ಪದ್ಯ ೪೩: ಅರ್ಜುನನು ಕೃಷ್ಣನಲ್ಲಿ ಏನೆಂದು ಬೇಡಿದನು?

ದೇವ ಬೆಸಸಿನ್ನನಿಲಸೂನು ಸ
ಜೀವನಹಿತನಿಬರ್ಹಣ ಪ್ರ
ಸ್ತಾವವನು ಕರುಣಿಸುವುದಾತನ ಧರ್ಮವಿಕೃತಿಗ
ನೀವು ಕಂಡಿರೆ ನಾಭಿ ಜಂಘೆಗೆ
ಡಾವರಿಸಿದನು ಹಲವು ಬಾರಿ ಜ
ಯಾವಲಂಬನವೆಂತು ಕೃಪೆಮಾಡೆಂದನಾ ಪಾರ್ಥ (ಗದಾ ಪರ್ವ,೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನ ಬಳಿಗೆ ಹೋಗಿ, ಭೀಮನು ಜೀವಿಸಿದ್ದಾನೆ, ಶತ್ರುವು ಹಲವು ಬಾರಿ ಅವನ ನಾಭಿ ಮತ್ತು ಜಂಘೆಗೂ ಹೊಡೆದಿದ್ದಾನೆ. ಶತ್ರುವಿನ ವಧೆ ಹೇಗಾಗಬೇಕೆಂದು ದಯವಿಟ್ಟು ತಿಳಿಸು ಎಂದು ಅರ್ಜುನನು ಬೇಡಿದನು.

ಅರ್ಥ:
ದೇವ: ಭಗವಂತ; ಬೆಸಸು: ಹೇಳು; ಅನಿಲಸೂನು: ಭೀಮ; ಸಜೀವ: ಪ್ರಾಣವಿರುವ; ಅಹಿತ: ವೈರಿ; ಪ್ರಸ್ತಾವ: ವಿಚಾರ ಹೇಳುವುದು; ಕರುಣಿಸು: ದಯೆ ತೋರು; ಧರ್ಮ: ಧಾರಣೆ ಮಾಡಿದುದು; ವಿಕೃತಿ: ಬದಲಾವಣೆ, ವ್ಯತ್ಯಾಸ, ಕುರೂಪ; ಕಂಡು: ನೋಡು; ನಾಭಿ: ಹೊಕ್ಕಳು; ಜಂಘೆ: ತೊಡೆ; ಡಾವರಿಸು: ಹೊಡೆ; ಹಲವು: ಬಹಳ; ಬಾರಿ: ಸಾರ್ತಿ; ಜಯ: ಗೆಲುವು; ಅವಲಂಬನ: ಆಶ್ರಯ, ಆಸರೆ; ಕೃಪೆ: ದಯೆ;

ಪದವಿಂಗಡಣೆ:
ದೇವ +ಬೆಸಸಿನ್ನ್+ಅನಿಲಸೂನು +ಸ
ಜೀವನ್+ಅಹಿತನಿಬರ್ಹಣ+ ಪ್ರ
ಸ್ತಾವವನು +ಕರುಣಿಸುವುದ್+ಆತನ +ಧರ್ಮ+ವಿಕೃತಿಗ
ನೀವು +ಕಂಡಿರೆ +ನಾಭಿ +ಜಂಘೆಗೆ
ಡಾವರಿಸಿದನು +ಹಲವು +ಬಾರಿ +ಜಯ
ಅವಲಂಬನವೆಂತು +ಕೃಪೆಮಾಡೆಂದನಾ +ಪಾರ್ಥ

ಅಚ್ಚರಿ:
(೧) ಕರುಣಿಸು, ಕೃಪಮಾಡು – ಸಾಮ್ಯಾರ್ಥ ಪದಗಳು

ಪದ್ಯ ೮: ಭೀಮ ದುರ್ಯೋಧನರ ಯುದ್ಧದ ಗತಿ ಹೇಗಿತ್ತು?

ಶ್ವಾಸದಲಿ ಕಿಡಿಸಹಿತ ಕರ್ಬೊಗೆ
ಸೂಸಿದವು ಕಣ್ಣಾಲಿಗಳು ಕ
ಟ್ಟಾಸುರದಿ ಕೆಂಪೇರಿದವು ಬಿಗುಹೇರಿ ಹುಬ್ಬುಗಳು
ರೋಷ ಮಿಗಲೌಡೊತ್ತಿ ಬಹಳಾ
ಭ್ಯಾಸಿಗಳು ಡಾವರಿಸಿದರು ಡೊ
ಳ್ಳಾಸವೋ ರಿಪುಸೇನೆ ಕಾಣದು ಚಿತ್ರಪಯಗತಿಯ (ಗದಾ ಪರ್ವ, ೭ ಸಂಧಿ, ೮ ಪದ್ಯ)

ತಾತ್ಪರ್ಯ:
ಅವರ ಉಸಿರಿನಲ್ಲಿ ಕಪ್ಪುಹೊಗೆಯೊಡನೆ ಕಿಡಿಗಳು ಹೊರಬರುತ್ತಿದ್ದವು. ಹುಬ್ಬುಗಳು ಬಿಇದು ಕಣ್ಣುಗಳು ಕಡುಗೆಂಪೇರಿದ್ದವು. ರೋಷವೇರಿ ತುಟಿಕಚ್ಚಿ, ಮಹಾ ಚತುರರಾದ ಗದಾಯುದ್ಧದಲ್ಲಿ ಅತ್ಯಂತ ಶ್ರೇಷ್ಠರಾದ ಇಬ್ಬರ ಗದೆಗಳ ಹೊಡೆತವನ್ನು ಕಂಡರೂ, ಪಾದಗತಿ ಕಾಣಿಸುತ್ತಿರಲಿಲ್ಲ.

ಅರ್ಥ:
ಶ್ವಾಸ: ಉಸಿರು; ಕಿಡಿ: ಬೆಂಕಿ; ಸಹಿತ: ಜೊತೆ; ಕರ್ಬೊಗೆ: ಕಪ್ಪಾದ ಹೊಗೆ; ಸೂಸು: ಹೊರಹೊಮ್ಮು; ಕಣ್ಣಾಲಿ: ಕಣ್ಣಿನ ಅಂಉ; ಕಟ್ಟಾಸುರ: ಅತ್ಯಂತ ಭಯಂಕರ; ಏರು: ಹೆಚ್ಚಾಗು; ಬಿಗುಹೇರು: ಬಿಗಿಹೆಚ್ಚು; ಹುಬ್ಬು: ಕಣ್ಣಿನ ಮೇಲಿನ ರೋಮ; ರೋಷ: ಕೋಪ; ಮಿಗಲು: ಹೆಚ್ಚಾಗು; ಔಡೊತ್ತು: ಹಲ್ಲಿನಿಂದ ತುಟಿಕಚ್ಚು; ಬಹಳ: ತುಂಬ; ಅಭ್ಯಾಸಿ: ವಿದ್ಯಾರ್ಥಿ; ಡಾವರಿಸು: ತಿವಿ, ನೋಯಿಸು; ಡೊಳ್ಳಾಸ: ಮೋಸ, ಕಪಟ; ರಿಪುಸೇನೆ: ವೈರಿ ಸೈನ್ಯ; ಕಾಣು: ತೋರು; ಪಯಗತಿ: ಪಾದದ ವೇಗ;

ಪದವಿಂಗಡಣೆ:
ಶ್ವಾಸದಲಿ+ ಕಿಡಿಸಹಿತ +ಕರ್ಬೊಗೆ
ಸೂಸಿದವು +ಕಣ್ಣಾಲಿಗಳು +ಕ
ಟ್ಟಾಸುರದಿ+ ಕೆಂಪೇರಿದವು +ಬಿಗುಹೇರಿ +ಹುಬ್ಬುಗಳು
ರೋಷ +ಮಿಗಲ್+ಔಡೊತ್ತಿ+ ಬಹಳ
ಅಭ್ಯಾಸಿಗಳು +ಡಾವರಿಸಿದರು +ಡೊ
ಳ್ಳಾಸವೋ +ರಿಪುಸೇನೆ +ಕಾಣದು +ಚಿತ್ರ+ಪಯಗತಿಯ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕಿಡಿಸಹಿತ ಕರ್ಬೊಗೆಸೂಸಿದವು ಕಣ್ಣಾಲಿಗಳು ಕಟ್ಟಾಸುರದಿ ಕೆಂಪೇರಿದವು

ಪದ್ಯ ೨೮: ಕೃಷ್ಣನು ನೀರನ್ನು ತರಲು ಏನು ಮಾಡಿದನು?

ದೇವ ವಾಘೆಯ ಹಿಡಿ ತುರಂಗಕೆ
ಜೀವನವನೀ ಕಳನೊಳಗೆ ಸಂ
ಭಾವಿಸುವೆ ನೋಡೆನುತ ಧುಮ್ಮಿಕ್ಕಿದನು ಧಾರುಣಿಗೆ
ತೀವಿ ತೆಗೆದನು ವಜ್ರಶರದಲಿ
ಡಾವರಿಸಿದನು ಕಳನೊಳುದಕದ
ಸೈವಳೆಯ ಸೆಲೆಯರಿದು ಚೌಕಕೆ ಸೀಳಿದನು ನೆಲನ (ದ್ರೋಣ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರಿಸುತ್ತಾ ದೇವಾ, ಕುದುರೆಗಳ ಲಗಾಮನ್ನು ಹಿಡಿದು ರಥವನ್ನು ನಿಲ್ಲಿಸು. ಇವಕ್ಕೆ ಜೀವನವನ್ನು ಇಲ್ಲಿಯೇ ತರಿಸುತ್ತೇನೆ ನೋಡು ಎಂದು ಭೂಮಿಗೆ ಧುಮುಕಿದನು. ನೆಲವನ್ನು ಪರೀಕ್ಷಿಸಿ ನೀರಿನ ಸೆಲೆಯಿರುವ ಕಡೆ ವಜ್ರಾಸ್ತ್ರದಿಂದ ಚೌಕಾಕಾರವಾಗಿ ನೆಲವನ್ನು ಸೀಳಿದನು.

ಅರ್ಥ:
ದೇವ: ಭಗವಂತ; ವಾಘೆ: ಲಗಾಮು; ಹಿಡಿ: ಗ್ರಹಿಸು; ತುರಂಗ: ಕುದುರೆ; ಜೀವ: ಪ್ರಾಣ; ಕಳ: ಯುದ್ಧ; ಸಂಭಾವಿಸು: ತೃಪ್ತಿಪಡಿಸು; ನೋಡು: ವೀಕ್ಷಿಸು; ಧುಮ್ಮಿಕ್ಕು: ಧೊಪ್ಪನೆ ಕೆಳೆಗೆ ಬೀಳು; ಧಾರುಣಿ: ಭೂಮಿ; ತೀವು:ಚುಚ್ಚು; ತೆಗೆ: ಹೊರತರು; ವಜ್ರ: ಆಯುಧದ ಹೆಸರು, ಗಟ್ಟಿಯಾದ; ಶರ: ಬಾಣ; ಡಾವರಿಸು: ಬಾಯಾರಿಕೆಯಾಗು, ತಿವಿ; ಕಳ: ಯುದ್ಧರಂಗ; ಉದಕ: ನೀರು; ಸೈವಳಿ: ನೇರವಾದ ದಾರಿ ; ಸೆಲೆ: ಶಬ್ದ, ಧ್ವನಿ; ಚೌಕ: ಚತುಷ್ಕಾಕಾರವಾದುದು; ನೆಲ: ಭೂಮಿ;

ಪದವಿಂಗಡಣೆ:
ದೇವ +ವಾಘೆಯ +ಹಿಡಿ +ತುರಂಗಕೆ
ಜೀವನವನ್+ಈ+ ಕಳನೊಳಗೆ+ ಸಂ
ಭಾವಿಸುವೆ +ನೋಡೆನುತ +ಧುಮ್ಮಿಕ್ಕಿದನು +ಧಾರುಣಿಗೆ
ತೀವಿ +ತೆಗೆದನು +ವಜ್ರ+ಶರದಲಿ
ಡಾವರಿಸಿದನು +ಕಳನೊಳ್+ಉದಕದ
ಸೈವಳೆಯ +ಸೆಲೆಯರಿದು +ಚೌಕಕೆ +ಸೀಳಿದನು +ನೆಲನ

ಅಚ್ಚರಿ:
(೧) ಸ ಕಾರದ ಜೋಡಿ ಪದ – ಸೈವಳೆಯ ಸೆಲೆಯರಿದು
(೨) ಧಾರುಣಿ, ನೆಲ – ಸಮಾನಾರ್ಥಕ ಪದ

ಪದ್ಯ ೩೬: ಅಮರಗಣವೇಕೆ ಆಶ್ಚರ್ಯಚಕಿತವಾಗಿತ್ತು?

ಕವಿವ ಕಣೆಗಳ ದಡ್ಡಿಗಳನೊಡೆ
ತಿವಿದು ತುಳುಕಿದನಂಬಿನಬುಧಿಯ
ನವಿರಳಾಸ್ತ್ರಾನೀಕ ಡಾವರಿಸಿದವು ದಿಗುತಟವ
ಅವನಿಯೋ ದಿಕ್ಕುಗಳೊ ಪಾರ್ಥನೊ
ರವಿಯ ಕಾಣೆನು ಭಾಪು ಕಲಶೋ
ದ್ಭವ ಕೈಮೆಯೆನುತ್ತ ಬೆರಗಿನೊಳಿರ್ದುದಮರಗಣ (ಭೀಷ್ಮ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳ ತೆರೆಯನ್ನು ಕತ್ತರಿಸಿ, ದ್ರೋಣನು ಅರ್ಜುನನ ಮೇಲೆ ಲೆಕ್ಕವಿಲ್ಲದಷ್ಟು ಬಾಣಗಳನ್ನು ಬಿಟ್ಟನು, ಅವನ ಅಸ್ತ್ರಗಳು ದಿಕ್ಕುಗಳನ್ನು ತುಂಬಿದವು, ಭೂಮಿ, ದಿಕ್ಕು, ಅರ್ಜುನ, ಸೂರ್ಯ ಇವರಾರು ಕಾಣದಾದರು. ದೇವತೆಗಳು ಭಲೇ ದ್ರೋಣನ ಕೈಚಳಕ ಎಂತಹುದು ಎಂದು ಬೆರಗಾದರು.

ಅರ್ಥ:
ಕವಿ: ಆವರಿಸು, ಮುಚ್ಚು; ಕಣೆ: ಬಾಣ; ದಡ್ಡಿ: ತೆರೆ, ಪಂಜರ; ಒಡೆ: ಕತ್ತರಿಸು; ತಿವಿ: ಚುಚ್ಚು; ತುಳುಕು: ಹೊರಸೂಸುವಿಕೆ, ಉಕ್ಕುವಿಕೆ; ಅಂಬು: ಬಾಣ; ಅಬುಧಿ: ಸಾಗರ; ಅವಿರಳಾಸ್ತ್ರ: ಒತ್ತೊತ್ತಾದ ಬಾಣಗಳು; ಡಾವರಿಸು: ಸುತ್ತು, ತಿರುಗಾಡು; ದಿಗುತಟ: ದಿಗಂತ; ಅವನಿ: ಭೂಮಿ; ದಿಕ್ಕು: ದಿಶೆ; ರವಿ: ಸೂರ್ಯ; ಕಾಣು: ತೋರು; ಭಾಪು: ಭಲೇ; ಕಲಶೋದ್ಭವ: ಕಲಶದಲ್ಲಿ ಹುಟ್ಟಿದ (ದ್ರೋಣ); ಕೈಮೆ: ಕೈಚಳಕ; ಬೆರಗು: ಆಶ್ಚರ್ಯ; ಅಮರಗಣ: ದೇವತೆಗಳ ಗುಂಪು;

ಪದವಿಂಗಡಣೆ:
ಕವಿವ +ಕಣೆಗಳ +ದಡ್ಡಿಗಳನ್+ಒಡೆ
ತಿವಿದು +ತುಳುಕಿದನ್+ಅಂಬಿನ್+ಅಬುಧಿಯನ್
ಅವಿರಳಾಸ್ತ್ರಾನೀಕ+ ಡಾವರಿಸಿದವು+ ದಿಗುತಟವ
ಅವನಿಯೋ +ದಿಕ್ಕುಗಳೊ +ಪಾರ್ಥನೊ
ರವಿಯ +ಕಾಣೆನು +ಭಾಪು +ಕಲಶೋ
ದ್ಭವ +ಕೈಮೆಯೆನುತ್ತ+ ಬೆರಗಿನೊಳ್+ಇರ್ದುದ್+ಅಮರಗಣ

ಅಚ್ಚರಿ:
(೧) ದ್ರೋಣರನ್ನು ಕಲಶೋದ್ಭವ ಎಂದು ಕರೆದಿರುವುದು
(೨) ಲೆಕ್ಕವಿಲ್ಲದಷ್ಟು ಬಾಣ ಎಂದು ಹೇಳುವ ಪರಿ – ತಿವಿದು ತುಳುಕಿದನಂಬಿನಬುಧಿಯನವಿರಳಾಸ್ತ್ರಾನ್
(೩) ಕವಿ, ತಿವಿ, ರವಿ – ಪ್ರಾಸ ಪದಗಳು

ಪದ್ಯ ೧೪: ಶಕುನಿ ನಕುಲನನ್ನು ಗೆದ್ದನೆ?

ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮ ವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದವನಿಪಗೆ ನುಡಿದ (ಸಭಾ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರೆಸುತ್ತಾ, ಹಠದಿಂದ ತಮ್ಮನನ್ನು ಒಡ್ಡಿದರೆ ನಮಗೇನು ಭಯವಿಲ್ಲ, ಒಂದು ಕೈಯಿ ನೋಡೋಣ, ದಾಳವನ್ನು ಹಾಕು ಎಂದನು. ಪೂರ್ವಜನ್ಮದಲ್ಲಿ ಗಳಿಸಿದ ಮೋಸದಿಂದ ಧರ್ಮವಿನಾಶಮಾಡುವ ರಭಸದಿಂದ ನಕುಲನನ್ನು ಗೆದ್ದು ಆರ್ಭಟಿಸುತ್ತಾ ಹೀಗೆ ಹೇಳಿದನು.

ಅರ್ಥ:
ವಾಸಿ: ಪ್ರತಿಜ್ಞೆ, ಶಪಥ; ಅನುಜ: ತಮ್ಮ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಸರ: ರೀತಿ; ಭಯ: ಅಂಜಿಕೆ; ಐಸಲೇ: ಅಲ್ಲವೇ; ನೃಪ: ರಾಜ; ಹಾಯ್ಕು: ಇಡು, ಇರಿಸು, ಧರಿಸು; ಹಾಸಂಗಿ: ಜೂಜಿನ ದಾಳ; ಪೂರ್ವಾರ್ಜಿತ: ಹಿಂದೆಯೇ ಗಳಿಸಿದ; ಡೊಳ್ಳಾಸ: ಮೋಸ, ಕಪಟ; ಡಾವರಿಸು: ಸುತ್ತು, ತಿರುಗಾಡು; ಧರ್ಮ: ಧಾರಣ ಮಾಡಿದುದು, ನಿಯಮ; ವಿನಾಶ: ಹಾಳು, ಸರ್ವನಾಶ; ಗೆಲಿ: ಗೆಲ್ಲು, ಜಯ; ಬೊಬ್ಬಿರಿ: ಗರ್ಜಿಸು, ಆರ್ಭಟ; ನುಡಿ: ಮಾತಾಡು; ಅವನಿಪ: ರಾಜ;

ಪದವಿಂಗಡಣೆ:
ವಾಸಿಗ್+ಅನುಜನನ್+ಒಡ್ಡಿದರೆ+ ನಮಗ್
ಈಸರಲಿ +ಭಯವೇನು +ನೋಡುವೆವ್
ಐಸಲೇ +ನೃಪ +ಹಾಯ್ಕು +ಹಾಸಂಗಿಗಳ +ಹಾಯ್ಕೆನುತ
ಆ +ಶಕುನಿ +ಪೂರ್ವಾರ್ಜಿತದ +ಡೊ
ಳ್ಳಾಸದಲಿ +ಡಾವರಿಸಿ+ ಧರ್ಮ +ವಿ
ನಾಶಿ +ನಕುಲನ +ಗೆಲಿದು +ಬೊಬ್ಬಿರಿದ್+ಅವನಿಪಗೆ+ ನುಡಿದ

ಅಚ್ಚರಿ:
(೧) ಶಕುನಿಯ ವರ್ಣನೆ – ಪೂರ್ವಾರ್ಜಿತದ ಡೊಳ್ಳಾಸದಲಿ ಡಾವರಿಸಿ ಧರ್ಮ ವಿನಾಶಿ
(೨) ಹ ಕಾರದ ತ್ರಿವಳಿ ಪದ – ಹಾಯ್ಕು ಹಾಸಂಗಿಗಳ ಹಾಯ್ಕೆನುತ

ಪದ್ಯ ೫೮: ಶಿಶುಪಾಲನು ಯುದ್ಧಕ್ಕೆ ಯಾರನ್ನು ಕರೆದನು?

ಡಾವರಿಸಿದುರು ವಿವಿಧವಾದ್ಯ ವಿ
ರಾವವಬುಜೋದ್ಭವನ ಭವನವ
ನಾವಿಗಡ ಭಟಕಟಕವಿದ್ದುದು ಬಲಿದ ಬೊಬ್ಬೆಯಲಿ
ಗೋವಳನ ಬರಹೇಳು ಧರೆಯಲಿ
ದೇವಗಡ ಬರಹೇಳು ತೋರಾ
ಕಾವವರ ತಾ ಕೊಲುವೆನೆಂದೊದರಿದನು ಕಲಿ ಚೈದ್ಯ (ಸಭಾ ಪರ್ವ, ೧೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ರಾಜರ ಸೈನ್ಯದವರು ವಿವಿಧ ರಣ ವಾದ್ಯಗಳನ್ನು ಸದ್ದು ಮಾಡಲು ಶುರುಮಾಡಿದರು. ಈ ಶಬ್ದವು ಬ್ರಹ್ಮನ ಮನೆಯನ್ನು ಆವರಿಸಿತು. ವೀರರ ಸಮೂಹವು ಗರ್ಜಿಸುತ್ತಿತ್ತು. ಶಿಶುಪಾಲನು ಆ ಗೊಲ್ಲನನ್ನು ಬರಹೇಳು. ಅವನು ಭೂಮಿಯಲ್ಲಿರುವ ದೇವರಂತೆ, ಕರೆಯಿರಿ. ಅವನನ್ನು ನಾನು ಕೊಲ್ಲುತ್ತೇನೆ, ಕಾಯುವವರನ್ನು ತೋರಿಸಿ ಎಂದು ಶಿಶುಪಾಲನು ಅಬ್ಬರಿಸಿದನು.

ಅರ್ಥ:
ಡಾವರಿಸು: ತಿವಿ, ನೋಯಿಸು; ವಿವಿಧ: ಹಲವಾರು; ವಾದ್ಯ: ಸಂಗೀತದ ಸಾಧನ; ವಿರಾವ: ಧ್ವನಿ, ಕೂಗು; ಅಬುಜ: ತಾವರೆ; ಕಟಕ: ಗುಂಪು; ಉದ್ಭವ: ತಲೆದೋರುವುದು; ಭವನ: ಆಲಯ; ಭಟ: ಶೂರ; ಬಲಿ: ಗಟ್ಟಿ, ದೃಢ; ಬೊಬ್ಬೆ: ಗರ್ಜಿಸು; ಗೋವಳ: ಗೋಪಾಲ; ಬರಹೇಳು: ಆಗಮಿಸು; ಧರೆ: ಭೂಮಿ; ದೇವ: ಭಗವಂತ; ಗಡ: ಅಲ್ಲವೆ; ತೋರು: ಗೋಚರಿಸು; ಕಾವ: ರಕ್ಷಿಸು; ಕೊಲುವೆ: ಸಾಯಿಸು; ಒದರು: ಹೇಳು; ಕಲಿ: ಶೂರ; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಡಾವರಿಸಿದುರು+ ವಿವಿಧ+ವಾದ್ಯ +ವಿ
ರಾವವ್+ಅಬುಜೋದ್ಭವನ+ ಭವನವನ್
ಆವಿಗಡ+ ಭಟಕಟಕವ್+ಇದ್ದುದು +ಬಲಿದ +ಬೊಬ್ಬೆಯಲಿ
ಗೋವಳನ+ ಬರಹೇಳು +ಧರೆಯಲಿ
ದೇವಗಡ+ ಬರಹೇಳು +ತೋರಾ
ಕಾವ್+ಅವರ+ ತಾ +ಕೊಲುವೆನೆಂದ್+ಒದರಿದನು +ಕಲಿ +ಚೈದ್ಯ

ಅಚ್ಚರಿ:
(೧) ವ ಕಾರದ ಜೋಡಿ ಪದ – ವಿವಿಧವಾದ್ಯ ವಿರಾವವ
(೨) ಬ್ರಹ್ಮನನ್ನು ಅಬುಜೋದ್ಭವ ಎಂದು ಕರೆದಿರುವುದು
(೩) ಬರಹೇಳು – ೪, ೫ ಸಾಲಿನ ೨ನೇ ಪದ

ಪದ್ಯ ೧೦೩: ಭೀಮ ಜರಾಸಂಧರ ಮಲ್ಲಯುದ್ಧ ಚಿತ್ರಣ – ೬

ಅಲಸಿದರು ಬಿನ್ನಣಕೆ ಬಿಗುಹಿನ
ಕಳಿವುಗಳ ಬೇಸರಿಕೆಯಲಿ ಕಡು
ಲುಳಿಮಸಗಿ ಡಾವರಿಸಿ ಮನವನುಪಾಯ ಡಾವರಕೆ
ತೊಲಗಿ ನಿಂದರು ಕರ್ಪುರದ ತನಿ
ಹಳುಕನಣಲೊಳಗಡಸಿ ದಂಡೆಯ
ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ (ಸಭಾ ಪರ್ವ, ೨ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ವಿವಿಧ ಪಟ್ಟುಗಳನ್ನು ಹಾಕಿ ಮಲ್ಲಯುದ್ಧ ಮಾಡುತ್ತಾ ಇಬ್ಬರಿಗೂ ಬೇಸರವಾಯಿತು. ತಮ್ಮ ಯತ್ನಗಳು ವಿಫಲವಾಗಲು ಅಬ್ಬರಿಸಿದರು. ಹಿಂದಕ್ಕೆ ಸರಿದು ನಿಂತು, ಕರ್ಪೂರ ವೀಳೆಯವನ್ನು ಹಾಕಿಕೊಂಡು ಮುಷ್ಟಿಕಟ್ಟಿ ಸಿಡಿಲು ಬಡಿಯಿತೋ ಎಂಬ ಸದ್ದುಂಟಾಗಲು ಒಬ್ಬರನ್ನೊಬ್ಬರು ಹೊಡೆಯಲಾರಂಭಿಸಿದರು.

ಅರ್ಥ:
ಅಲಸು: ಬೇಸರಗೊಳ್ಳು, ದಣಿ; ಬಿನ್ನಣ: ಪಾಂಡಿತ್ಯ; ಬಿಗುಹು: ಬಿಗಿ; ಕಳಿವು: ನಾಶ; ಬೇಸರ: ದುಃಖ, ಅಸಂತೋಷ; ಮಸಗು: ಸಿಟ್ಟುಗೊಳ್ಳು, ಮೋಸಗೊಳ್ಳು; ಉಳಿ: ಬಿಡು; ಡಾವರಿಸು: ತಿವಿ, ನೋಯಿಸು; ಮನ: ಮನಸ್ಸು; ಉಪಾಯ: ಯುಕ್ತಿ; ತೊಲಗು: ದೂರ ಹೋಗು; ನಿಂದರು: ನಿಲ್ಲು; ಕರ್ಪುರ: ಸುಗಂಧ ದ್ರವ್ಯ; ತನಿ: ಹೆಚ್ಚಾಗು; ಅಗಡ: ಹಿಡಿತಕ್ಕೆ ಸಿಕ್ಕದ; ಅಣಲು: ಅಂಗುಳು; ದಂಡೆ: ಮಲ್ಲಯುದ್ಧದ ಒಂದು ವರಸೆ; ಹಳುಗು: ಕುಗ್ಗಿಉದು; ಬಲಿ:ಹೆಚ್ಚಾಗಿ; ಬರಸಿಡಿಲು: ಅನಿರೀಕ್ಷಿತವಾದ ಹೊಡೆತ, ಆಘಾತ; ಎರಕ: ಪ್ರೀತಿ, ಅನುರಾಗ; ತಾಗು: ಮುಟ್ಟಿಸು; ಬಳಸು: ತಿರುಗು;

ಪದವಿಂಗಡಣೆ:
ಅಲಸಿದರು +ಬಿನ್ನಣಕೆ+ ಬಿಗುಹಿನ
ಕಳಿವುಗಳ+ ಬೇಸರಿಕೆಯಲಿ+ ಕಡುಲ್
ಉಳಿಮಸಗಿ +ಡಾವರಿಸಿ +ಮನವನ್+ಉಪಾಯ +ಡಾವರಕೆ
ತೊಲಗಿ +ನಿಂದರು +ಕರ್ಪುರದ +ತನಿ
ಹಳುಕನಣಲೊಳ್+ಅಗಡಸಿ +ದಂಡೆಯ
ಬಲಿದು +ಬರಸಿಡಿಲ್+ಎರಕವೆನೆ +ತಾಗಿದರು +ಬಳಸಿನಲಿ

ಅಚ್ಚರಿ:
(೧) ಡಾವರಿಸಿ ಡಾವರಕೆ – ಪದಗಳ ಬಳಕೆ, ೩ ಸಾಲು