ಪದ್ಯ ೨೧: ಗಣಿಕೆಯರು ಎಲ್ಲಿಗೆ ಹಿಂದಿರುಗಿದರು?

ಕರೆಸಿದನು ನೃಪ ವಾರಿಕೇಳಿಗೆ
ವರ ವಧೂವರ್ಗವನು ಕೇಳಿದು
ತಿರುಗಿತಂಗಜ ಥಟ್ಟು ಝಣ ಝಣರವರ ರಭಸದಲಿ
ಸರಿದಿಳಿವ ನಿರಿಯೊಂದು ಕೈಯಲಿ
ಸುರಿವರಳ ಮುಡಿಯೊಂದು ಕೈಯಲಿ
ಭರದೆ ಗಮನ ಸ್ವೇದ ಜಲ ಮಘಮಘಿಸೆ ದೆಸೆದೆಸೆಗೆ (ಅರಣ್ಯ ಪರ್ವ, ೧೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅಷ್ಟರಲ್ಲಿ ಕೌರವನು ಜಲಕ್ರೀಡೆಗೆ ಬರಬೇಕೆಂದು ಹೇಳಿಕಳಿಸಿದುದರಿಂದ, ಮನ್ಮಥನ ಸೈನ್ಯದ ಆಳುಗಳಂತಿದ್ದ ಕಾಮಿನಿಯರು ಝಣಝಣತ್ಕಾರ ಮಾದುತ್ತಾ ಹಿಂದಿರುಗಿದರು. ಕೆಳಗಿಳಿಯುವ ಸೀರೆಯನ್ನು ಒಂದು ಕೈಯಲ್ಲಿ ಹಿಡಿದು ಹಿಂದೆ ಜಾರುತ್ತಿರುವ ಹೂಗಳ ಜಡೆಯನ್ನು ಇನ್ನೊಂದು ಕೈಯಲಿ ಹಿಡಿದು ತರುಣಿಯರು ವೇಗದಿಂದ ನಡೆಯಲು ಅವರ ಮೈಬೆವರಿನ ಸುಗಂಧವು ದಿಕ್ಕು ದಿಕ್ಕಿಗೆ ಹರಡಿತು.

ಅರ್ಥ:
ಕರೆಸು: ಬರೆಮಾಡು; ನೃಪ: ರಾಜ; ವಾರಿಕೇಳಿ: ಗಣಿಕೆ; ವರ: ಶ್ರೇಷ್ಠ; ವಧೂ: ಹೆಣ್ಣು; ವರ್ಗ: ಗುಂಪು; ಕೇಳಿ: ತಿಳಿದು, ಆಲಿಸು; ತಿರುಗು: ಹಿಂದಿರುಗು; ಅಂಗಜ: ಮನ್ಮಥ; ಥಟ್ಟು: ಪಡೆ; ಝಣ: ಶಬ್ದವನ್ನು ಸೂಚಿಸುವ ಪದ; ರವ: ಶಬ್ದ; ರಭಸ: ವೇಗ; ನಿರಿ:ಸೀರೆಯ ಮಡಿಕೆ; ಇಳಿ: ಕೆಳಕ್ಕೆ ಬರು; ಕೈ: ಹಸ್ತ; ಸುರಿ: ವರ್ಷಿಸು; ಅರಲು: ಹೂವು; ಮುಡಿ: ತಲೆಗೂದಲು; ಭರದೆ: ಹೆಚ್ಚಳ; ಗಮನ: ಚಲನ; ಸ್ವೇದಜಲ: ಬೆವರು; ಮಘಮಘಿಸು: ಸುವಾಸನೆಯನ್ನು ಬೀರು; ದೆಸೆ: ದಿಕ್ಕು;

ಪದವಿಂಗಡಣೆ:
ಕರೆಸಿದನು +ನೃಪ+ ವಾರಿಕೇಳಿಗೆ
ವರ+ ವಧೂ+ವರ್ಗವನು +ಕೇಳಿದು
ತಿರುಗಿತ್+ಅಂಗಜ+ ಥಟ್ಟು+ ಝಣ +ಝಣ+ರವರ+ ರಭಸದಲಿ
ಸರಿದ್+ಇಳಿವ +ನಿರಿಯೊಂದು +ಕೈಯಲಿ
ಸುರಿವ್+ಅರಳ+ ಮುಡಿಯೊಂದು+ ಕೈಯಲಿ
ಭರದೆ +ಗಮನ +ಸ್ವೇದ +ಜಲ+ ಮಘಮಘಿಸೆ +ದೆಸೆದೆಸೆಗೆ

ಅಚ್ಚರಿ:
(೧) ಗಣಿಕೆಯರ ಚಲನೆಯನ್ನು ಚಿತ್ರಿಸುವ ಪರಿ – ಸರಿದಿಳಿವ ನಿರಿಯೊಂದು ಕೈಯಲಿ
ಸುರಿವರಳ ಮುಡಿಯೊಂದು ಕೈಯಲಿಭರದೆ ಗಮನ ಸ್ವೇದ ಜಲ ಮಘಮಘಿಸೆ ದೆಸೆದೆಸೆಗೆ