ಪದ್ಯ ೧೨: ಕರ್ಣನು ಅರ್ಜುನನ ಯಾವ ಭಾಗಕ್ಕೆ ಸರ್ಪಾಸ್ತ್ರವನ್ನು ಹೂಡಿದನು?

ಹೂಡಿದನು ತಿರುವಿನಲಿ ಬಾಣದ
ಝಾಡಿಯುರಿನಾಲಗೆಯ ನಿರುತನ
ನೋಡಿ ಪಾರ್ಥನ ಗಳಕೆ ಸಂಧಾನವ ನಿಧಾನಿಸುತ
ನೋಡಿದನು ಶಲ್ಯನನು ಮಿಗೆ ತೂ
ಗಾಡಿದನು ಕೌರವನ ಪುಣ್ಯದ
ಬೀಡು ಬಿಡುವಡೆ ಕಾಣಲಹುದಿಂದೆಂದನಾ ಕರ್ಣ (ಕರ್ಣ ಪರ್ವ, ೨೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕರ್ಣನು ಸರ್ಪಾಸ್ತ್ರವನ್ನು ಹೆದೆಯಲ್ಲಿ ಹೂಡಿ ಅದರ ತುದಿಯ ಉರಿನಾಲಗೆಯ ನೇರವನ್ನು ನೋಡಿ, ಅರ್ಜುನನ ಕುತ್ತಿಗೆಗೆ ಗುರಿಯಿಟ್ಟು, ಶಲ್ಯನನ್ನು ನೋಡಿ ತಲೆದೂಗಿ, ಕೌರವನ ಪುಣ್ಯದ ಬೀಡು ಬಿಡಲು ಇಂದೇ ಸರಿಯಾದ ಸಮಯ ನೋಡಿ ಎಂದು ನುಡಿದನು.

ಅರ್ಥ:
ಹೂಡು: ಅಣಿಗೊಳಿಸು; ತಿರುವು: ಬಿಲ್ಲಿನ ಹಗ್ಗ, ಹೆದೆ, ಮೌರ್ವಿ; ಬಾಣ: ಅಂಬು; ಝಾಡಿಸು: ಅಲುಗಾಡಿಸು, ಒದರು; ಉರಿ: ಬೆಂಕಿಯ ಕಿಡಿ; ನಾಲಗೆ: ಜಿಹ್ವೆ; ನಿರುತ: ಸತ್ಯ,ನಿಶ್ಚಯ, ನಿರ್ಧಾರವಾದ ಭಾವನೆ; ನೋಡಿ: ವೀಕ್ಷಿಸಿ; ಗಳ: ಕಂಠ, ಕೊರಳು; ಸಂಧಾನ: ಹೊಂದಿಸುವುದು, ಸಂಯೋಗ; ನಿಧಾನಿಸು: ತಡೆದು; ಮಿಗೆ: ಮತ್ತು; ತೂಗಾಡು: ಅಲ್ಲಾಡಿಸು; ಪುಣ್ಯ: ಒಳ್ಳೆಯ, ಮಂಗಳಕರವಾದ; ಬೀಡು: ವಾಸಸ್ಥಾನ; ಬಿಡು: ಅಡೆಯಿಲ್ಲದಿರು; ಕಾಣಲು: ತೋರಲು;

ಪದವಿಂಗಡಣೆ:
ಹೂಡಿದನು +ತಿರುವಿನಲಿ +ಬಾಣದ
ಝಾಡಿ+ಉರಿನಾಲಗೆಯ +ನಿರುತನ
ನೋಡಿ +ಪಾರ್ಥನ +ಗಳಕೆ +ಸಂಧಾನವ +ನಿಧಾನಿಸುತ
ನೋಡಿದನು +ಶಲ್ಯನನು +ಮಿಗೆ +ತೂ
ಗಾಡಿದನು +ಕೌರವನ +ಪುಣ್ಯದ
ಬೀಡು +ಬಿಡುವಡೆ +ಕಾಣಲ್+ಅಹುದ್+ಇಂದ್+ಎಂದನಾ +ಕರ್ಣ

ಅಚ್ಚರಿ:
(೧) ಬಾಣಕ್ಕೆ ನೀಡಿದ ಆಜ್ಞೆ: ಬಾಣದ ಝಾಡಿಯುರಿನಾಲಗೆಯ ನಿರುತನ ನೋಡಿ ಪಾರ್ಥನ ಗಳಕೆ ಸಂಧಾನವ ನಿಧಾನಿಸುತ
(೨) ಹೂಡಿ, ಝಾಡಿ, ನೋಡಿ, ತೂಗಾಡಿ – ಪ್ರಾಸ ಪದಗಳು

ಪದ್ಯ ೧೬: ಭೀಮನು ಯೋಧರನ್ನು ಹೇಗೆ ಸಂಹರಿಸಿದನು?

ನೀಲಗಿರಿಗಳ ನೆಮ್ಮಿ ಘನ ಮೇ
ಘಾಳಿ ಸುರಿದವು ಮಳೆಯನೆನೆ ಶರ
ಜಾಳ ಕವಿದುದು ಗಜದ ಜೋಧರ ಝಾಡಿಯೆಸುಗೆಯಲಿ
ಕೋಲ ಕೊಂಬನೆ ಭೀಮ ಸಿಡಿಲುರಿ
ನಾಲಗೆಗೆ ನೀರೇಗುವುದು ಮೇ
ಲಾಳ ಮುರಿದನು ವಿವಿಧ ಶಸ್ತ್ರಾಸ್ತ್ರ ಪ್ರಹಾರದಲಿ (ಕರ್ಣ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ನೀಲಗಿರಿಗಳ ಶಿಖರಕ್ಕೆ ಅಂಟಿ ಮೋಡಗಳು ಮಳೆಗರೆದಂತೆ ಯೋಧರು ಬಾಣಗಳನ್ನು ಸುರಿದರು. ಸಿಡಿಲಿನ ಉರಿನಾಲಿಗೆಗೆ ನೀರು ತಡೆದೀತೇ? ಆ ಬಾಣಗಳನ್ನು ಲೆಕ್ಕಿಸದೆ ವಿವಿಧ ಶಸ್ತ್ರಾಸ್ತ್ರಗಳ ಹೊಡೆತದಿಂದ ಭೀಮನು ಯೋಧರನ್ನು ಸಂಹರಿಸಿದನು.

ಅರ್ಥ:
ಗಿರಿ: ಬೆಟ್ಟ; ನೆಮ್ಮು: ಅವಲಂಬನ, ಆಸರೆ, ಆಧಾರ; ಘನ: ಭಾರ, ಶ್ರೇಷ್ಠ; ಮೇಘಾಳಿ: ಮೋಡಗಳ ಗುಂಪು; ಸುರಿ: ವರ್ಷಿಸು, ಬೀಳು; ಮಳೆ: ವರ್ಷ; ಶರ: ಬಾಣ; ಜಾಲ: ಸಮೂಹ; ಕವಿದು: ಆವರಿಸು, ಮುಚ್ಚಳ; ಗಜ: ಆನೆ; ಜೋಧ:ಯೋಧ; ಝಾಡಿ: ರಾಶಿ; ಎಸುಗು: ಹೊರಹೊಮ್ಮು, ಚೆಲ್ಲು; ಕೋಲ: ಬಾಣ; ಕೊಂಬು: ಹೆಚ್ಚುಗಾರಿಕೆ; ಸಿಡಿಲು: ಗರ್ಜಿಸು, ಆರ್ಭಟಿಸು; ಉರಿ: ಬೆಂಕಿ; ನಾಲಗೆ: ಜಿಹ್ವೆ; ನೀರು: ಜಲ; ಏಗು: ಪ್ರಯೋಜನಕ್ಕೆ ಬರು; ಪಡೆ; ಮೇಲಾಳು: ಶ್ರೇಷ್ಠರಾದ ಸೈನಿಕರು; ಮುರಿ: ಸೀಳು; ವಿವಿಧ: ಹಲವಾರು; ಶಸ್ತ್ರಾಸ್ತ್ರ: ಆಯುಧ; ಪ್ರಹಾರ: ಹೊಡೆತ;

ಪದವಿಂಗಡಣೆ:
ನೀಲ+ಗಿರಿಗಳ +ನೆಮ್ಮಿ +ಘನ +ಮೇ
ಘಾಳಿ +ಸುರಿದವು+ ಮಳೆಯನ್+ಎನೆ +ಶರ
ಜಾಳ +ಕವಿದುದು +ಗಜದ +ಜೋಧರ +ಝಾಡಿಯೆಸುಗೆಯಲಿ
ಕೋಲ +ಕೊಂಬನೆ +ಭೀಮ +ಸಿಡಿಲುರಿ
ನಾಲಗೆಗೆ+ ನೀರ್+ಏಗುವುದು +ಮೇ
ಲಾಳ +ಮುರಿದನು +ವಿವಿಧ +ಶಸ್ತ್ರಾಸ್ತ್ರ +ಪ್ರಹಾರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀಲಗಿರಿಗಳ ನೆಮ್ಮಿ ಘನ ಮೇಘಾಳಿ ಸುರಿದವು ಮಳೆಯನೆನೆ ಶರ
ಜಾಳ ಕವಿದುದು; ಸಿಡಿಲುರಿ ನಾಲಗೆಗೆ ನೀರೇಗುವುದು
(೨) ಶರಜಾಳ, ಮೇಲಾಳ – ಪ್ರಾಸ ಪದ

ಪದ್ಯ ೩೦: ಕರ್ಣನು ಏಕೆ ಭೀಮಾರ್ಜುನರಿಗೆ ಹೆದರುವುದಿಲ್ಲ?

ಝಳದ ಝಾಡಿದೆ ಹೆದರಿ ಸೂರ್ಯನ
ನುಳುಹುವನೆ ಕಲಿ ರಾಹು ದಾವಾ
ನಳನ ದಳ್ಳುರಿಗಳುಕುವುದೆ ಜೀಮೂತ ಸಂದೋಹ
ಫಲುಗುಣನ ಕಣೆಗಿಣೆಯ ಪವನಜ
ನಳಬಳವ ಕೈಕೊಂಬ ಕರ್ಣನೆ
ತಿಳಿಯಲಾ ಮಾದ್ರೇಶ ನನ್ನಯ ವ್ಯಥೆಯ ಕೇಳೆಂದ (ಕರ್ಣ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸೂರ್ಯನ ಬಿಸಿಲಿನ ಕಾಂತಿಯ ಹೊಡೆತಕ್ಕೆ ಹೆದರಿ ರಾಹುವು ಅವನನ್ನು ನುಂಗದೆ ಬಿಡುವನೇ? ಕಾಡನ್ನು ಸುಡುವ ಅಗ್ನಿಗೆ ಮೋಡಗಳು ಹೆದರುವವೇ? ಅರ್ಜುನನ ಬಾಣಗೀಣ, ಭೀಮನ ಬಲಗಿಲಗಳಿಗೆ ಹೆದರುವವನು ಈ ಕರ್ಣನೇ? ಶಲ್ಯ ನನ್ನ ವ್ಯಥೆಯ ಕಥೆಯನ್ನು ಹೇಳುವೆ ಕೇಳು…

ಅರ್ಥ:
ಝಳ: ತಾಪ; ಝಾಡಿ: ಕಾಂತಿ; ಹೆದರು: ಅಂಜಿಕೆ; ಸೂರ್ಯ: ಭಾನು; ಉಳುಹು:ಕಾಪಾಡು, ಸಂರಕ್ಷಿಸು; ಕಲಿ: ವೀರ; ದಾವಾನಳ: ಕಾಡ್ಗಿಚ್ಚು, ಕಾಡಿನ ಬೆಂಕಿ; ದಾವ: ಕಾಡು; ಅನಲ: ಬೆಂಕಿ; ದಳ್ಳುರಿ:ದೊಡ್ಡ ಉರಿ; ಅಳುಕು: ಹೆದರು; ಜೀಮೂತ: ಮೇಘ, ಮೋಡ; ಸಂದೋಹ:ಗುಂಪು, ಸಮೂಹ; ಕಣೆ: ಬಾಣ; ಪವನಜ: ಭೀಮ; ಅಳಬಳ:ಬಲಗಿಲ; ಕಣೆಗಿಣೆ: ಬಾಣಗೀಣ; ಕೈಕೊಂಬ: ಹೆದರು; ತಿಳಿ: ಅರಿ; ವ್ಯಥೆ:ನೋವು; ಕೇಳು: ಆಲಿಸು;

ಪದವಿಂಗಡಣೆ:
ಝಳದ +ಝಾಡಿದೆ +ಹೆದರಿ +ಸೂರ್ಯನನ್
ಉಳುಹುವನೆ +ಕಲಿ +ರಾಹು +ದಾವಾ
ನಳನ +ದಳ್ಳುರಿಗ್+ಅಳುಕುವುದೆ +ಜೀಮೂತ +ಸಂದೋಹ
ಫಲುಗುಣನ +ಕಣೆಗಿಣೆಯ+ ಪವನಜನ್
ಅಳಬಳವ +ಕೈಕೊಂಬ+ ಕರ್ಣನೆ
ತಿಳಿಯಲಾ+ ಮಾದ್ರೇಶ+ ನನ್ನಯ +ವ್ಯಥೆಯ +ಕೇಳೆಂದ

ಅಚ್ಚರಿ:
(೧) ಆಡು ಮಾತಿನ ಪ್ರಯೋಗ – ಕಣೆಗಿಣೆ, ಅಳಬಳ
(೨) ಉಪಮಾನದ ಪ್ರಯೋಗ – ಝಳದ ಝಾಡಿದೆ ಹೆದರಿ ಸೂರ್ಯನನುಳುಹುವನೆ ಕಲಿ ರಾಹು; ದಾವಾನಳನ ದಳ್ಳುರಿಗಳುಕುವುದೆ ಜೀಮೂತ ಸಂದೋಹ

ಪದ್ಯ ೧೩: ಸೈನಿಕರ ಕೇರಿಯಲ್ಲಿ ಯಾವ ಶಬ್ದವು ಕೇಳಿಸುತ್ತಿತ್ತು?

ನೀಡು ಬಲ ಬತ್ತಳಿಕೆಯನು ನಡೆ
ಜೋಡ ತೆಗೆ ತಾ ಸವಳವನು ರಣ
ಖೇಡನೇ ಫಡ ಘಾಯವನು ಬಿಗಿ ಮದ್ದನರೆಯೆನುತ
ಕೂಡೆ ತಮತಮಗಾಹವದ ಖಯ
ಖೋಡಿಯಿಲ್ಲದೆ ಸುಭಟರಬ್ಬರ
ಝಾಡಿ ಮಸಗಿತು ಕದನದಲಿ ಕಾಲಾಳ ಕೇರಿಯಲಿ (ಕರ್ಣ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಬಿಲ್ಲು, ಬಾಣ, ಬತ್ತಳಿಕೆಯನ್ನು ನೀಡು, ಮೈಕವಚವನ್ನು ತೆಗೆದು ತಾ, ಭರ್ಜಿಯನ್ನು ಕೊಡು, ಯುದ್ಧಕ್ಕೆ ಹೆದರುವೆಯಾ? ಔಷಧಿಯನ್ನು ಅರೆದು ಗಾಯದ ಮೇಲೆ ಸವರು, ಹೀಗೆ ಬೇಗ ಬೇಗನೆ ತಮ್ಮಲ್ಲಿ ಯುದ್ಧದ ಸಿದ್ಧತೆಗಳನ್ನು ಅಂಜಿಕೆಯಿಲ್ಲದೆ ದೈರ್ಯದಿಂದ ಕೂಗುತ್ತಾ ಸೈನಿಕರು ಯುದ್ಧಕ್ಕೆ ಸನ್ನದ್ಧರಾಗುತ್ತಿದ್ದರು.

ಅರ್ಥ:
ನೀಡು: ಕೊಡು; ಬಿಲು: ಧನಸ್ಸು, ಬಿಲ್ಲು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಜೋಡು: ಸವಗ, ಕವಚ; ತೆಗೆ: ಹೊರಹಾಕು; ಸವಳ: ಈಟಿ, ಭರ್ಜಿ; ರಣ: ಯುದ್ಧ; ಖೇಡ: ಹೆದರಿದವನು, ಭಯಗ್ರಸ್ತ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಘಾಯ: ಪೆಟ್ಟು; ಬಿಗಿ: ಗಟ್ಟಿ; ಮದ್ದು: ಔಷಧಿ; ಅರೆ: ನುಣ್ಣಗೆ ಮಾಡು, ತೇಯು; ಕೂಡೆ: ತಕ್ಷಣ; ತಮತಮಗೆ: ಅವರಲ್ಲಿ; ಆಹವ: ಯುದ್ಧ; ಖಯ: ಮೊಂಡುತನ, ಹಟಮಾರಿತನ; ಖೋಡಿ: ದುರುಳತನ, ನೀಚತನ; ಸುಭಟ: ಸೈನಿಕರು; ಅಬ್ಬರ: ಜೋರಾದ ಶಬ್ದ, ಆರ್ಭಟ; ಝಾಡಿ: ಕಾಂತಿ; ಮಸಗು: ಹರಡು; ಕೆರಳು; ತಿಕ್ಕು; ಕದನ: ಯುದ್ಧ; ಕಾಲಾಳು: ಸೈನಿಕ; ಕೇರಿ: ಬೀದಿ, ಬಿಡಾರ, ಓಣಿ;

ಪದವಿಂಗಡಣೆ:
ನೀಡು +ಬಲ +ಬತ್ತಳಿಕೆಯನು +ನಡೆ
ಜೋಡ +ತೆಗೆ +ತಾ +ಸವಳವನು+ ರಣ
ಖೇಡನೇ +ಫಡ +ಘಾಯವನು +ಬಿಗಿ +ಮದ್ದನ್+ಅರೆಯೆನುತ
ಕೂಡೆ +ತಮತಮಗ್+ಆಹವದ +ಖಯ
ಖೋಡಿಯಿಲ್ಲದೆ +ಸುಭಟರ್+ಅಬ್ಬರ
ಝಾಡಿ +ಮಸಗಿತು +ಕದನದಲಿ +ಕಾಲಾಳ +ಕೇರಿಯಲಿ

ಅಚ್ಚರಿ:
(೧) ಖಯ, ಖೋಡಿ, ಖೇಡ, ಫಡ, ಘಾಯ, ಝಾಡಿ – ಮಹಾಪ್ರಾಣದ ಪದಗಳ ಬಳಕೆ
(೨) ಆಹವ, ಕದನ, ರಣ – ಸಮನಾರ್ಥಕ ಪದಗಳು