ಪದ್ಯ ೩೫: ಕೌರವನು ಭೀಮನ ಮೇಲೆ ಹೇಗೆ ಆಕ್ರಮಣ ಮಾಡಿದನು?

ಅವನಿಪತಿ ಕೇಳ್ ಭೀಮಸೇನನ
ತಿವಿಗುಳನು ತಪ್ಪಿಸಿ ಸುಯೋಧನ
ಕವಿದು ನಾಭಿಗೆ ತೋರಿ ಜಂಘೆಗೆ ಹೂಡಿ ಝಳಪದಲಿ
ಲವಣಿಯಲಿ ಲಳಿಯೆದ್ದು ಹೊಯ್ದನು
ಪವನಜನ ಭುಜಶಿರವ ಸೀಸಕ
ಕವಚವಜಿಗಿಜಿಯಾಗೆ ಬೀಳೆನುತರಸ ಬೊಬ್ಬಿರಿದ (ಗದಾ ಪರ್ವ, ೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಭೀಮನ ತಿವಿತವನ್ನು ತಪ್ಪಿಸಿಕೊಂಡು ಕೌರಾನು ನಾಭಿಗೆ ಗುರಿಯಿಟ್ಟು ಜಂಘೆಗೆ ಹೂಡಿ, ಮೇಲೆ ಹಾರಿ ಭೀಮನ ತಲೆ, ಭುಜಗಳಿದ್ದ ಸೀಸಕ, ಕವಚಗಳನ್ನು ಪುಡಿಪುಡಿಯಾಗುವಂತೆ ಹೊಡೆದು ಗರ್ಜಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳ್: ಆಲಿಸು; ತಿವಿ: ಚುಚ್ಚು; ತಪ್ಪಿಸು: ಸುಳ್ಳಾಗು; ಕವಿ: ಆವರಿಸು; ನಾಭಿ: ಹೊಕ್ಕಳು; ತೋರು: ಪ್ರಕಟಿಸು; ಜಂಘೆ: ತೊಡೆ; ಝಳಪ: ವೇಗ; ಲವಣಿ: ಕಾಂತಿ; ಲಳಿ: ರಭಸ; ಎದ್ದು: ಮೇಲೆ ಬಂದು; ಹೊಯ್ದು: ಹೊಡೆ; ಪವನಜ: ಭೀಮ; ಭುಜ: ಬಾಹು; ಶಿರ: ತಲೆ; ಸೀಸಕ: ಶಿರಸ್ತ್ರಾಣ; ಕವಚ: ಹೊದಿಕೆ; ಜಿಗಿಜಿಯಾಗಿ: ಪುಡಿಯಾಗಿ; ಬೀಳು: ಎರಗು, ಬಾಗು; ಬೊಬ್ಬಿರಿ: ಗರ್ಜಿಸು; ಅರಸ: ರಾಜ;

ಪದವಿಂಗಡಣೆ:
ಅವನಿಪತಿ +ಕೇಳ್ +ಭೀಮಸೇನನ
ತಿವಿಗುಳನು+ ತಪ್ಪಿಸಿ+ ಸುಯೋಧನ
ಕವಿದು +ನಾಭಿಗೆ +ತೋರಿ +ಜಂಘೆಗೆ +ಹೂಡಿ +ಝಳಪದಲಿ
ಲವಣಿಯಲಿ +ಲಳಿಯೆದ್ದು+ ಹೊಯ್ದನು
ಪವನಜನ +ಭುಜ+ಶಿರವ +ಸೀಸಕ
ಕವಚವ+ಜಿಗಿಜಿಯಾಗೆ +ಬೀಳೆನುತ್+ಅರಸ +ಬೊಬ್ಬಿರಿದ

ಅಚ್ಚರಿ:
(೧) ಲ ಕಾರದ ಜೋಡಿ ಪದ – ಲವಣಿಯಲಿ ಲಳಿಯೆದ್ದು
(೨) ಅವನಿಪತಿ, ಅರಸ – ಸಮಾನಾರ್ಥಕ ಪದ

ಪದ್ಯ ೬: ಆಯುಧಗಳ ಪ್ರಕಾಶವು ಯಾವುದಕ್ಕೆ ಸಮವಾಯಿತು?

ಝಳಪದಲಿ ಬೊಬ್ಬಿಡುವಡಾಯುಧ
ಹೊಳವುಗಳ ಡೊಂಕಣೆಯ ತಳಪದ
ಬೆಳಗುಗಳ ಬಟ್ಟೇರ ಧಾರೆಯ ಬಳ್ಳಿಮಿಂಚುಗಳ
ಅಲಗಿನುಬ್ಬರಗಿಡಿಯ ಹಬ್ಬುಗೆ
ಥಳಥಳಿಸಿ ಸೈಗರೆದುದೈ ಹೆ
ಬ್ಬಲ ದಿವಾಕರಶತವನೆನೆ ಹೆಸರಿಡುವನಾರೆಂದ (ಭೀಷ್ಮ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ಝಳಪಿಸುವ ಕತ್ತಿಗಳ ಹೊಳಪು, ಈಟಿಯ ಪ್ರಕಾಶಗಳು ಬಳ್ಳಿ ಮಿಂಚುಗಳಂತೆ ಹಬ್ಬಿ, ಆಯುಧಗಳ ಮುಂಭಾಗದ ಪ್ರಕಾಶವು ನೂರಾರು ಸೂರ್ಯರ ಪ್ರಕಾಶಕ್ಕೆ ಸಮವಾಯಿತು. ಅದನ್ನು ಯಾವ ಹೆಸರಿನಿಂದ ಕರೆಯಲು ಸಾಧ್ಯ!

ಅರ್ಥ:
ಝಳ: ತಾಪ; ಬೊಬ್ಬಿಡು: ಅರಚು, ಗರ್ಜಿಸು; ಆಯುಧ: ಶಸ್ತ್ರ; ಹೊಳವು: ಕಾಂತಿ, ಪ್ರಕಾಶ; ಡೊಂಕಣಿ: ಈಟಿ; ತಳಪಥ: ಕಾಂತಿ; ಬೆಳಗು: ಹೊಳಪು, ಕಾಂತಿ; ಬಟ್ಟೆ: ದಾರಿ; ಧಾರೆ: ಹರಿಯುವಿಕೆ; ಬಳ್ಳಿ: ಲತೆ, ಹಂಬು; ಮಿಂಚು:ಹೊಳಪು, ಕಾಂತಿ; ಅಲಗು: ಆಯುಧಗಳ ಹರಿತವಾದ ಅಂಚು; ಉಬ್ಬರ: ಅತಿಶಯ; ಹಬ್ಬು: ಹರಡು; ಥಳಥಳಿಸು: ಹೊಳೆ; ಸೈ: ಸರಿಯಾದುದು; ಹೆಬ್ಬಲ: ದೊಡ್ಡದಾದ ಸೈನ್ಯ; ದಿವಾಕರ: ಸೂರ್ಯ; ಶತ: ನೂರು; ಹೆಸರು: ನಾಮ;

ಪದವಿಂಗಡಣೆ:
ಝಳಪದಲಿ +ಬೊಬ್ಬಿಡುವಡ್+ಆಯುಧ
ಹೊಳವುಗಳ +ಡೊಂಕಣೆಯ +ತಳಪದ
ಬೆಳಗುಗಳ+ ಬಟ್ಟೇರ +ಧಾರೆಯ +ಬಳ್ಳಿ+ಮಿಂಚುಗಳ
ಅಲಗಿನ್+ಉಬ್ಬರ+ಕಿಡಿಯ +ಹಬ್ಬುಗೆ
ಥಳಥಳಿಸಿ +ಸೈ+ಕರೆದುದೈ +ಹೆ
ಬ್ಬಲ +ದಿವಾಕರ+ಶತವನ್+ಎನೆ +ಹೆಸರಿಡುವನ್+ಆರೆಂದ

ಅಚ್ಚರಿ:
(೧) ಝಳಪ, ಹೊಳಪು, ಬೆಳಗು, ಕಿಡಿ, ಮಿಂಚು, ಥಳಥಳ – ಪ್ರಕಾಶವನ್ನು ವಿವರಿಸುವ ಪದಗಳು
(೨) ಉಪಮಾನದ ಪ್ರಯೋಗ – ಅಲಗಿನುಬ್ಬರಗಿಡಿಯ ಹಬ್ಬುಗೆ ಥಳಥಳಿಸಿ ಸೈಗರೆದುದೈ ಹೆಬ್ಬಲ ದಿವಾಕರಶತವ