ಪದ್ಯ ೨೫: ಬಾಣವು ಕೃಷ್ಣನಿಗೆ ಎಲ್ಲಿ ತಾಗಿತು?

ಕೆಂಗರಿಯ ಮರಿದುಂಬಿ ತಾವರೆ
ಗಂಗವಿಸುವವೊಲಸುರರಿಪುವಿನ
ಮಂಗಳಾನನಕಮಲದಲಿ ಶರವಾಳೆ ಗರಿಗಡಿಯೆ
ತುಂಗವಿಕ್ರಮನಂಬ ಕಿತ್ತು ತ
ದಂಗರಕ್ತವಿಷೇಕರೌದ್ರಾ
ಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ (ಭೀಷ್ಮ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಷ್ಮನು ಬಿಟ್ಟ ಬಾಣವು ಕೆಂಗರಿಯ ಮರಿದುಂಬಿಯು ಕಮಲದೊಳಕ್ಕೆ ವೇಗವಾಗಿ ಹೋಗುವಂತೆ, ಶ್ರೀಕೃಷ್ಣನ ಮಂಗಳಕರವಾದ ಮುಖಕಮಲದತ್ತ ಹೋಗಿ, ಅವನ ಹಣೆಗೆ ನಟ್ಟಿತು. ಮಹಾಪರಾಕ್ರಮಿಯಾದ ಶ್ರೀಕೃಷ್ಣನು ಆ ಬಾಣವನ್ನು ಕೀಳಲು ಹೊರಚಿಮ್ಮಿದ ರಕ್ತಧಾರೆಯು ಅವನ ದೇಹಕ್ಕೆ ಅಭಿಷೇಕ ಮಾಡಿತು. ಆಗ ಶ್ರೀಕೃಷ್ಣನು ಭೀಷ್ಮನ ಉಪಟಳದಿಂದ ಮಹಾ ಕೋಪಾದ್ರಿಕನಾದನು.

ಅರ್ಥ:
ಕೆಂಗರಿ: ಕೆಂಪಾದ ರೆಕ್ಕೆ; ಮರಿ: ಚಿಕ್ಕ; ದುಂಬಿ: ಭ್ರಮರ; ತಾವರೆ: ಕಮಲ; ಅಂಗವಿಸು: ಬಯಸು, ಒಪ್ಪು; ಅಸುರರಿಪು: ರಾಕ್ಷಸನ ವೈರಿ (ಕೃಷ್ಣ); ಮಂಗಳ: ಶುಭ; ಆನನ: ಮುಖ; ಕಮಲ: ತಾವರೆ; ಶರವಾಳೆ: ಬಾಣಗಳ ಮಳೆ; ಗರಿ: ಬಾಣ; ಕಡಿ: ಸೀಳೂ; ತುಂಗ: ದೊಡ್ಡ, ಶ್ರೇಷ್ಠ; ವಿಕ್ರಮ: ಶೂರ, ಸಾಹಸ; ಅಂಬು: ಬಾಣ; ಕಿತ್ತು: ಕೀಳು; ರಕ್ತ: ನೆತ್ತರು; ವಿಷೇಕ: ಅಭಿಷೇಕ, ಮಜ್ಜನ; ರೌದ್ರ: ಕೋಪ; ಆಲಿಂಗಿತ: ತಬ್ಬಿಕೋ; ಬಲು: ಬಹಳ; ಖತಿ: ಕೋಪ; ಹಿಡಿ: ಗ್ರಹಿಸು; ಉಪಟಳ: ತೊಂದರೆ, ಹಿಂಸೆ;

ಪದವಿಂಗಡಣೆ:
ಕೆಂಗರಿಯ +ಮರಿದುಂಬಿ +ತಾವರೆಗ್
ಅಂಗವಿಸುವವೊಲ್+ಅಸುರರಿಪುವಿನ
ಮಂಗಳಾನನ+ಕಮಲದಲಿ +ಶರವಾಳೆ+ ಗರಿಗಡಿಯೆ
ತುಂಗವಿಕ್ರಮನ್+ಅಂಬ +ಕಿತ್ತು +ತದ್
ಅಂಗರಕ್ತ್ + ಅವಿಷೇಕ+ರೌದ್ರಾ
ಲಿಂಗಿತನು+ ಬಲುಖತಿಯ+ ಹಿಡಿದನು+ ಭೀಷ್ಮನ್+ಉಪಟಳಕೆ

ಅಚ್ಚರಿ:
(೧) ಅಸುರರಿಪು, ಮಂಗಳಾನನಕಮಲ, ತುಂಗವಿಕ್ರಮ – ಕೃಷ್ಣನನ್ನು ಕರೆದ ಪರಿ
(೨) ಉಪಮಾನ ಪ್ರಯೋಗ – ಕೆಂಗರಿಯ ಮರಿದುಂಬಿ ತಾವರೆಗಂಗವಿಸುವವೊಲ
(೩) ಕೃಷ್ಣನ ಮುಖಭಾವ – ತದಂಗರಕ್ತವಿಷೇಕರೌದ್ರಾಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ

ಪದ್ಯ ೬೭: ಸಂಜೆಯಾದುದನ್ನು ಹೇಗೆ ವಿವರಿಸಲಾಗಿದೆ?

ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ
ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ
ದೆಸೆದೆಸೆಯ ತಾಣಾಂತರದ ಹೊಂ
ಬಿಸಿಲು ಬೀತುದು ಜೀಯ ಬಿನ್ನಹ
ವಸುಧೆ ತಂಪೇರಿತ್ತು ಬಿಜಯಂಗೈಯಬೇಕೆಂದ (ವಿರಾಟ ಪರ್ವ, ೧೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ತಾವರೆಯ ದಳಗಲ ಮೇಲುಭಾಗಗಳು ಮುಚ್ಚುತ್ತಿವೆ, ಕನ್ನೈದಿಲೆಯ ನೆತ್ತಿಯು ಅರಳುತ್ತಿದೆ, ಚಕ್ರವಾಕ ಪಕ್ಷಿಗಳ ಆಲಿಂಗನವು ಸಡಿಲುತ್ತಿದೆ, ಎಲ್ಲೆಡೆಯಿದ್ದ ಹೊಂಬಿಸಿಲು ಮೆಲ್ಲಗೆ ಮಾಯವಾಗುತ್ತಿದೆ, ನೀವಿನ್ನು ದಯಮಾಡಿಸಿ ಎಂದು ಧರ್ಮಜನು ಕೃಷ್ಣನಿಗೆ ಹೇಳಿದನು.

ಅರ್ಥ:
ಎಸಳು: ಹೂವಿನ ದಳ; ಮೊನೆ: ಮುಖ; ತಾವರೆ: ಕಮಲ; ಮುಸುಕು: ಹೊದಿಕೆ; ನೆತ್ತಿ: ಮೇಲ್ಭಾಗ, ಶಿರ; ಬೆಸುಗೆ: ಪ್ರೀತಿ; ಬಿಡು: ತೊರೆ; ಜಕ್ಕವಕ್ಕಿ: ಚಕ್ರ ವಾಕ; ತೆಕ್ಕೆ: ಅಪ್ಪುಗೆ, ಆಲಿಂಗನ; ಸಡಿಲು: ಬಿಗಿಯಿಲ್ಲದಿರುವುದು; ದೆಸೆ: ದಿಕ್ಕು; ತಾಣ: ನೆಲೆ, ಬೀಡು; ಹೊಂಬಿಸಿಲು: ಚಿನ್ನದಂತಹ ಸೂರ್ಯನ ಕಿರಣ; ಬೀತು: ಕಳೆದು; ಜೀಯ: ಒಡೆಯ; ಬಿನ್ನಹ: ಕೋರಿಕೆ; ವಸುಧೆ: ಭೂಮಿ; ತಂಪು: ತಣಿವು, ಶೈತ್ಯ; ಬಿಜಯಂಗೈ: ದಯಮಾಡು;

ಪದವಿಂಗಡಣೆ:
ಎಸಳು+ಮೊನೆ+ ಮೇಲಾಗಿ +ತಾವರೆ
ಮುಸುಕುತಿದೆ+ ನೈದಿಲಿನ +ನೆತ್ತಿಯ
ಬೆಸುಗೆ +ಬಿಡುತಿದೆ +ಜಕ್ಕವಕ್ಕಿಯ +ತೆಕ್ಕೆ +ಸಡಿಲುತಿದೆ
ದೆಸೆದೆಸೆಯ +ತಾಣಾಂತರದ +ಹೊಂ
ಬಿಸಿಲು +ಬೀತುದು +ಜೀಯ +ಬಿನ್ನಹ
ವಸುಧೆ +ತಂಪೇರಿತ್ತು +ಬಿಜಯಂಗೈಯ+ಬೇಕೆಂದ

ಅಚ್ಚರಿ:
(೧) ಸಂಜೆಯಾಗುವುದನ್ನು ಸುಂದರವಾಗಿ ವರ್ಣಿಸುವ ಪರಿ – ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ

ಪದ್ಯ ೭೮: ದ್ರೌಪದಿಯು ಸಂತಸಗೊಂಡು ಯಾರ ಮನೆಗೆ ಬಂದಳು?

ಖಳ ಹಸಾದವ ಹಾಯ್ಕಿ ತನ್ನಯ
ನಿಳಯಕೈದಿದನಬುಜಬಾಂಧವ
ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
ನಳಿನಮುಖಿ ನಲವೇರಿ ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ಕಂಗಳ
ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ (ವಿರಾಟ ಪರ್ವ, ೩ ಸಂಧಿ, ೭೮ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೀಚಕನನ್ನು ನಾಟ್ಯಮಂದಿರಕ್ಕೆ ಬರಲು ಹೇಳಲು, ಆತ ಇದು ಮಹಾಪ್ರಸಾದವೆಂದು ಭಾವಿಸಿ ಆಕೆಗೆ ಕೈಮುಗಿದು ತನ್ನ ಮನೆಗೆ ಹೋದನು. ಸೂರ್ಯನು ಮುಳುಗಿದನು, ದ್ರೌಪದಿಯು ಸಂತೋಷಭರಿತಳಾಗಿ, ಕಗ್ಗತ್ತಲೆಯಲ್ಲಿ ತನ್ನ ಕಣ್ಣ ಬೆಳಕಿನ ಸಹಾಯದಿಂದ ಅಡುಗೆಯ ಮನೆಗೆ ಬಂದಳು.

ಅರ್ಥ:
ಖಳ: ದುಷ್ಟ; ಹಸಾದ: ಪ್ರಸಾದ, ಅನುಗ್ರಹ; ಹಾಯ್ಕಿ: ಬೀಸು, ತೆಗೆ; ನಿಳಯ: ಮನೆ; ಐದು: ಬಂದು ಸೇರು; ಅಬುಜ: ಕಮಲ; ಬಾಂಧವ: ಸಂಬಂಧಿಕ; ಅಬುಜಬಾಂಧವ: ಸೂರ್ಯ, ರವಿ; ಇಳಿ: ಕೆಳಕ್ಕೆ ಹೋಗು; ಅಸ್ತಾಚಲ: ಪಡುವಣದ ಬೆಟ್ಟ; ತಪ್ಪಲು: ಬೆಟ್ಟದ ತಳಭಾಗ; ತಾವರೆ: ಕಮಲ; ಬನ: ಕಡು; ನಳಿನಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ನಲ: ನಲಿವು, ಸಂತೋಷ; ಏರು: ಹೆಚ್ಚಾಗು; ಕಗ್ಗತ್ತಲೆ: ಗಾಡಾಂಧಕಾರ; ಹಬ್ಬುಗೆ: ಹರಡು; ಕಂಗಳು: ಕಣ್ಣು, ನಯನ; ಬೆಳಗು: ಪ್ರಕಾಶ; ಬಟ್ಟೆ: ಹಾದಿ, ಮಾರ್ಗ; ತೋರು: ಗೋಚರಿಸು; ಬಂದು: ಆಗಮಿಸು; ಬಾಣಸಿಗ: ಅಡುಗೆಯವ; ಮನೆ: ಆಲಯ;

ಪದವಿಂಗಡಣೆ:
ಖಳ +ಹಸಾದವ +ಹಾಯ್ಕಿ +ತನ್ನಯ
ನಿಳಯಕ್+ಐದಿದನ್+ಅಬುಜಬಾಂಧವನ್
ಇಳಿದನ್+ಅಸ್ತಾಚಲದ+ ತಪ್ಪಲ +ತಾವರೆಯ +ಬನಕೆ
ನಳಿನಮುಖಿ +ನಲವೇರಿ+ ಕಗ್ಗ
ತ್ತಲೆಯ+ ಹಬ್ಬುಗೆಯೊಳಗೆ+ ಕಂಗಳ
ಬೆಳಗು +ಬಟ್ಟೆಯ +ತೋರೆ +ಬಂದಳು +ಬಾಣಸಿನ +ಮನೆಗೆ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ಅಬುಜಬಾಂಧವನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
(೨) ದ್ರೌಪದಿಯ ಕಣ್ಣಿನ ಪ್ರಕಾಶ – ಕಗ್ಗತ್ತಲೆಯ ಹಬ್ಬುಗೆಯೊಳಗೆ ಕಂಗಳ ಬೆಳಗು ಬಟ್ಟೆಯ ತೋರೆ

ಪದ್ಯ ೪: ಯುಧಿಷ್ಠಿರನು ಯಾರನ್ನು ಕಂಡನು?

ಎನಲು ಬಂದನು ಭೀಮನಂಬುಜ
ವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ಕೊಳನ ತೋರಿಕೆಯ
ಬೆನುಗು ತುಂಬಿಯ ಜಾಳಿಗೆಯ ತನಿ
ಮಿನುಗು ಮೋರೆಯ ಕಣ್ಣಕೆಂಪಿನ
ಘನ ಭಯಂಕರ ಭೀಮನಿರವನು ಕಂಡನವನೀಶ (ಅರಣ್ಯ ಪರ್ವ, ೧೨ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಭೀಮನ ದಾರಿಯನ್ನು ಹಿಡಿದು ನಡೆಯಲು, ಕಮಲವನವೇ ಬಂದಂತೆ, ಭೀಮನು ತಾವರೆಯ ತೆಕ್ಕೆಯನ್ನು ಹೊತ್ತು ಕಮಲ ಸರೋವರವೇ ಬಂದಂತೆ ಬಂದನು, ಕಮಲಗಳಲ್ಲಿ ದುಂಬಿಗಳು ಸುತ್ತಲೂ ಹಾರಿ ಬರುತ್ತಿದ್ದವು, ಮಿನುಗು ಮೋರೆಯ ಕೆಂಗಣ್ಣಿನ ಭಯಂಕರ ಭೀಮನನ್ನು ಯುಧಿಷ್ಠಿರನು ನೋಡಿದನು.

ಅರ್ಥ:
ಅಂಬುಜ: ತಾವರೆ; ಬಂದು: ಆಗಮಿಸು; ಇದಿರು:ಎದುರು; ಕಂಪು: ಸುಗಂಧ; ತನಿ: ವನ: ಕಾಡು; ಸವಿಯಾದುದು; ರಸ: ಸಾರ; ತಾವರೆ: ಕಮಲ; ತೆಕ್ಕೆ: ಗುಂಪು, ಸಮೂಹ; ಕೊಳ: ಸರೋವರ; ತೋರು: ಕಾಣಿಸು; ಜಿನುಗು: ತೊಟ್ಟಿಕ್ಕು; ತುಂಬಿ: ದುಂಬಿ, ಭ್ರಮರ; ಜಾಳಿಗೆ: ಬಲೆ, ಜಾಲ; ಮಿನುಗು: ಹೊಳಪು; ಮೋರೆ: ಮುಖ; ಕಣ್ಣು: ನಯನ; ಕೆಂಪು: ರಕ್ತವರ್ಣ; ಘನ: ಗಟ್ಟಿ, ತೂಕ; ಭಯಂಕರ: ಘೋರವಾದ; ಇರವು: ಇರುವಿಕೆ, ಸ್ಥಿತಿ; ಅವನೀಶ: ರಾಜ; ಕಂಡು: ನೋಡು;

ಪದವಿಂಗಡಣೆ:
ಎನಲು+ ಬಂದನು +ಭೀಮನ್+ಅಂಬುಜ
ವನವ್+ಇದಿರು +ಬಂದಂತೆ +ಕಂಪಿನ
ತನಿ+ರಸದ +ತಾವರೆಯ +ತೆಕ್ಕೆಯ +ಕೊಳನ +ತೋರಿಕೆಯ
ಬೆನುಗು +ತುಂಬಿಯ +ಜಾಳಿಗೆಯ +ತನಿ
ಮಿನುಗು +ಮೋರೆಯ +ಕಣ್ಣ+ಕೆಂಪಿನ
ಘನ +ಭಯಂಕರ +ಭೀಮನ್+ಇರವನು +ಕಂಡನ್+ಅವನೀಶ

ಅಚ್ಚರಿ:
(೧) ಭೀಮನ ವರ್ಣನೆ – ಮಿನುಗು ಮೋರೆಯ ಕಣ್ಣಕೆಂಪಿನ ಘನ ಭಯಂಕರ ಭೀಮ
(೨) ಉಪಮಾನದ ಬಳಕೆ – ಬಂದನು ಭೀಮನಂಬುಜವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ಕೊಳನ ತೋರಿಕೆಯ

ಪದ್ಯ ೪೮: ಭೀಮನು ಯಕ್ಷರಿಗೆ ಏನು ಹೇಳಿದನು?

ನಾವಲೇ ಕುಂತೀಕುಮಾರರು
ಭೂವಧೂವಲ್ಲಭರು ನಮ್ಮಯ
ದೇವಿಗಾದುದು ಬಯಕೆ ಸೌಗಂಧಿಕ ಸರೋರುಹದ
ಠಾವು ಕಾಣಿಸಿಕೊಂಡು ಬಹುದಾ
ತಾವರೆಯನೆನೆ ಬಂದೆವಿಲ್ಲಿಗೆ
ನೀವು ಕಾಹಿನಬಂಟರೆಂಬುದನರಿಯೆ ನಾನೆಂದ (ಅರಣ್ಯ ಪರ್ವ, ೧೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಾವು ಕುಂತೀಕುಮಾರರು, ಭೂಮಿಯ ಒಡೆಯರು, ನಮ್ಮ ದೇವಿಯು ಸೌಗಂಧಿಕ ಪುಷ್ಪವನ್ನು ಬಯಸಿದಳು, ಈ ಕಮಲ ಪುಷ್ಪವನ್ನು ತೆಗೆದುಕೊಂಡು ಬಾ ಎಂದು ಆಕೆ ಕೋರಿದುದರಿಂದ ನಾವಿಲ್ಲಿಗೆ ಬಂದೆವು, ಈ ಸರೋವರವನ್ನು ಕಾಯಲು ನೀವಿಷ್ಟು ಜನರಿದ್ದೀರಿ ಎನ್ನುವುದು ನನಗೆ ತಿಳಿದಿರಲಿಲ್ಲ ಎಂದು ಭೀಮನು ನುಡಿದನು.

ಅರ್ಥ:
ಕುಮಾರ: ಮಕ್ಕಳು; ಭೂ: ಭೂಮಿ; ವಧು: ಹೆಣ್ಣು; ವಲ್ಲಭ: ಒಡೆಯ, ಪ್ರಭು; ಭೂವಧೂವಲ್ಲಭ: ರಾಜ; ದೇವಿ: ಸ್ತ್ರಿ, ಹೆಣ್ಣು; ಬಯಕೆ: ಆಸೆ; ಸರೋರುಹ: ಕಮಲ; ಠಾವು: ಸ್ಥಳ, ಜಾಗ; ಕಾಣಿಸು: ತೋರು; ಬಹುದಾ: ತೆಗೆದುಕೊಂಡು ಬಾ; ತಾವರೆ: ಕಮಲ; ಬಂದೆ: ಆಗಮಿಸು; ಕಾಹಿನ: ಕಾವಲು, ರಕ್ಷಣೆ; ಬಂಟ: ಸೇವಕ; ಅರಿ: ತಿಳಿ;

ಪದವಿಂಗಡಣೆ:
ನಾವಲೇ+ ಕುಂತೀ+ಕುಮಾರರು
ಭೂವಧೂವಲ್ಲಭರು+ ನಮ್ಮಯ
ದೇವಿಗಾದುದು +ಬಯಕೆ +ಸೌಗಂಧಿಕ+ ಸರೋರುಹದ
ಠಾವು +ಕಾಣಿಸಿಕೊಂಡು +ಬಹುದಾ
ತಾವರೆಯನೆನೆ+ ಬಂದೆವಿಲ್ಲಿಗೆ
ನೀವು +ಕಾಹಿನ+ಬಂಟರೆಂಬುದನ್+ಅರಿಯೆ +ನಾನೆಂದ

ಅಚ್ಚರಿ:
(೧) ರಾಜ ಎನ್ನಲು ಭೂವಧೂವಲ್ಲಭ ಪದದ ಬಳಕೆ
(೨) ಸರೋರುಹ, ತಾವರೆ – ಸಮನಾರ್ಥಕ ಪದ

ಪದ್ಯ ೧೦: ವೃಷಸೇನನ ಬಾಣಗಳು ಹೇಗೆ ಮುತ್ತಿದವು?

ಫಲಿತ ಶಾಳೀವನದ ಮುತ್ತಿದ
ಗಿಳಿಗಳೋ ತಾವರೆಯ ತೆಕ್ಕೆಯೊ
ಳಿಳಿದ ಮರಿದುಂಬಿಗಳೊ ವೃಷಸೇನನ ಶರಾವಳಿಯೊ
ಹಿಳುಕು ಹೇರಿದವಾತನಶ್ವಾ
ವಳಿಯಲಾತನ ಸೂತನೊಡಲಲಿ
ಹಲವು ಮಾತೇನಾತನಂಗೋಪಾಂಗ ನಿಕರದಲಿ (ಕರ್ಣ ಪರ್ವ, ೨೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ತೆನೆಬಿಟ್ಟ ಬತ್ತದ ಗದ್ದೆಯನ್ನು ಮುತ್ತುವ ಗಿಳಗಳ ತೆರದಿ, ತಾವರೆಯ ವನದಲ್ಲಿ ಮುತ್ತಿದ ಮರಿದುಂಬಿಗಳ ತೆರದಿ ವೃಷಸೇನನ ಬಾಣಗಳು ಭೀಮನ ರಥದ ಕುದುರೆಗಳು, ಅವನ ಸಾರಥಿ, ಭೀಮನ ದೇಹ ಇವುಗಳ ಮೇಲೆ ಮುತ್ತಿದವು.

ಅರ್ಥ:
ಫಲಿತ: ಹಣ್ಣಾದ; ಶಾಳಿ: ಬತ್ತ; ವನ: ಕಾಡು; ಮುತ್ತು: ಆವರಿಸು; ಗಿಳಿ: ಶುಕ; ತಾವರೆ: ಕಮಲ; ತೆಕ್ಕೆ: ಗುಂಪು; ಇಳಿ: ಕೆಳಕ್ಕೆ ಬರು; ಮರಿ: ಚಿಕ್ಕ; ದುಂಬಿ: ಜೇನುನೊಣ; ಶರಾವಳಿ: ಬಾಣದ ಗುಂಪು; ಹಿಳುಕು: ಬಾಣದ ಗರಿ; ಹೇರು: ಬಡಿ, ಹೊಡೆ; ಅಶ್ವ:ಕುದುರೆ; ಆವಳಿ: ಗುಂಪು; ಸೂತ: ರಥವನ್ನು ಓಡಿಸುವವ; ಒಡಲು:ಶರೀರ; ಹಲವು: ಬಹಳ; ಅಂಗೋಪಾಂಗ: ಶರೀರದ ಅತ್ಯಂತವಾದ ನಾಡಿ; ನಿಕರ: ಗುಂಪು;

ಪದವಿಂಗಡಣೆ:
ಫಲಿತ +ಶಾಳೀವನದ +ಮುತ್ತಿದ
ಗಿಳಿಗಳೋ +ತಾವರೆಯ +ತೆಕ್ಕೆಯೊಳ್
ಇಳಿದ +ಮರಿದುಂಬಿಗಳೊ +ವೃಷಸೇನನ +ಶರಾವಳಿಯೊ
ಹಿಳುಕು +ಹೇರಿದವ್+ಆತನ್+ಅಶ್ವಾ
ವಳಿಯಲ್+ಆತನ+ ಸೂತನ್+ಒಡಲಲಿ
ಹಲವು+ ಮಾತೇನ್+ಆತನ್+ಅಂಗೋಪಾಂಗ +ನಿಕರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಫಲಿತ ಶಾಳೀವನದ ಮುತ್ತಿದಗಿಳಿಗಳೋ ತಾವರೆಯ ತೆಕ್ಕೆಯೊ
ಳಿಳಿದ ಮರಿದುಂಬಿಗಳೊ ವೃಷಸೇನನ ಶರಾವಳಿಯೊ

ಪದ್ಯ ೬: ಅರ್ಜುನನು ಧರ್ಮಜನಿಗೆ ಯಾವ ಭಾಷೆಯನ್ನು ನೀಡಿದನು?

ಬರಸು ಭಾಷೆಯನಿಂದು ಕರ್ಣನ
ಶಿರವುಳಿದು ತಾವರೆಯ ನಗೆ ಪೈ
ಸರಿಸಿದರೆ ಮೈಬೆಸುಗೆ ಬಿಟ್ಟರೆ ಜಕ್ಕವಕ್ಕಿಗಳ
ಇರುಳ ಬೀಜವನಿಂದು ನಭದಲಿ
ಹರಹಿದರೆ ಕಲಿ ಭೀಮನಯ್ಯನ
ಹರಹು ನಿಂದರೆ ಬಳಿಕ ನಿಮ್ಮಯ ತಮ್ಮನಲ್ಲೆಂದ (ಕರ್ಣ ಪರ್ವ, ೧೮ ಸಂಧಿ, ೬ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮಜನಿಗೆ ಅತ್ಯಂತ ಉತ್ಸಾಹದಿಂದ, ರಾಜ ಇದನ್ನು ಬರೆದುಕೋ, ಕರ್ಣನ ತಲೆ ಉಳಿದುಕೊಂಡು, ಕಮಲಗಳು ಮುಚ್ಚಿದರೆ, ಚಕ್ರವಾಕ ಸಂತಸದಿಂದ ಸೇರುವುದನ್ನು ಬಿಟ್ಟರೆ, ರಾತ್ರಿಯು ಕತ್ತಲಿನ ಬೀಜವನ್ನು ಆಗಸದಲ್ಲಿ ಬಿತ್ತಿದರೆ, ಗಾಳಿ ನಿಂತರೆ ನಾನು ನಿಮ್ಮ ತಮ್ಮನೇ ಅಲ್ಲ ಎಂದು ನುಡಿದನು.

ಅರ್ಥ:
ಬರಸು: ಲಿಖಿತವಾಗಿಸು; ಭಾಷೆ: ಮಾತು, ಆಣೆ; ಶಿರ: ತಲೆ; ಉಳಿ: ಜೀವಿಸು, ಹೊರತಾಗು; ತಾವರೆ: ಕಮಲ; ನಗೆ: ಅರಳು, ಸಂತಸ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ;ಮೈ: ತನು; ಬೆಸುಗೆ: ಪರಸ್ಪರ ಸೇರುವುದು, ಒಂದಾಗುವುದು; ಬಿಡು: ತ್ಯಜಿಸು; ಜಕ್ಕವಕ್ಕಿ: ಚಕ್ರವಾಕ ಪಕ್ಷಿ; ಇರುಳು: ರಾತ್ರಿ; ಬೀಜ:ಉತ್ಪತ್ತಿ ಸ್ಥಾನ, ಮೂಲ; ಹರಹು: ಹಬ್ಬುವಿಕೆ, ಪ್ರಸರ; ನಭ: ಆಗಸ; ಕಲಿ: ಶೂರ; ಅಯ್ಯ: ತಂದೆ; ನಿಂದರೆ: ನಿಲ್ಲು, ತಡೆ; ಬಳಿಕ: ನಂತರ; ತಮ್ಮ: ಸಹೋದರ;

ಪದವಿಂಗಡಣೆ:
ಬರಸು +ಭಾಷೆಯನ್+ಇಂದು +ಕರ್ಣನ
ಶಿರವುಳಿದು+ ತಾವರೆಯ +ನಗೆ +ಪೈ
ಸರಿಸಿದರೆ +ಮೈಬೆಸುಗೆ +ಬಿಟ್ಟರೆ +ಜಕ್ಕವಕ್ಕಿಗಳ
ಇರುಳ +ಬೀಜವನ್+ಇಂದು+ ನಭದಲಿ
ಹರಹಿದರೆ +ಕಲಿ +ಭೀಮನ್+ಅಯ್ಯನ
ಹರಹು +ನಿಂದರೆ +ಬಳಿಕ +ನಿಮ್ಮಯ +ತಮ್ಮನಲ್ಲೆಂದ

ಅಚ್ಚರಿ:
(೧) ಕಮಲ ಮುದುಡಿದರೆ ಎಂದು ಹೇಳಲು – ತಾವರೆಯ ನಗೆ ಪೈಸರಿಸಿದರೆ
(೨) ವಾಯು ಎಂದು ಹೇಳಲು – ಭೀಮನಯ್ಯನ ಹರಹು ಎಂದು ಬಳಸಿರುವುದು

ಪದ್ಯ ೧೦೯: ಭೀಮ ಜರಾಸಂಧರ ಸಾಧನೆ ಹೇಗಿತ್ತು?

ಆವ ಸಾಧನೆಯೋ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈವಳಿಯಲುಕ್ಕಿದುದು ಕಡುಹಿನ ಖತಿಯ ಕೈಮಸಕ
ತಾವರೆಯತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲು ನೋಟದೊ
ಳಾವಿಗಡರುಗಳಡಸಿ ತಿವಿದಾಡಿದರು ಬೇಸರದೆ (ಸಭಾ ಪರ್ವ, ೨ ಸಂಧಿ, ೧೦೯ ಪದ್ಯ)

ತಾತ್ಪರ್ಯ:
ಭೀಮ ಜರಾಸಂಧರು ಅದೆಂಥ ಸಾಧನೆಯನ್ನು ಮಾಡಿದ್ದರೋ! ಅವರ ಹೊಡೆತದ ಭರಕ್ಕೆ ಬೆಟ್ಟಗಳು ಬಿರುಕುಬಿಟ್ಟವು. ಪರಾಕ್ರಮ ಮಹಾಕೋಪಗಳು ಅವರ ಮೈದುಂಬಿ ಉಕ್ಕಿ ಬಂದವು. ಸೂರ್ಯ ಚಂದ್ರರಿಬ್ಬರೂ ಆಕಾಶದಿಂದ ನೋಡುತ್ತಿರಲು ಅವರು ಮುಷ್ಟಾಮುಷ್ಟಿ ಯುದ್ಧವನ್ನು ಬೇಸರವಿಲ್ಲದೆ ಮುಂದುವರೆಸಿದರು.

ಅರ್ಥ:
ಸಾಧನೆ: ಪರಿಶ್ರಮ, ಅಭ್ಯಾಸ; ವಿಘಾತಿ: ಹೊಡೆತ, ವಿರೋಧ; ಅದ್ರಿ: ಬೆಟ್ಟ; ಬಿರಿ: ಸೀಳು ಬಿಡು; ಮೈವಳಿ: ವಶ, ಅಧೀನ; ಉಕ್ಕು: ಹೆಚ್ಚಾಗು; ಕಡುಹು: ಪರಾಕ್ರಮ; ಖತಿ: ರೇಗುವಿಕೆ, ಕೋಪ;ಕೈಮಸಕ: ಮಾಟ; ತಾವರೆ: ಕಮಲ; ಕುಮುದ:ಬಿಳಿಯ ನೈದಿಲೆ; ಜೀವಿ: ಪ್ರಾಣಿ, ಪಕ್ಷಿ; ಮಿಗೆ: ಮತ್ತು; ನೋಟ: ದೃಷ್ಟಿ; ಬೇಸರ: ಬೇಜಾರು; ತಿವಿದಾಡು: ಹೋರಾಡು;

ಪದವಿಂಗಡಣೆ:
ಆವ +ಸಾಧನೆಯೋ +ವಿಘಾತಿಯಲ್
ಆವಣಿಗೆಗ್+ಅದ್ರಿಗಳು +ಬಿರಿದವು
ಮೈವಳಿಯಲ್+ಉಕ್ಕಿದುದು +ಕಡುಹಿನ+ ಖತಿಯ +ಕೈಮಸಕ
ತಾವರೆಯತ್+ಎತ್ತಿಗನ+ ಕುಮುದದ
ಜೀವಿಗನ +ಮಿಗೆ +ಮೇಲು +ನೋಟದೊಳ್
ಆವಿಗಡರ್+ಉಗಳಡಸಿ +ತಿವಿದಾಡಿದರು+ ಬೇಸರದೆ

ಅಚ್ಚರಿ:
(೧) ಸೂರ್ಯ ಚಂದ್ರರು ಎಂದು ಹೇಳಲು – ತಾವರೆಯತೆತ್ತಿಗನ ಕುಮುದದ ಜೀವಿಗನ

ಪದ್ಯ ೧೮: ದ್ರೌಪದಿಯ ಸೌಂದರ್ಯವು ಏಕೆ ಚಿತ್ರಿಸಲು ಅಸಾಧ್ಯ?

ಸರಸಲಾವಣ್ಯಾಂಬುಮಯ ತನು
ಸರಸಿಯಲಿ ಮುಳುಗಿರ್ದ ಯೌವನ
ಕರಿಯ ಕುಂಭಸ್ಥಳವೊ ವಿಪುಳ ಪಯೋಧರ ದ್ವಯವೊ
ತರಳ ನಯನವೊ ಶಫರಿಗಳೊ ತಾ
ವರೆಯೊಮುಖವೋ ತುಂಬಿಗಳೊ ನಿರಿ
ಗುರುಳುಗಳೊ ಮಣಿಗಣವೊ ರದನವೊ ಚಿತ್ರವಾಯ್ತೆಂದ (ಆದಿ ಪರ್ವ, ೧೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಸೌಂದರ್ಯ, ಚೆಲುವಿನಿಂದ ಕೂಡಿದ ನೀರು ತುಂಬಿದ ದೇಹವೆಂಬ ಸರೋವರದಲ್ಲಿ ಮುಳುಗಿರುವ ಯೌವನವೆಂಬ ಆನೆಯ ತಲೆಯೋ ಅಥವ ತುಂಬು ಸ್ತನವೋ, ಚಂಚಲವಾದ ಕಣ್ನುಗಳೊ ಅಥವ ಮೀನುಗಳೊ, ಸರೋವರದಲ್ಲಿರುವ ಕಮಲವೋ ಅಥವ ಮುಖವೋ, ಕಮಲಕ್ಕೆ ಆಕರ್ಷಿತವಾಗಿ ಬರುವ ಮರಿದುಂಬಿಯೋ ಅಥವ ಆಕೆಯ ಮುಂಗುರುಳೊ, ಸರೋವರದಲ್ಲಿ ಸಿಗುವ ಮಣಿಯೋ ಅಥವ ಆಕೆಯ ಹಲ್ಲೋ, ಹೀಗೆ ಯಾವುದೆಂದು ಹೇಳಲು ಬಾರದಂತೆ ದ್ರೌಪದಿಯ ಸೌಂದರ್ಯವು ಚಿತ್ರಿತವಾಗಿತ್ತು.

ಅರ್ಥ:
ಸರಸ: ಚೆಲುವು, ವಿನೋದ; ಲಾವಣ್ಯ: ಸೌಂದರ್ಯ, ಚೆಲುವು; ಅಂಬು: ನೀರು; ತನು: ಮೈ, ದೇಹ; ಸರಸಿ: ಸರೋವರ; ಮುಳುಗು: ಒಳಸೇರು, ಮುಚ್ಚಿಹೋಗು; ಯೌವನ: ಹರಯ, ತಾರುಣ್ಯ, ಪ್ರಾಯ; ಕರಿ: ಆನೆ; ಕುಂಭ: ಕಲಶ, ಆನೆಯ ನೆತ್ತಿ; ವಿಪುಳ: ತುಂಬ; ಪಯೋಧರ: ಮೊಲೆ, ಸ್ತನ; ದ್ವಯ: ಎರಡು; ತರಳ: ಚಂಚಲತೆ, ಬೆರಗು; ನಯನ: ಕಣ್ಣು; ಶಫರಿ: ಮೀನು; ತಾವರೆ: ಕಮಲ; ಮುಖ: ವಕ್ತ್ರ, ಆನನ; ತುಂಬಿ: ದುಂಬಿ, ಭ್ರಮರ; ನಿರಿಗುರುಳು: ಗುಂಗುರಾದ ಮುಂಗುರುಳು; ಮಣಿ: ಮುತ್ತು; ರದನ: ಹಲ್ಲು; ಚಿತ್ರ: ಆಕೃತಿ;

ಪದವಿಂಗಡಣೆ:
ಸರಸ+ಲಾವಣ್ಯ+ಅಂಬುಮಯ+ ತನು
ಸರಸಿಯಲಿ +ಮುಳುಗಿರ್ದ +ಯೌವನ
ಕರಿಯ+ ಕುಂಭಸ್ಥಳವೊ+ ವಿಪುಳ+ ಪಯೋಧರ +ದ್ವಯವೊ
ತರಳ+ ನಯನವೊ +ಶಫರಿಗಳೊ +ತಾ
ವರೆಯೊ+ಮುಖವೋ +ತುಂಬಿಗಳೊ+ ನಿರಿ
ಗುರುಳುಗಳೊ +ಮಣಿಗಣವೊ +ರದನವೊ +ಚಿತ್ರವಾಯ್ತೆಂದ

ಅಚ್ಚರಿ:
(೧) ಸೌಂದರ್ಯವನ್ನು ವರ್ಣಿಸಲು ಉಪಯೋಗಿಸಿರುವ ಉಪಮಾನಗಳು – ಲಾವಣ್ಯವೆಂಬ ನೀರು ತುಂಬಿದ ದೇಹವೆಂಬ ಸರೋವರ
(೨) ಅಂಬು, ಸರಸಿ – ನೀರು ಪದದ ಸಮಾನಾರ್ಥಕ
(೩) ಸರಸ, ಲಾವಣ್ಯ – ಚೆಲುವು; ಸರಸ, ತರಳ – ಚಂಚಲತೆ; – ಸಮಾನಾರ್ಥಕ ಪದಗಳು
(೪) ಕುಂಭಸ್ಥಳ – ಮೊಲೆ, ನಯನ – ಕಣ್ಣು, ತಾವರೆ – ಮುಖ, ದುಂಬಿ – ಗುಂಗುರು, ಮಣಿ – ಹಲ್ಲು – ಸೌಂದರ್ಯವನ್ನು ಹೋಲಿಸುವ ಉಪಮಾನ ಪದಗಳು