ಪದ್ಯ ೩೧: ಕೃಷ್ಣನೇಕೆ ರಥವನ್ನು ಹಿಂದಕ್ಕೆ ತಿರುಗಿಸಿದನು?

ಸಾಕು ನಿಮಗಾಗದು ವೃಥಾ ನೀ
ವೇಕಹಂಕರಿಸುವಿರಿ ಸೇನಾ
ನೀಕ ಹೊದ್ದಲಿ ಹೊಗಲಿ ದೃಷ್ಟದ್ಯುಮ್ನ ಮೊದಲಾಗಿ
ಆಕೆವಾಳರು ನಿಲಲಿ ಕುಪಿತ ಪಿ
ನಾಕಿಯರಿಯಾ ದ್ರೋಣನೆನುತ ನ
ರಾಕೃತಿಯ ಪರಬೊಮ್ಮರೂಪನು ತಿರುಹಿದನು ರಥವ (ದ್ರೋಣ ಪರ್ವ, ೧೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ಮನುಷ್ಯ ರೂಪಿನ ಪರಬ್ರಹ್ಮನಾದ ಶ್ರೀಕೃಷ್ಣನು ನುಡಿಯುತ್ತಾ, ನಿಮ್ಮ ಕೈಲಿ ಈ ಯುದ್ಧದಲ್ಲಿ ಗೆಲಲಾಗುವುದಿಲ್ಲ. ನೀವು ಏಕೆ ಅಹಂಕಾರದಿಂದ ಕಾದುತ್ತಿರುವಿರಿ? ದ್ರೋಣನೆದುರು ನಮ್ಮ ಸೈನ್ಯ ನಿಲ್ಲಲಿ, ಧೃಷ್ಟದ್ಯುಮ್ನನೇ ಮೊದಲಾದ ವೀರರು ನಿಲ್ಲಲಿ, ಈ ದ್ರೋಣನು ಕೋಪಗೊಂಡ ಶಿವ, ನಿಮಗೆ ತಿಳಿಯಲಿಲ್ಲವೇ ಎಂದು ರಥವನ್ನು ಹಿಂದಕ್ಕೆ ತಿರುಗಿಸಿದನು.

ಅರ್ಥ:
ಸಾಕು: ತಡೆ; ವೃಥ: ಸುಮ್ಮನೆ; ಅಹಂಕಾರ: ಗರ್ವ, ದರ್ಪ; ಸೇನೆ: ಸೈನ್ಯ; ಆನೀಕ: ಸಮೂಹ; ಹೊದ್ದು: ಪೊರ್ದು, ಸೇರು; ಹೊಗು: ತೆರಳು; ಮೊದಲಾಗಿ: ಮುಂತಾದ; ಆಕೆವಾಳ: ಪರಾಕ್ರಮಿ; ನಿಲಲಿ: ನಿಂತುಕೊಳ್ಳಲಿ; ಕುಪಿತ: ಕೋಪ; ಪಿನಾಕ: ತ್ರಿಶೂಲ; ಅರಿ: ಶಿವ; ನರ: ಮನುಷ್ಯ; ಆಕೃತಿ: ರೂಪ; ಪರಬೊಮ್ಮ: ಪರಬ್ರಹ್ಮ; ತಿರುಹು: ತಿರುಗಿಸು, ಮರಳು; ರಥ: ಬಂಡಿ;

ಪದವಿಂಗಡಣೆ:
ಸಾಕು +ನಿಮಗಾಗದು +ವೃಥಾ +ನೀವೇಕ್
ಅಹಂಕರಿಸುವಿರಿ +ಸೇನಾ
ನೀಕ+ ಹೊದ್ದಲಿ +ಹೊಗಲಿ +ದೃಷ್ಟದ್ಯುಮ್ನ +ಮೊದಲಾಗಿ
ಆಕೆವಾಳರು +ನಿಲಲಿ +ಕುಪಿತ +ಪಿ
ನಾಕಿ+ಅರಿ+ಆ +ದ್ರೋಣನ್+ಎನುತ +ನ
ರಾಕೃತಿಯ +ಪರಬೊಮ್ಮ+ರೂಪನು +ತಿರುಹಿದನು +ರಥವ

ಅಚ್ಚರಿ:
(೧) ದ್ರೋಣನನ್ನು ಹೋಲಿಸಿದ ಪರಿ – ಕುಪಿತ ಪಿನಾಕಿಯರಿಯಾ ದ್ರೋಣನೆನುತ
(೨) ಕೃಷ್ಣನನ್ನು ಕರೆದ ಪರಿ – ನರಾಕೃತಿಯ ಪರಬೊಮ್ಮರೂಪನು ತಿರುಹಿದನು ರಥವ