ಪದ್ಯ ೩೩: ಕೌರವನೇಕೆ ಉದ್ರೇಕಗೊಂಡನು?

ಜ್ಞಾನವಳಿದುದು ವೀರಪಣದಭಿ
ಮಾನ ಮಸೆದುದು ಮಂತ್ರನಿಷ್ಠೆಯ
ಮೌನ ಹಿಂಬೆಳೆಯಾಯ್ತು ಮೋಹಿದುದಾಹವವ್ಯಸನ
ದೀನಮನ ಹೊರಗಳೆದುದುದಕ
ಸ್ಥಾನಭಾವಕೆ ನಾಚಿದನು ತವ
ಸೂನು ತಳವೆಳಗಾದನಹಿತವಚೋವಿಘಾತದಲಿ (ಗದಾ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ನಿನ್ನ ಮಗನ ತಿಳುವಳಿಕೆ ಮರೆಯಾಯಿತು, ವೀರಪ್ರತಿಜ್ಞೆ ಸ್ವಾಭಿಮಾನ ಹೆಚ್ಚಿತು. ಮಂತ್ರಜಪದಲ್ಲಿದ್ದ ಮೌನ ಹಿಂದಯಿತು. ಯುದ್ಧವ್ಯಸನ ಆವರಿಸಿತು. ದೈನ್ಯವು ಮಾಯವಾಯಿತು. ತಾನ ಅಡಗಿಕೊಂಡು ನೀರಿನ ಕೊಳದಲ್ಲಿರುವುದನ್ನು ನೆನೆದು ನಾಚಿಕೊಂಡನು. ಶತ್ರುಗಳ ಮಾತಿನ ಪೆಟ್ಟಿನಿಂದ ಉದ್ರೇಕಗೊಂಡನು.

ಅರ್ಥ:
ಜ್ಞಾನ: ಬುದ್ಧಿ, ತಿಳುವಳಿಕೆ; ಅಳಿ: ನಾಶ; ವೀರ: ಶೂರ; ಅಭಿಮಾನ: ಹೆಮ್ಮೆ, ಅಹಂಕಾರ; ಮಸೆ: ಹರಿತವಾದುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ನಿಷ್ಠೆ: ದೃಢತೆ, ಸ್ಥಿರತೆ; ಮೌನ: ಸುಮ್ಮನಿರುವಿಕೆ, ನೀರವತೆ; ಹಿಂಬೆಳೆ: ಹಿಂದಾಗು, ಹಿಂದೆ ತಳ್ಳು; ಮೋಹ: ಆಸೆ; ಆಹವ: ಯುದ್ಧ; ವ್ಯಸನ: ಚಾಳಿ; ದೀನ: ದೈನ್ಯಸ್ಥಿತಿ; ಮನ: ಮನಸ್ಸು; ಹೊರಗೆ: ಆಚೆ; ಉದಕ: ನೀರು; ಸ್ಥಾನ: ನೆಲೆ; ಭಾವ: ಮನಸ್ಸು, ಚಿತ್ತ; ನಾಚು: ಲಜ್ಜೆ, ಸಿಗ್ಗು, ಅವಮಾನ; ಸೂನು: ಮಗ; ತಳವೆಲಗಾಗು: ತಲೆಕೆಳಗಾಗು; ಅಹಿತ: ವೈರಿ; ವಚೋ: ಮಾತು; ವಿಘಾತ: ಕೇಡು, ಹಾನಿ, ಏಟು;

ಪದವಿಂಗಡಣೆ:
ಜ್ಞಾನವ್+ಅಳಿದುದು +ವೀರಪಣದ್+ಅಭಿ
ಮಾನ +ಮಸೆದುದು +ಮಂತ್ರನಿಷ್ಠೆಯ
ಮೌನ +ಹಿಂಬೆಳೆಯಾಯ್ತು +ಮೋಹಿದುದ್+ಆಹವ+ವ್ಯಸನ
ದೀನಮನ+ ಹೊರಗಳೆದುದ್+ಉದಕ
ಸ್ಥಾನಭಾವಕೆ +ನಾಚಿದನು +ತವ
ಸೂನು +ತಳವೆಳಗಾದನ್+ಅಹಿತ+ವಚೋ+ವಿಘಾತದಲಿ

ಅಚ್ಚರಿ:
(೧) ಒಂದೇ ಪದದ ರಚನೆ – ತಳವೆಳಗಾದನಹಿತವಚೋವಿಘಾತದಲಿ
(೨) ಜ್ಞಾನ, ಮಾನ, ಮೌನ, ದೀನ, ಸ್ಥಾನ – ಪ್ರಾಸ ಪದಗಳು