
ಡಳಿಸಿದೊಡ್ಡಿನ ಮೇಲೆ ಹಾಯ್ದನು ಹೊಯ್ದನುರವಣಿಸಿ
ಕಳಚಿದನು ದಾಡೆಗಳ ಭರಿಕೈ
ಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ (ಗದಾ ಪರ್ವ, ೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ಆನೆಯ ಕವಚಗಳನ್ನು ಕಿತ್ತು, ಜೋದರ ಮುಂದಲೆಗಳನ್ನು ಎಳೆದು ಅವರನ್ನು ಕಾಲಿನಿಂದ ಮೆಟ್ಟಿದನು. ಗುಂಪುಗುಂಪಾಗಿ ಬಂದ ಸೈನ್ಯದ ಮೇಲೆ ಹಾಯ್ದು ಹೊಯ್ದನು. ದಾಡೆಗಳನ್ನು ಕಿತ್ತು ಸೊಂಡಿಲುಗಳನ್ನು ಕಡಿದು, ಬಾಲವನ್ನು ಸೆಳೆದು ಆನೆಗಳನ್ನು ಕೊಡವಿ ಎಸೆದನು.

ಅರ್ಥ:
ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಉಗಿ: ಹೊರಹಾಕು; ಆರೋಹಕ: ಆನೆ, ಕುದುರೆ ಮೇಲೆ ಕೂತು ಹೋರಾಡುವ ಸೈನಿಕ; ಮುಂದಲೆ: ತಲೆಯ ಮುಂಭಾಗ; ಸೆಳೆ: ಜಗ್ಗು, ಎಳೆ; ಮೆಟ್ಟು: ತುಳಿ; ಒಡ್ಡು: ರಾಶಿ, ಸಮೂಹ; ಹಾಯ್ದು: ಹೊಡೆ, ಮೇಲೆಬೀಳು; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಕಳಚು: ಬೇರ್ಪಡಿಸು; ದಾಡೆ: ದಂತ; ಭರಿಕೈ: ಸೊಂಡಿಲು; ತುಂಡು: ಚೂರು; ವಾಲಧಿ: ಬಾಲ; ಬರ: ಹತ್ತಿರ; ಸೆಳೆ: ಹಿಡಿ; ಕೊಡಹು: ತಳ್ಳು; ಆನೆ: ಕರಿ; ವಿಧಾನ: ರೀತಿ;

ಪದವಿಂಗಡಣೆ:
ಗುಳವನ್+ಉಗಿದ್+ಆರೋಹಕರ+ ಮುಂ
ದಲೆಯ +ಸೆಳೆದೊಡ+ಮೆಟ್ಟಿದನು +ಮಂ
ಡಳಿಸಿದ್+ಒಡ್ಡಿನ +ಮೇಲೆ +ಹಾಯ್ದನು +ಹೊಯ್ದನ್+ಉರವಣಿಸಿ
ಕಳಚಿದನು +ದಾಡೆಗಳ +ಭರಿಕೈ
ಗಳನು +ತುಂಡಿಸಿ +ವಾಲಧಿಯ +ಬರ
ಸೆಳೆದು +ಕೊಡಹಿದನ್+ಆನೆಗಳ +ನಾನಾ+ವಿಧಾನದಲಿ

ಅಚ್ಚರಿ:
(೧) ಆನೆಯನ್ನು ಹೊರಹಾಕಿದ ಪರಿ – ಕಳಚಿದನು ದಾಡೆಗಳ ಭರಿಕೈಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ

ಪದ್ಯ ೫೧: ಅರ್ಜುನನ ಬಾಣಗಳು ಶತ್ರುಗಳ ಮೇಲೆ ಯಾವ ಪ್ರಭಾವ ಮಾಡಿದವು?

ಮುರಿದುದಸುರರ ಮಾಯೆ ಕಾಹಿ ನೊ
ಳೆರೆದ ರಸದವೊಲವರು ನಿಜದಲಿ
ತರುಬಿ ನಿಂದರು ತೂಳಿದರು ಗಜಹಯರಥೌಘದಲಿ
ತರಿದವುಗಿದವು ತುಂಡಿಸಿದವಗಿ
ದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ (ಅರಣ್ಯ ಪರ್ವ, ೧೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಅಸುರರ ಮಾಯೆಯು ಮಾಯವಾಗಲು, ಅಚ್ಚಿಗೆ ಹಾಕಿದ ರಸದಂತೆ ರಾಕ್ಶಸರ ನಿಜ ಸ್ವರೂಪವನ್ನು ಪಡೆದರು. ಚತುರಂಗ ಸೈನ್ಯದೊಡನೆ ನನ್ನನ್ನು ತಡೆದು ನಿಲ್ಲಿಸಿದರು. ನಾನು ಪ್ರಯೋಗಿಸಿದ ಬಾಣಗಳು ಶತ್ರು ರಾಕ್ಷಸರನ್ನು ತರಿದವು,ಚುಚ್ಚಿದವು, ಕಡಿದವು, ಅಪ್ಪಳಿಸಿದವು, ಸೀಳಿದವು, ಕೊಯ್ದವು ಕೊರೆದು ಕುಪ್ಪಳಿಸಿದವು.

ಅರ್ಥ:
ಮುರಿ: ಸೀಳು; ಅಸುರ: ರಾಕ್ಷಸ; ಮಾಯೆ: ಇಂದ್ರಜಾಲ, ಗಾರುಡಿ; ಕಾಹಿ: ರಕ್ಷಿಸುವವ; ಎರೆ: ಸುರಿ, ಹೊಯ್ಯು; ರಸ: ಸಾರ; ನಿಜ: ತನ್ನ, ದಿಟ; ತರುಬು: ತಡೆ, ನಿಲ್ಲಿಸು; ತೂಳು: ಆವೇಶ, ಉನ್ಮಾದ; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ಔಘ: ಗುಂಪು; ತರಿ: ಕಡಿ, ಕತ್ತರಿಸು; ಉಗಿ: ಹೊರಹಾಕು; ತುಂಡಿಸು: ಕತ್ತರಿಸು; ಎರಗು: ಬಾಗು; ಸೀಳು: ಕತ್ತರಿಸು; ಕೊಯ್ದು: ಕತ್ತರಿಸು; ಕೊರೆ: ಚೂರು, ಇರಿ; ಕುಪ್ಪಳಿಸು: ಜಿಗಿದು ಬೀಳು; ನಿಮಿಷ: ಕ್ಷಣ, ಕಾಲದ ಪ್ರಮಾಣ; ಶರ: ಬಾಣ; ಅರಿ: ವೈರಿ; ವ್ರಜ: ಗುಂಪು;

ಪದವಿಂಗಡಣೆ:
ಮುರಿದುದ್+ಅಸುರರ+ ಮಾಯೆ +ಕಾಹಿನೊಳ್
ಎರೆದ+ ರಸದವೊಲ್+ಅವರು+ ನಿಜದಲಿ
ತರುಬಿ+ ನಿಂದರು+ ತೂಳಿದರು+ ಗಜ+ಹಯ+ರಥ+ಔಘದಲಿ
ತರಿದವ್+ಉಗಿದವು +ತುಂಡಿಸಿದವ್+ಅಗಿದ್
ಎರಗಿದವು +ಸೀಳಿದವು +ಕೊಯ್ದವು
ಕೊರೆದು +ಕುಪ್ಪಳಿಸಿದವು+ ನಿಮಿಷಕೆ+ ಶರವ್+ಅರಿ+ವ್ರಜವ

ಅಚ್ಚರಿ:
(೧) ಆಯುಧಗಳ ಪ್ರಭಾವ – ತರಿದವುಗಿದವು ತುಂಡಿಸಿದವಗಿದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ