ಪದ್ಯ ೩೫: ಭೀಮನ ರೌದ್ರದ ಮಾತಿನ ವರಸೆ ಹೇಗಿತ್ತು?

ಕೊಂಬೆನೇ ಧರ್ಮಜನ ಧರ್ಮದ
ಡೊಂಬನೀ ಮುದುಗರುಡನಿಕ್ಕಿದ
ನಂಬುಗೆಯ ವಿಷವೈಸಲೇ ತಲೆಗೇರಿತಗ್ರಜನ
ಡೊಂಬಿಗರ ಡಾವರಿಗರಿವದಿರ
ತಿಂಬೆನೀಗಳೆ ತರುಣಿ ಕೇಳೆನು
ತಂಬುಜಾಕ್ಷಿಯ ಸಂತವಿಟ್ಟನು ಕುರುಳನೇರಿಸುತ (ಸಭಾ ಪರ್ವ, ೧೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭೀಮನು ತನ್ನ ರೋಷದ ಮಾತುಗಳನ್ನು ಮುಂದುವರಿಸುತ್ತಾ, ಧರ್ಮಜನ ಧರ್ಮದ ವಂಚನೆಯನ್ನು ನಾನು ಒಪ್ಪುವುದಿಲ್ಲ. ಈ ಮುದಿಗರುಡ ಧೃತರಾಷ್ಟ್ರನು ಇಟ್ಟ ಮೆಚ್ಚುಮದ್ದಿನ ವಿಷವು ಅಣ್ಣನ ತಲೆಗೇರಿದೆ. ಈ ಮೋಸಗಾರರ, ವಂಚಕರ, ದುರುದುಂಬಿಗಳನ್ನೆಲ್ಲರನ್ನೂ ಈಗಲೇ ತಿಂದು ಬಿಡುತ್ತೇನೆ, ದ್ರೌಪದಿ ನೋಡುತ್ತಿರು ಎಂದು ಅವಳ ಮುಂಗುರುಳುಗಳನ್ನು ಮೇಲಕ್ಕೆ ಎತ್ತಿ ನೇವರಿಸಿದನು.

ಅರ್ಥ:
ಕೊಂಬು: ಗರ್ವ, ಕಹಳೆ; ಧರ್ಮ: ಧಾರಣೆ ಮಾಡಿದುದು; ಡೊಂಬ: ಮೋಸಗಾರ; ಮುದು: ವಯಸ್ಸಾದ; ಇಕ್ಕು: ನೀಡು; ನಂಬು: ವಿಶ್ವಾಸವಿಡು; ವಿಷ: ನಂಜು; ಐಸಲೇ: ಅಲ್ಲವೇ; ತಲೆ: ಶಿರ; ಏರು: ಹತ್ತು, ಆರೋಹಿಸು; ಅಗ್ರಜ: ಹಿರಿಯ; ಡಾವರ: ಭೀಷಣತೆ, ಆವರಿಸುವಿಕೆ; ಅರಿ: ತಿಳಿ; ತಿಂಬೆ: ತಿನ್ನುವೆ; ತರುಣಿ: ಹೆಣ್ಣು, ಯುವತಿ; ಕೇಳು: ಆಲಿಸು; ಅಂಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಸಂತವಿಡು: ಸಂತೈಸು; ಕುರುಳ: ಮುಂಗುರುಳು; ಏರಿಸು: ಮೇಲಕ್ಕೆತ್ತು;

ಪದವಿಂಗಡಣೆ:
ಕೊಂಬೆನೇ +ಧರ್ಮಜನ +ಧರ್ಮದ
ಡೊಂಬನ್+ಈ+ ಮುದುಗರುಡನ್+ಇಕ್ಕಿದನ್
ಅಂಬುಗೆಯ +ವಿಷವ್+ಐಸಲೇ +ತಲೆಗೇರಿತ್+ಅಗ್ರಜನ
ಡೊಂಬಿಗರ+ ಡಾವರಿಗರ್+ಇವದಿರ
ತಿಂಬೆನ್+ಈಗಳೆ +ತರುಣಿ +ಕೇಳ್+ಎನುತ್
ಅಂಬುಜಾಕ್ಷಿಯ +ಸಂತವಿಟ್ಟನು+ ಕುರುಳನ್+ಏರಿಸುತ

ಅಚ್ಚರಿ:
(೧) ಡ ಕಾರದ ಜೋಡಿ ಪದ – ಡೊಂಬಿಗರ ಡಾವರಿಗರಿವದಿರ
(೨) ಧೃತರಾಷ್ಟ್ರನನ್ನು ಬಯ್ಯುವ ಪರಿ – ಮುದುಗರುಡ

ಪದ್ಯ ೧೭: ಕೃಷ್ಣನು ಹೇಗೆ ಕೊಲ್ಲುವವನೆಂದು ಶಿಶುಪಾಲನು ಹಂಗಿಸಿದನು?

ಅಸಗನನು ಕೆಡೆತಿವಿದು ಕಂಸನ
ವಸನವೆಲ್ಲವ ಸೆಳೆದಗಡ ಮಾ
ಣಿಸಿದನೈ ದಿಟಘಟ್ಟಿವಾಳ್ತಿಯ ಮೈಯಮೂಹೊರಡ
ಮಸಗಿ ಬೀಸುವ ಕಂಸನಾನೆಯ
ನಸುಬಡಿದ ಗಡ ಮಲ್ಲರನು ಮ
ರ್ದಿಸಿದನೇ ಡೊಳ್ಳಾಸದಲಿ ಡಾವರಿಗನಹನೆಂದ (ಸಭಾ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅಗಸನು ಬಟ್ಟೆಗಳನ್ನು ಒಗೆಯುವ ರೀತಿ, ಈತನು ಕಂಸನ ಬಟ್ಟೆಗಳನ್ನೆಲ್ಲಾ ಸೆಳೆದುಕೊಂಡನೋ? ಮೂರುಡೊಂಕಿದ್ದ ತ್ರಿಕುಬ್ಜೆಯ ಗೂನನ್ನು ಸರಿಪಡಿಸಿದನೋ? ಕಂಸನ ಆನೆಯನ್ನು ಕೊಂದನೇ? ಮೋಸದಿಂದ ತಿವಿದು ಕೊಲ್ಲುವವನಲ್ಲವೇ ಈತ ಎಂದು ಕೃಷ್ಣನನ್ನು ಹಂಗಿಸಿದನು.

ಅರ್ಥ:
ಅಸಗ: ಅಗಸ, ರಜಕ; ಕೆಡೆ: ಬೀಳು; ತಿವಿ: ಚುಚ್ಚು; ವಸನ: ಬಟ್ಟೆ; ಸೆಳೆ: ಜಗ್ಗು, ಎಳೆ; ಗಡ: ಅಲ್ಲವೇ; ಮಾಣಿಸು: ನಿಲ್ಲುವಂತೆ ಮಾಡು; ದಿಟ: ಸತ್ಯ, ನೈಜ; ಘಟ್ಟಿ: ಹೆಪ್ಪುಗಟ್ಟಿದುದು, ಘನರೂಪವಾದುದು; ಮೈಯ: ತನು, ದೇಹ; ಮೂಹೊರಡು: ಮೂರುಡೊಂಕು; ಮಸಗು: ಹರಡು, ಕೆರಳು; ಬೀಸು: ಹೊಡೆ; ಆನೆ: ಕರಿ; ಅಸು: ಪ್ರಾಣ: ಬಡಿ: ಹೊಡೆ; ಮಲ್ಲ: ಕುಸ್ತಿಪಟು, ಜಟ್ಟಿ; ಮರ್ದಿಸು: ಕೊಲ್ಲು; ಡೊಳ್ಳಾಸ: ಮೋಸ, ಕಪಟ; ಡಾವರಿಗ: ಶೌರ್ಯ, ಶೂರ;

ಪದವಿಂಗಡಣೆ:
ಅಸಗನನು +ಕೆಡೆತಿವಿದು+ ಕಂಸನ
ವಸನವೆಲ್ಲವ +ಸೆಳೆದ+ಗಡ+ ಮಾ
ಣಿಸಿದನೈ +ದಿಟಘಟ್ಟಿವಾಳ್ತಿಯ +ಮೈಯ+ಮೂಹೊರಡ
ಮಸಗಿ+ ಬೀಸುವ +ಕಂಸನ+ಆನೆಯನ್
ಅಸುಬಡಿದ +ಗಡ +ಮಲ್ಲರನು +ಮ
ರ್ದಿಸಿದನೇ +ಡೊಳ್ಳಾಸದಲಿ +ಡಾವರಿಗನಹನೆಂದ

ಅಚ್ಚರಿ:
(೧) ಸಾಯಿಸು ಎಂದು ಹೇಳಲು – ಅಸುಬಡಿದ ಪದದ ಬಳಕೆ
(೨) ಜೋಡಿ ಪದಗಳು – ಮಲ್ಲರನು ಮರ್ದಿಸಿದನೇ; ಡೊಳ್ಳಾಸದಲಿ ಡಾವರಿಗನಹನೆಂದ