ಪದ್ಯ ೭: ಭೀಮ ದುರ್ಯೋಧನರ ಯುದ್ಧವು ಅಡಿಗಡಿಗೆ ಹೇಗೆ ನಡೆಯಿತು?

ಅಡಿಗಡಿಗೆ ಕರ್ಪುರದ ಕವಳವ
ನಡಸಿದರು ತಾಳಿಗೆಗೆ ಬಳಿಕಡಿ
ಗಡಿಗೆ ಹೆರಸಾರಿದರು ಸಮರಶ್ರಮನಿವಾರಣಕೆ
ಕಡುಹು ತಳಿತುದು ಪೂತು ಫಲವಾ
ಯ್ತಡಿಗಡಿಗೆ ಮಚ್ಚರದ ಮಸಕದ
ತಡಿಕೆವಲೆ ನುಗ್ಗಾಯ್ತು ಮನ ಕುರುಪತಿಯ ಪವನಜನ (ಗದಾ ಪರ್ವ, ೭ ಸಂಧಿ, ೭ ಪದ್ಯ)

ತಾತ್ಪರ್ಯ:
ಮತ್ತೆ ಮತ್ತೆ ಆಯಾಸವನ್ನು ಕಳೆದುಕೊಳ್ಳಲು ಹಿಂದಕ್ಕಿ ಹೋಗಿ ಕುಳಿತು ಕರ್ಪೂರ ವೀಳೆಯವನ್ನು ಹಾಕಿಕೊಳ್ಳುತ್ತಿದ್ದರು. ಅವರ ಶಕ್ತಿ ಚಿಗುರಿತು. ಮನಸ್ಸಿನ ಮತ್ಸರ ಒಳಗೇ ಇದ್ದುದು ತಡಿಕೆ ಬಲೆಯನ್ನು ಮುರಿದು ಹೊರಸಿಡಿಯಿತು.

ಅರ್ಥ:
ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಕರ್ಪುರ: ಸುಗಂಧ ದ್ರವ್ಯ; ಕವಳ: ಊಟ; ಅಡಸು: ತುರುಕು; ತಾಳಿಗೆ: ಗಂಟಲು; ಬಳಿಕ: ನಂತರ; ಹೆರಸಾರ: ಹಿಂದಕ್ಕೆ ಸರಿ; ಸಮರ: ಯುದ್ಧ; ಶ್ರಮ: ಆಯಾಸ; ನಿವಾರಣ: ಕಡಿಮೆಯಾಗು; ಕಡುಹು: ಸಾಹಸ, ಹುರುಪು; ತಳಿತು: ಚಿಗುರು; ಪೂತು: ಭಲೇ; ಫಲ: ಪ್ರಯೋಜನ; ಮಚ್ಚರ: ಮತ್ಸರ, ಹೊಟ್ಟೆಕಿಚ್ಚು; ಮಸಕ: ಆಧಿಕ್ಯ, ಹೆಚ್ಚಳ; ತಡಿಕೆ: ತೆರೆ, ಮರೆ; ನುಗ್ಗು: ತಳ್ಳಿಕೊಂಡು ಮುಂದೆ ಸರಿ; ಮನ: ಮನಸ್ಸು; ಬಲೆ: ಜಾಲ;

ಪದವಿಂಗಡಣೆ:
ಅಡಿಗಡಿಗೆ +ಕರ್ಪುರದ+ ಕವಳವನ್
ಅಡಸಿದರು +ತಾಳಿಗೆಗೆ +ಬಳಿಕ್+ಅಡಿ
ಗಡಿಗೆ+ ಹೆರಸಾರಿದರು +ಸಮರ+ಶ್ರಮ+ ನಿವಾರಣಕೆ
ಕಡುಹು +ತಳಿತುದು +ಪೂತು +ಫಲವಾಯ್ತ್
ಅಡಿಗಡಿಗೆ+ ಮಚ್ಚರದ+ ಮಸಕದ
ತಡಿಕೆ+ಬಲೆ +ನುಗ್ಗಾಯ್ತು+ ಮನ +ಕುರುಪತಿಯ +ಪವನಜನ

ಅಚ್ಚರಿ:
(೧) ಅಡಿಗಡಿಗೆ – ೩ ಬಾರಿ ಪ್ರಯೋಗ
(೨) ರೂಪಕದ ಪ್ರಯೋಗ – ಮಚ್ಚರದ ಮಸಕದ ತಡಿಕೆವಲೆ ನುಗ್ಗಾಯ್ತು ಮನ ಕುರುಪತಿಯ ಪವನಜನ

ಪದ್ಯ ೨೩: ಯಾವ ರೀತಿಯ ಬಲೆಗಳನ್ನು ಬೇಡರು ಕೊಂಡ್ಯೊಯ್ದರು?

ಬಂಡಿಗಳ ಬೆಳ್ಳಾರವಲೆಗಳ
ಖಂಡವಲೆಗಳ ತಡಿಕೆವಲೆಗಳ
ಗುಂಡುವಲೆಗಳ ಬೀಸುವಲೆಗಳ ಕಾಲುಗಣ್ಣಿಗಳ
ದಂಡಿವಲೆಗಳ ತೊಡಕುವಲೆಗಳ
ಹಿಂಡುವಲೆಗಳ ಮಯಣದಂಟಿನ
ಮಂಡವಿಗೆ ಬಲೆಗಳ ಕಿರಾತರು ಕೆದರಿತಗಲದಲಿ (ಅರಣ್ಯ ಪರ್ವ, ೧೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಬಂಡಿಗಳಲ್ಲಿ ಬೆಳ್ಳಾರ ಬಲೆ, ಖಂಡಬಲೆ, ತಡಿಕೆ ಬಲೆ, ಗುಂಡುಬಲೆ, ಬೀಸುಬಲೆ, ಕಾಲುಕಣ್ಣಿಗಳು, ದಂಡಿಬಲೆ, ತೊಡಕುಬಲೆ, ಹಿಂಡು ಬಲೆ, ಮೇಣದಂಟಿನ ಮಂಡವಿಗೆ ಬಲೆಗಳನ್ನು ತೆಗೆದುಕೊಂಡು ಬಂದ ಕಿರಾತರು ಕಾಡಿನಗಲಕ್ಕೂ ಹಾಸಿದರು.

ಅರ್ಥ:
ಬಂಡಿ: ಗಾಡಿ, ಚಕ್ಕಡಿ; ಬೆಳ್ಳಾರಬಲೆ: ಒಂದು ವಿಧವಾದ ಬಲೆ; ಮಯಣ: ಜೇನುಹುಟ್ಟಿನಿಂದ ಸಿಗುವ ಒಂದು ಬಗೆಯ ಅಂಟುದ್ರವ್ಯ; ಖಂಡ: ಮೂಳೆಯಿಲ್ಲದ ಮಾಂಸ; ತಡಿಕೆ: ಒಂದು ಬಗೆಯ ಬಲೆ; ಗುಂಡು: ಗೋಳಾಕಾರ; ಬೀಸು:ತೂಗುವಿಕೆ, ವಿಸ್ತಾರ; ಕಾಲುಗಣ್ಣಿ: ಕಾಲುಕುಣಿಕೆ, ಕಾಲು ತೊಡರಿಬೀಳುವಂತೆ ಮಾಡುವ ಹಗ್ಗ; ಕುಣಿಕೆ: ಹಗ್ಗದ ತುದಿಯಲ್ಲಿ ಹಾಕಿದ ಗಂಟು; ದಂಡಿ: ಕೋಲು, ದಡಿ; ತೊಡಕು: ಕಗ್ಗಂಟು; ಹಿಂಡು: ನುಲಿಸು, ತಿರುಚು; ಮಂಡ:ಮತ್ತಿನ ಪದಾರ್ಥ; ಕಿರಾತ: ಬೇಡ; ಕೆದರು: ಹರಡು; ಅಗಲ: ವಿಸ್ತಾರ;

ಪದವಿಂಗಡಣೆ:
ಬಂಡಿಗಳ +ಬೆಳ್ಳಾರವಲೆಗಳ
ಖಂಡವಲೆಗಳ+ ತಡಿಕೆವಲೆಗಳ
ಗುಂಡುವಲೆಗಳ +ಬೀಸುವಲೆಗಳ+ ಕಾಲುಗಣ್ಣಿಗಳ
ದಂಡಿವಲೆಗಳ+ ತೊಡಕುವಲೆಗಳ
ಹಿಂಡುವಲೆಗಳ+ ಮಯಣದಂಟಿನ
ಮಂಡವಿಗೆ +ಬಲೆಗಳ +ಕಿರಾತರು +ಕೆದರಿತ್+ಅಗಲದಲಿ

ಅಚ್ಚರಿ:
(೧) ಬಲೆಗಳ ಹೆಸರುಗಳು – ಬೆಳ್ಳಾರವಲೆ, ಖಂಡವಲೆ, ತಡಿಕೆವಲೆ, ಗುಂಡುವಲೆ, ಬೀಸುವಲೆ, ಕಾಲುಗಣ್ಣಿಗ, ದಂಡಿವಲೆ, ತೊಡಕುವಲೆ, ಹಿಂಡುವಲೆ, ಮಯಣದಂಟಿನ ಮಂಡವಿಗೆ ಬಲೆ

ಪದ್ಯ ೩೩: ಭೀಮನನ್ನು ಕಂಡು ದುಶ್ಯಾಸನ ಎಲ್ಲಿಗೆ ಓಡಿದನು?

ಒಡೆಯನೈತರಲಿಕ್ಷು ತೋಟದ
ಬಡನರಿಗಳೋಡುವವೊಲೀಕೆಯ
ಹಿಡಿದೆಳೆವ ಖಳ ಹಾಯ್ದನಾ ಕೌರವನ ಹೊರೆಗಾಗಿ
ನುಡಿ ತರುಣಿ ನನ್ನಾಣೆ ಭೀತಿಯ
ಬಿಡಿಸಿದೆನಲಾ ರಾಯನಾಜ್ಞೆಯ
ತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ (ಸಭಾ ಪರ್ವ, ೧೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕಬ್ಬಿನ ಗದ್ದೆಯ ಒಡೆಯನು ತೋಟವನ್ನು ಕಾಯಲು ಬರುತ್ತಿದ್ದಂತೆ ಅಲ್ಲಿ ನೆರೆದಿದ್ದು ಬಡನರಿಗಳ ಗುಂಪು ಓಡುವಂತೆ, ದ್ರೌಪದಿಯ ಸೆರಗನ್ನು ಹಿಡಿದಿದ್ದ ದುಶ್ಯಾಸನನು ಕೈಬಿಟ್ಟು ಕೌರವನ ಕಡೆಗೆ ಓಡಿಹೋದನು. ಭೀಮನು ದ್ರೌಪದಿ ನನ್ನಾಣೆ ಹೇಳು, ನಿನಗೆ ಬಂದಿದ್ದ ಭೀತಿಯನ್ನು ನಾನು ಬಿಡಿಸಲಿಲ್ಲವೇ? ಅಣ್ಣನಾಜ್ಞೆಯ ತಡಿಕೆಬಲೆ ಪುಡಿಯಾಯಿತು ಹೋಗಲಿ ಬಿಡು ಎಂದು ನುಡಿದನು.

ಅರ್ಥ:
ಒಡೆಯ: ರಾಜ, ಯಜಮಾನ; ಐತರು: ಬಾ, ಬಂದು ಸೇರು; ಇಕ್ಷು: ಕಬ್ಬು; ತೋಟ: ಗದ್ದೆ; ಬಡ: ಪಾಪ, ಸೊರಗು; ಓಡು: ಪಲಾಯನ; ಹಿಡಿ: ಬಂಧಿಸು; ಖಳ: ದುಷ್ಟ; ಹಾಯ್ದು: ಓಡು; ಹೊರೆ: ಆಸರೆ; ನುಡಿ: ಮಾತು; ತರುಣಿ: ಹೆಣ್ಣು; ಭೀತಿ: ಭಯ; ಆಣೆ: ಪ್ರಮಾಣ; ಬಿಡಿಸು: ಕಳಚು, ಸಡಿಲಿಸು; ರಾಯ: ಒಡೆಯ; ಆಜ್ಞೆ: ಆದೇಶ; ತಡಿಕೆ: ಚಪ್ಪರ, ಹಂದರ; ನುಗ್ಗು: ಒಳಹೊಕ್ಕು; ಹೋಗು: ತೆರಳು;

ಪದವಿಂಗಡಣೆ:
ಒಡೆಯನ್+ಐತರಲ್+ಇಕ್ಷು +ತೋಟದ
ಬಡನರಿಗಳ್+ಓಡುವವೊಲ್+ಈಕೆಯ
ಹಿಡಿದ್+ಎಳೆವ +ಖಳ +ಹಾಯ್ದನಾ +ಕೌರವನ+ ಹೊರೆಗಾಗಿ
ನುಡಿ +ತರುಣಿ +ನನ್ನಾಣೆ +ಭೀತಿಯ
ಬಿಡಿಸಿದೆನಲಾ+ ರಾಯನ್+ಆಜ್ಞೆಯ
ತಡಿಕೆವಲೆ +ನುಗ್ಗಾಯ್ತು +ಹೋಗಿನ್+ಎಂದನಾ +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒಡೆಯನೈತರಲಿಕ್ಷು ತೋಟದ ಬಡನರಿಗಳೋಡುವವೊಲ್
(೨) ಅಣ್ಣನ ಆಜ್ಞೆಯನ್ನು ಧಿಕ್ಕರಿಸುವ ಪರಿ – ರಾಯನಾಜ್ಞೆಯತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ