ಪದ್ಯ ೩೬: ದುರ್ಯೋಧನನು ಕೃಷ್ಣನಿಗೆ ಯಾವ ರೀತಿ ವ್ಯಂಗ್ಯ ಮಾತುಗಳನಾಡಿದನು?

ಬೇಡಿದೊಂದೊಂದೂರು ನಮ್ಮಯ
ನಾಡ ತಲೆಮಂಡೆಗಳು ರಾಜ್ಯದ
ರೂಢಿ ಐದೂರುಗಳ ಬಳವಿಗೆ ಹಸ್ತಿನಾನಗರ
ಬೇಡಲರಿವನು ಮಾನನಿಧಿ ಕೊಂ
ಡಾಡಲೇತಕೆ ಧರೆಯ ನೀರಡಿ
ಮಾಡಿಕೊಂಡು ಮಹಾತ್ಮ ನಿನಗಂಜುವೆನು ನಾನೆಂದ (ಉದ್ಯೋಗ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೃಷ್ಣನಿಗೆ ವ್ಯಂಗ್ಯರೀತಿಯಲ್ಲಿ ದುರ್ಯೋಧನನು ಮಾತನಾಡಿಸುತ್ತಾ, ನೀನು ಬೇಡಿದ ಒಂದೊಂದು ಊರು ನಮ್ಮ ದೇಶದ ಕಳಶವಿದ್ದಂತೆ, ನಮ್ಮ ದೇಶದ ಅಭಿವೃದ್ಧಿಯು ಈ ಐದು ಊರುಗಳ ಬೆಳವಣಿಗೆಗಳಿಂದವಾಗುತ್ತದೆ ಅದರಿಂದಲೇ ಹಸ್ತಿನಾಪುರಕ್ಕೆ ಹಿರಿಮೆ. ಈ ಗೌರವಾನ್ವಿತ ದೊಡ್ಡಮನುಷ್ಯ (ಮಾನನಿಧಿ) ಇದನ್ನು ತಿಳಿದೂ ಕೇಳುತ್ತಿದ್ದಾನೆ. ಹಿಂದೆ ವಾಮನರೂಪದಲ್ಲಿ ಇವನು ಎರಡೇ ಹೆಜ್ಜೆಗೆ ಭೂಮಿಯನ್ನು ಅಳೆದವನೆಂದು ನೀವೆಲ್ಲ ಹೇಳುತ್ತೀರಿ, ಅಯ್ಯಾ ಮಹಾತ್ಮ ಕೃಷ್ಣ ನಿನಗೆ ನಾನು ಹೆದರುತ್ತೇನೆ ಎಂದು ದುರ್ಯೋಧನನು ನುಡಿದನು.

ಅರ್ಥ:
ಬೇಡು: ಕೇಳು, ಯಾಚಿಸು; ಊರು: ಪ್ರದೇಶ, ರಾಜ್ಯ; ನಾಡು: ರಾಷ್ಟ್ರ; ತಲೆ: ಶಿರ; ಮಂಡೆ: ತಲೆ; ರಾಜ್ಯ: ದೇಶ; ರೂಢಿ:ಭೂಮಿ, ಧರೆ; ಬಳವಿ:ಬೆಳವಣಿಗೆ; ನಗರ: ಪಟ್ಟಣ; ಅರಿ: ತಿಳಿ; ಮಾನ:ಮರ್ಯಾದೆ, ಗೌರವ; ಕೊಂಡಾಡು: ಹೊಗಳು; ಧರೆ: ಭೂಮಿ; ನೀರಡಿ: ಪಾತಾಳ; ಮಾಡು: ಆಚರಿಸು; ಮಹಾತ್ಮ: ದೊಡ್ಡಮನುಷ್ಯ, ಶ್ರೇಷ್ಠ; ಅಂಜು: ಹೆದರು;

ಪದವಿಂಗಡಣೆ:
ಬೇಡಿದ್+ಒಂದೊಂದ್+ಊರು +ನಮ್ಮಯ
ನಾಡ +ತಲೆಮಂಡೆಗಳು +ರಾಜ್ಯದ
ರೂಢಿ +ಐದೂರುಗಳ +ಬಳವಿಗೆ +ಹಸ್ತಿನಾನಗರ
ಬೇಡಲ್+ಅರಿವನು +ಮಾನನಿಧಿ+ ಕೊಂ
ಡಾಡಲ್+ಏತಕೆ +ಧರೆಯ +ನೀರಡಿ
ಮಾಡಿಕೊಂಡು+ ಮಹಾತ್ಮ +ನಿನಗ್+ಅಂಜುವೆನು +ನಾನೆಂದ

ಅಚ್ಚರಿ:
(೧) ಗುಣವಾಚಕಗಳ ಬಳಕೆ: ಮಾನನಿಧಿ, ಧರೆಯ ನೀರಡಿ ಮಾಡಿಕೊಂಡ ಮಹಾತ್ಮ
(೨) ಊರು, ರಾಜ್ಯ, ನಗರ, ನಾಡು – ಭೂಮಿಯನ್ನು ಸೂಚಿಸುವ ಸಮನಾರ್ಥಕ ಪದಗಳು