ಪದ್ಯ ೬೪: ಭೀಮನ ರಕ್ಷಣೆಗೆ ಯಾರು ಬಂದರು?

ತಾಯ ಮಾತನು ಮೀರಿ ನಿನ್ನನು
ನೋಯಿಸಿದೆನದೆ ಸಾಕು ಜೀವವ
ಕಾಯಿದೆನು ಬಿಟ್ಟೆನು ವೃಕೋದರ ಹೋಗು ಹೋಗೆನಲು
ವಾಯುಸುತ ಸಿಲುಕಿದನಲಾ ಕಾ
ಳಾಯಿತೆನುತಸುರಾರಿ ರಥವನು
ಹಾಯಿಸಲು ಮುರಿಯೆಚ್ಚು ಕರ್ಣನ ತೆಗೆಸಿದನು ಪಾರ್ಥ (ದ್ರೋಣ ಪರ್ವ, ೧೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಕರ್ಣನು, ತಾಯ ಮಾತನ್ನು ಮೀರಿ ನಿನ್ನನ್ನು ನೋಯಿಸಿದ್ದೇನೆ, ಇಷ್ಟೇ ಸಾಕು. ನಿನ್ನ ಝಿವವನ್ನುಳಿಸಿ ಬಿಟ್ಟಿದ್ದೇನೆ. ಭೀಮ ಹೋಗು ಹೋಗು, ಎಂದು ಕರ್ನನು ಭಂಗಿಸುತ್ತಿರಲು, ಭೀಮನು ಶತ್ರುವಿಗೆ ಸಿಲುಕಿಕೊಂಡಿದ್ದಾನೆ, ಕೆಲಸಕೆಟ್ಟಿತು ಎಂದುಕೊಂಡು ಶ್ರೀಕೃಷ್ಣನು ರಥವನ್ನು ನಡೆಸಲು, ಅರ್ಜುನನು ಕರ್ಣನನ್ನು ಬಾಣಗಳಿಂದ ಹೊಡೆದು ಅವನ ದಾಳಿಯನ್ನು ತೆಗೆಸಿದನು.

ಅರ್ಥ:
ತಾಯಿ: ಮಾತೆ; ಮಾತು: ನುಡಿ; ಮೀರು: ಉಲ್ಲಂಘಿಸು, ಅತಿಕ್ರಮಿಸು; ನೋಯಿಸು: ಪೆಟ್ಟುನೀಡು; ಸಾಕು: ನಿಲ್ಲಿಸು; ಜೀವ: ಪ್ರಾಣ; ಕಾಯಿದೆ: ರಕ್ಷಿಸಿದೆ; ಬಿಟ್ಟು: ತೊರೆ; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ಹೋಗು: ತೆರಳು; ವಾಯುಸುತ: ಭೀಮ; ಸಿಲುಕು: ಬಂಧನಕ್ಕೊಳಗಾಗು; ಕಾಳ: ಕತ್ತಲೆ; ಅಸುರಾರಿ: ಕೃಷ್ಣ; ರಥ: ಬಂಡಿ; ಹಾಯಿಸು: ಓಡಿಸು; ಮುರಿ: ಸೀಳು; ಎಚ್ಚು: ಬಾಣ ಪ್ರಯೋಗ ಮಾಡು; ತೆಗೆಸು: ಸಡಲಿಸು;

ಪದವಿಂಗಡಣೆ:
ತಾಯ +ಮಾತನು +ಮೀರಿ +ನಿನ್ನನು
ನೋಯಿಸಿದೆನ್+ಅದೆ+ ಸಾಕು +ಜೀವವ
ಕಾಯಿದೆನು +ಬಿಟ್ಟೆನು +ವೃಕೋದರ +ಹೋಗು +ಹೋಗೆನಲು
ವಾಯುಸುತ+ ಸಿಲುಕಿದನಲಾ +ಕಾ
ಳಾಯಿತ್+ಎನುತ್+ಅಸುರಾರಿ +ರಥವನು
ಹಾಯಿಸಲು +ಮುರಿ+ಎಚ್ಚು +ಕರ್ಣನ +ತೆಗೆಸಿದನು +ಪಾರ್ಥ

ಅಚ್ಚರಿ:
(೧) ವೃಕೋದರ, ವಾಯುಸುತ – ಭೀಮನನ್ನು ಕರೆದ ಪರಿ