ಪದ್ಯ ೬೭: ಸಂಜೆಯಾದುದನ್ನು ಹೇಗೆ ವಿವರಿಸಲಾಗಿದೆ?

ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ
ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ
ದೆಸೆದೆಸೆಯ ತಾಣಾಂತರದ ಹೊಂ
ಬಿಸಿಲು ಬೀತುದು ಜೀಯ ಬಿನ್ನಹ
ವಸುಧೆ ತಂಪೇರಿತ್ತು ಬಿಜಯಂಗೈಯಬೇಕೆಂದ (ವಿರಾಟ ಪರ್ವ, ೧೧ ಸಂಧಿ, ೬೭ ಪದ್ಯ)

ತಾತ್ಪರ್ಯ:
ತಾವರೆಯ ದಳಗಲ ಮೇಲುಭಾಗಗಳು ಮುಚ್ಚುತ್ತಿವೆ, ಕನ್ನೈದಿಲೆಯ ನೆತ್ತಿಯು ಅರಳುತ್ತಿದೆ, ಚಕ್ರವಾಕ ಪಕ್ಷಿಗಳ ಆಲಿಂಗನವು ಸಡಿಲುತ್ತಿದೆ, ಎಲ್ಲೆಡೆಯಿದ್ದ ಹೊಂಬಿಸಿಲು ಮೆಲ್ಲಗೆ ಮಾಯವಾಗುತ್ತಿದೆ, ನೀವಿನ್ನು ದಯಮಾಡಿಸಿ ಎಂದು ಧರ್ಮಜನು ಕೃಷ್ಣನಿಗೆ ಹೇಳಿದನು.

ಅರ್ಥ:
ಎಸಳು: ಹೂವಿನ ದಳ; ಮೊನೆ: ಮುಖ; ತಾವರೆ: ಕಮಲ; ಮುಸುಕು: ಹೊದಿಕೆ; ನೆತ್ತಿ: ಮೇಲ್ಭಾಗ, ಶಿರ; ಬೆಸುಗೆ: ಪ್ರೀತಿ; ಬಿಡು: ತೊರೆ; ಜಕ್ಕವಕ್ಕಿ: ಚಕ್ರ ವಾಕ; ತೆಕ್ಕೆ: ಅಪ್ಪುಗೆ, ಆಲಿಂಗನ; ಸಡಿಲು: ಬಿಗಿಯಿಲ್ಲದಿರುವುದು; ದೆಸೆ: ದಿಕ್ಕು; ತಾಣ: ನೆಲೆ, ಬೀಡು; ಹೊಂಬಿಸಿಲು: ಚಿನ್ನದಂತಹ ಸೂರ್ಯನ ಕಿರಣ; ಬೀತು: ಕಳೆದು; ಜೀಯ: ಒಡೆಯ; ಬಿನ್ನಹ: ಕೋರಿಕೆ; ವಸುಧೆ: ಭೂಮಿ; ತಂಪು: ತಣಿವು, ಶೈತ್ಯ; ಬಿಜಯಂಗೈ: ದಯಮಾಡು;

ಪದವಿಂಗಡಣೆ:
ಎಸಳು+ಮೊನೆ+ ಮೇಲಾಗಿ +ತಾವರೆ
ಮುಸುಕುತಿದೆ+ ನೈದಿಲಿನ +ನೆತ್ತಿಯ
ಬೆಸುಗೆ +ಬಿಡುತಿದೆ +ಜಕ್ಕವಕ್ಕಿಯ +ತೆಕ್ಕೆ +ಸಡಿಲುತಿದೆ
ದೆಸೆದೆಸೆಯ +ತಾಣಾಂತರದ +ಹೊಂ
ಬಿಸಿಲು +ಬೀತುದು +ಜೀಯ +ಬಿನ್ನಹ
ವಸುಧೆ +ತಂಪೇರಿತ್ತು +ಬಿಜಯಂಗೈಯ+ಬೇಕೆಂದ

ಅಚ್ಚರಿ:
(೧) ಸಂಜೆಯಾಗುವುದನ್ನು ಸುಂದರವಾಗಿ ವರ್ಣಿಸುವ ಪರಿ – ಎಸಳುಮೊನೆ ಮೇಲಾಗಿ ತಾವರೆ
ಮುಸುಕುತಿದೆ ನೈದಿಲಿನ ನೆತ್ತಿಯ ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ