ಪದ್ಯ ೧೧: ಜೈಕಾರವು ಎಲ್ಲಿಯವರೆಗೆ ತಲುಪಿತು?

ಬಂದು ಕಾಣಿಕೆಗೊಟ್ಟುವಂದಿಸಿ
ನಿಂದರಿವರು ತನ್ನ ಕೆಳದಿಯ
ರಿಂದ ತರಿಸಿದಳಾರತಿಯನುಪ್ಪಾರತಿಯನೊಲಿದು
ಚಂದಮಿಗೆ ಸಾವಿರದ ಸಂಖ್ಯೆಯ
ಲಿಂದು ಮುಖಿಯರ ತಳಿಗೆಯಾರತಿ
ಸಂದಣಿಸಿದವು ಜಯ ಸಬುದ ಝೋಂಪಿಸಿದುದಂಬರವ (ಸಭಾ ಪರ್ವ, ೧೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಾಂಧಾರಿಯನ್ನು ನೋಡಲು ಪಾಂಡವರು ಬಂದರು. ಸಪರಿವಾರದೊಡನೆ ಆಕೆಗೆ ನಮಸ್ಕರಿಸಿ ಕಾಣಿಕೆ ಗೌರವಗಳನ್ನು ಸಮರ್ಪಿಸಿದರು. ತನ್ನ ಸಖಿಯರಿಂದ ಆರತಿಯನ್ನು ತರಿಸಿದಳು. ಅನೇಕ ಸುಂದರ ಸಖಿಯರು ಪಾಂಡವರಿಗೆ ಆರತಿಯ ತಟ್ಟೆಗಳನ್ನು ತಂದು, ಆರತಿ, ಉಪ್ಪಿನಾರತಿಯನ್ನು ಮಾಡಿ ಜಯಕಾರವನ್ನು ಹಾಕಿದರು. ಆ ಜಯಕಾರವು ಎಲ್ಲೆಲ್ಲೂ ಕೇಳಿ ಆಗಸವನ್ನು ಮುಟ್ಟಿತು.

ಅರ್ಥ:
ಬಂದು: ಆಗಮಿಸು; ಕಾಣಿಕೆ: ಉಡುಗೊರೆ; ಕೊಟ್ಟು: ನೀಡಿ; ವಂದಿಸು: ನಮಸ್ಕರಿಸು; ನಿಂದು: ನಿಲ್ಲು; ಕೆಳದಿ: ಸಖಿ; ತರಿಸು: ಬರೆಮಾಡು; ಆರತಿ: ನೀರಾಜನ; ಒಲಿದು: ಪ್ರೀತಿಯಲಿ; ಚಂದ: ಅಂದ, ಕ್ಷೇಮ; ಮಿಗೆ: ಹೆಚ್ಚು, ಅಧಿಕ; ಸಾವಿರ: ಸಹಸ್ರ; ಸಂಖ್ಯೆ: ಎಣಿಕೆ; ಇಂದು: ಚಂದ್ರ; ಇಂದುಮುಖಿ: ಚಂದಿರನಂತ ಮುಖವುಳ್ಳವರು (ಸುಂದರಿಯರು); ತಳಿಗೆ: ತಟ್ಟೆ; ಸಂದಣಿಸು: ಗುಂಪು ಗೂಡು, ಒಟ್ಟಾಗು; ಜಯ: ಜೈಕಾರ; ಸಬುದ: ಶಬ್ದ; ಝೋಂಪಿಸು: ಬೆಚ್ಚಿಬೀಳು; ಅಂಬರ: ಆಗಸ;

ಪದವಿಂಗಡಣೆ:
ಬಂದು +ಕಾಣಿಕೆ+ಕೊಟ್ಟು+ವಂದಿಸಿ
ನಿಂದರ್+ಇವರು +ತನ್ನ +ಕೆಳದಿಯ
ರಿಂದ+ ತರಿಸಿದಳ್+ಆರತಿಯನ್+ಉಪ್ಪಾರತಿಯನ್+ಒಲಿದು
ಚಂದಮಿಗೆ +ಸಾವಿರದ+ ಸಂಖ್ಯೆಯಲ್
ಇಂದು +ಮುಖಿಯರ +ತಳಿಗೆ+ಆರತಿ
ಸಂದಣಿಸಿದವು+ ಜಯ+ ಸಬುದ+ ಝೋಂಪಿಸಿದುದ್+ಅಂಬರವ

ಅಚ್ಚರಿ:
(೧) ಬಂದು, ಇಂದು – ಪ್ರಾಸ ಪದ
(೨) ಆರತಿಯ ಸೊಬಗು – ಚಂದಮಿಗೆ ಸಾವಿರದ ಸಂಖ್ಯೆಯಲಿಂದು ಮುಖಿಯರ ತಳಿಗೆಯಾರತಿ
ಸಂದಣಿಸಿದವು