ಪದ್ಯ ೪೨: ಧೃತರಾಷ್ಟ್ರನು ಪಾಂಡವರನ್ನು ಹೇಗೆ ಉಪಚರಿಸಿದನು?

ಪವನಸುತನೇ ಬಾ ಎನುತ ತ
ಕ್ಕವಿಸಿದನು ಬಳಿಕೆರಗಿದಡೆ ವಾ
ಸವನ ಸುತ ಬಾ ಕಂದ ಎಂದಪ್ಪಿದನು ಫಲುಗುಣನ
ತವಕದಿಂದೆರಗಿದಡೆ ಮಾದ್ರಿಯ
ಜವಳಿಮಕ್ಕಳನಪ್ಪಿದನು ಕೌ
ರವಕುಲಾಗ್ರಣಿಗಳಿರ ಕುಳ್ಳಿರಿಯೆಂದನಂಧನೃಪ (ಗದಾ ಪರ್ವ, ೧೧ ಪದ್ಯ, ೪೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ಭೀಮ ಬಾ, ಅರ್ಜುನನೇ ಬಾ, ಮಾದ್ರಿಯಮಕ್ಕಳೇ ಬನ್ನಿ ಎಂದು ಅವರನ್ನೆಲ್ಲಾ ಆಲಂಗಿಸಿಕೊಂಡು, ಕೌರವ ಕುಲಾಗ್ರಣಿಗಳೇ ಕುಳಿತುಕೊಳ್ಳಿ ಎಂದು ಅವರನ್ನು ಉಪಚರಿಸಿದನು.

ಅರ್ಥ:
ಪವನಸುತ: ವಾಯುಪುತ್ರ; ಬಾ: ಆಗಮಿಸು; ತಕ್ಕವಿಸು: ಆಲಂಗಿಸು; ಬಳಿಕ: ನಂತರ; ಎರಗು: ನಮಸ್ಕರಿಸು; ವಾಸವ: ಇಂದ್ರ; ಸುತ: ಮಗ; ಕಂದ: ಮಗು; ಅಪ್ಪು: ಆಲಂಗಿಸು; ತವಕ: ಬಯಕೆ, ಆತುರ; ಜವಳಿ: ಜೋಡಿ; ಮಕ್ಕಳು: ಪುತ್ರ; ಅಗ್ರಣಿ: ಶ್ರೇಷ್ಠ; ಕುಲ: ವಂಶ; ಕುಳ್ಳಿರಿ: ಆಸೀನ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಪವನಸುತನೇ +ಬಾ +ಎನುತ +ತ
ಕ್ಕವಿಸಿದನು +ಬಳಿಕ್+ಎರಗಿದಡೆ +ವಾ
ಸವನ +ಸುತ +ಬಾ +ಕಂದ +ಎಂದಪ್ಪಿದನು +ಫಲುಗುಣನ
ತವಕದಿಂದ್+ಎರಗಿದಡೆ +ಮಾದ್ರಿಯ
ಜವಳಿಮಕ್ಕಳನ್+ಅಪ್ಪಿದನು +ಕೌ
ರವ+ಕುಲಾಗ್ರಣಿಗಳಿರ +ಕುಳ್ಳಿರಿ+ಎಂದನ್+ಅಂಧನೃಪ

ಅಚ್ಚರಿ:
(೧) ಪವನಸುತ, ವಾಸವನ ಸುತ – ಭೀಮ, ಅರ್ಜುನನನ್ನು ಕರೆದ ಪರಿ
(೨) ಸುತ, ಮಕ್ಕಳು, ಕಂದ – ಸಾಮ್ಯಾರ್ಥ ಪದ