ಪದ್ಯ ೨: ಧರ್ಮಜನೇಕೆ ಕೊರಗಿದನು?

ಸೂರೆವೋದುದು ರಾಜ್ಯ ಸಿರಿ ಮು
ಮ್ಮಾರುವೋದುದು ಲಜ್ಜೆ ಬೆಟ್ಟವ
ಸೇರಿ ಕಾನನಕಿಳಿದು ವನದಿಂದಡರಿ ಗಿರಿಕುಲವ
ತಾರುತಟ್ಟಿಗೆ ಹಾಯ್ವ ಸುಖಮನ
ದೇರು ಮಸಗಿ ಮುರಾರಿ ಕೃಪೆಯನು
ತೋರಿಯಡಗಿದನಕಟವಿಧಿಯೆಂದಳಲಿದನು ಭೂಪ (ಅರಣ್ಯ ಪರ್ವ, ೧೮ ಸಂಧಿ, ೨ ಪದ್ಯ)

ತಾತ್ಪರ್ಯ:
ರಾಜ್ಯಲಕ್ಷ್ಮಿಯನ್ನು ಕಳೆದುಕೊಂಡು ಕೊಳ್ಳೆಹೊಡೆದಂತಾಯಿತು, ಮಾನ ಕಳೆದು ಹೋಯಿತು, ಬೆಟ್ಟವನ್ನು ಹತ್ತಿ ಕಾಡಿಗಿಳಿದು ಮತ್ತೆ ಬೆಟ್ಟವನ್ನು ಹತ್ತಿ ಇಳಿದು ವನಭೂಮಿಯಲ್ಲಿ ನಡೆಯುವುದೇ ನಮ್ಮ ಪಾಲಿನ ಸುಖವೆಂದುಕೊಂಡನು, ಮನಸ್ಸಿಗೆ ವ್ಯಥೆಯು ಆವರಿಸಿತು, ಶ್ರೀಕೃಷ್ಣನು ತೋರಿ ಮಾಯಾವಾದನು ಎಂದು ಧರ್ಮಜನು ದುಃಖಿಸಿದನು.

ಅರ್ಥ:
ಸೂರೆ: ಕೊಳ್ಳೆ, ಲೂಟಿ; ರಾಜ್ಯ: ದೇಶ; ಸಿರಿ: ಸಂಪತ್ತು, ಐಶ್ವರ್ಯ; ಮುಮ್ಮಾರುವೋಗು: ಮೂರು ಮಾರು ದೂರ ಹೋಗು; ಲಜ್ಜೆ: ಮಾನ; ಬೆಟ್ಟ: ಗಿರಿ; ಸೇರು: ತಲುಪು, ಮುಟ್ಟು; ಕಾನನ: ಕಾಡು; ಇಳಿ: ತೆರಳು; ವನ: ಕಾಡು; ಅಡರು: ಹಬ್ಬು; ಗಿರಿ: ಬೆಟ್ಟ; ಕುಲ: ಗುಂಪು; ತಾರು: ಸೊರಗು; ತಟ್ಟು: ಹೊಡೆ, ಮುಟ್ಟು; ಹಾಯಿ: ಚಾಚು; ಸುಖ: ನೆಮ್ಮದಿ, ಸಂತಸ; ಮನ: ಮನಸ್ಸು; ಮಸಗು: ಕೆರಳು; ಮುರಾರಿ: ಕೃಷ್ಣ; ಕೃಪೆ: ಕರುಣೆ; ತೋರು: ಗೋಚರಿಸು; ಅಡಗು: ಮರೆಯಾಗು; ಅಕಟ: ಅಯ್ಯೋ; ವಿಧಿ: ನಿಯಮ; ಅಳಲು: ಕೊರಗು; ಭೂಪ: ರಾಜ;

ಪದವಿಂಗಡಣೆ:
ಸೂರೆವೋದುದು +ರಾಜ್ಯ +ಸಿರಿ+ ಮು
ಮ್ಮಾರುವೋದುದು +ಲಜ್ಜೆ +ಬೆಟ್ಟವ
ಸೇರಿ+ ಕಾನನಕಿಳಿದು+ ವನದಿಂದ್+ಅಡರಿ +ಗಿರಿಕುಲವ
ತಾರುತಟ್ಟಿಗೆ+ ಹಾಯ್ವ +ಸುಖ+ಮನ
ದೇರು+ ಮಸಗಿ+ ಮುರಾರಿ +ಕೃಪೆಯನು
ತೋರಿ+ಅಡಗಿದನ್+ಅಕಟ+ವಿಧಿಯೆಂದ್+ಅಳಲಿದನು +ಭೂಪ

ಅಚ್ಚರಿ:
(೧) ಕಾನನ, ವನ; ಗಿರಿ, ಬೆಟ್ಟ – ಸಮನಾರ್ಥಕ ಪದ
(೨) ಮನದೇರು ಮಸಗಿ ಮುರಾರಿ – ಮ ಕಾರದ ತ್ರಿವಳಿ ಪದ