ಪದ್ಯ ೨೮: ಬಲರಾಮನ ಎದುರು ಯಾರು ನಿಂತರು?

ಹಲಧರನ ಮಸಕವನು ಪಾಂಡವ
ಬಲದ ದುಶ್ಚೇಷ್ಟೆಯನು ಭೀಮನ
ಫಲುಗುಣನ ಧರ್ಮಜನ ಯಮಳರ ಚಿತ್ರವಿಭ್ರಮವ
ಬಲಿಮಥನನೀಕ್ಷಿಸುತ ರಜತಾ
ಚಲವ ತರುಬುವ ನೀಲ ಗಿರಿಯವೊ
ಲಳುಕದಿದಿರಲಿ ನಿಂದು ಹಿಡಿದನು ಬಲನ ಬಲಗಯ್ಯ (ಗದಾ ಪರ್ವ, ೮ ಸಂಧಿ, ೨೮ ಪದ್ಯ)

ತಾತ್ಪರ್ಯ:
ಬಲರಾಮನ ಉದ್ರೇಕವನ್ನೂ ಪಾಂಡವರು ಭಯಭೀತರಾದುದನ್ನೂ, ಪಾಂಡವರ ಮನಸ್ಸಿನ ಅಳುಕನ್ನೂ ಶ್ರೀಕೃಷ್ಣನು ನೋಡಿ, ರಜತಗಿರಿಯನ್ನು ಅಡ್ಡಗಟ್ಟು ನಿಲ್ಲುವ ನೀಲಗಿರಿಯಂತೆ ಬಲರಾಮನೆದುರಿಗೆ ಬಂದು ಅಳುಕದೆ ಅವನ ಬಲಗೈಯನ್ನು ಹಿಡಿದನು.

ಅರ್ಥ:
ಹಲಧರ: ಬಲರಾಮ; ಹಲ: ನೇಗಿಲು; ಮಸಕ: ಆಧಿಕ್ಯ, ಹೆಚ್ಚಳ; ಬಲ: ಸೈನ್ಯ; ಚೇಷ್ಟೆ:ವರ್ತನೆ, ನಡವಳಿಕೆ; ವಿಭ್ರಮ: ಭ್ರಮೆ, ಭ್ರಾಂತಿ; ಬಲಿಮಥನ: ಬಲಿ ಚಕ್ರವರ್ತಿಯನ್ನು ನಾಶ ಮಾಡಿದವ (ಕೃಷ್ಣ); ಈಕ್ಷಿಸು: ನೋಡು; ರಜತಾಚಲ: ಹಿಮಾಲಯ; ರಜತ: ಬೆಳ್ಳಿ; ಅಚಲ: ಬೆಟ್ಟ; ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು; ಗಿರಿ: ಬೆಟ್ಟ; ಅಳುಕು: ಹೆದರು; ಇದಿರು: ಎದುರು; ನಿಂದು: ನಿಲ್ಲು; ಹಿಡಿ: ಗ್ರಹಿಸು; ಬಲಗಯ್ಯ: ಬಲಕೈ;

ಪದವಿಂಗಡಣೆ:
ಹಲಧರನ +ಮಸಕವನು +ಪಾಂಡವ
ಬಲದ +ದುಶ್ಚೇಷ್ಟೆಯನು +ಭೀಮನ
ಫಲುಗುಣನ +ಧರ್ಮಜನ +ಯಮಳರ +ಚಿತ್ರ+ವಿಭ್ರಮವ
ಬಲಿಮಥನನ್+ಈಕ್ಷಿಸುತ +ರಜತಾ
ಚಲವ +ತರುಬುವ +ನೀಲ +ಗಿರಿಯವೊಲ್
ಅಳುಕದ್+ಇದಿರಲಿ +ನಿಂದು +ಹಿಡಿದನು +ಬಲನ +ಬಲಗಯ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ರಜತಾಚಲವ ತರುಬುವ ನೀಲ ಗಿರಿಯವೊಲಳುಕದಿದಿರಲಿ ನಿಂದು
(೨) ಕೃಷ್ಣನನ್ನು ಬಲಿಮಥನ ಎಂದು ಕರೆದಿರುವುದು
(೩) ಗಿರಿ, ಅಚಲ – ಸಮಾನಾರ್ಥಕ ಪದ

ಪದ್ಯ ೧೬: ಯಾವುದನ್ನು ಅಣಿ ಮಾಡಲು ದ್ರೋಣರು ಸೂಚಿಸಿದರು?

ಅರಸ ಮರುಳೈ ನೀನು ಸುರರನು
ಸರಕುಮಾಡನು ಸಕಲ ದೈವದ
ದೊರೆಯಲೇ ಹರನಾತನಸ್ತ್ರವನಾರು ತರುಬುವರು
ಹರನ ಶರವಿಲ್ಲಿನ್ನು ಹಗೆಗಳ
ನಿರುಳು ರಣದಲಿ ಹಿಂಡುವೆನು ಸಂ
ವರಿಸು ಕೈದೀವಿಗೆಯನೆಂದನು ದ್ರೋಣನುಬ್ಬಿನಲಿ (ದ್ರೋಣ ಪರ್ವ, ೧೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೋಣನು ತನ್ನ ಮಾತನ್ನು ಮುಂದುವರೆಸುತ್ತಾ, ರಾಜ ನಿನಗೇನು ಹುಚ್ಚೇ! ಎಲ್ಲ ದೈವಗಳ ದೊರೆಯಾದ ಶಿವನು ದೇವತೆಗಳನ್ನು ಲೆಕ್ಕಿಸುವುದಿಲ್ಲ. ಅರ್ಜುನನ ಬಳಿ ಇನ್ನು ಪಾಶುಪತಾಸ್ತ್ರವಿಲ್ಲ. ಈಗ ರಾತ್ರಿಯುದ್ಧದಲ್ಲಿ ವೈರಿಗಳನ್ನು ಹಿಂಡುತ್ತೇನೆ ಕೈದೀವಿಗೆಗಳನ್ನು ಸಿದ್ಧಗೊಳಿಸು ಎಂದು ದ್ರೋಣರು ಹೇಳಿದರು.

ಅರ್ಥ:
ಅರಸ: ರಾಜ; ಮರುಳೆ: ಮೂಢ; ಸುರ: ದೇವತೆ; ಸರಕು: ಸಾಮಾನು, ಸಾಮಗ್ರಿ; ಸಕಲ: ಎಲ್ಲಾ; ದೈವ: ಭಗವಂತ; ದೊರೆ: ಒಡೆಯ; ಹರ: ಶಿವ; ಅಸ್ತ್ರ: ಶಸ್ತ್ರ, ಆಯುಧ; ತರುಬು: ತಡೆ, ನಿಲ್ಲಿಸು; ಶರ: ಬಾಣ; ಹಗೆ: ವೈರಿ; ಇರುಳು: ರಾತ್ರಿ; ರಣ: ಯುದ್ಧ; ಹಿಂಡು: ಹಿಸುಕು, ಅದುಮು; ಸಂವರಿಸು: ಸಮಾಧಾನಗೊಳಿಸು, ಸಜ್ಜು ಮಾಡು; ಕೈದೀವಿಗೆ: ಪಂಜು; ಉಬ್ಬು: ಹಿಗ್ಗು;

ಪದವಿಂಗಡಣೆ:
ಅರಸ +ಮರುಳೈ +ನೀನು +ಸುರರನು
ಸರಕು+ಮಾಡನು +ಸಕಲ +ದೈವದ
ದೊರೆಯಲೇ +ಹರನ್+ಆತನ್+ಅಸ್ತ್ರವನ್+ಆರು +ತರುಬುವರು
ಹರನ +ಶರವಿಲ್ಲ್+ಇನ್ನು +ಹಗೆಗಳನ್
ಇರುಳು +ರಣದಲಿ +ಹಿಂಡುವೆನು +ಸಂ
ವರಿಸು +ಕೈದೀವಿಗೆಯನ್+ಎಂದನು +ದ್ರೋಣನ್+ಉಬ್ಬಿನಲಿ

ಅಚ್ಚರಿ:
(೧) ಶಿವನ ಹಿರಿಮೆ – ಸುರರನು ಸರಕುಮಾಡನು ಸಕಲ ದೈವದ ದೊರೆ
(೨) ದ್ರೋಣನ ಉಪಾಯ – ಹಗೆಗಳನಿರುಳು ರಣದಲಿ ಹಿಂಡುವೆನು

ಪದ್ಯ ೨೬: ಯಾರು ಯಾರರ ಮೇಲೆ ಯುದ್ಧವನ್ನು ಮಾಡಿದರು?

ಸೆಣಸು ಮಿಗಲಭಿಮನ್ಯು ಭೀಷ್ಮನ
ಕೆಣಕಿದನು ದುಶ್ಯಾಸನನು ಫಲು
ಗುಣನ ತರುಬಿದನಾ ಘಟೋತ್ಕಚನೊಡನೆ ಭಗದತ್ತ
ಕಣೆಗೆದರಿ ಸಹದೇವ ನಾರಾ
ಯಣಬಲವ ಬೆರಸಿದನು ಮತ್ಸ್ಯನ
ಹೊಣಕೆಯಿಂದ ಸುಧರ್ಮ ತಾಗಿದನರಸ ಕೇಳೆಂದ (ಭೀಷ್ಮ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಭೀಷ್ಮನೊಡನೆ ದುಶ್ಯಾಸನನು ಅರ್ಜುನನೊಡನೆ, ಘಟೋತ್ಕಚನು ಭಗದತ್ತನೊಡನೆ, ಯಾದವ ಬಲದೊಡನೆ ಸಹದೇವ, ವಿರಾಟನೊಡನೆ ಸುಶರ್ಮರು ಯುದ್ಧವನ್ನು ಮಾಡಿದರು.

ಅರ್ಥ:
ಸೆಣಸು: ಹೋರಾಡು; ಮಿಗಲು: ಹೆಚ್ಚು; ಕೆಣಕು: ರೇಗಿಸು, ಪ್ರಚೋದಿಸು; ತರುಬು: ತಡೆ, ನಿಲ್ಲಿಸು; ಕಣೆ: ಬಾಣ; ಕೆದರು: ಹರಡು; ಬಲ: ಶಕ್ತಿ; ನಾರಾಯಣಬಲ: ಯಾದವರ ಬಲದೊಡನೆ; ಬೆರಸು: ಜೋಡಿಸು; ಹೋಣಕೆ: ಯುದ್ಧ, ಕಾಳಗ; ತಾಗು: ಎದುರಿಸು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸೆಣಸು +ಮಿಗಲ್+ಅಭಿಮನ್ಯು +ಭೀಷ್ಮನ
ಕೆಣಕಿದನು +ದುಶ್ಯಾಸನನು +ಫಲು
ಗುಣನ +ತರುಬಿದನಾ+ ಘಟೋತ್ಕಚನೊಡನೆ +ಭಗದತ್ತ
ಕಣೆಗೆದರಿ +ಸಹದೇವ+ ನಾರಾ
ಯಣ+ಬಲವ +ಬೆರಸಿದನು +ಮತ್ಸ್ಯನ
ಹೊಣಕೆಯಿಂದ +ಸುಶರ್ಮ +ತಾಗಿದನ್+ಅರಸ +ಕೇಳೆಂದ

ಅಚ್ಚರಿ:
(೧) ಹೋರಾಟವನ್ನು ವಿವರಿಸಲು ಬಳಸಿದ ಪದಗಳು – ಸೆಣಸು, ಕೆಣಕು, ತರುಬು, ಬೆರಸು

ಪದ್ಯ ೧೦: ಯುದ್ಧದಲ್ಲಿ ಸತ್ತವರ ಸಂಖ್ಯೆ ಎಷ್ಟಿತ್ತು?

ಜೋಳವಾಳಿಯೊಳುಂಡು ಮಾಡಿದ
ಸಾಲವನು ತಲೆಗಳಲಿ ತಿದ್ದಿದ
ರಾಳ ತರುಬುವ ಪತಿಗೆ ಹರುಷವ ಮಾಡಿ ತಮತಮಗೆ
ಕಾಲನೂರೈದದು ಸುರಸ್ತ್ರೀ
ಜಾಲ ನೆರೆಯದು ಗಗನ ಸುಭಟರ
ಸಾಲೊಳಡಗಿತು ಚಿತ್ರವೆನೆ ಹೊಯ್ದಾಡಿತುಭಯಬಲ (ಭೀಷ್ಮ ಪರ್ವ, ೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಸರದಿಯಲ್ಲಿ ನಿಂತು ಜೋಳವನ್ನು ತಂದು ಉಂಡು ಒಡೆಯನಲ್ಲಿ ಮಾಡಿದ್ದ ಸಾಲಗಲನ್ನು ತಮ್ಮ ತಲೆಗಳನ್ನೇ ಕೊಟ್ಟು ತೀರಿಸಿದರು. ಇಂತಹ ಸೈನಿಕರನ್ನು ಸಾಕಿದ್ದ ರಾಜರು ಅವರ ಪರಾಕ್ರಮವನ್ನು ಕಂಡು ಸಂತೋಷಪಟ್ಟರು. ಸತ್ತ ಯೋಧರಿಗೆ ಸ್ವರ್ಗದಲ್ಲಿ ನಿಲ್ಲಲು ಜಾಗವಿರಲಿಲ್ಲ. ಅವರನ್ನು ಕರೆದುಕೊಂಡು ಹೋಗಲು ಅಪ್ಸರೆಯರೇ ಸಾಕಾಗಲಿಲ್ಲ. ಆಕಾಶದಲ್ಲೆಲ್ಲಾ ವೀರಸ್ವರ್ಗವನ್ನು ಪಡೆದವರ ಸಾಲೇ ತುಂಬಿತ್ತು.

ಅರ್ಥ:
ಜೋಳವಾಳಿ: ಒಡೆಯನ ಋಣವನ್ನು ತೀರಿಸುವವನು; ಉಂಡು: ತಿಂದು; ಸಾಲ: ಎರವು; ತಲೆ: ಶಿರ; ತಿದ್ದು: ಸರಿಪಡಿಸು; ಆಳ:ಗಾಢತೆ, ಅಂತರಾಳ; ತರುಬು: ತಡೆ, ನಿಲ್ಲಿಸು; ಪತಿ: ಒಡೆಯ; ಹರುಷ: ಸಂತಸ; ಕಾಲು: ಪಾದ; ಊರು: ನೆಲೆಸು; ಸುರಸ್ತ್ರೀ; ಅಪ್ಸರೆ; ಜಾಲ: ಗುಂಪು; ನೆರೆ: ಸೇರು; ಗಗನ: ಆಗಸ; ಸುಭಟ: ಪರಾಕ್ರಮಿ; ಸಾಲು: ಸರದಿ, ಆವಳಿ; ಅಡಗು: ಮುಚ್ಚು; ಚಿತ್ರ: ಪಟ; ಹೊಯ್ದಾಡು: ಹೋರಾಡು; ಬಲ: ಸೈನ್ಯ;

ಪದವಿಂಗಡಣೆ:
ಜೋಳವಾಳಿಯೊಳ್+ಉಂಡು +ಮಾಡಿದ
ಸಾಲವನು +ತಲೆಗಳಲಿ +ತಿದ್ದಿದರ್
ಆಳ+ ತರುಬುವ+ ಪತಿಗೆ+ ಹರುಷವ+ ಮಾಡಿ +ತಮತಮಗೆ
ಕಾಲನ್+ಊರೈದದು+ ಸುರಸ್ತ್ರೀ
ಜಾಲ+ ನೆರೆಯದು +ಗಗನ+ ಸುಭಟರ
ಸಾಲೊಳ್+ಅಡಗಿತು +ಚಿತ್ರವೆನೆ +ಹೊಯ್ದಾಡಿತ್+ಉಭಯಬಲ

ಅಚ್ಚರಿ:
(೧) ಅಸಂಖ್ಯಾತ ಸೈನಿಕರ ಸತ್ತರು ಎಂದು ಹೇಳುವ ಪರಿ – ಕಾಲನೂರೈದದು ಸುರಸ್ತ್ರೀ ಜಾಲ ನೆರೆಯದು ಗಗನ ಸುಭಟರ ಸಾಲೊಳಡಗಿತು ಚಿತ್ರವೆನೆ ಹೊಯ್ದಾಡಿತುಭಯಬಲ

ಪದ್ಯ ೧: ಅರ್ಜುನನು ಹೇಗೆ ತೋರಿದನು?

ಮರಳಿದವು ತುರು ಮಾರಿಗೌತಣ
ಮರಳಿ ಹೇಳಿತು ಹಸಿದ ಹೆಬ್ಬುಲಿ
ಮೊರೆಯೆ ದನಿದೋರಿದವು ಹುಲುಮೃಗವೇನನುಸುರುವೆನು
ಧರಣಿಪನ ಹಿಂದಿಕ್ಕಿ ಸೌಬಲ
ದುರುಳ ದುಶ್ಯಾಸನ ಜಯದ್ರಥ
ರುರುಬಿದರು ತರುಬಿದರು ಪರಬಲ ಕಾಲಭೈರವನ (ವಿರಾಟ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ವಿರಾಟನ ಗೋವುಗಳು ಹಿಂದಿರುಗಿದವು. ಮಾರಿಗೆ ಔತಣಕ್ಕೆ ಮತ್ತೆ ಕರೆ ಬಂದಿತು. ಹಸಿದ ಹೆಬ್ಬುಲಿಯಾದ ಅರ್ಜುನನು ಗರ್ಜಿಸಿದನು. ಕ್ಷುಲ್ಲಕ ಮೃಗಗಳು ಅದಕ್ಕೆದುರಾಗಿ ಕ್ಷೀಣವಾಗಿ ಉತ್ತರಿಸಿದವು. ಶಕುನಿ, ದುಶ್ಯಾಸನ, ಜಯದ್ರಥರು, ಕೌರವನನ್ನು ಹಿಂದಕ್ಕಿಟ್ಟು ಪರಬಲ ಕಾಲಭೈರವನಂತಿದ್ದ ಅರ್ಜುನನನ್ನು ತಡೆದರು.

ಅರ್ಥ:
ಮರಳು: ಹಿಂದಿರುಗು; ತುರು: ಹಸು; ಮಾರಿ: ಕ್ಷುದ್ರದೇವತೆ; ಔತಣ: ಭೋಜನ; ಮರಳು: ಮತ್ತೆ, ಹಿಂದಿರುಗು; ಹೇಳು: ತಿಳಿಸು; ಹಸಿ: ಆಹಾರವನ್ನು ಬಯಸು; ಹೆಬ್ಬುಲಿ: ದೊಡ್ಡ ವ್ಯಾಘ್ರ; ಮೊರೆ: ಝೇಂಕಾರ, ಗರ್ಜಿಸು; ದನಿ: ಶಬ್ದ; ತೋರು: ಕಾಣಿಸು; ಹುಲು: ಅಲ್ಪ; ಮೃಗ: ಪ್ರಾಣಿ; ಉಸುರು: ಮಾತನಾಡು, ಪ್ರಾಣ; ಧರಣಿಪ: ರಾಜ; ಹಿಂದಿಕ್ಕು: ಹಿಂದೆ ಸರಿಸು; ಸೌಬಲ: ಶಕುನಿ; ದುರುಳ: ದುಷ್ಟ; ಉರುಬು: ಮೇಲೆ ಬೀಳು; ತರುಬು: ತಡೆ, ನಿಲ್ಲಿಸು; ಪರಬಲ: ವೈರಿಸೈನ್ಯ; ಕಾಲಭೈರವ: ಶಿವನ ಅವತಾರ

ಪದವಿಂಗಡಣೆ:
ಮರಳಿದವು+ ತುರು +ಮಾರಿಗ್+ಔತಣ
ಮರಳಿ +ಹೇಳಿತು +ಹಸಿದ +ಹೆಬ್ಬುಲಿ
ಮೊರೆಯೆ+ ದನಿದೋರಿದವು +ಹುಲು+ಮೃಗವೇನನ್+ಉಸುರುವೆನು
ಧರಣಿಪನ+ ಹಿಂದಿಕ್ಕಿ +ಸೌಬಲ
ದುರುಳ +ದುಶ್ಯಾಸನ +ಜಯದ್ರಥರ್
ಉರುಬಿದರು +ತರುಬಿದರು +ಪರಬಲ +ಕಾಲಭೈರವನ

ಅಚ್ಚರಿ:
(೧) ಉರುಬಿದರು, ತರುಬಿದರು – ಪ್ರಾಸ ಪದಗಳು
(೨) ಮರಳಿ – ೧,೨ ಸಾಲಿನ ಮೊದಲ ಪದ
(೩) ಅರ್ಜುನನನ್ನು ಹೆಬ್ಬುಲಿಗೆ ಹೋಲಿಸುವ ಪರಿ – ಹಸಿದ ಹೆಬ್ಬುಲಿ ಮೊರೆಯೆ ದನಿದೋರಿದವು ಹುಲುಮೃಗವೇನನುಸುರುವೆನು

ಪದ್ಯ ೪೫: ಗಂಧರ್ವರು ಹೇಗೆ ಮುನ್ನುಗ್ಗಿದರು?

ಮುರಿದ ಬಲ ಸಂವರಿಸಿ ಪಡಿಮುಖ
ಕುರುಬಿದುದು ದುರ್ಯೋಧನಾನುನ
ರರಸಿದರು ಗಂಧರ್ವನಾವೆಡೆ ತೋರು ತೋರೆನುತ
ತರುಬುವುದು ಜಯವೊಮ್ಮೆ ಮನದಲಿ
ಕರುಬುವುದು ಮತ್ತೊಮ್ಮೆ ತಪ್ಪೇ
ನಿರಿದಸಹಸವ ತೋರೆನುತ ಬೆರಸಿದರು ಪರಬಲವ (ಅರಣ್ಯ ಪರ್ವ, ೨೦ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸೋತು ಹಿಮ್ಮೆಟ್ಟಿದ ಕುರುಸೈನ್ಯವು ಸುಧಾರಿಸಿಕೊಂಡು ಚಿತ್ರಸೇನನ ಸಮ್ಮುಖಕ್ಕೆ ನುಗ್ಗಿತು. ಕೌರವನ ತಮ್ಮಂದಿರು ಗಂಧರ್ವನೆಲ್ಲಿ, ಎಂದು ಗರ್ಜಿಸುತ್ತಾ ಅವನನ್ನು ಹುಡುಕಿದರು. ಒಮ್ಮೆ ಗೆಲುವು ಒಮ್ಮೆ ಸೋಲು ಯುದ್ಧದಲ್ಲಿ ಸಹಜ. ನೀನು ಗೆದ್ದ ಸಾಹಸವನ್ನು ಈಗ ತೋರಿಸು, ಎಂದು ಅವರು ಗಂಧರ್ವ ಸೈನ್ಯದೊಡನೆ ಕೈ ಮಾಡಿದರು.

ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಸಂವರಿಸು: ಗುಂಪುಗೂಡು, ಸಜ್ಜು ಮಾದು; ಪಡಿಮುಖ: ಎದುರು; ಕುರುಬು: ದ್ವೇಷ, ಅಸೂಯೆ; ಅನುಜ: ತಮ್ಮ; ಅರಸು: ಹುಡುಕು; ಗಂಧರ್ವ: ದೇವತೆಗಳ ವರ್ಗ; ತೋರು: ಗೋಚರ; ತರುಬು: ತಡೆ, ನಿಲ್ಲಿಸು; ಜಯ: ಗೆಲುವು; ಮನ: ಮನಸ್ಸು; ಕರುಬು:ಹೊಟ್ಟೆಕಿಚ್ಚು ಪಡು; ತಪ್ಪು: ಸರಿಯಿಲ್ಲದ; ಹಸ: ಉತ್ತಮವಾದ; ಬೆರಸು: ಕೂಡಿರುವಿಕೆ; ಪರಬಲ: ಎದುರಾಳಿಯ ಸೈನ್ಯ;

ಪದವಿಂಗಡಣೆ:
ಮುರಿದ+ ಬಲ +ಸಂವರಿಸಿ +ಪಡಿಮುಖ
ಕುರುಬಿದುದು +ದುರ್ಯೋಧನ್+ಅನುನರ್
ಅರಸಿದರು +ಗಂಧರ್ವನ್+ಆವೆಡೆ +ತೋರು +ತೋರೆನುತ
ತರುಬುವುದು+ ಜಯವೊಮ್ಮೆ+ ಮನದಲಿ
ಕರುಬುವುದು +ಮತ್ತೊಮ್ಮೆ +ತಪ್ಪೇನ್
ಇರಿದಸಹಸವ +ತೋರೆನುತ+ ಬೆರಸಿದರು+ ಪರಬಲವ

ಅಚ್ಚರಿ:
(೧) ಕುರುಬು, ತರುಬು, ಕರುಬು – ಪದಗಳ ಬಳಕೆ

ಪದ್ಯ ೪೮: ಕಾಲಕೇಯರ ಬಲ ಎಂತಹುದು?

ಕೆರಳಿತಲ್ಲಿ ನಿವತಕವಚರ
ಮರಣ ವಾರ್ತೆಯ ಕೇಳಿದಸುರರು
ಪುರದ ಬಾಹೆಯೊಳಡ್ಡಹಾಯ್ದರು ತರುಬಿದರು ರಥವ
ಅರಸ ಚಿತ್ತೈಸವದಿರಲಿ ಪರಿ
ಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ (ಅರಣ್ಯ ಪರ್ವ, ೧೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಿವಾತ ಕವಚರ ಸಾವನ್ನು ಕೇಳಿದ ಕಾಲಕೇಯರು ಕೆರಳಿದರು. ನಾನು ಅವರ ಊರ ಬಳಿ ಬರುತ್ತಿದ್ದಂತೆ ನನ್ನನ್ನು ತಡೆಯಲು ನನ್ನ ರಥಕ್ಕೆ ಅಡ್ಡ ಬಂದರು. ಅಣ್ಣ ಕೇಳು, ಅವರು ಮಾಯಾ ಯುದ್ಧ ವಿಶಾರದರು. ನಿವಾತಕವಚರಿಗಿಂತ ಎರಡು ಸಾವಿರ ಪಟ್ಟು ಬಲ ಶಾಲಿಗಳು.

ಅರ್ಥ:
ಕೆರಳು: ರೇಗು, ಕನಲು; ಮರಣ: ಸಾವು; ವಾರ್ತೆ: ಸುದ್ದಿ; ಕೇಳಿ: ಆಲಿಸು; ಅಸುರ: ದಾನವ; ಪುರ: ಊರು; ಬಾಹೆ: ಹೊರಗೆ; ಹಾಯ್ದು: ಹೊಡೆ; ತರುಬು: ತಡೆ, ನಿಲ್ಲಿಸು; ರಥ: ಬಂಡಿ; ಅರಸ: ರಾಜ; ಚಿತ್ತೈಸು: ಆಲಿಸು; ಅವದಿರು: ಅವರು; ಪರಿ: ರೀತಿ, ಬಗೆ; ಮಾಯೆ: ಗಾರುಡಿ, ಇಂದ್ರಜಾಲ; ರಚನೆ: ನಿರ್ಮಾಣ, ಸೃಷ್ಟಿ; ರಂಜಿಸು: ಹೊಳೆ, ಪ್ರಕಾಶಿಸು; ಸಾವಿರ: ಸಹಸ್ರ; ಮಡಿ: ಪಟ್ಟು; ಮಿಗಿಲು: ಹೆಚ್ಚು;

ಪದವಿಂಗಡಣೆ:
ಕೆರಳಿತಲ್ಲಿ+ ನಿವಾತಕವಚರ
ಮರಣ +ವಾರ್ತೆಯ +ಕೇಳಿದ್+ಅಸುರರು
ಪುರದ +ಬಾಹೆಯೊಳ್+ಅಡ್ಡ+ಹಾಯ್ದರು+ ತರುಬಿದರು+ ರಥವ
ಅರಸ+ ಚಿತ್ತೈಸ್+ಅವದಿರಲಿ+ ಪರಿ
ಪರಿಯ +ಮಾಯಾರಚನೆ+ ರಂಜಿಸಿತ್
ಎರಡು+ ಸಾವಿರ+ ಮಡಿಗೆ +ಮಿಗಿಲು +ನಿವಾತ+ಕವಚರಿಗೆ

ಅಚ್ಚರಿ:
(೧) ನಿವಾತಕವಚ – ೧, ೬ ಸಾಲಿನ ಕೊನೆಯ ಪದ
(೨) ಕಾಲಕೇಯರ ಬಲದ ಸಾಮರ್ಥ್ಯ – ಪರಿಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ

ಪದ್ಯ ೭: ಬಾಣಗಳ ಯುದ್ಧವನ್ನು ಹೇಗೆ ಚಿತ್ರಿಸಬಹುದು?

ಕಣೆ ಕಣೆಯನಿಟ್ಟೊರಸಿದುವು ಕೂ
ರ್ಗಣೆಗೆ ಮಾರ್ಗಣೆ ಚಾಚಿದವು ಕಣೆ
ಕಣೆಗೆ ಮಲೆತುವು ತರುಬಿದವು ಕಣೆ ಕಣೆಯ ಪಡಿಮುಖವ
ಕಣೆ ಕಣೆಗೆ ತರಳಿದವು ಕಣೆ ಮಾ
ರ್ಗಣೆಯನಣೆದವು ಹಿಂಡುಗಣೆ ಸಂ
ದಣಿಗಣೆಯಲಕಾಡಿದವು ರಣಧೀರರೆಸುಗೆಗಳು (ಕರ್ಣ ಪರ್ವ, ೨೩ ಸಂಧಿ, ೭ ಪದ್ಯ)

ತಾತ್ಪರ್ಯ:
ಕರ್ಣಾರ್ಜುನರ ಯುದ್ಧದಲ್ಲಿ ಬಾಣಗಳು ಬಾಣಗಳನ್ನು ಮುರಿದವು. ಚೂಪಾದ ಬಾಣಗಳಿಗೆ ಎದುರಾದ ಬಾಣಗಳು ಬಂದವು. ಬಾಣಗಳೇ ಬಾಣಗಳಿಗೆ ಇದಿರಾದವು. ಬಾಣಕ್ಕೆ ಪ್ರತಿಬಾಣಗಳು ಬಂದವು. ಪ್ರತಿಯಾಗಿ ಬಂದ ಬಾಣಗಳನ್ನು ಬಾಣಗಳು ಹೊಡೆದವು. ಹಿಂಡು ಬಾಣಗಳು ಹಿಂಡು ಬಾಣಗಳನ್ನು ತೊಲಗಿಸಿದವು.

ಅರ್ಥ:
ಕಣೆ: ಬಾಣ; ಒರಸು: ನಾಶಮಾಡು; ಕೂರ್ಗಣೆ: ಹರಿತವಾದ ಬಾಣ; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ; ಚಾಚು: ಹರಡು; ಮಲೆ:ಗರ್ವಿಸು, ಎದುರಿಸು; ತರುಬು: ತಡೆ, ನಿಲ್ಲಿಸು; ಪಡಿಮುಖ: ಎದುರು, ಅಭಿಮುಖ; ತೆರಳು: ಹೊರಡು; ಅಣೆ:ತಿವಿ, ಹೊಡೆ; ಹಿಂಡು: ಗುಂಪು; ಸಂದಣಿ: ದಟ್ಟ; ಆಡು: ಹೋರಾಡು; ರಣಧೀರ: ಪರಾಕ್ರಮಿ; ಎಸು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಕಣೆ ಕಣೆಯನಿಟ್+ಒರಸಿದುವು +ಕೂ
ರ್ಗಣೆಗೆ +ಮಾರ್ಗಣೆ +ಚಾಚಿದವು+ ಕಣೆ
ಕಣೆಗೆ +ಮಲೆತುವು+ ತರುಬಿದವು +ಕಣೆ +ಕಣೆಯ +ಪಡಿಮುಖವ
ಕಣೆ +ಕಣೆಗೆ+ ತರಳಿದವು +ಕಣೆ+ ಮಾ
ರ್ಗಣೆಯನ್+ಅಣೆದವು +ಹಿಂಡು+ಕಣೆ+ ಸಂ
ದಣಿ+ಕಣೆಯಲಕ್+ಆಡಿದವು +ರಣಧೀರರ್+ಎಸುಗೆಗಳು

ಅಚ್ಚರಿ:
(೧) ಕಣೆ ಪದದ ಅಮೋಘ ಬಳಕೆ
(೨) ಕೂರ್ಗಣೆ, ಮಾರ್ಗಣೆ – ಪ್ರಾಸ ಪದಗಳು
(೩) ಒರಸು, ಚಾಚು, ತರುಬು, ತರಳು, ಅಣೆ, ಆಡು – ಪದ ಪ್ರಯೋಗ

ಪದ್ಯ ೬೩: ಭೀಮನು ದುಶ್ಯಾಸನನನ್ನು ಹೇಗೆ ಹಂಗಿಸಿದನು?

ಆಕೆವಾಳರು ಕರ್ಣಗುರುಸುತ
ರೀ ಕೃಪಾಚಾರಿಯರು ತಾವೇ
ಕೈಕವೀರರು ನಿನ್ನನೊಬ್ಬನನೊಪ್ಪುಗೊಟ್ಟರಲಾ
ಏಕೆ ತರುಬಿದಿರಿವರನಾಹವ
ಭೀಕರರನವಿವೇಕಿಗಳು ಇವ
ರೇಕೆ ನೀವೇಕೆಂದು ದುಶ್ಯಾಸನನ ನೋಡಿದನು (ಕರ್ಣ ಪರ್ವ, ೧೯ ಸಂಧಿ, ೬೩ ಪದ್ಯ)

ತಾತ್ಪರ್ಯ:
ಶೂರರಾದ ಕರ್ಣ, ಅಶ್ವತ್ಥಾಮ, ಕೃಪಾಚಾರ್ಯರು, ಪ್ರತಿಯೊಬ್ಬರು ಏಕೈಕ ವೀರರಾಗಿದ್ದೂ ಸಹ ನಿನ್ನೊಬ್ಬನನ್ನು ನನಗೆ ಒಪ್ಪಿಸಿ ಸುಮ್ಮನಿದ್ದಾರೆ. ಇವರನ್ನೆಲ್ಲಾ ನಿಮ್ಮ ಸೈನ್ಯದಲ್ಲಿ ಏಕೆ ಕೂಡಿಹಾಕಿಕೊಂಡಿರಿ? ಇವರು ವೀರರಂತೆ! ಏನೇ ಇರಲಿ ಇವರು ಅವಿವೇಕಿಗಳು, ನೀವು ಇವರನ್ನೇಕೆ ಸೇರಿಸಿಕೊಂಡಿರಿ ಎಂದು ದುಶ್ಯಾಸನನನ್ನು ನೋಡುತ್ತಾ ಭೀಮನು ಹಂಗಿಸಿದನು.

ಅರ್ಥ:
ಆಕೆವಾಳ: ವೀರ, ಪರಾಕ್ರಮಿ; ಸುತ: ಪುತ್ರ; ಏಕೈಕ: ಒಂದೇ ಒಂದಾದ; ವೀರ: ಶೂರ; ಒಪ್ಪು: ಸಮ್ಮತಿಸು, ಅಂಗೀಕರಿಸು; ತರುಬು:ತಡೆ, ನಿಲ್ಲಿಸು; ಆಹವ: ಯುದ್ಧ; ಭೀಕರ: ಭಯಾನಕತೆ; ಅವಿವೇಕಿ: ಯುಕ್ತಾಯುಕ್ತ ವಿಚಾರವಿಲ್ಲದವ;

ಪದವಿಂಗಡಣೆ:
ಆಕೆವಾಳರು +ಕರ್ಣ+ಗುರುಸುತರ್
ಈ+ ಕೃಪಾಚಾರಿಯರು +ತಾವ್+
ಏಕೈಕ+ವೀರರು +ನಿನ್ನನ್+ಒಬ್ಬನನ್+ಒಪ್ಪುಗೊಟ್ಟರಲಾ
ಏಕೆ+ ತರುಬಿದಿರ್+ಇವರನ್+ಆಹವ
ಭೀಕರರನ್+ಅವಿವೇಕಿಗಳು+ ಇವ
ರೇಕೆ+ ನೀವೇಕೆಂದು +ದುಶ್ಯಾಸನನ +ನೋಡಿದನು

ಅಚ್ಚರಿ:
(೧) ಆಕೆವಾಳ, ವೀರ – ಸಮನಾರ್ಥಕ ಪದ

ಪದ್ಯ ೧೫: ಅಶ್ವತ್ಥಾಮನು ಅರ್ಜುನನನ್ನು ಹೇಗೆ ಕೆರಳಿಸಿದನು?

ಇತ್ತಲಿತ್ತಲು ಪಾರ್ಥ ಹೋಗದಿ
ರಿತ್ತಲಶ್ವತ್ಥಾಮನಾಣೆ ಮ
ಹೋತ್ತಮರು ಗುರು ಭೀಷ್ಮರಲಿ ಮೆರೆ ನಿನ್ನ ಸಾಹಸವ
ಕಿತ್ತು ಬಿಸುಡುವೆನಸುವನಿದಿರಾ
ಗುತ್ತಲೆಲವೋ ನಿನ್ನ ಜೋಕೆಯ
ಜೊತ್ತಿನಾಹವವಲ್ಲೆನುತ ತರುಬಿದನು ಗುರುಸೂನು (ಕರ್ಣ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಅರ್ಜುನನನ್ನು ಅಡ್ಡಗಟ್ಟಿ, ಎಲೈ ಅರ್ಜುನ ಆ ಕಡೆ ಹೋಗಬೇಡ, ಈ ಕಡೆ ಬಾ ನನ್ನಾಣೆ, ಶ್ರೇಷ್ಠರಾದ ಭೀಷ್ಮ ದ್ರೋಣರ ಹತ್ತಿರ ನಿನ್ನ ಸಾಹಸದ ತೋರಿಕೆಯನ್ನು ತೋರಿಸು, ನಿನ್ನ ಪ್ರಾಣವನ್ನು ಕಿತ್ತು ಎಸೆಯುತ್ತೇನೆ. ಎಲವೋ ಇಲ್ಲಿ ನನ್ನೆದುರಿಗೆ ಬಾ, ನಯವಾಗಿ ಪ್ರದರ್ಶನ ಮಾಡುವ ನಾಟಕ ಯುದ್ಧವಲ್ಲ ಎಂದು ಅಶ್ವತ್ಥಾಮನು ಅರ್ಜುನನನ್ನು ಕೆರಳಿಸಿದನು.

ಅರ್ಥ:
ಇತ್ತ: ಈ ಕಡೆ; ಹೋಗು: ತೆರಳು; ಆಣೆ: ಪ್ರಮಾಣ; ಮಹೋತ್ತಮ: ಶ್ರೇಷ್ಠ; ಗುರು: ಆಚಾರ್ಯ; ಮೆರೆ: ಪ್ರಸಿದ್ಧವಾಗು; ಸಾಹಸ: ಬಲ; ಕಿತ್ತು: ಹೊರಹಾಕು; ಬಿಸುಡು: ಎಸೆ; ಅಸು: ಪ್ರಾಣ; ಇದಿರು: ಎದುರು; ಜೋಕೆ: ಹುಷಾರು, ಎಚ್ಚರಿಕೆ; ಜೊತ್ತು: ಆಸರೆ, ನೆಲೆ; ಆಹವ: ಯುದ್ಧ; ತರುಬು:ತಡೆ, ನಿಲ್ಲಿಸು; ಸೂನು: ಮಗ;

ಪದವಿಂಗಡಣೆ:
ಇತ್ತಲಿತ್ತಲು +ಪಾರ್ಥ +ಹೋಗದಿರ್
ಅತ್ತಲ್+ಅಶ್ವತ್ಥಾಮನಾಣೆ +ಮ
ಹೋತ್ತಮರು +ಗುರು +ಭೀಷ್ಮರಲಿ+ ಮೆರೆ+ ನಿನ್ನ +ಸಾಹಸವ
ಕಿತ್ತು +ಬಿಸುಡುವೆನ್+ಅಸುವನ್+ಇದಿರಾ
ಗುತ್ತಲ್+ಎಲವೋ +ನಿನ್ನ +ಜೋಕೆಯ
ಜೊತ್ತಿನ್+ಆಹವವ್+ಅಲ್ಲೆನುತ +ತರುಬಿದನು+ ಗುರುಸೂನು

ಅಚ್ಚರಿ:
(೧) ಕೋಪದ ನುಡಿಗಳು – ಕಿತ್ತು ಬಿಸುಡುವೆನಸುವನ್;