ಪದ್ಯ ೩: ಕೃಪ ಮತ್ತು ಕೃತವರ್ಮರು ಹೇಗೆ ನಿದ್ರಾವಶರಾದರು?

ಒಳಗೆ ತೊಳಲಿಕೆಯುಕ್ಕಡಕೆ ಕಳ
ವಳಿಸಿ ಹಾಯಿದರೊಮ್ಮೆ ಮತ್ತಂ
ತೆಲೆಮಿಡುಕದಾಲಿಸಿ ನಿಧಾನಿಸಿ ಸಾರಿದರು ಮರನ
ಬಳಲಿಕೆಯ ಬೇಸರಿನೊಳಾ ಕೃಪ
ಮಲಗಿದನು ಕೃತವರ್ಮನೊಲೆದಾ
ಗುಳಿಸಿ ತೂಕಡಿಸಿದನು ತೆಗೆದುದು ನಿದ್ರೆ ತನುಮನವ (ಗದಾ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಮಲಗಿದರೂ ಮನಸ್ಸಿನ ಚಿಂತೆಯಿಂದ ಕಳವಳಿಸಿ ಎದ್ದರು. ಸುತ್ತಲೂ ಬರುವ ಸದ್ದುಗಳನ್ನು ಕೇಳಿದರು. ಬಳಲಿಕೆಯಿಂದ ಕೃಪನು ಮಲಗಿಬಿಟ್ಟನು. ಕೃತವರ್ಮನು ಆಚೀಚೆ ಓಲಾಡಿ ಆಕಳಿಸಿ ನಿದ್ರಾವಶನಾದನು.

ಅರ್ಥ:
ಒಳಗೆ: ಅಂತರ್ಯ; ತೊಳಲು: ಬವಣೆ, ಸಂಕಟ; ಉಕ್ಕಡ: ಅತಿಶಯವಾದ; ಕಳವಳ: ಗೊಂದಲ; ಹಾಯಿ: ಎಚ್ಚರಗೊಳ್ಳು; ಮಿಡುಕು: ಅಲುಗು, ಕದಲು; ಒಮ್ಮೆ: ಒಂದು ಬಾರಿ; ಆಲಿಸು: ಕೇಳು; ನಿಧಾನಿಸು: ನಿಲ್ಲು; ಸಾರು: ಹರಡು; ಮರ: ತರು; ಬಳಲಿಕೆ: ಆಯಾಸ; ಬೇಸರ: ಬೇಜಾರು; ಮಲಗು: ನಿದ್ರಿಸು; ತೂಕಡಿಸು: ನಿದ್ರಾವಶನಾಗು; ತೆಗೆ: ಹೊರತರು; ನಿದ್ರೆ: ಶಯನ; ತನು: ದೇಹ; ಮನ: ಮನಸ್ಸು;

ಪದವಿಂಗಡಣೆ:
ಒಳಗೆ +ತೊಳಲಿಕೆ+ಉಕ್ಕಡಕೆ +ಕಳ
ವಳಿಸಿ +ಹಾಯಿದರ್+ಒಮ್ಮೆ +ಮತ್ತಂ
ತೆಲೆಮಿಡುಕದ್+ಆಲಿಸಿ +ನಿಧಾನಿಸಿ +ಸಾರಿದರು +ಮರನ
ಬಳಲಿಕೆಯ +ಬೇಸರಿನೊಳ್+ಆ+ ಕೃಪ
ಮಲಗಿದನು +ಕೃತವರ್ಮನ್+ಒಲೆದ್
ಆಗುಳಿಸಿ+ ತೂಕಡಿಸಿದನು +ತೆಗೆದುದು +ನಿದ್ರೆ+ ತನು+ಮನವ

ಅಚ್ಚರಿ:
(೧) ನಿದ್ರೆಗೆ ಜಾರಿದನು ಎಂದು ಹೇಳುವ ಪರಿ – ಒಲೆದಾಗುಳಿಸಿ ತೂಕಡಿಸಿದನು ತೆಗೆದುದು ನಿದ್ರೆ ತನುಮನವ
(೨) ಮಲಗು, ನಿದ್ರೆ – ಸಾಮ್ಯಾರ್ಥ ಪದಗಳು

ಪದ್ಯ ೫೯: ಎಂತಹ ರಾವುತರು ಮುನ್ನುಗ್ಗಿದರು?

ನೂಲ ಹರಿಗೆಯ ಹೆಗಲ ಬಾರಿಯ
ತೋಳ ತೊರಿಯ ಲೌಡಿಗಳ ಕರ
ವಾಳ ತಳಪದ ಮಿಂಚುಗಳ ತನುಮನದ ಕೆಚ್ಚುಗಳ
ಸಾಲದಾವಣಿಅಲೆಯ ಗಂಟಲ
ಗಾಳಗತ್ತರಿಗರಗಸದ ಬಿರು
ದಾಳಿಗಳ ಛಲದಂಕರಾವುತರೊತ್ತಿ ನೂಕಿದರು (ಭೀಷ್ಮ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ನೂಲಿನ ಗುರಾಣಿ, ಹೆಗಲಲ್ಲಿ ಹಗ್ಗ, ದೃಢವಾದ ತೋಳುಗಳಲ್ಲಿ ಹಿಡಿದ ಲೌಡಿ ಕತ್ತಿಗಳ ಹೊಳಪು, ಮನಸ್ಸಿನ ನಿಷ್ಠುರ ಪರಾಕ್ರಮ, ತಲೆಯ ಮೇಲೆ ದಾವಣಿಗಳು, ಅವಕ್ಕೆ ಕಟ್ಟಿದ ಗಂಟಲಿನ ಕೊಕ್ಕೆ, ಕತ್ತರಿ, ಗರಗಸಗಳು ಇವುಗಳಿಂದ ಕೂಡಿದ ಬಿರುದನ್ನುಳ್ಳವರೂ, ಛಲಗಾರರೂ ಆದ ರಾವುತರು ಮುನ್ನುಗ್ಗಿದರು.

ಅರ್ಥ:
ನೂಲು: ಬಟ್ಟೆ, ವಸ್ತ್ರ; ಹರಿಗೆ: ಗುರಾಣಿ; ಹೆಗಲು: ಭುಜ; ಬಾರಿ: ಬಲಿ, ಆಹುತಿ, ಲಗ್ಗೆ; ತೋಳ: ಭುಜ; ತೋರ: ದಪ್ಪನಾದ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಕರವಾಳ: ಕತ್ತಿ; ತಳಪಥ: ಕಾಂತಿ; ಮಿಂಚು: ಪ್ರಕಾಶ; ತನುಮನ: ದೇಹ ಮತ್ತು ಮನಸ್ಸು; ಕೆಚ್ಚು: ಧೈರ್ಯ, ಸಾಹಸ; ಸಾಲು: ಗುಂಪು, ಆವಳಿ; ದಾವಣಿ: ಕಟ್ಟು, ಬಂಧನ; ತಲೆ: ಶಿರ; ಗಂಟಲು: ಕೊರಳು; ಕತ್ತರಿ: ಒಂದು ಬಗೆಯ ಆಯುಧ; ಗರಗಸ: ಮರ ಕೊಯ್ಯುವ ಸಾಧನ, ಗಂಪ; ಬಿರುದ: ಬಿರುದುಳ್ಳವ; ಛಲ: ದೃಢ ನಿಶ್ಚಯ; ಅಂಕ: ಯುದ್ಧ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನೂಕು: ತಳ್ಳು; ಗಾಳ: ಕೊಕ್ಕೆ;

ಪದವಿಂಗಡಣೆ:
ನೂಲ+ ಹರಿಗೆಯ+ ಹೆಗಲ+ ಬಾರಿಯ
ತೋಳ +ತೋರಿಯ +ಲೌಡಿಗಳ+ ಕರ
ವಾಳ +ತಳಪದ +ಮಿಂಚುಗಳ +ತನುಮನದ +ಕೆಚ್ಚುಗಳ
ಸಾಲ+ದಾವಣಿ+ತಲೆಯ +ಗಂಟಲ
ಗಾಳ+ಕತ್ತರಿ+ಗರಗಸದ +ಬಿರು
ದಾಳಿಗಳ +ಛಲದ್+ಅಂಕ+ರಾವುತರ್+ಒತ್ತಿ +ನೂಕಿದರು

ಅಚ್ಚರಿ:
(೧) ಹರಿಗೆ, ಲೌಡಿ, ಕರವಾಳ, ಕತ್ತರಿ, ಗರಗಸ – ಆಯುಧಗಳ ಹೆಸರು
(೨) ರಾವುತರ ತೋರಿದ ಪರಿ – ನೂಲ ಹರಿಗೆಯ ಹೆಗಲ ಬಾರಿಯ ತೋಳ ತೊರಿಯ ಲೌಡಿಗಳ ಕರ
ವಾಳ ತಳಪದ ಮಿಂಚುಗಳ ತನುಮನದ ಕೆಚ್ಚುಗಳ