ಪದ್ಯ ೪೪: ಅಭಿಮನ್ಯುವು ದುಶ್ಯಾಸನನಿಗೆ ಹೇಗೆ ಉತ್ತರಿಸಿದನು?

ಕೊಳಚಿ ನೀರೊಳಗಾಳುತೇಳುತ
ಜಲಧಿ ಕಾಲ್ವೊಳೆಯೆಂಬ ಭಂಡರ
ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು
ಬಳಿಕ ಭೀಮಾರ್ಜುನರ ಬಯಸುವು
ದೆಲೆ ಮರುಳೆ ನಿನ್ನೊಡಲ ಸೀಳಿಯೆ
ತಿಳಿರಕುತದಲಿ ತಾಯ ತುರುಬನು ನಾದಿಸುವೆನೆಂದ (ದ್ರೋಣ ಪರ್ವ, ೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಉತ್ತರಿಸುತ್ತಾ, ಕೊಳಚೆ ನೀರಿನಲ್ಲಿ ಮುಳುಗುತ್ತಾ, ತೇಲುತ್ತಾ ಸಮುದ್ರವೇನು ಮಹಾ! ಕಾಲಿನಲ್ಲಿ ದಾಟುವ ಹೊಳೆ ಎಂದು ಮಾತನಾಡುವ ಭಂಡರ ಮೇಲೆ ಸಿಟ್ಟಾಗಿ ಏನು ಪ್ರಯೋಜನ. ಎಲವೋ ಹುಚ್ಚಾ, ಮೊದಲು ನಮ್ಮನ್ನು ಗೆದ್ದು ಆಮೇಲೆ ಭೀಮಾರ್ಜುನರ ಮಾತಾದು. ನಿನ್ನ ದೇಹವನ್ನು ಈಗಲೇ ಸೀಳಿ ನಿನ್ನ ತಿಳಿರಕ್ತದಿಂದ ನನ್ನ ತಾಯಿಯ ತುರುಬನ್ನು ತೋಯಿಸಿ ಕಟ್ಟುತ್ತೇನೆ ಎಂದು ಗುಡುಗಿದನು.

ಅರ್ಥ:
ಕೊಳಚೆ: ಗಲೀಜು; ನೀರು: ಜಲ; ಆಳುತೇಳು: ಮುಳುಗುತ್ತಾ, ತೇಲುತ್ತಾ; ಜಲಧಿ: ಸಾಗರ; ಕಾಲ್ವೊಳೆ: ಕಾಲಿನಲ್ಲಿ ದಾಟುವ ಹೊಳೆ; ಭಂಡ: ಮೂಢ; ಮುಳಿ: ಸಿಟ್ಟು, ಕೋಪ; ಮೊದಲು: ಆದಿ; ಗೆಲಿದು: ಜಯಿಸು; ಬಳಿಕ: ನಂತರ; ಬಯಸು: ಇಚ್ಛೆಪಡು; ಮರುಳ: ಮೂಢ; ಒಡಲು: ದೇಹ; ಸೀಳು: ಚೂರು, ತುಂಡು; ತಿಳಿ: ಶುದ್ಧವಾಗು, ಪ್ರಕಾಶಿಸು; ರಕುತ: ನೆತ್ತರು; ತಾಯಿ: ಮಾತೆ; ತುರುಬು: ಕೂದಲಿನ ಗಂಟು, ಮುಡಿ; ನಾದಿಸು: ಹದಮಾಡು, ಕಟ್ಟು;

ಪದವಿಂಗಡಣೆ:
ಕೊಳಚಿ+ ನೀರೊಳಗ್+ಆಳುತ್+ಏಳುತ
ಜಲಧಿ +ಕಾಲ್ವೊಳೆಯೆಂಬ+ ಭಂಡರ
ಮುಳಿದು +ಮಾಡುವುದೇನು+ ಮೊದಲಲಿ +ನಮ್ಮ +ನೀ +ಗೆಲಿದು
ಬಳಿಕ +ಭೀಮಾರ್ಜುನರ +ಬಯಸುವುದ್
ಎಲೆ+ ಮರುಳೆ+ ನಿನ್ನೊಡಲ +ಸೀಳಿಯೆ
ತಿಳಿರಕುತದಲಿ +ತಾಯ +ತುರುಬನು +ನಾದಿಸುವೆನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೊಳಚಿ ನೀರೊಳಗಾಳುತೇಳುತ ಜಲಧಿ ಕಾಲ್ವೊಳೆಯೆಂಬ ಭಂಡರ
ಮುಳಿದು ಮಾಡುವುದೇನು

ಪದ್ಯ ೩೬: ಭೀಮನು ಏನೆಂದು ಗರ್ಜಿಸಿದನು?

ಎಲವೊ ಭೀಷ್ಮರ ಮಾತುಗಳ ನೀ
ನೊಲಿವರೆಯು ಸಂಧಾನದಲಿ ನೀ
ನಿಲುವರೆಯು ದೇಹಾಭಿಲಾಷೆಗೆ ಬಲಿವರೆಯು ಮನವ
ಒಲಿದ ಭೀಮನೆ ನಿನ್ನ ಸಂಧಿಯ
ಕಳಚಿ ನಿನ್ನೊಡಹುಟ್ಟಿದೀತನ
ತಿಳಿರಕುತವನು ಸುರಿವನಲ್ಲದೆ ಬಿಡುವನಲ್ಲೆಂದ (ಭೀಷ್ಮ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತುಗಳನ್ನು ಕೇಳುತ್ತಿದ್ದ ಭೀಮನು, ಎಲವೋ ಕೌರವ, ನೀನು ಭೀಷ್ಮರ ಮಾತುಗಳಿಗೆ ಒಪ್ಪಿದರೂ, ಸಂಧಾನ ಮಾಡಿಕೊಂಡರೂ, ಬದುಕಬೇಕೆಂದು ನಿರ್ಧರಿಸಿದರೂ, ನಿನ್ನ ಸಂಧಿಯನ್ನು ಕಿತ್ತುಹಾಕಿ, ನಿನ್ನ ಒಡಹುಟ್ಟಿದ ದುಶ್ಯಾಸನನ ತಿಳಿರಕ್ತವನ್ನು ಸುರಿದುಕೊಳ್ಳದೆ ಬಿಡುವುದಿಲ್ಲ ಎಂದು ಗರ್ಜಿಸಿದನು.

ಅರ್ಥ:
ಮಾತು: ನುಡಿ; ಒಲಿ: ಒಪ್ಪು, ಸಮ್ಮತಿಸು; ಸಂಧಾನ: ಸೇರಿಸುವುದು, ಹೊಂದಿಸುವುದು; ನಿಲು: ನಿಲ್ಲು, ಇರು, ಉಳಿ; ದೇಹ: ತನು, ಕಾಯ; ಅಭಿಲಾಷೆ: ಇಚ್ಛೆ; ಬಲಿ: ಗಟ್ಟಿ, ದೃಢ; ಮನ: ಮನಸ್ಸು; ಕಳಚು: ಬೇರ್ಪಡಿಸು, ಕೀಳು; ಒಡಹುಟ್ಟು: ಜೊತೆಗೆ ಹುಟ್ಟಿದ, ತಮ್ಮ; ತಿಳಿ: ಸ್ವಚ್ಛತೆ, ನೈರ್ಮಲ್ಯ; ರಕುತ: ನೆತ್ತರು; ಸುರಿ: ಚೆಲ್ಲು; ಬಿಡು: ತೊರೆ;

ಪದವಿಂಗಡಣೆ:
ಎಲವೊ +ಭೀಷ್ಮರ +ಮಾತುಗಳ +ನೀನ್
ಒಲಿವರೆಯು +ಸಂಧಾನದಲಿ +ನೀ
ನಿಲುವರೆಯು +ದೇಹಾಭಿಲಾಷೆಗೆ+ ಬಲಿವರೆಯು+ ಮನವ
ಒಲಿದ+ ಭೀಮನೆ+ ನಿನ್ನ+ ಸಂಧಿಯ
ಕಳಚಿ +ನಿನ್ನೊಡಹುಟ್ಟಿದ್+ಈತನ
ತಿಳಿರಕುತವನು +ಸುರಿವನಲ್ಲದೆ +ಬಿಡುವನಲ್ಲೆಂದ

ಅಚ್ಚರಿ:
(೧) ಭೀಮನ ಆಕ್ರೋಶ – ಭೀಮನೆ ನಿನ್ನ ಸಂಧಿಯ ಕಳಚಿ ನಿನ್ನೊಡಹುಟ್ಟಿದೀತನ ತಿಳಿರಕುತವನು ಸುರಿವನಲ್ಲದೆ ಬಿಡುವನಲ್ಲೆಂದ
(೨) ೧, ೨ ಸಾಲಿನ ಕೊನೆ ಪದ “ನೀ” ಎಂದಿರುವುದು

ಪದ್ಯ ೧೩: ಕರ್ಣನ ಮಾತಿಗೆ ದ್ರೌಪದಿಯ ಉತ್ತರವೇನು?

ಎಲೆಗೆ ಭಜಿಸಾ ಕೌರವಾನ್ವಯ
ತಿಲಕನನು ನಿನ್ನವರ ಮರೆ ನಿ
ನ್ನುಳಿವ ನೆನೆಯೀ ಸಮಯದಲಿ ಕಾಲೋಚಿತ ಕ್ರಮವ
ಬಳಸು ನೀನೆನೆ ಗಜರಿದಳು ಕುರು
ತಿಲಕನನು ತರಿದೊಟ್ಟಿ ರಣದಲಿ
ತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ (ಸಭಾ ಪರ್ವ, ೧೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕರ್ಣನು, ಎಲೆ ದ್ರೌಪದಿ ನೀನು ಕುರುಕುಲತಿಲಕನಾದ ದುರ್ಯೋಧನನನ್ನು ಸೇವಿಸು, ಪಾಂಡವರನ್ನು ಮರೆತುಬಿಡು, ಈಗು ಉಳಿದುಕೊಳ್ಳುವುದನ್ನು ನೋಡಿ, ಕಾಲಕ್ಕೆ ತಕ್ಕಂತೆ ವರ್ತಿಸು ಎನ್ನಲು, ದ್ರೌಪದಿಯು ಕರ್ಣನನ್ನು ಗದರಿಸಿ, ಆ ಕುರುಕುಲತಿಲಕನನ್ನು ಮುಂದೆ ಯುದ್ಧದಲ್ಲಿ ಸೀಳಿ ಅವನ ತಿಳಿರಕ್ತವನ್ನು ಕುಡಿದು ಭೀಮನು ತಣಿಯುತ್ತಾನೆ ಎಂದು ಗರ್ಜಿಸಿದಳು.

ಅರ್ಥ:
ಭಜಿಸು: ಆರಾಧಿಸು; ಅನ್ವಯ: ವಂಶ, ಸಂಬಂಧ; ತಿಲಕ: ಶ್ರೇಷ್ಠ; ಮರೆ: ನೆನಪಿನಿಂದ ದೂರ ಮಾಡು; ಉಳಿವು: ಬದುಕು; ನೆನೆ: ಜ್ಞಾಪಿಸಿಕೋ; ಸಮಯ: ಕಾಲ; ಉಚಿತ: ಸರಿಯಾದ; ಕ್ರಮ: ರೀತಿ; ಬಳಸು: ಸುತ್ತುವರಿ, ಸುತ್ತುಗಟ್ಟು; ಗಜರು: ಗರ್ಜಿಸು; ತರಿ: ಸೀಳು; ರಣ: ಯುದ್ಧ; ತಿಳಿ: ನಿರ್ಮಲ, ಶುದ್ಧ; ರಕುತ: ನೆತ್ತರು; ದಣಿ: ಆಯಾಸ; ಅನಿಲಜ: ವಾಯುಪುತ್ರ (ಭೀಮ); ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಎಲೆಗೆ +ಭಜಿಸಾ +ಕೌರವ+ಅನ್ವಯ
ತಿಲಕನನು +ನಿನ್ನವರ +ಮರೆ +ನಿನ್
ಉಳಿವ+ ನೆನೆ+ಈ +ಸಮಯದಲಿ+ ಕಾಲೋಚಿತ+ ಕ್ರಮವ
ಬಳಸು +ನೀನ್+ಎನೆ +ಗಜರಿದಳು +ಕುರು
ತಿಲಕನನು +ತರಿದೊಟ್ಟಿ +ರಣದಲಿ
ತಿಳಿ+ರಕುತದಲಿ +ದಣಿವನ್+ಅನಿಲಜನ್+ಎಂದಳ್+ಇಂದುಮುಖಿ

ಅಚ್ಚರಿ:
(೧) ದ್ರೌಪದಿಯ ಗರ್ಜನೆ: ಕುರುತಿಲಕನನು ತರಿದೊಟ್ಟಿ ರಣದಲಿತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ