ಪದ್ಯ ೬೬: ದ್ರೋಣರು ಯುದ್ಧಕ್ಕೆ ಯಾವ ಆಲೋಚನೆಯನ್ನು ಮಾಡಿದ್ದರು?

ವ್ಯೂಹವನು ರಚಿಸುವೆನು ನಾಳಿನೊ
ಳಾಹವಕೆ ತಳತಂತ್ರವೊಂದೇ
ಮೋಹರಕೆ ನಡೆತರಲಿ ಷಡುರಥರಾದಿ ಯಾದವರು
ಸಾಹಸವನುದಯದಲಿ ತೋರುವೆ
ಬಾಹುಬಲವನು ಸೈಂಧವನ ಮೈ
ಗಾಹ ಬಲಿವೆನು ಕಾಂಬೆ ಕೃಷ್ಣನ ನೆನಹ ಬಳಿಕೆಂದ (ದ್ರೋಣ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ನಾಳೆ ನಮ್ಮ ಸೈನ್ಯವನ್ನೆಲ್ಲಾ ಒಂದೇ ಕಡೆ ಸೇರಲಿ, ಯಾದವರು, ಷಡ್ರಥರೂ ಅಲ್ಲಿಗೇ ಬರಲಿ, ನಾಳೆ ಒಂದು ವ್ಯೂಹವನ್ನು ನಾನು ರಚಿಸಿ, ನನ್ನ ಚಾತುರ್ಯ ಮತ್ತು ಪರಾಕ್ರಮವನ್ನು ತೋರುತ್ತೇನೆ. ಸೈಂಧವನ ಅಂಗರಕ್ಷಣೆಗೆ ಭದ್ರವಾದ ಕಾವಲನ್ನೇರ್ಪಡಿಸುತ್ತೇನೆ, ಆಮೇಲೆ ಕೃಷ್ಣನ ಆಲೋಚನೆಯೇನು ಎಂದು ನೋಡುತ್ತೇನೆ ಎಂದು ಕೌರವನಿಗೆ ಹೇಳಿದರು.

ಅರ್ಥ:
ವ್ಯೂಹ: ಗುಂಪು, ಸಮೂಹ; ರಚಿಸು: ನಿರ್ಮಿಸು; ಆಹವ: ಯುದ್ಧ; ತಳತಂತ್ರ: ಕಾಲಾಳುಗಳ ಪಡೆ, ಸೈನ್ಯ; ಮೋಹರ: ಯುದ್ಧ; ನಡೆತರಲಿ: ಬಂದು ಸೇರಲಿ; ಷಡುರಥ: ಆರು ಮಹಾರಥಿಕರು; ಆದಿ: ಮುಂತಾದ; ಸಾಹಸ: ಪರಾಕ್ರಮ; ಉದಯ: ಬೆಳಗ್ಗೆ; ತೋರುವೆ: ಪ್ರದರ್ಶಿಸು; ಬಾಹುಬಲ: ಪರಾಕ್ರಮ; ಮೈ: ತನು, ದೇಹ; ಮೈಗಾಹ: ದೇಹ ರಕ್ಷಣೆ; ಬಲಿ: ಗಟ್ಟಿ, ದೃಢ; ನೆನಹು: ಆಲೋಚನೆ; ಬಳಿಕ: ನಂತರ;

ಪದವಿಂಗಡಣೆ:
ವ್ಯೂಹವನು+ ರಚಿಸುವೆನು +ನಾಳಿನೊಳ್
ಆಹವಕೆ +ತಳತಂತ್ರವ್+ಒಂದೇ
ಮೋಹರಕೆ +ನಡೆತರಲಿ +ಷಡುರಥರಾದಿ+ ಯಾದವರು
ಸಾಹಸವನ್+ಉದಯದಲಿ +ತೋರುವೆ
ಬಾಹುಬಲವನು +ಸೈಂಧವನ +ಮೈ
ಗಾಹ+ ಬಲಿವೆನು +ಕಾಂಬೆ +ಕೃಷ್ಣನ+ ನೆನಹ +ಬಳಿಕೆಂದ

ಅಚ್ಚರಿ:
(೧) ಆಹವ, ಮೋಹರ – ಸಮಾನಾರ್ಥಕ ಪದಗಳು

ಪದ್ಯ ೫೬: ಕೌರವನೇಕೆ ಚಿಂತಿಸಿದನು?

ಹರಿಯ ಚಕ್ರದ ಸತ್ವವೀತನ
ದುರದೊಳಾತೆನೆ ರಥದ ಚಕ್ರದೊ
ಳರಿಬಲವನಿಡೆ ಮುಗ್ಗಿ ಕೆಡೆದುದು ಬಹಳ ತಳತಂತ್ರ
ಬಿರುದರಾನುವರಿಲ್ಲ ಷಡುರಥ
ರುರವಣಿಯು ಹಿಂದಾಯ್ತು ರಾಯರ
ಗುರುವ ಕಂಡವರಿಲ್ಲೆನುತ ಕುರುರಾಯ ಚಿಂತಿಸಿದ (ದ್ರೋಣ ಪರ್ವ, ೬ ಸಂಧಿ, ೫೬ ಪದ್ಯ)

ತಾತ್ಪರ್ಯ:
ವಿಷ್ಣುವಿನ ಸುದರ್ಶನ ಚಕ್ರವು ಇವನು ಹಿಡಿದ ಚಕ್ರಕ್ಕೆ ಬಂದಿತೇನೋ ಎನ್ನುವಂತೆ ಅವನು ಹಿಡಿದ ಚಕ್ರದ ಹೊಡೆತಕ್ಕೆ ಕೌರವರ ಅಪಾರ ಸೈನ್ಯವು ಉರುಳಿತು. ಅವನನ್ನು ಎದುರಿಸಿ ಯುದ್ಧಮಾಡುವವರೇ ಇಲ್ಲ, ಆರು ರಥದಲ್ಲಿದ್ದ ಪರಾಕ್ರಮರ ಜೋರು ಇಲ್ಲವಾಯಿತು. ರಾಜನ ಜೀವನನ್ನುಳಿಸುವವರು ಕಾಣುತ್ತಿಲ್ಲ ಎಂದು ಕೌರವನು ಚಿಂತಿಸಿದನು.

ಅರ್ಥ:
ಹರಿ: ವಿಷ್ಣು; ಚಕ್ರ: ಸುದರ್ಶನ ಚಕ್ರ; ಸತ್ವ: ಸಾರ, ರಸ; ಧುರ: ಯುದ್ಧ; ರಥ: ಬಂಡಿ; ಚಕ್ರ: ಗಾಲಿ; ಅರಿ: ವೈರಿ; ಬಲ: ಸೈನ್ಯ; ಮುಗ್ಗು: ಮುನ್ನುಗ್ಗು; ಕೆಡೆ: ಬೀಳು, ಕುಸಿ; ಬಹಳ: ತುಂಬ; ತಳ: ಕೆಳಗು, ಪಾತಾಳ; ತಳತಂತ್ರ: ಕೈಕೆಳಗಿನ ಸೈನ್ಯ; ಬಿರುದು: ಗೌರವ ಸೂಚಕ ಪದ; ಉರವಣೆ: ಆತುರ, ಅವಸರ; ಹಿಂದೆ: ಹಿಂಭಾಗ; ರಾಯ: ರಾಜ; ಗುರು: ಆಚಾರ್ಯ; ಕಂಡು: ನೋಡು; ಚಿಂತಿಸು: ಯೋಚಿಸು;

ಪದವಿಂಗಡಣೆ:
ಹರಿಯ +ಚಕ್ರದ + ಸತ್ವವ್+ಈತನ
ದುರದೊಳಾತ್+ಎನೆ+ ರಥದ +ಚಕ್ರದೊಳ್
ಅರಿ+ಬಲವನ್+ಇಡೆ +ಮುಗ್ಗಿ +ಕೆಡೆದುದು +ಬಹಳ +ತಳತಂತ್ರ
ಬಿರುದರ್+ಆನುವರಿಲ್ಲ+ ಷಡುರಥರ್
ಉರವಣಿಯು +ಹಿಂದಾಯ್ತು +ರಾಯರ
ಗುರುವ +ಕಂಡವರಿಲ್ಲೆನುತ+ ಕುರುರಾಯ +ಚಿಂತಿಸಿದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿಯ ಚಕ್ರದ ಸತ್ವವೀತನದುರದೊಳಾತೆನೆ

ಪದ್ಯ ೧೮: ಸುಪ್ರತೀಕ ಗಜವು ಹೇಗೆ ಶತ್ರುಸೈನ್ಯವನ್ನು ನಾಶಮಾಡಿತು?

ಮುರಿದು ಮಂದರಗಿರಿ ಪಯೋಧಿಯ
ತೆರೆಗಳನು ತುಳಿವಂತೆ ರಿಪು ಮೋ
ಹರವನರೆದುದು ನುಗ್ಗುನುಸಿಯಾಯ್ತಖಿಳ ತಳತಂತ್ರ
ತೆರಳಿದರು ರಾವುತರು ರಥಿಕರು
ಹೊರಳಿಯೊಡೆದುದು ಗಜದ ಗಾವಳಿ
ಜರಿದುದಳಿದುದನಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮಂದರ ಗಿರಿಯು ಸಮುದ್ರದ ತೆರೆಗಳನ್ನು ನಿಗ್ರಹಿಸಿದಂತೆ ಶತ್ರುಸೈನ್ಯವನ್ನು ಆ ಗಜವು ಅರೆದು ಹಾಕಿತು. ಸೈನ್ಯವು ನುಗ್ಗು ನುಸಿಯಾಯಿತು ಚತುರಂಗ ಸೈನಯ್ವು ಚದುರಿ ಓಡಿತು, ರಾಜ, ಎಷ್ಟು ಶತ್ರುಸೈನ್ಯವು ನಾಶವಾಯಿತೋ ಯಾರು ಬಲ್ಲರು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಮುರಿ: ಸೀಳು; ಗಿರಿ: ಬೆಟ್ಟ; ಪಯೋಧಿ: ಸಮುದ್ರ; ತೆರೆ: ಅಲೆ; ತುಳಿ: ಮೆಟ್ಟು; ರಿಪು: ವೈರಿ; ಮೋಹರ: ಯುದ್ಧ; ಅರೆ: ನುಣ್ಣಗೆ ಮಾಡು; ನುಗ್ಗು: ತಳ್ಳು; ನುಸಿ: ಹುಡಿ, ಧೂಳು; ಅಖಿಳ: ಎಲ್ಲಾ; ತಳತಂತ್ರ: ಕಾಲಾಳುಗಳ ಪಡೆ, ಸೈನ್ಯ; ತೆರಳು: ಹೊರದು; ರಾವುತ: ಕುದುರೆ ಸವಾರ, ಅಶ್ವಾರೋಹಿ; ರಥಿಕ: ರಥದಲ್ಲಿ ಕುಳಿತು ಯುದ್ಧ ಮಾಡುವವನು; ಹೊರಳು:ತಿರುವು, ಬಾಗು; ಒಡೆ: ಸೀಳು, ಬಿರಿ; ಗಜ: ಆನೆ; ಆವಳಿ: ಸಾಲು; ಜರಿ: ಓಡಿಹೋಗು, ಪಲಾಯನ ಮಾಡು, ಅಳುಕು; ಅಳಿ: ನಾಶ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುರಿದು +ಮಂದರ+ಗಿರಿ +ಪಯೋಧಿಯ
ತೆರೆಗಳನು +ತುಳಿವಂತೆ +ರಿಪು +ಮೋ
ಹರವನ್+ಅರೆದುದು +ನುಗ್ಗು+ನುಸಿಯಾಯ್ತ್+ಅಖಿಳ +ತಳತಂತ್ರ
ತೆರಳಿದರು +ರಾವುತರು +ರಥಿಕರು
ಹೊರಳಿ+ಒಡೆದುದು +ಗಜದಗ್ + ಆವಳಿ
ಜರಿದುದ್+ಅಳಿದುದನ್+ಆರು +ಬಲ್ಲರು +ಭೂಪ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮುರಿದು ಮಂದರಗಿರಿ ಪಯೋಧಿಯ ತೆರೆಗಳನು ತುಳಿವಂತೆ
(೨) ನುಗ್ಗುನುಸಿ, ತುಳಿ, ಒಡೆ, ಜರಿ, ಅಳಿ – ನಾಶವನ್ನು ಸೂಚಿಸುವ ಪದಗಳ ಬಳಕೆ

ಪದ್ಯ ೮೩: ಕೌರವ ಸೈನ್ಯವೇಕೆ ತಲ್ಲಣಿಸಿತು?

ಹೋಯಿತಾ ಮಾತೇಕೆ ಗಜದಳ
ಮಾಯವಾದುದು ವಂಗಭೂಪನ
ಬಾಯೊಳಗೆ ಬೆಟ್ಟಿದನು ಗದೆಯನು ಮಿಕ್ಕ ನಾಲ್ವರನು
ಸಾಯ ಬಡಿದನು ಮುಂದೆ ಕೌರವ
ರಾಯನನು ತಾಗಿದನು ಭೀಮನ
ದಾಯ ಬಂದುದು ಸಕಲ ಕುರು ತಳತಂತ್ರ ತಲ್ಲಣಿಸೆ (ದ್ರೋಣ ಪರ್ವ, ೨ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗಜಸೈನ್ಯವು ಮಾಯವಾಗಿ ಹೋಯಿತು, ಅದರ ಮಾತೇಕೆ? ವಂಗರಾಜನ ಬಾಯಲ್ಲಿ ಗದೆಯನ್ನು ತುರುಕಿದನು. ಉಳಿದ ನಾಲ್ವರನ್ನು ಸಾಯಬಡಿದನು. ಕೌರವನ ಮೇಲೆ ಆಕ್ರಮಣ ಮಾಡಿದನು. ಸಮಸ್ತ ಕುರುಸೈನ್ಯವೂ ತಲ್ಲಣಿಸಿತು.

ಅರ್ಥ:
ಹೋಯಿತು: ಗಮಿಸು; ಮಾತು: ವಾಣಿ; ಗಜದಳ: ಆನೆಯ ಸೈನ್ಯ; ಮಾಯ: ಕಣ್ಣಿಗೆ ಕಾಣದಿರು; ಭೂಪ: ರಾಜ; ಬೆಟ್ಟು: ಕಡಿ, ಕತ್ತರಿಸು; ಗದೆ: ಮುದ್ಗರ; ಮಿಕ್ಕು: ಉಳಿದ; ಸಾಯು: ಸಾಯಿಸು; ಬಡಿ: ಹೊಡೆ; ಮಂದೆ: ಎದುರು; ರಾಯ: ರಾಜ; ತಾಗು: ಮುಟ್ಟು; ಆಯ: ಪರಿಮಿತಿ; ಬಂದು: ಆಗಮಿಸು; ಸಕಲ: ಎಲ್ಲಾ; ತಳತಂತ್ರ: ಕಾಲಾಳುಗಳ ಪಡೆ; ತಲ್ಲಣ: ಅಂಜಿಕೆ, ಭಯ;

ಪದವಿಂಗಡಣೆ:
ಹೋಯಿತಾ +ಮಾತೇಕೆ +ಗಜದಳ
ಮಾಯವಾದುದು+ ವಂಗ+ಭೂಪನ
ಬಾಯೊಳಗೆ +ಬೆಟ್ಟಿದನು +ಗದೆಯನು +ಮಿಕ್ಕ +ನಾಲ್ವರನು
ಸಾಯ +ಬಡಿದನು +ಮುಂದೆ+ ಕೌರವ
ರಾಯನನು+ ತಾಗಿದನು +ಭೀಮನದ್
ಆಯ +ಬಂದುದು +ಸಕಲ +ಕುರು +ತಳತಂತ್ರ +ತಲ್ಲಣಿಸೆ

ಅಚ್ಚರಿ:
(೧) ಭೀಮನ ಪರಾಕ್ರಮ – ಗಜದಳ ಮಾಯವಾದುದು, ವಂಗಭೂಪನ ಬಾಯೊಳಗೆ ಬೆಟ್ಟಿದನು ಗದೆಯನು

ಪದ್ಯ ೩: ರಾಜರಿಗಿರಬೇಕಾದ ಸಪ್ತಾಂಗಗಳಾವುವು?

ಕೋಶ ಬಲ ತಳತಂತ್ರ ಹೆಚ್ಚಿದ
ದೇಶ ದುರ್ಗವಮಾತ್ಯ ಮಿತ್ರಮ
ಹೀಶಜನವೆಂಬಿದುವೆ ಕೇಳ್ ಸಪ್ತಾಂಗ ಸನ್ನಾಹ
ಈಸು ನಿನಗುಂಟಿಲ್ಲ ಮಿತ್ರಮ
ಹೀಶರೆಂಬುದು ಕೊರತೆ ಪಾಂಡವ
ರಾ ಸಹಾಯವು ಬರಲು ಬಳಿಕಿದಿರಿಲ್ಲ ನಿನಗೆಂದ (ಉದ್ಯೋಗ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಭಂಡಾರ, ಬಲ, ಸೈನ್ಯ, ದೇಶ, ಕೋಟೆ, ಮಂತ್ರಿ, ಮಿತ್ರರಾಜರು, ಈ ಏಳು ಅಂಗಗಳು ರಾಜರಿಗಿರಬೇಕಾದವು. ದುರ್ಯೋಧನ ಇದರಲ್ಲಿ ನಿನಗೆ ಎಲ್ಲವೂ ಇದೆ ಮಿತ್ರರಾಜರನ್ನು ಬಿಟ್ಟು. ಪಾಂಡವರನ್ನು ನೀನು ಮಿತ್ರರಾಗಿಸಿ, ಅವರು ನಿನಗೆ ಮಿತ್ರರಾಜರಾಗಿ ಸಹಾಯ ಮಾಡಿದರೆ ನಿನ್ನೆದುರು ನಿಲ್ಲುವವರಾರಿರುವುದಿಲ್ಲ.

ಅರ್ಥ:
ಕೋಶ:ಬೊಕ್ಕಸ; ಬಲ: ಶಕ್ತಿ, ಸೈನ್ಯ; ತಳತಂತ್ರ: ಕಾಲಾಳುಗಳ, ಪಡೆ, ಸೈನ್ಯ; ಹೆಚ್ಚು: ಅಧಿಕ; ದೇಶ: ರಾಷ್ಟ್ರ; ದುರ್ಗ: ಕೋಟೆ; ಅಮಾತ್ಯ: ಮಂತ್ರಿ; ಮಿತ್ರ: ಸ್ನೇಹಿತ; ಮಹೀಶ: ರಾಜ; ಸನ್ನಾಹ: ಕವಚ, ಜೋಡು; ಈಸು: ಇವೆಲ್ಲವು; ಕೊರತೆ: ಚಿಂತೆ; ಸಹಾಯ: ನೆರವು; ಬರಲು: ಆಗಮಿಸಲು; ಬಳಿಕ: ನಂತರ; ಇದಿರು: ಎದುರು;

ಪದವಿಂಗಡಣೆ:
ಕೋಶ +ಬಲ +ತಳತಂತ್ರ +ಹೆಚ್ಚಿದ
ದೇಶ +ದುರ್ಗವ್+ಅಮಾತ್ಯ +ಮಿತ್ರ+ಮ
ಹೀಶಜನ+ವೆಂಬ್+ಇದುವೆ +ಕೇಳ್ +ಸಪ್ತಾಂಗ +ಸನ್ನಾಹ
ಈಸು +ನಿನಗುಂಟಿಲ್ಲ+ ಮಿತ್ರ+ಮ
ಹೀಶರ್+ಎಂಬುದು +ಕೊರತೆ +ಪಾಂಡವ
ರಾ +ಸಹಾಯವು +ಬರಲು+ ಬಳಿಕ್+ಇದಿರಿಲ್ಲ+ ನಿನಗೆಂದ

ಅಚ್ಚರಿ:
(೧) ಮಹೀಶ – ೩, ೫ ಸಾಲಿನ ಮೊದಲ ಪದ
(೨) ರಾಜರ ಸಪ್ತಾಂಗಗಳ ವರ್ಣನೆ – ಕೋಶ, ಬಲ, ತಳತಂತ್ರ, ದೇಶ, ದುರ್ಗ, ಅಮಾತ್ಯ, ಮಿತ್ರರಾಜ