ಪದ್ಯ ೨೭: ಧರ್ಮಜನೇಕೆ ಭಯಗೊಂಡನು?

ಹಲಧರನ ಖತಿ ಬಲುಹು ಕದನಕೆ
ಮಲೆತನಾದಡೆ ಹಾನಿ ತಪ್ಪದು
ಗೆಲವಿನಲಿ ಸೋಲದಲಿ ತಾನೌಚಿತ್ಯವೇನಿದಕೆ
ಒಳಗೆ ಬಿದ್ದ ವಿಘಾತಿ ಮುರರಿಪು
ತಿಳಿವನೋ ತವಕಿಸುವನೋ ನಾ
ವಳಿದೆವಿನ್ನೇನೆನುತ ನಡುಗಿದನಂದು ಯಮಸೂನು (ಗದಾ ಪರ್ವ, ೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮಜನು, ಬಲರಾಮನ ಕೋಪ ಹಿರಿದಾಗಿದೆ. ಇದಿರು ಬಿದ್ದರೆ ನಮಗೆ ಹಾನಿ ತಪ್ಪುವುದಿಲ್ಲ. ನಾವು ಹೆದ್ದು ಸೋತರೆ ಚೌಚಿತ್ಯವೇನು? ಇದು ಅಂತರಂಗದ ಪೆಟ್ಟು. ಶ್ರೀಕೃಷ್ಣನಿಗೆ ಇದು ತಿಳಿದಿದೆಯೇ? ಅವನೇಕೆ ಸುಮ್ಮನಿದ್ದಾನೆ, ನಾವು ನಾಶವಾಗುವ ಸ್ಥಿತಿಯಲ್ಲಿದ್ದೇವೆ ಎಂದು ಧರ್ಮಜನು ಭಯಗೊಂಡನು.

ಅರ್ಥ:
ಹಲಧರ: ನೇಗಿಲನ್ನು ಹಿಡಿದವ (ಬಲರಾಮ); ಖತಿ: ಕೋಪ; ಬಲುಹು: ಹೆಚ್ಚು, ಅಧಿಕ; ಕದನ: ಯುದ್ಧ; ಮಲೆ: ಉದ್ಧಟತನದಿಂದ ಕೂಡಿರು, ಗರ್ವಿಸು; ಹಾನಿ: ನಾಶ; ಗೆಲುವು: ಜಯ; ಸೋಲು: ಪರಾಭವ; ಔಚಿತ್ಯ: ಯೋಗ್ಯವಾದುದು; ಬಿದ್ದ: ಬೀಳು, ಎರಗು; ವಿಘಾತಿ: ಆಪತ್ತು; ಮುರರಿಪು: ಕೃಷ್ಣ; ತಿಳಿ: ಗೊತ್ತುಪಡಿಸು; ತವಕಿಸು: ಕಾತುರಿಸು, ಕುತೂಹಲ ಪಡು; ಅಳಿ: ನಾಶ; ನಡುಗು: ಕಂಪಿಸು, ಹೆದರು; ಸೂನು: ಮಗ;

ಪದವಿಂಗಡಣೆ:
ಹಲಧರನ +ಖತಿ +ಬಲುಹು +ಕದನಕೆ
ಮಲೆತನಾದಡೆ +ಹಾನಿ +ತಪ್ಪದು
ಗೆಲವಿನಲಿ +ಸೋಲದಲಿ +ತಾನ್+ಔಚಿತ್ಯವೇನ್+ಇದಕೆ
ಒಳಗೆ +ಬಿದ್ದ+ ವಿಘಾತಿ +ಮುರರಿಪು
ತಿಳಿವನೋ +ತವಕಿಸುವನೋ +ನಾವ್
ಅಳಿದೆವ್+ಇನ್ನೇನೆನುತ+ ನಡುಗಿದನ್+ಅಂದು +ಯಮಸೂನು

ಅಚ್ಚರಿ:
(೧) ಗೆಲುವು, ಸೋಲು – ವಿರುದ್ಧ ಪದಗಳು
(೨) ಧರ್ಮಜನು ಹೆದರಿದ ಪರಿ – ನಾವಳಿದೆವಿನ್ನೇನೆನುತ ನಡುಗಿದನಂದು ಯಮಸೂನು

ಪದ್ಯ ೪೧: ದ್ರೋಣನು ತನ್ನ ಮಗನನ್ನು ಯಾರಿಗೆ ಹೋಲಿಸಿದನು?

ಶಿವ ಶಿವಾ ಕರ್ಣಜ್ವರಾಯತ
ರವವಿದೆತ್ತಣದೋ ಕುಮಾರನ
ತಿವಿದರಾರೋ ತಾನಿದದುಭುತವೆನುತ ತನ್ನೊಳಗೆ
ತವಕಿಸುತ ತಿಳಿದನು ವೃಕೋದರ
ನಿವ ದುರಾತ್ಮನು ತನ್ನ ಮಗನಾ
ಶಿವನೊಡನೆ ಸಮಜೋಳಿ ಹುಸಿ ಹೋಗೆಂದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶಿವ ಶಿವಾ, ಇದು ಕಿವಿಗೆ ಜ್ವರ ಬರಿಸುವ ಮಾತು, ಈ ಧ್ವನಿ ಎತ್ತಣಿಂದ ಬಂದಿತು? ಅಶ್ವತ್ಥಾಮನನ್ನು ಕೊಂದವರಾರು? ಇದು ಪರಮಾದ್ಭುತ, ಎಂದು ಚಿಂತಿಸುತ್ತಾ ದ್ರೋಣನು ಈ ಮಾತನ್ನು ಹೇಳಿದವನು ಭೀಮನೆಂದು ತಿಳಿದು, ಇವನು ದುಷ್ಟ, ನನ್ನ ಮಗನು ಶಿವನಿಗೆ ಸಮಾನನಾದವನು. ಇದು ಸುಳ್ಳು ತೊಲಗು ಎಂದು ಹೇಳಿದನು.

ಅರ್ಥ:
ಕರ್ಣ: ಕಿವಿ; ಜ್ವರ: ಬೇನೆ; ಆಯತ: ಉಚಿತವಾದ; ರವ: ಶಬ್ದ; ಕುಮಾರ: ಮಗ; ತಿವಿ: ಚುಚ್ಚು; ಅದುಭುತ: ಆಶ್ಚರ್ಯ; ತವಕ: ಕಾತುರ; ತಿಳಿ: ಗೋಚರಿಸು; ವೃಕೋದರ: ತೋಳದಂತಹ ಹೊಟ್ಟೆ (ಭೀಮ); ದುರಾತ್ಮ: ದುಷ್ಟ; ಮಗ: ಸುತ; ಶಿವ: ಶಂಕರ; ಸಮಜೋಳಿ: ಸಮಾನವಾದ; ಹುಸಿ: ಸುಳ್ಳು; ಹೋಗು: ತೆರಳು;

ಪದವಿಂಗಡಣೆ:
ಶಿವ+ ಶಿವಾ+ ಕರ್ಣ+ಜ್ವರ+ಆಯತ
ರವವಿದ್+ಎತ್ತಣದೋ +ಕುಮಾರನ
ತಿವಿದರಾರೋ +ತಾನಿದ್+ಅದುಭುತವೆನುತ+ ತನ್ನೊಳಗೆ
ತವಕಿಸುತ +ತಿಳಿದನು +ವೃಕೋದರನ್
ಇವ +ದುರಾತ್ಮನು +ತನ್ನ +ಮಗನ್+ಆ
ಶಿವನೊಡನೆ +ಸಮಜೋಳಿ +ಹುಸಿ +ಹೋಗೆಂದನಾ +ದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಶಿವ ಶಿವಾ ಕರ್ಣಜ್ವರಾಯತರವವಿದೆತ್ತಣದೋ
(೨) ಅಶ್ವತ್ಥಾಮನನ್ನು ಹೋಲಿಸುವ ಪರಿ – ತನ್ನ ಮಗನಾ ಶಿವನೊಡನೆ ಸಮಜೋಳಿ

ಪದ್ಯ ೧೭: ಭೀಷ್ಮನು ಶತ್ರು ಸೈನಿಕರಿಗೆ ಏನು ಹೇಳಿದನು?

ದಿವಿಜ ನಗರಿಯ ಸೂಳೆಗೇರಿಗೆ
ಕವಿವ ಮನವೇ ಮುಂದು ಹಜ್ಜೆಗೆ
ತವಕಿಸುವರಳುಕುವರೆ ಮೇಣ ಕೈತಪ್ಪ ಮಾಡಿಸೆನು
ಕವಿಯಿರೈ ಕಾಲಾಳು ರಾವುತ
ರವಗಡಿಸಿರೈ ಜೋದರೆಸಿರೈ
ನವ ಮಹಾರಥರಂಬ ಕರೆಯಿರೆನುತ್ತ ಕವಿದೆಚ್ಚ (ಭೀಷ್ಮ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಎಲೈ ಶತ್ರು ಸೈನಿಕರೇ ಅಮರಾವತಿಯ ಅಪ್ಸರೆಯರ ಕೇರಿಗೆ ಹೋಗುವ ಆತುರವಿದೆಯೇ? ಹಾಗೆ ತವಕಿಸುವವರನ್ನು ಖಂಡಿತವಾಗಿ ಅಲ್ಲಿಗೆ ಕಳಿಸುತ್ತೇನೆ; ಖಂಡಿತ ತಪ್ಪುವುದಿಲ್ಲ, ಬನ್ನಿ ಕಾಲಾಳುಗಳು, ರಾವುತರು, ಜೋದರು, ಮಹಾರಥರು ಬನ್ನಿ. ಇನ್ನೂ ಅಲ್ಲಿಗೆ ಹೋಗುವ ತವಕವಿದ್ದವರನ್ನು ಕರೆಯಿರಿ ಎಂದು ಭೀಷ್ಮನು ಬಾಣಗಳನ್ನು ಬಿಟ್ಟನು.

ಅರ್ಥ:
ದಿವಿಜ: ದೇವತೆ; ನಗರಿ: ಊರು; ದಿವಿಜನಗರಿ: ಅಮರಾವತಿ; ಸೂಳೆ: ವೇಶ್ಯೆ; ಕೇರಿ: ಬೀದಿ, ಓಣಿ; ಕವಿ: ಆವರಿಸು; ಮನ: ಮನಸ್ಸು; ಮುಂದು: ಎದುರು; ಹಜ್ಜೆ: ಪಾದ; ತವಕ: ಬಯಕೆ, ಆತುರ; ಅಳುಕು: ಹೆದರು; ಮೇಣ್: ಅಥವಾ; ಕೈತಪ್ಪು: ಕಳಚು; ಕಾಲಾಳು: ಸೈನಿಕರು; ರಾವುತ: ರಥಿ; ಅವಗಡಿಸು: ಕಡೆಗಣಿಸು; ಜೋದರು: ಯೋಧರು; ನವ: ಹೊಸ; ಮಹಾರಥ: ಯೋಧ, ಪರಾಕ್ರಮಿ; ಕರೆ: ಬರೆಮಾಡು; ಎಚ್ಚು: ಬಾಣಬಿಡು;

ಪದವಿಂಗಡಣೆ:
ದಿವಿಜ +ನಗರಿಯ +ಸೂಳೆ+ಕೇರಿಗೆ
ಕವಿವ +ಮನವೇ +ಮುಂದು +ಹಜ್ಜೆಗೆ
ತವಕಿಸುವರ್+ಅಳುಕುವರೆ+ ಮೇಣ್ +ಕೈತಪ್ಪ +ಮಾಡಿಸೆನು
ಕವಿಯಿರೈ +ಕಾಲಾಳು +ರಾವುತರ್
ಅವಗಡಿಸಿರೈ +ಜೋದರೆಸಿರೈ
ನವ +ಮಹಾರಥರ್+ಅಂಬ +ಕರೆಯಿರ್+ಎನುತ್ತ +ಕವಿದ್+ಎಚ್ಚ

ಅಚ್ಚರಿ:
(೧) ಸಾಯಬೇಕೆ ಎಂದು ಹೇಳುವ ಪರಿ – ದಿವಿಜ ನಗರಿಯ ಸೂಳೆಗೇರಿಗೆಕವಿವ ಮನವೇ

ಪದ್ಯ ೪೪: ಕೌರವರು ಹೇಗೆ ಮುಂದುವರೆದರು?

ಅವನಿಪನ ಮೊಗಸನ್ನೆಯಲಿ ಸೂ
ಳವಿಸಿದವು ನಿಸ್ಸಾಳಕೋಟಿಗ
ಳವಚಿದುದು ಬಹುವಿಧದ ವಾದ್ಯಧ್ವನಿ ದಿಶಾಮುಖವ
ತವತವಗೆ ಧುರ ತೋರಹತ್ತರು
ತವಕಿಸುತ ಹುರಿಯೇರಿದರು ಕೌ
ರವರು ಕರ್ಣನ ಹರಿಬದಾಹವವೆನಗೆ ತನಗೆನುತ (ಅರಣ್ಯ ಪರ್ವ, ೨೦ ಸಂಧಿ, ೪೪ ಪದ್ಯ)

ತಾತ್ಪರ್ಯ:
ಕೌರವನ ಕಣ್ಸನ್ನೆಗನುಸಾರವಾಗಿ ಅನೇಕ ಕಹಳೆಗಳು ಒಂದಾದ ಮೇಲೊಂದರಂತೆ ಮೊಳಗಿದವು ರಣವಾದ್ಯಗಳ ಧ್ವನಿ ದಿಗಂತವನ್ನಾವರಿಸಿತು. ಮಹಾಭುಜಬಲರು ಯುದ್ಧಕ್ಕೆ ಮುಂದಾಗಿ, ಕರ್ಣನ ಸೋಲಿನ ಸೇಡನ್ನು ತೀರಿಸಿಕೊಳ್ಳುವುದು ನನಗಿರಲಿ ತನಗಿರಲಿ ಎಂದು ಮಹೋತ್ಸಾಹದಿಂದ ಮುನ್ನುಗ್ಗಿದರು.

ಅರ್ಥ:
ಅವನಿಪ: ರಾಜ; ಮೊಗ: ಮುಖ; ಸನ್ನೆ: ಸಂಜ್ಞೆ, ಸುಳಿವು; ಸೂಳವಿಸು: ಶಬ್ದಮಾಡು; ನಿಸ್ಸಾಳ:ಒಂದು ಬಗೆಯ ಚರ್ಮವಾದ್ಯ; ಕೋಟಿ: ಅಸಂಖ್ಯಾತ; ಅವಚು: ಆವರಿಸು; ಬಹುವಿಧ: ಬಹಳ ರೀತಿಯ; ವಾದ್ಯ: ಸಂಗೀತದ ಸಾಧನ; ಧ್ವನಿ: ರವ, ಶಬ್ದ; ದಿಶ: ದಿಕ್ಕು; ಮುಖ: ಆನನ; ತವ: ಅವರ; ಧುರ: ಯುದ್ಧ, ಕಾಳಗ; ತೋರು: ಪ್ರದರ್ಶಿಸು; ತವಕ: ಆತುರ; ಹುರಿ: ಕೆಚ್ಚು, ಬಲ; ಹರಿಬ:ಕಾಳಗ, ಯುದ್ಧ; ಆಹವ: ಕಾಳಗ;

ಪದವಿಂಗಡಣೆ:
ಅವನಿಪನ +ಮೊಗ+ಸನ್ನೆಯಲಿ+ ಸೂ
ಳವಿಸಿದವು +ನಿಸ್ಸಾಳ+ಕೋಟಿಗಳ್
ಅವಚಿದುದು +ಬಹುವಿಧದ+ ವಾದ್ಯ+ಧ್ವನಿ +ದಿಶಾ+ಮುಖವ
ತವತವಗೆ+ ಧುರ+ ತೋರಹತ್ತರು
ತವಕಿಸುತ+ ಹುರಿ+ಏರಿದರು+ ಕೌ
ರವರು+ ಕರ್ಣನ +ಹರಿಬದ್+ಆಹವವ್+ಎನಗೆ +ತನಗೆನುತ

ಅಚ್ಚರಿ:
(೧) ಎನಗೆ ತನಗೆ, ತವತವಗೆ – ಪದಗಳ ಬಳಕೆ