ಪದ್ಯ ೭: ದುರ್ಯೋಧನನು ಯಾವ ವರವನ್ನು ಬೇಡಿದನು?

ಅರಸ ಕೇಳೈ ಹಸ್ತದಲ್ಲಿಹ
ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ
ಕುರುಕುಲಾಗ್ರಣಿ ನುಡಿದನಿನಿಬರು
ವೆರಸಿ ಪಾಂಡವರರಸಿಯುಣಲೊಡ
ನಿರದೆ ಗ್ರಾಸವ ಬೇಡಿ ನೀವ್ ನಮಗಿತ್ತ ವರವೆಂದ (ಅರಣ್ಯ ಪರ್ವ, ೧೭ ಸಂಧಿ, ೭ ಪದ್ಯ)

ತಾತ್ಪರ್ಯ:
ಕೈಯಲ್ಲಿರುವ ಸ್ಪರ್ಶಮಣಿಯನ್ನು ಕಲ್ಲೆಂದು ತಿರಸ್ಕರಿಸಿ, ಗಾಜಿನ ಹರಳನ್ನು ಕಂಡು ಸಂತೋಷಪಡುವ ಮೂಢರಂತೆ ಕೌರವನು, ನಿಮ್ಮ ಪರಿವಾರದಲ್ಲಿರುವ ಎಲ್ಲರೊಡನೆ ಹೋಗಿ ದ್ರೌಪದಿಯ ಊಟವಾದ ಮೇಲೆ ಭೋಜನವನ್ನು ಬೇಡಿರಿ ಎಂದು ಕೌರವನು ಬೇಡಿದನು.

ಅರ್ಥ:
ಅರಸ: ರಾಜ; ಕೇಳ್: ಆಲಿಸು; ಹಸ್ತ: ಕೈ; ಪರುಷ: ಸ್ಪರ್ಷಮಣಿ; ಕಲ್ಲು: ಶಿಲೆ; ಟೆಕ್ಕೆ: ಬಾವುಟ, ಧ್ವಜ; ಹರಳು: ಕಲ್ಲಿನ ಚೂರು, ನೊರಜು; ಟೆಕ್ಕೆಯಹರಳು: ಗಾಜಿನ ಮಣಿ; ಹರುಷ: ಸಂತಸ; ಮೂಢ: ತಿಳಿಗೇಡಿ, ಮೂರ್ಖ; ಮನುಷ್ಯ: ಮಾನವ; ಕುಲ: ವಂಶ; ಅಗ್ರಣಿ: ಶ್ರೇಷ್ಠ; ನುಡಿ: ಮಾತಾಡು; ಇನಿಬರು: ಇಷ್ಟುಜನ;
ಅರಸಿ: ರಾಣಿ; ಉಣು: ಊಟ; ಗ್ರಾಸ: ತುತ್ತು, ಕಬಳ; ಬೇಡಿ: ಕೇಳಿ; ವರ: ಆಶೀರ್ವಾದ;

ಪದವಿಂಗಡಣೆ:
ಅರಸ +ಕೇಳೈ +ಹಸ್ತದಲ್ಲಿಹ
ಪರುಷವನು +ಕಲ್ಲೆಂದು +ಟೆಕ್ಕೆಯ
ಹರಳಿನಲಿ +ಹರುಷಿಸುವ +ಮೂಢ +ಮನುಷ್ಯರಂದದಲಿ
ಕುರುಕುಲಾಗ್ರಣಿ+ ನುಡಿದನ್+ಇನಿಬರು
ವೆರಸಿ+ ಪಾಂಡವರ್+ಅರಸಿ+ಉಣಲೊಡ
ನಿರದೆ +ಗ್ರಾಸವ +ಬೇಡಿ +ನೀವ್ +ನಮಗಿತ್ತ +ವರವೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಸ್ತದಲ್ಲಿಹ ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ