ಪದ್ಯ ೧೫: ನಾರಾಯಣಾಸ್ತ್ರದ ಪ್ರಕಾಶವು ಹೇಗಿತ್ತು?

ಪ್ರಳಯ ಮೇಘವನೊಡೆವ ರವಿಮಂ
ಡಲ ಸಹಸ್ರದ ರಶ್ಮಿಯೋ ಜಗ
ದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ
ಮುಳಿದ ನರಕೇಸರಿಯ ದಾಡೆಯ
ಥಳಥಲತ್ಕಾರವೊ ಮಹಾಸ್ತ್ರದ
ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪ್ರಳಯ ಮೇಘವನ್ನು ಭೇದಿಸಬಲ್ಲ ಸಹಸ್ರ ಸೂರ್ಯರ ಕಿರಣಗಳೋ, ಪ್ರಳಯಕಾಲದಲ್ಲಿ ಶಿವನು ತೆಗೆಯುವ ಉರಿಗಣ್ಣಿನ ಪ್ರಕಾಶವೋ, ಕೋಪಗೊಂಡ ನರಸಿಂಹನ ಹಲ್ಲುಗಳ ಹೊಳಪೋ ಎಂಬಂತೆ ನಾರಾಯಣಾಸ್ತ್ರದ ಪ್ರಕಾಶ ಹಬ್ಬುತ್ತಿತ್ತು, ಅದನ್ನು ಹೇಗೆಂದು ಹೇಳೋಣ ಎಂದು ಸಂಜಯನು ವಿವರಿಸಿದನು.

ಅರ್ಥ:
ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಮೇಘ: ಮೋಡ; ಒಡೆವ: ಸೀಳು; ರವಿ: ಸೂರ್ಯ; ಮಂಡಲ: ನಾಡಿನ ಒಂದು ಭಾಗ, ವರ್ತುಲಾಕಾರ; ಸಹಸ್ರ: ಸಾವಿರ; ರಶ್ಮಿ: ಕಾಂತಿ, ಪ್ರಕಾಶ; ಜಗ: ಪ್ರಪಂಚ; ಅಳಿವು: ನಾಶ; ಝೊಂಪಿಸು: ಬೆಚ್ಚಿಬೀಳು; ಹರ: ಶಂಕರ; ಉರಿಗಣ್ಣು: ಬೆಂಕಿಯ ಕಣ್ಣು; ದೀಧಿತಿ: ಹೊಳಪು; ಮುಳಿ: ಸಿಟ್ಟು, ಕೋಪ; ನರಕೇಸರಿ: ನರಸಿಂಹ; ದಾಡೆ: ದವಡೆ, ಒಸಡು; ಥಳ: ಪ್ರಕಾಶ, ಹೊಳಪು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಬೆಳಗು: ಕಾಂತಿ, ಪ್ರಕಾಶ; ಹೆಸರು: ನಾಮ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪ್ರಳಯ +ಮೇಘವನ್+ಒಡೆವ +ರವಿ+ಮಂ
ಡಲ +ಸಹಸ್ರದ +ರಶ್ಮಿಯೋ +ಜಗದ್
ಅಳಿವಿನಲಿ +ಝೊಂಪಿಸುವ +ಹರನ್+ಉರಿಗಣ್ಣ+ ದೀಧಿತಿಯೊ
ಮುಳಿದ +ನರಕೇಸರಿಯ +ದಾಡೆಯ
ಥಳಥಳತ್ಕಾರವೊ+ ಮಹಾಸ್ತ್ರದ
ಬೆಳಗೊ +ಹೆಸರಿಡಲಾರು+ ಬಲ್ಲರು +ಭೂಪ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಪ್ರಳಯ ಮೇಘವನೊಡೆವ ರವಿಮಂಡಲ ಸಹಸ್ರದ ರಶ್ಮಿಯೋ ಜಗದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ

ಪದ್ಯ ೩೨: ಸಂತಸಗೊಂಡ ದೇವತೆಗಳು ಶಿವನಿಗೆ ಹೇಗೆ ಕೊಂಡಾಡಿದರು?

ಜಗವುಘೇ ಎಂದುದು ಜಯಧ್ವನಿ
ಜಗವ ಝೊಂಪಿಸಿತೊಗ್ಗಿ ನಂಜುಳಿ
ಗಗನದಗಲಕೆ ಕುಣಿವುತಿದ್ದುದು ಸುರರ ಭಾಳದಲಿ
ಬೆಗಡು ಬೀತುದು ಬೇಸರಿನ ಬಲು
ದಗಹು ಸೋತುದು ಶಿವಗೆ ದೈತ್ಯಾ
ರಿಗಳು ಮುದದಲಿ ಮಾಡಿದರು ಮೂರ್ಧಾಭಿಷೇಚನವ (ಕರ್ಣ ಪರ್ವ, ೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಇಡೀ ಜಗತ್ತು ಶಿವನಿಗೆ ಉಘೇ ಉಘೇ ಎಂದು ಜಯಕಾರವನ್ನು ಕೂಗಿತು. ಆ ಸದ್ದು ಜಗತ್ತನ್ನೇ ತುಂಬಿತು. ಹಸ್ತವನ್ನು ಜೋಡಿಸಿ ದೇವತೆಗಳು ಶಿವನಿಗೆ ನಮಸುತ್ತಿದ್ದುದು (ಹಣೆಗೆ ತಮ್ಮ ಹಸ್ತವನಿಟ್ಟು ನಮಸ್ಕರಿಸುತ್ತಿದ್ದರು) ಆಕಾಶದೆಲ್ಲಡೆ ಕಾಣುತ್ತಿತ್ತು. ದೇವತೆಗಳ ವಿಸ್ಮಯ, ದೊಡ್ಡ ಬೆಟ್ಟದಂತಿದ್ದ ಬೇಸಗಳು ಸೋತವು, ದೇವತೆಗಳೆಲ್ಲರೂ ಶಿವನಿಗೆ ಮುದದಿಂದ ಶಿರಸ್ಸಿನಮೇಲೆ ಅಭಿಷೇಕವನ್ನು ಮಾಡಿದರು.

ಅರ್ಥ:
ಜಗ: ಜಗತ್ತು; ಉಘೇ: ಜಯಘೋಷ; ಜಯ: ಗೆಲುವು, ಹೊಗಳು; ಧ್ವನಿ: ರವ, ಶಬ್ದ; ಝೊಂಪಿಸು: ಮೈಮರೆ, ಎಚ್ಚರ ತಪ್ಪು; ಒಗ್ಗು: ಗುಂಪು, ಸಮೂಹ; ಅಂಜುಳಿ: ಬೊಗಸೆ, ಹಸ್ತ; ಗಗನ: ಆಗಸ; ಅಗಲ: ವಿಸ್ತಾರ; ಕುಣಿ: ನರ್ತನ; ಸುರ: ದೇವತೆ; ಭಾಳ: ಹಣೆ; ಬೆಗಡು: ಆಶ್ಚರ್ಯ, ಬೆರಗು; ಬೀತುದು: ಒಣಗಿದ, ಮುಗಿಯಿತು; ಬೇಸರ: ದುಃಖ; ಬಲು: ಬಹಳು; ಅಗ: ಬೆಟ್ಟ; ಸೋತು: ಪರಾಜಯ; ಶಿವ: ಶಂಕರ; ದೈತ್ಯ: ರಾಕ್ಷಸ; ಅರಿ: ವೈರಿ; ದೈತ್ಯಾರಿ: ಸುರರು; ಮುದ: ಸಂತೋಷ; ಮೂರ್ಧ: ತಲೆಯ ಮುಂಭಾಗ, ಮುಂದಲೆ; ಅಭಿಷೇಕ: ದೇವರಿಗೆ ಮಾಡಿಸುವ ಹಾಗು ಪಟ್ಟ ಕಟ್ಟುವಾಗ ಮಾಡಿಸುವ ಮಂಗಳಸ್ನಾನ;

ಪದವಿಂಗಡಣೆ:
ಜಗವುಘೇ +ಎಂದುದು +ಜಯಧ್ವನಿ
ಜಗವ+ ಝೊಂಪಿಸಿತ್+ಒಗ್ಗಿನ್ +ಅಂಜುಳಿ
ಗಗನದಗಲಕೆ +ಕುಣಿವುತಿದ್ದುದು +ಸುರರ+ ಭಾಳದಲಿ
ಬೆಗಡು +ಬೀತುದು +ಬೇಸರಿನ+ ಬಲು
ದಗಹು +ಸೋತುದು +ಶಿವಗೆ+ ದೈತ್ಯಾ
ರಿಗಳು +ಮುದದಲಿ +ಮಾಡಿದರು+ ಮೂರ್ಧಾಭಿಷೇಚನವ

ಅಚ್ಚರಿ:
(೧) ಬ ಕಾರದ ಸಾಲು ಪದ – ಬೆಗಡು ಬೀತುದು ಬೇಸರಿನ ಬಲುದಗಹು
(೨) ದುಃಖವು ಇಲ್ಲವಾಯಿತು ಎಂದು ಹೇಳಲು – ಬೆಗಡು ಬೀತುದು ಬೇಸರಿನ ಬಲುದಗಹು ಸೋತುದು – ಬೇಸರದ ದೊಡ್ಡ ಬೆಟ್ಟವು ಕರಗಿತು ಎಂದು ಹೇಳುವ ಪರಿ