ಪದ್ಯ ೩೬: ಯಾರ ಹೊಡೆತವು ಸೈನ್ಯವನ್ನು ಧೂಳಿಪಟ ಮಾಡಿತು?

ಏನನೆಂಬೆನು ಜೀಯ ಕುರುಬಲ
ದಾನೆಗಳ ವಿಕ್ರಮವನತಿರಥ
ರೇನ ನಿಲುವರು ಕೆಲಬಲನ ಚತುರಂಗದುಪಹತಿಗೆ
ಭಾನುಮಂಡಲವಕಟ ತಿಮಿರಾಂ
ಭೋನಿಧಿಯಲಕ್ಕಾಡಿತೆಂಬವೊ
ಲಾ ನಿರಂತರ ದಳದ ಥಟ್ಟಣೆ ಧೂಳಿಪಟವಾಯ್ತು (ಗದಾ ಪರ್ವ, ೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ನಮ್ಮ ಸೈನ್ಯದ ಪರಾಕ್ರಮವನ್ನು ಹೇಗೆ ವರ್ಣಿಸಲಿ, ಈ ಚತುರಂಗ ಸೈನ್ಯದ ಕಾಟವನ್ನು ಅತಿರಥರೂ ತಡೆಯಲಾರರು. ಆದರೆ ಈ ಪರಾಕ್ರಮವೆಲ್ಲವೂ ಕತ್ತಲ ಕಡಲಂತೆ, ಅರ್ಜುನನು ಅದರಲ್ಲಿ ಮುಳುಗಿದ ಸೂರ್ಯನಂತೆ, ಅವನ ಹೊಡೆತಕ್ಕೆ ಈ ಸೈನ್ಯವು ಧೂಳಿಪಟವಾಯಿತು.

ಅರ್ಥ:
ಜೀಯ: ಒಡೆಯ; ಬಲ: ಸೈನ್ಯ; ಆನೆ: ಗಜ; ವಿಕ್ರಮ: ಶೂರ, ಸಾಹಸ; ಅತಿರಥ: ಪರಾಕ್ರಮಿ; ನಿಲು: ನಿಲ್ಲು, ತಡೆ; ಕೆಲಬಲ: ಅಕ್ಕಪಕ್ಕ, ಎಡಬಲ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉಪಹತಿ: ಹೊಡೆತ; ಭಾನು: ಸೂರ್ಯ; ಮಂಡಲ: ಜಗತ್ತು, ವರ್ತುಲಾಕಾರ; ಅಕಟ: ಅಯ್ಯೋ; ತಿಮಿರ: ಅಂಧಕಾರ; ಅಂಭೋನಿಧಿ: ಸಾಗರ; ಅಕ್ಕಾಡು: ನಷ್ಟವಾಗು; ನಿರಂತರ: ಯಾವಾಗಲು; ದಳ: ಸೈನ್ಯ; ಥಟ್ಟು: ಗುಂಪು; ಧೂಳಿ: ಮಣ್ಣಿನ ಪುಡಿ; ಧೂಳಿಪಟ: ನಾಶವಾಗುವಿಕೆ;

ಪದವಿಂಗಡಣೆ:
ಏನನೆಂಬೆನು+ ಜೀಯ +ಕುರುಬಲದ್
ಆನೆಗಳ+ ವಿಕ್ರಮವನ್+ಅತಿರಥರ್
ಏನ+ ನಿಲುವರು +ಕೆಲಬಲನ +ಚತುರಂಗದ್+ಉಪಹತಿಗೆ
ಭಾನುಮಂಡಲವ್+ಅಕಟ +ತಿಮಿರಾಂ
ಭೋನಿಧಿಯಲ್+ಅಕ್ಕಾಡಿತೆಂಬವೊಲ್
ಆ+ ನಿರಂತರ+ ದಳದ +ಥಟ್ಟಣೆ +ಧೂಳಿಪಟವಾಯ್ತು

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಾನುಮಂಡಲವಕಟ ತಿಮಿರಾಂಭೋನಿಧಿಯಲಕ್ಕಾಡಿತೆಂಬವೊಲ್
(೨) ಒಂದೇ ಪದವಾಗಿ ರಚನೆ – ತಿಮಿರಾಂಭೋನಿಧಿಯಲಕ್ಕಾಡಿತೆಂಬವೊಲ್