ಪದ್ಯ ೩೫: ಧರ್ಮಜನ ಮೇಲೆ ದುರ್ಯೋಧನನು ಹೇಗೆ ದಾಳಿ ಮಾಡಿದನು?

ಧರಣಿಪನ ಥಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ಡೈಸಿದಡೆ ಕೊಟ್ಟನು ಬೋಳೆಯಂಬಿನಲಿ
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನುರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ (ಗದಾ ಪರ್ವ, ೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಜೋರಿನ ಹೊಡೆತವನ್ನು ತಡೆಯಲಾದರೆ ಸಹದೇವನು ಹಿಂದಿರುಗಿದನು. ನಕುಲನು ಬರಲು ಕೌರವನು ಬೋಳೆಯಂಬಿನಿಂದ ಹೊಡೆದನು. ನಕುಲನು ಸಹ ಇದನ್ನು ತಡೆಯಲಾರದೆ ಜಾರಿದನು. ಧೀರ ಕೌರವನು ನೂರಾನೆಗಳ ಸೈನ್ಯದೊಂದಿಗೆ ಧರ್ಮಜನ ದಳದ ಮೇಲೆ ದಾಳಿಮಾಡಿದನು.

ಅರ್ಥ:
ಧರಣಿಪ: ರಾಜ; ಥಟ್ಟಣೆ: ಗುಂಪು; ನಿಲ್ಲು: ತಡೆ; ತೆರಳು: ಹಿಂದಿರುಗು; ಹಿರಿಯ: ದೊಡ್ಡ; ಅಡ್ಡೈಸು: ಅಡ್ಡ ಹಾಕು; ಕೊಡು: ನೀಡು; ಅಂಬು: ಬಾಣ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಸೆಡೆ: ಗರ್ವಿಸು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಆನೆ: ಗಜ; ಡಾವರಿಸು: ಸುತ್ತು, ತಿರುಗಾಡು; ದಳ: ಸೈನ್ಯ; ಧೀರ: ಶೂರ;

ಪದವಿಂಗಡಣೆ:
ಧರಣಿಪನ +ಥಟ್ಟಣೆಗೆ +ನಿಲ್ಲದೆ
ತೆರಳಿದನು +ಸಹದೇವನ್+ಆತನ
ಹಿರಿಯನ್+ಅಡ್ಡೈಸಿದಡೆ +ಕೊಟ್ಟನು +ಬೋಳೆ+ಅಂಬಿನಲಿ
ಶರಹತಿಗೆ +ಸೆಡೆದ್+ಆ+ ನಕುಲ+ ಪೈ
ಸರಿಸಿದನು +ನುರಾನೆಯಲಿ +ಡಾ
ವರಿಸಿದನು+ ಧರ್ಮಜನ +ದಳದಲಿ+ ಧೀರ+ ಕುರುರಾಯ

ಅಚ್ಚರಿ:
(೧) ಪೈಸರಿಸಿದನು, ಡಾವರಿಸಿದನು, ತೆರಳಿದನು – ಪ್ರಾಸ ಪದಗಳು

ಪದ್ಯ ೧೪: ಶಿಶುಪಾಲ ಬಿಲ್ಲನ್ನು ಹೇಗೆ ಆಕ್ರಮಿಸಿದನು?

ಇವನಲೇ ರಾವಣನು ಮುನ್ನಿನ
ಭವದೊಳಗೆ ತಪ್ಪಲ್ಲೆನುತೆ ಜನ
ನಿವಹ ನಡುಗಿತು ಕೋಮಲಾಂಗಿಯ ಪುಣ್ಯವೆಂತೆನುತ
ಅವನಿಪತಿಕೇಳಣೆದನಿವ ಚಾ
ಪವನು ಬೋಳೈಸಿದನು ಬಲುಹೋ
ಶಿವಯೆನುತ ಸೀವರಿಸಿದನು ಡಾವರಿಸಿದನು ಧನುವ (ಆದಿ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಇವನೇ ಅಲ್ಲವೇ ಹಿಂದೆ ತ್ರೇತಾಯುಗದಲ್ಲಿ ರಾವಣನಾಗಿದ್ದವನು, ತಪ್ಪೇನು ಇಲ್ಲ ಇವನು ಬಿಲ್ಲನ್ನು ಗೆಲ್ಲಬಹುದು ಎಂದು ಜನಸಮೂಹ ನಡುಗಿ ದ್ರೌಪದಿಯ ಪಣ್ಯವೇನೋ ಎಂದು ಬೆದರಿದರು. ರಾಜ ಕೇಳು ಶಿಶುಪಾಲನು ಬಿಲ್ಲನ್ನು ತೀವಿದನು, ತನ್ನ ಶಕ್ತಿಯಿಂದ ಅದನ್ನು ಎಳೆದನು, ಆರ್ಭಟಿಸಿ, ತಿರುಗಾಡಿ ಅದನ್ನು ಆಕ್ರಮಿಸಿದನು.

ಅರ್ಥ:
ಮುನ್ನಿನ: ಹಿಂದಿನ; ಭವ:ಇರುವಿಕೆ, ಹುಟ್ಟು; ತಪ್ಪು: ಸರಿಯಲ್ಲದ್ದು; ನಿವಹ: ಗುಂಪು; ನಡುಗು: ಹೆದರು; ಕೋಮಲಾಂಗಿ: ಹುಡುಗಿ; ಪುಣ್ಯ: ಸುಕೃತ, ಸದಾಚಾರ; ಅವನಿಪತಿ: ರಾಜ; ಅವನಿ: ಭೂಮಿ; ಅಣೆ: ತಿವಿ, ಹೊಡೆ, ತಿಕ್ಕು; ಚಾಪ: ಬಿಲ್ಲು; ಬೋಳೈಸು: ಸಂತೈಸು; ಬಲುಹು: ಬಲ, ಶಕ್ತಿ; ಸೀವರಿಸು: ಆರ್ಭಟಿಸು, ಅಬ್ಬರಿಸು; ಡಾವರಿಸು: ತಿರುಗಾಡು, ಆತಿಯಾಗಿ ಬಯಸು;

ಪದವಿಂಗಡಣೆ:
ಇವನಲೇ +ರಾವಣನು +ಮುನ್ನಿನ
ಭವದೊಳಗೆ +ತಪ್ಪಲ್ಲ್+ಎನುತೆ +ಜನ
ನಿವಹ+ ನಡುಗಿತು +ಕೋಮಲಾಂಗಿಯ +ಪುಣ್ಯ+ವೆಂತ್+ಎನುತ
ಅವನಿಪತಿ+ಕೇಳ್+ಅಣೆದನ್+ಇವ +ಚಾ
ಪವನು +ಬೋಳೈಸಿದನು +ಬಲುಹೋ
ಶಿವಯೆನುತ +ಸೀವರಿಸಿದನು +ಡಾವರಿಸಿದನು+ ಧನುವ

ಅಚ್ಚರಿ:
(೧) ಧನು, ಚಾಪ – ಸಮಾನಾರ್ಥಕ ಪದ
(೨) ಅಣೆದನು, ಬೋಳೈಸಿದನು, ಸೀವರಿಸಿದನು, ಡಾವರಿಸಿದನು – ಬಿಲ್ಲನ್ನು ಆಕ್ರಮಿಸುವ ಬಗೆ