ಪದ್ಯ ೩೮: ಭೀಮನೊಡನೆ ಯಾರು ಯುದ್ಧಕ್ಕಿಳಿದರು?

ಭೀಮನಿನ್ನ ರೆಘಳಿಗೆಯಲಿ ನಿ
ರ್ನಾಮನೋ ತಡವಿಲ್ಲ ದಮ್ತಿಯ
ತಾಮಸಿಕೆ ಘನ ತೆಗಿಯಿ ತಮ್ಮನನೆನುತ ಕಳವಳಿಸೆ
ಭೂಮಿಪತಿ ಕೈ ಕೊಂಡನೊಡನೆ ಸ
ನಾಮರೈದಿತು ನಕುಲ ಸಾತ್ಯಕಿ
ಭೀಮಸುತನಭಿಮನ್ಯು ದ್ರುಪದ ಶಿಖಂಡಿ ಕೈಕೆಯರು (ದ್ರೋಣ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೀಮನು ಇನ್ನು ಅರೆಗಳಿಗೆಯಲ್ಲಿ ನಿರ್ನಾಮನಾಗುತ್ತಾನೆ. ಹೆಚ್ಚು ಹೊತ್ತು ಬೇಕಾಗಿಲ್ಲ. ಆನೆಯ ಬಲ ಕೋಪಗಳು ಅತಿಶಯವಾಗಿವೆ. ಅವನನ್ನು ಯುದ್ಧದಿಂದ ಹಿಂದಕ್ಕೆ ತೆಗೆಸಿ ಎನ್ನುತ್ತಾ ಧರ್ಮಜನು ಯುದ್ಧಕ್ಕೆ ಮುಂದಾಗಲು, ನಕುಲ, ಸಾತ್ಯಕಿ, ಘಟೋತ್ಕಚ, ಅಭಿಮನ್ಯು, ದ್ರುಪದ, ಶಿಖಂಡಿ, ಕೈಕೆಯರು ಅವನೊಡನೆ ಯುದ್ಧಕ್ಕಿಳಿದರು.

ಅರ್ಥ:
ಅರೆ: ಅರ್ಧ; ಘಳಿಗೆ: ಸಮಯ; ನಿರ್ನಾಮ: ನಾಶ; ತಡ: ನಿಧಾನ; ದಂತಿ: ಆನೆ; ತಾಮಸ: ಜಾಡ್ಯ, ಜಡತೆ; ಘನ: ಶ್ರೇಷ್ಠ; ತೆಗೆ: ಹೊರತರು; ತಮ್ಮ: ಸಹೋದರ; ಕಳವಳ: ಗೊಂದಲ; ಭೂಮಿಪತಿ: ರಾಜ; ಒಡನೆ: ಕೂಡಲೆ; ಸನಾಮ: ಪ್ರಸಿದ್ಧವಾದ ಹೆಸರುಳ್ಳ; ಐದು: ಬಂದು ಸೇರು; ಸುತ: ಮಗ;

ಪದವಿಂಗಡಣೆ:
ಭೀಮನ್+ಇನ್ನ್+ಅರೆ+ಘಳಿಗೆಯಲಿ +ನಿ
ರ್ನಾಮನೋ +ತಡವಿಲ್ಲ+ ದಂತಿಯ
ತಾಮಸಿಕೆ +ಘನ +ತೆಗಿಯಿ +ತಮ್ಮನನ್+ಎನುತ +ಕಳವಳಿಸೆ
ಭೂಮಿಪತಿ +ಕೈ +ಕೊಂಡನೊಡನೆ +ಸನಾಮರ್
ಐದಿತು +ನಕುಲ +ಸಾತ್ಯಕಿ
ಭೀಮಸುತನ್+ಅಭಿಮನ್ಯು +ದ್ರುಪದ +ಶಿಖಂಡಿ +ಕೈಕೆಯರು

ಅಚ್ಚರಿ:
(೧) ಭೀಮ – ೧, ೬ ಸಾಲಿನ ಮೊದಲ ಪದ

ಪದ್ಯ ೪೦: ಭೀಷ್ಮನು ಕೃಷ್ಣನಿಗೆ ಏನೆಂದು ಬೇಡಿದನು?

ರೋಮ ರೋಮದೊಳಖಿಲ ಭುವನ
ಸ್ತೋಮ ನಲಿದಾಡುವುದು ಗಡ ನಿ
ಸ್ಸೀಮತನ ಗಡ ನಾವು ವೈರಿಗಳೆಂದು ಕೋಪಿಸುವ
ಈ ಮರುಳುತನವೆತ್ತಲೀ ರಣ
ತಾಮಸಿಕೆ ತಾನೆತ್ತಣದು ರಘು
ರಾಮ ರಕ್ಷಿಸು ಬಯಲಿನಾಡಂಬರವಿದೇನೆಂದ (ಭೀಷ್ಮ ಪರ್ವ, ೬ ಸಂಧಿ, ೪೦ ಪದ್ಯ)

ತಾತ್ಪರ್ಯ:
ನಿನ್ನ ರೋಮರೋಮಗಳ ರಂಧ್ರದಲ್ಲಿ ಸಮಸ್ತಲೋಕಗಳು ಸಂತೋಷದಿಂದ ಜೀವಿಸಿವೆ. ನೀನು ಅನಂತನಾದವನು, ಅಂತಹ ನೀನು ನಾನು ವೈರಿಯೆಂದು ಕೋಪಗೊಂಡಿರುವೆ ಅಲ್ಲವೇ ಅದೆತ್ತ, ಇದೆತ್ತ, ಈ ಯುದ್ಧದ ತಾಮಸ ನಿನಗೆ ಎಲ್ಲಿಂದ ಬಂತು, ಹೇ ರಘುರಾಮ, ನನ್ನನ್ನು ರಕ್ಷಿಸು, ಈ ವೃಥಾ ಆಡಂಬರವೇಕೆ ಎಂದು ಭೀಷ್ಮನು ಶ್ರೀಕೃಷ್ಣನಿಗೆ ಹೇಳಿದನು.

ಅರ್ಥ:
ರೋಮ: ಮೈಮೇಲಿನ ಕೂದಲು; ಅಖಿಲ: ಎಲ್ಲಾ; ಭುವನ: ಭೂಮಿ; ಸ್ತೋಮ: ಗುಂಪು; ನಲಿ: ಹರ್ಷಿಸು; ಗಡ: ಅಲ್ಲವೇ; ನಿಸ್ಸೀಮ: ಎಲ್ಲೆಯಿಲ್ಲದುದು, ಪರಿಮಿತವಾದ; ವೈರಿ: ಶತ್ರು; ಕೋಪ: ಮುಳಿ; ಮರುಳು: ಹುಚ್ಚು, ಬುದ್ಧಿಭ್ರಮೆ; ರಣ: ಯುದ್ಧ; ತಾಮಸ: ಮೂಢತನ; ರಕ್ಷಿಸು: ಕಾಪಾಡು; ಬಯಲಿನಾಡಂಬರ: ವೃಥಾ ಅಹಂಕಾರ; ಆಡಂಬರ: ತೋರಿಕೆ, ಢಂಭ;

ಪದವಿಂಗಡಣೆ:
ರೋಮ +ರೋಮದೊಳ್+ಅಖಿಲ +ಭುವನ
ಸ್ತೋಮ +ನಲಿದಾಡುವುದು+ ಗಡ+ ನಿ
ಸ್ಸೀಮತನ+ ಗಡ+ ನಾವು +ವೈರಿಗಳೆಂದು +ಕೋಪಿಸುವ
ಈ+ ಮರುಳುತನವ್+ಎತ್ತಲ್+ಈ+ ರಣ
ತಾಮಸಿಕೆ+ ತಾನೆತ್ತಣದು +ರಘು
ರಾಮ +ರಕ್ಷಿಸು+ ಬಯಲಿನ್+ಆಡಂಬರವ್+ಇದೇನೆಂದ

ಅಚ್ಚರಿ:
(೧) ವೃಥಾ ಹೆಮ್ಮೆ ಬೇಡವೆಂದು ಹೇಳುವ ಪರಿ – ಬಯಲಿನಾಡಂಬರವಿದೇನೆಂದ