ಪದ್ಯ ೩೭: ಊರ್ವಶಿಯಲ್ಲಿ ಕೋಪವು ಹೇಗೆ ಸೇರಿಕೊಂಡಿತು?

ಸೊಂಪಡಗಿತು ಮುಖೇಂದು ತನುಲತೆ
ಕಂಪಿಸಿದುದಡಿಗಡಿಗೆ ಮೈ ತನಿ
ಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ
ತಂಪಿನಲಿ ಶಿಖಿ ಮಧುರದಲಿ ಕಟು
ನುಂಪಿನಲಿ ಬಿರಿಸಮೃತದಲಿ ವಿಷ
ಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನ ರೋಷ (ಅರಣ್ಯ ಪರ್ವ, ೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಊರ್ವಶಿಯ ಮುಖಚಂದ್ರವು ಕಳೆಗುಂದಿತು, ಅವಳ ದೇಹಲತೆಯು ಮತ್ತೆ ಮತ್ತೆ ನಡುಗಿತು, ಮೈಯಲ್ಲಿ ಬೆವರುಸುರಿದು ದೇಹ ಪರಿಮಳದಿಂದ ಘಮಘಮಿಸಿತು, ಹಿಮದಲ್ಲಿ ಬೆಂಕಿ, ಸಿಹಿಯಲ್ಲಿ ಖಾರ, ನಯದಲ್ಲಿ ಬಿರಿಸು, ಅಮೃತದಲ್ಲಿ ವಿಷವು ಬೆರೆತಂತೆ, ಅವಳಿಗೆ ಮಹಾ ಕೋಪವುಂಟಾಯಿತು.

ಅರ್ಥ:
ಸೊಂಪು: ಕಾಂತಿ, ಹೊಳಪು; ಮುಖ: ಆನನ; ಇಂದು; ಚಂದ್ರ; ತನು: ದೇಹ; ಲತೆ: ಬಳ್ಳಿ; ಕಂಪು: ಸುಗಂಧ; ಅಡಿಗಡಿ: ಹೆಜ್ಜೆ ಹೆಜ್ಜೆ; ಮೈ: ತನು; ತನಿ: ಹೆಚ್ಚಾಗು; ಮಘಮಘಿಸು: ಸುವಾಸನೆಯನ್ನು ಬೀರು; ಅಮಲ:ನಿರ್ಮಲ; ಸ್ವೇದ: ಬೆವರು; ಸಲಿಲ: ನೀರು; ತಂಪು: ತಣಿವು, ಶೈತ್ಯ; ಶಿಖಿ: ಬೆಂಕಿ; ಮಧುರ: ಸವಿ, ಇಂಪು; ಕಟು: ತೀಕ್ಷ್ಣವಾದ; ನುಂಪು: ನುಣ್ಪು; ಬಿರಿ: ಸೀಳು , ಕಠಿಣ; ಅಮೃತ: ಸುಧೆ; ವಿಷ: ನಂಜು; ಗುಂಪು: ರಾಶಿ, ಸಮೂಹ; ನೆಲೆ: ಆಶ್ರಯ, ಆಧಾರ, ವಾಸಸ್ಥಾನ; ಸತಿ: ಹೆಣ್ಣು; ಘನ: ದೊಡ್ಡ, ಗಟ್ಟಿ; ರೋಷ: ಕೋಪ;

ಪದವಿಂಗಡಣೆ:
ಸೊಂಪ್+ಅಡಗಿತು +ಮುಖ+ಇಂದು +ತನುಲತೆ
ಕಂಪಿಸಿದುದ್+ಅಡಿಗಡಿಗೆ+ ಮೈ +ತನಿ
ಗಂಪಿನಲಿ+ ಮಘಮಘಿಸಿತ್+ಅಮಲ +ಸ್ವೇದ +ಸಲಿಲದಲಿ
ತಂಪಿನಲಿ +ಶಿಖಿ +ಮಧುರದಲಿ +ಕಟು
ನುಂಪಿನಲಿ+ ಬಿರಿಸ್+ಅಮೃತದಲಿ +ವಿಷ
ಗುಂಪಿನಲಿ +ನೆಲೆಯಾದವೋಲ್ +ಸತಿಗಾಯ್ತು +ಘನ +ರೋಷ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಂಪಿನಲಿ ಶಿಖಿ ಮಧುರದಲಿ ಕಟುನುಂಪಿನಲಿ ಬಿರಿಸಮೃತದಲಿ ವಿಷಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನ ರೋಷ
(೨) ಆಕೆಯ ಬೆವರಿನ ವಾಸನೆಯನ್ನು ಹೇಳುವ ಪರಿ – ಮೈ ತನಿಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ

ಪದ್ಯ ೩೧: ಕಮಲಭವ ಪುರದಲ್ಲಿ ಯಾರಿರುತ್ತಾರೆ?

ಹರಳುಗಳ ಕೇವಣದ ಮಂಗಳ
ತರವೆನಿಪ ತೊಡಿಗೆಗಲ ದಿವ್ಯಾಂ
ಬರದಿ ಬೆಳಗುವ ತನುಲತೆಯ ನವಮಣಿಯ ಮೌಳಿಗಳ
ತರಳಲೋಚನದಿಂದು ವದನದ
ಪರಮಸೌಭಾಗ್ಯದ ವಿಲಾಸದ
ಪರಿಜನಂಗಳು ಕಮಲಭವ ಪುರದಲ್ಲಿ ನೆಲಸಿಹರು (ಅರಣ್ಯ ಪರ್ವ, ೮ ಸಂಧಿ, ೩೧ ಪದ್ಯ)

ತಾತ್ಪರ್ಯ:
ರತ್ನದ ಆಭರಣದಿಂದ ಕೂಡಿದ ಮಂಗಳತರ ತೊಡಿಗೆಯು, ದಿವ್ಯಾಂಬರಗಳನ್ನು ತೊಟ್ಟಿರುತ್ತಾರೆ. ಪ್ರಕಾಶಮಾನವಾದ ದೇಹಕಾಂತಿ, ನವರತ್ನಗಳ ಶಿರೋಭೂಷಣಗಳು, ಚಂಚಲವಾದ ಕಣ್ಣುಗಳು, ಚಂದ್ರನಂತಹ ಮುಖಗಳು, ಅತ್ಯಂತ ಮಂಗಳಕರವಾದ, ಚೆಲುವಿನ ಬಂಧುಗಳು

ಅರ್ಥ:
ಹರಳು: ಕಲ್ಲಿನ ಚೂರು, ಬೆಲೆಬಾಳುವ ರತ್ನ; ಕೇವಣ: ಹರಳನ್ನು ಕೂಡಿಸುವುದು; ಮಂಗಳ: ಶುಭ; ತೊಡಿಗೆ: ಆಭರಣ; ದಿವ್ಯ: ಶ್ರೇಷ್ಠ; ಅಂಬರ: ಬಟ್ಟೆ; ಬೆಳಗು: ಹೊಳೆ; ತನು: ದೇಹ; ಲತೆ: ಬಳ್ಳಿ; ನವ: ಹೊಸ; ಮಣಿ: ಬೆಲೆಬಾಳುವ ರತ್ನ; ಮೌಳಿ: ಶಿರ; ತರಳ: ಚಂಚಲವಾದ; ಲೋಚನ: ಕಣ್ಣು; ವದನ: ಮುಖ; ಪರಮ: ಶ್ರೇಷ್ಠ; ಸೌಭಾಗ್ಯ: ಮಂಗಳಕರ; ವಿಲಾಸ: ವಿಹಾರ, ಚೆಲುವು; ಪರಿಜನ: ಸುತ್ತಲಿನ ಜನ, ಪರಿವಾರ; ಕಮಲಭವ: ಬ್ರಹ್ಮ; ಪುರ: ಊರು; ನೆಲಸು: ವಾಸಿಸು;

ಪದವಿಂಗಡಣೆ:
ಹರಳುಗಳ +ಕೇವಣದ +ಮಂಗಳ
ತರವೆನಿಪ +ತೊಡಿಗೆಗಲ+ ದಿವ್ಯಾಂ
ಬರದಿ+ ಬೆಳಗುವ +ತನುಲತೆಯ +ನವ+ಮಣಿಯ +ಮೌಳಿಗಳ
ತರಳ+ಲೋಚನದ್+ಇಂದು +ವದನದ
ಪರಮ+ಸೌಭಾಗ್ಯದ+ ವಿಲಾಸದ
ಪರಿಜನಂಗಳು +ಕಮಲಭವ+ ಪುರದಲ್ಲಿ+ ನೆಲಸಿಹರು

ಅಚ್ಚರಿ:
(೧) ಸುಂದರ ದೇಹ ಎಂದು ಹೇಳಲು – ತನುಲತೆ ಪದದ ಬಳಕೆ

ಪದ್ಯ ೭೧: ದ್ರೌಪದಿಯು ರಾಜಸಭೆಗೆ ಹೇಗೆ ಬಂದಳು?

ಬೆದರುಗಂಗಳ ಬಿಟ್ಟಮಂಡೆಯ
ಹುದಿದ ಹಾಹಾರವದ ತೊಡಕಿದ
ಪದಯುಗದ ಮೇಲುದಿನ ಬೀದಿಯ ಧೂಳಿ ಧೂಸರದ
ವದನ ಕಮಲದ ಖಳನ ವಾಮಾಂ
ಗದಲಿ ಬಾಗಿದ ತನುಲತೆಯ ವರ
ಸುದತಿ ಬಂದಳು ರಾಜಸಭೆಗೆ ನೃಪಾಲ ಕೇಳೆಂದ (ಸಭಾ ಪರ್ವ, ೧೫ ಸಂಧಿ, ೭೧ ಪದ್ಯ)

ತಾತ್ಪರ್ಯ:
ದುಷ್ಟನಾದ ದುಶ್ಯಾಸನು ದ್ರೌಪದಿಯನ್ನು ಆಕೆಯ ಕೇಶಗಳನ್ನು ಹಿಡಿದು ಎಳೆಯುತ್ತಿದ್ದನು, ದ್ರೌಪದಿಯ ಹೆದರಿದ ಕಣ್ಣುಗಳು, ಕೆದರಿದ ಕೇಶರಾಶಿ, ಒಳಸೇರಿದ ಹಾಹಾಕಾರ, ಕಾಲಿಗೆ ತೊಡಕಿದ ಸೀರಿಯ ಸೆರಗು, ಬೀದಿಯ ಕಂದುಬಣ್ಣದ ಧೂಳಿನಿಂದ ಮುಸುಕಿದ ಮುಖ, ದೈನ್ಯಾವಸ್ಥೆಯಲ್ಲಿದ್ದ ಕಮಲ ಮುಖಿಯಾದ ದ್ರೌಪದಿಯನ್ನು ತನ್ನ ಎಡಗೈನಿಂದ ದುಶ್ಯಾಸನು ಎಳೆದು ರಾಜಸಭೆಗೆ ತಂದನು.

ಅರ್ಥ:
ಬೆದರು: ಹೆದರಿದ; ಕಂಗಳು: ಕಣ್ಣುಗಳು, ನಯನ; ಬಿಟ್ಟ: ಕೆದರಿದ, ಚದರು; ಮಂಡೆ: ತಲೆ; ಹುದಿದ: ಒಳಸೇರು; ಹಾಹಾರವ: ಹಾಹಾಕಾರ, ಅಳಲು; ತೊಡಕು: ಸಿಕ್ಕು, ಗೋಜು, ಗೊಂದಲ; ಪದಯುಗ: ಎರಡು ಪಾದಗಳು; ಮೇಲುದು: ಸೆರಗು, ಮೇಲುಹೊದಿಕೆ; ಬೀದಿ: ಮಾರ್ಗ; ಧೂಳು: ಕಸ, ನುಣ್ಣನೆಯ ಮಣ್ಣು; ಧೂಸರ: ಕಂದುಬಣ್ಣ; ವದನ: ಮುಖ; ಕಮಲ: ತಾವರೆ; ಖಳ: ದುಷ್ಟ; ವಾಮಾಂಗ: ಎಡಭಾಗ; ಬಾಗು: ಬಗ್ಗು, ಡೊಂಕಾಗು; ತನು: ದೇಹ; ಲತೆ: ಬಳ್ಳಿ; ವರ: ಶ್ರೇಷ್ಠ; ಸುದತಿ: ಹೆಣ್ಣು; ಬಂದಳು: ಆಗಮಿಸು; ರಾಜಸಭೆ: ಓಲಗ; ನೃಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಬೆದರು+ಕಂಗಳ +ಬಿಟ್ಟ+ಮಂಡೆಯ
ಹುದಿದ +ಹಾಹಾ+ರವದ +ತೊಡಕಿದ
ಪದಯುಗದ+ ಮೇಲುದಿನ+ ಬೀದಿಯ +ಧೂಳಿ +ಧೂಸರದ
ವದನ +ಕಮಲದ +ಖಳನ +ವಾಮಾಂ
ಗದಲಿ +ಬಾಗಿದ +ತನುಲತೆಯ +ವರ
ಸುದತಿ+ ಬಂದಳು +ರಾಜಸಭೆಗೆ +ನೃಪಾಲ +ಕೇಳೆಂದ

ಅಚ್ಚರಿ:
(೧) ವದನ ಕಮಲ, ತನುಲತೆ, ವರಸುದತಿ – ದ್ರೌಪದಿಯನ್ನು ವರ್ಣಿಸುವ ಪದ
(೨) ದ್ರೌಪದಿಯ ಭಾವದ ಚಿತ್ರಣ – ಬೆದರುಗಂಗಳ ಬಿಟ್ಟಮಂಡೆಯ ಹುದಿದ ಹಾಹಾರವದ ತೊಡಕಿದ ಪದಯುಗದ ಮೇಲುದಿನ ಬೀದಿಯ ಧೂಳಿ ಧೂಸರದ