ಪದ್ಯ ೨೨: ರಣವಾದ್ಯಗಳ ಶಬ್ದವು ಹೇಗಿತ್ತು?

ಲಟಕಟಿಸಿತಾಹವಕೆ ರಾಯನ
ಕಟಕ ಸುಮ್ಮಾನದಲಿ ಪೊಳಗುವ
ಪಟಹ ಡಮರು ಮೃದಂಗ ಘನಗಂಭೀರ ಭೇರಿಗಳ
ಚಟುಳ ಕಹಳೆಯ ಗಜರು ಮಿಗಲು
ತ್ಕಟಿಸಿತಂಬುಜ ಭವನ ನಿರ್ಮಿತ
ಘಟ ಬಿರಿಯೆ ಬಿಗುಹಾಯ್ತು ದ್ರೋಣನ ಸಮರಸನ್ನಾಹ (ದ್ರೋಣ ಪರ್ವ, ೧೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕೌರವನ ಸೈನ್ಯವು ಯುದ್ಧಕ್ಕೆ ಅತಿ ಉತ್ಸಾಹದಿಂದ ಹೊರಟಿತು. ತಮ್ಮಟೆ, ಡಮರುಗ, ಮೃದಮ್ಗ, ಭೇರಿ, ಕಹಳೆಗಳು ಮೊಳಗುತ್ತಿದ್ದವು. ರಣವಾದ್ಯಗಳ ಶಬ್ದವು ಎಲ್ಲೆಡೆ ವ್ಯಾಪಿಸಲು, ಬ್ರಹ್ಮಾಂಡವು ಬಿರಿಯಿತು. ದ್ರೋಣನ ಸಮರಸನ್ನಾಹ ಪ್ರಬಲವಾಗಿತ್ತು.

ಅರ್ಥ:
ಲಟಕಟ: ಉದ್ರೇಕಗೊಳ್ಳು; ಆಹವ: ಯುದ್ಧ; ರಾಯ: ರಾಜ; ಕಟಕ: ಸೈನ್ಯ; ಸುಮ್ಮಾನ: ಸಂತೋಷ, ಹಿಗ್ಗು; ಪಟಹ: ನಗಾರಿ; ಡಮರು: ಒಂದು ಬಗೆಯ ಚರ್ಮವಾದ್ಯ; ಮೃದಂಗ: ಒಂದು ಬಗೆಯ ಚರ್ಮವಾದ್ಯ/ತಾಳವಾದ್ಯ; ಘನ: ಶ್ರೇಷ್ಠ; ಗಂಭೀರ: ಆಳವಾದುದು, ಗಾಂಭೀರ್ಯ; ಭೇರಿ: ಚರ್ಮವಾದ್ಯ; ಚಟುಳ: ಲವಲವಿಕೆ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಗಜರು: ಆರ್ಭಟಿಸು; ಮಿಗಲು: ಹೆಚ್ಚು; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಅಂಬುಜ: ತಾವರೆ; ಭವನ: ಮನೆ; ನಿರ್ಮಿತ: ಕಟ್ಟಿದ; ಘಟ: ಕೊಡ, ಗಡಿಗೆ; ಬಿರಿ: ತುಂಬು; ಬಿಗುಹು: ಗಟ್ಟಿ; ಸಮರ: ಯುದ್ಧ; ಸನ್ನಾಹ: ಗುಂಪು;

ಪದವಿಂಗಡಣೆ:
ಲಟಕಟಿಸಿತ್+ಆಹವಕೆ +ರಾಯನ
ಕಟಕ +ಸುಮ್ಮಾನದಲಿ +ಪೊಳಗುವ
ಪಟಹ +ಡಮರು +ಮೃದಂಗ +ಘನಗಂಭೀರ +ಭೇರಿಗಳ
ಚಟುಳ +ಕಹಳೆಯ +ಗಜರು +ಮಿಗಲ್
ಉತ್ಕಟಿಸಿತ್+ಅಂಬುಜ +ಭವನ +ನಿರ್ಮಿತ
ಘಟ +ಬಿರಿಯೆ +ಬಿಗುಹಾಯ್ತು +ದ್ರೋಣನ +ಸಮರ+ಸನ್ನಾಹ

ಅಚ್ಚರಿ:
(೧) ರಣವಾದ್ಯಗಳ ಪರಿಚಯ – ಪಟಹ, ಡಮರು, ಮೃದಂಗ, ಭೇರಿ, ಕಹಳೆ
(೨) ಬ್ರಹ್ಮಾಂಡ ಎಂದು ಹೇಳುವ ಪರಿ – ಮಿಗಲುತ್ಕಟಿಸಿತಂಬುಜ ಭವನ ನಿರ್ಮಿತ ಘಟ ಬಿರಿಯೆ ಬಿಗುಹಾಯ್ತು

ಪದ್ಯ ೭೧: ಶಿವನು ಅಘೋರ ರೂಪದಲ್ಲಿ ಹೇಗೆ ತೋರಿದನು?

ಕಾಳಮೇಘ ಸುವರ್ಣದುರುದಂ
ಷ್ಟ್ರಾಳಿ ಭೀಷಣದಮಳ ಜಪಮಣಿ
ಮಾಲಿಕೆಯ ಶ್ರುತಿ ಮುಖದ ಪಾಶಾಂಕುಶದ ಡಮರುಗದ
ಶೂಲ ಘನ ಖಟ್ವಾಂಗ ದ್ರುಹಿಣಕ
ಪಾಲ ಫಣಿವಲಯದ ಕರೋಟೀ
ಮಾಲೆಯಿಂದ ಮಹೋಗ್ರನೆಸೆದನಘೋರ ರೂಪದಲಿ (ಅರಣ್ಯ ಪರ್ವ, ೭ ಸಂಧಿ, ೭೧ ಪದ್ಯ)

ತಾತ್ಪರ್ಯ:
ಕರಿಮೋಡದ ಬಣ್ಣ, ಭಯಂಕರವಾದ ದಾಡೆಗಳು, ಶುಭ್ರವಾದ ಜಪಮಣಿಮಾಲೆ, ಶ್ರುತಿಯೇ ಮುಖ, ಪಾಶ, ಅಂಕುಶ ಡಮರುಗ, ಶೂಲ, ಖಟ್ವಾಂಗ, ಬ್ರಹ್ಮ, ಕಪಾಲ ಸರ್ಪಭೂಷಣ, ರುಂಡಮಾಲೆಗಳನ್ನು ಧರಿಸಿದ ಮಹೋಗ್ರವಾದ ಅಘೋರ ರೂಪದಿಂದ ಶಿವನು ಕಾಣಿಸಿಕೊಂಡನು.

ಅರ್ಥ:
ಕಾಳಮೇಘ: ಕರಿಮೋಡ; ಸುವರ್ಣ: ಚಿನ್ನ, ಹೇಮ; ದಂಷ್ಟ್ರ: ಕೋರೆಹಲ್ಲು, ದಾಡೆ; ಆಳಿ: ಸಾಲು; ಭೀಷಣ: ಭಯಂಕರವಾದ, ಭೀಕರ; ಅಮಳ: ನಿರ್ಮಲ; ಜಪಮಣಿ: ಅಕ್ಷಮಾಲಾ; ಶ್ರುತಿ: ವೇದ; ಮುಖ: ಆನನ; ಪಾಶ: ಹಗ್ಗ; ಅಂಕುಶ: ಹಿಡಿತ, ಹತೋಟಿ, ಆಯುಧ; ಡಮರು: ಒಂದು ಬಗೆಯ ಚರ್ಮವಾದ್ಯ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ತ್ರಿಶೂಲ; ಘನ: ಗಟ್ಟಿ; ಖಟ್ವಾಂಗ: ತಲೆಬುರುಡೆಯ ತುದಿಯನ್ನುಳ್ಳ ಶಿವನ ಗದೆ; ದ್ರುಹಿಣ: ಶಿವ; ಕಪಾಲ: ಕೆನ್ನೆ; ಫಣಿ: ಹಾವು; ಕರೋಟಿ: ತಲೆಬುರುಡೆ; ಮಾಲೆ: ಹಾರ; ಮಹ: ಶ್ರೇಷ್ಠ, ದೊಡ್ಡ; ಉಗ್ರ: ತೀಕ್ಷ್ಣ, ಭಯಂಕರ; ರೂಪ: ಆಕಾರ;

ಪದವಿಂಗಡಣೆ:
ಕಾಳಮೇಘ +ಸುವರ್ಣದ್+ಉರು+ದಂ
ಷ್ಟ್ರಾಳಿ +ಭೀಷಣದ್+ಅಮಳ +ಜಪಮಣಿ
ಮಾಲಿಕೆಯ+ ಶ್ರುತಿ +ಮುಖದ+ ಪಾಶಾಂಕುಶದ+ ಡಮರುಗದ
ಶೂಲ +ಘನ +ಖಟ್ವಾಂಗ +ದ್ರುಹಿಣ+ಕ
ಪಾಲ +ಫಣಿವಲಯದ +ಕರೋಟೀ
ಮಾಲೆಯಿಂದ +ಮಹೋಗ್ರನ್+ಎಸೆದನ್+ಅಘೋರ+ ರೂಪದಲಿ

ಅಚ್ಚರಿ:
(೧) ಶಿವನ ಅಘೋರ ರೂಪ – ಶೂಲ ಘನ ಖಟ್ವಾಂಗ ದ್ರುಹಿಣಕಪಾಲ ಫಣಿವಲಯದ ಕರೋಟೀ
ಮಾಲೆಯಿಂದ ಮಹೋಗ್ರನೆಸೆದನಘೋರ ರೂಪದಲಿ

ಪದ್ಯ ೮: ಯುದ್ಧದಲ್ಲಿ ಮೊಳಗಿದ ಶಬ್ದಗಳಾವುವು?

ಎರಡು ಬಲವುಬ್ಬೆದ್ದುದಿದರೊಳು
ಮೊರೆವ ಭೇರಿಯ ಭಟರ ಬೊಬ್ಬೆಯ
ಕರಿಯ ಗಜರಿನ ಹಯದ ಹೇಷಾರವದ ಹಲ್ಲಣೆಯ
ಜರಿವ ಕಹಳೆಯ ಝಾಡಿಸುವ ಜ
ಝ್ಝರದ ಡಿಂಡಿಮ ಡಮರು ಪಟಹದ
ಧರಧುರದ ದನಿ ಧೈರ್ಯಗೆಡಿಸಿತು ಸಕಲ ಸಾಗರವ (ಕರ್ಣ ಪರ್ವ, ೧೦ ಸಂಧಿ, ೮ ಪದ್ಯ)

ತಾತ್ಪರ್ಯ:
ಎರಡು ಸೈನ್ಯದ ಸೈನಿಕರು ಹಿಗ್ಗುತ್ತಾ ಉತ್ಸಾಹದಿಂದ ಮುನ್ನಡೆದರು. ಭೇರಿಯ ಶಬ್ದ, ಭಟರ ಉತ್ತೇಜನದ ಕೂಗುಗಳು, ಆನೆಯ ಕೂಗು, ಕುದುರೆಯ ಸದ್ದು, ಯುದ್ಧರಂಗದಲ್ಲಿ ನಿಲ್ಲದೆ ಮುನ್ನುಗ್ಗುತ್ತಿದ್ದವು. ಕಹಳೆಯ ಶಬ್ದದ ಹರಿವು, ತಮ್ಮಟೆ, ಡಮರುಗಳ ಡಿಂಡಿಮ ಶಬ್ದ, ನಗಾರಿಯ ಎತ್ತರದ ಧ್ವನಿ ಈ ಎಲ್ಲಾ ಶಬ್ದಗಳು ಎಲ್ಲಾ ಸೈನಿಕರ ಧೈರ್ಯವನ್ನು ಕೆಡಿಸಿತು.

ಅರ್ಥ:
ಎರಡು: ಯುಗಳ, ದ್ವಿ; ಬಲ: ಸೈನ್ಯ; ಉಬ್ಬು: ಹಿಗ್ಗು, ಗರ್ವಿಸು; ಇದಿರ: ಎದುರು; ಮೊರೆ: ಧ್ವನಿ ಮಾಡು, ಝೇಂಕರಿಸು; ಭೇರಿ: ನಗಾರಿ, ದುಂದುಭಿ; ಭಟ: ಸೈನಿಕ; ಬೊಬ್ಬೆ: ಎತ್ತರದ ಕೂಗು, ಅರಚು; ಕರಿ: ಆನೆ; ಗಜರು: ಆನೆಯ ಕೂಗು; ಹಯ: ಕುದುರೆ; ಹೇಷಾರ: ಕುದುರೆಯ ಕೂಗು; ಹಲ್ಲಣೆ: ನಿಲ್ಲದೆ ಪ್ರಯಾಣ ಮಾಡು; ಜರಿ: ಬೀಳು, ಹರಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಝಾಡಿ: ರಾಶಿ; ಝಾಡಿಸು: ಜೋರಾದ ಶಬ್ದ; ಜಝ್ಝರ: ರಣವಾದ್ಯ; ಡಿಂಡಿಮ: ಶಬ್ದವನ್ನು ವಿವರಿಸುವ ಪದ; ಡಮರು: ಒಂದು ಬಗೆಯ ವಾದ್ಯ; ಪಟಹ: ನಗಾರಿ; ಧರಧುರ:ಆಧಿಕ್ಯ, ಹೆಚ್ಚಳ, ಆರ್ಭಟ; ದನಿ: ಧ್ವನಿ; ಧೈರ್ಯ: ಎದೆಗಾರಿಕೆ; ಕೆಡಿಸು: ಹಾಳುಮಾಡು; ಸಕಲ: ಎಲ್ಲಾ; ಸಾಗರ:ಒಂದು ದೊಡ್ಡ ಸಂಖ್ಯೆ, ಸೈನ್ಯ; ರವ: ಶಬ್ದ;

ಪದವಿಂಗಡಣೆ:
ಎರಡು +ಬಲವ್+ಉಬ್ಬೆದ್ದುದ್+ಇದರೊಳು
ಮೊರೆವ+ ಭೇರಿಯ +ಭಟರ +ಬೊಬ್ಬೆಯ
ಕರಿಯ +ಗಜರಿನ +ಹಯದ +ಹೇಷಾರವದ +ಹಲ್ಲಣೆಯ
ಜರಿವ +ಕಹಳೆಯ+ ಝಾಡಿಸುವ +ಜ
ಝ್ಝರದ +ಡಿಂಡಿಮ +ಡಮರು +ಪಟಹದ
ಧರಧುರದ +ದನಿ +ಧೈರ್ಯಗೆಡಿಸಿತು +ಸಕಲ +ಸಾಗರವ

ಅಚ್ಚರಿ:
(೧) ವಾದ್ಯಗಳ ಹೆಸರು – ಕಹಳೆ, ಡಮರು, ಜಝ್ಝರ
(೨) ಜೋಡಿ ಪದಗಳ ಬಳಕೆ – ಭೇರಿಯ ಭಟರ ಬೊಬ್ಬೆಯ; ಹಯದ ಹೇಷಾರವದ ಹಲ್ಲಣೆಯ; ಡಿಂಡಿಮ ಡಮರು;ಸಕಲ ಸಾಗರವ