ಪದ್ಯ ೪೭: ಕೌರವರೇಕೆ ತಮ್ಮ ತಮ್ಮಲ್ಲೇ ಕಾದಾಡಿದರು?

ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು
ವರಮಹಾರಥರೀಟಿ ಸಬಳ ಕಠಾರಿಯುಬ್ಬಣವ
ಧುರದ ಭರ ಮಿಗೆ ಕೊಂಡು ಬೆದರ
ಳ್ಳಿರಿಯೆ ಬೆರಗಿನ ಬಳಿಯಲೊದಗಿ
ತ್ತರರೆ ಪಾಂಡವರೆನುತ ಹೊಯ್ದಾಡಿದರು ತಮ್ಮೊಳಗೆ (ದ್ರೋಣ ಪರ್ವ, ೮ ಸಂಧಿ, ೪೭ ಪದ್ಯ)

ತಾತ್ಪರ್ಯ:
ರಾವುತರು ಆನೆಗಳನ್ನು , ಜೋದರು ಕುದುರೆಗಳನ್ನು, ಕಾಲಾಳುಗಳು ರಥಗಳನ್ನು ಹತ್ತಿದರು. ಮಹಾರಥರು ಈಟಿ, ಸಬಳ ಕಠಾರಿ ಉಬ್ಬಣಗಳನ್ನು ಹಿಡಿದು ಕಾಲಾಳುಗಳಾದರು. ಯುದ್ಧವು ಸಮೀಪಿಸಿ ಉಗ್ರವಾಗಿದೆಯೆಂದು ಭಯಗೊಂಡು ತಮ್ಮ ಪಕ್ಕದಲ್ಲಿದ್ದವರೇ ಪಾಂಡವ ಯೋಧರೆಂದು ತಿಳಿದು ತಮ್ಮ ತಮ್ಮಲ್ಲೇ ಕಾದಾಡಿದರು.

ಅರ್ಥ:
ಕರಿ: ಆನೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಜೋಧ: ಆನೆಮೇಲೆ ಕೂತು ಯುದ್ಧಮಾಡುವವ; ತುರಗ: ಅಶ್ವ; ಕಾಲಾಳು: ಸೈನಿಕ; ರಥ: ಬಂಡಿ; ವರ: ಶ್ರೇಷ್ಠ; ಮಹಾರಥ: ಪರಾಕ್ರಮಿ; ಸಬಳ: ಈಟಿ; ಕಠಾರಿ: ಬಾಕು, ಚೂರಿ, ಕತ್ತಿ; ಉಬ್ಬಣ: ಹೆಚ್ಚು, ಅಧಿಕ; ಧುರ: ಯುದ್ಧ, ಕಾಳಗ; ಭರ: ರಭಸ; ಮಿಗೆ: ಮತ್ತು,ಅಧಿಕವಾಗಿ; ಬೆದರು: ಹೆದರು; ಅಳ್ಳಿರಿ: ಚುಚ್ಚು; ಬೆರಗು: ಆಶ್ಚರ್ಯಪಡು, ವಿಸ್ಮಯ; ಬಳಿ: ಹತ್ತಿರ; ಒದಗು: ಲಭ್ಯ, ದೊರೆತುದು; ಅರರೆ: ಓಹೋ; ಹೊಯ್ದಾಡು: ಹೋರಾಡು;

ಪದವಿಂಗಡಣೆ:
ಕರಿಗಳನು+ ರಾವುತರು +ಜೋಧರು
ತುರಗವನು +ಕಾಲಾಳು +ರಥವನು
ವರ+ಮಹಾರಥರ್+ಈಟಿ +ಸಬಳ +ಕಠಾರಿ+ಉಬ್ಬಣವ
ಧುರದ +ಭರ +ಮಿಗೆ +ಕೊಂಡು +ಬೆದರ್
ಅಳ್ಳಿರಿಯೆ +ಬೆರಗಿನ +ಬಳಿಯಲ್+ಒದಗಿತ್ತ್
ಅರರೆ +ಪಾಂಡವರೆನುತ+ ಹೊಯ್ದಾಡಿದರು +ತಮ್ಮೊಳಗೆ

ಅಚ್ಚರಿ:
(೧) ಕೌರವರಲ್ಲಿನ ಗೊಂದಲವನ್ನು ಸೂಚಿಸುವ ಪರಿ – ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು ವರಮಹಾರಥರೀಟಿ ಸಬಳ ಕಠಾರಿಯುಬ್ಬಣವ

ಪದ್ಯ ೧೦: ಕರ್ಣನು ವೈರಿಸೈನ್ಯದ ಮೇಲೆ ಹೇಗೆ ಬಾಣಪ್ರಯೋಗ ಮಾಡಿದನು?

ತುರಗ ರಾವ್ತರಿಗವರ ಖಡ್ಗಕೆ
ಕರಿಗೆ ಜೋಧರಿಗವರ ಶಸ್ತ್ರಕೆ
ವರ ರಥಕೆ ಸಾರಥಿಗೆ ರಥಿಕರ ಚಾಪಮಾರ್ಗಣಕೆ
ಸರಳನೊಂದೊಂದೆಚ್ಚು ನೆರೆ ಕ
ತ್ತರಿಸಿದನು ಕಾಲಾಳನೊಂದೇ
ಸರಳಲೈನೊರಳಿಯೆ ಕೊಂದನು ಕರ್ಣ ಪರಬಲವ (ಕರ್ಣ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕರ್ಣನ ಮೇಲೆ ಎಲ್ಲರೂ ಎಲ್ಲಾ ಕಡೆಯಿಂದ ದಾಳಿ ಮಾಡಲು, ಕರ್ಣನು ತನ್ನ ಮೇಲೆ ದಾಳಿ ಮಾಡುತ್ತಿದ್ದ ರಾವುತರ ಖಡ್ಗಗಳು ಮತ್ತು ಅವರ ಕುದುರೆಗಳು, ಆನೆಗಳು ಮತ್ತು ಜೋಧರ ಶಸ್ತ್ರಗಳು, ರಥದ ಮೇಲಿಂದ ಯುದ್ಧಮಾಡುತ್ತಿದ್ದವರ ಬಿಲ್ಲು ಬಾಣಗಳು, ಇವೆಲ್ಲಕ್ಕೂ ಕರ್ಣನು ಒಂದೊಂದೇ ಬಾಣಗಳನ್ನು ಹೊಡೆದು ಕೆಡವಿದನು, ಒಂದೆ ಬಾಣದಿಂದ ಐನೂರು ಕಾಲಾಳುಗಳನ್ನು ಕೊಂದನು.

ಅರ್ಥ:
ತುರಗ: ಕುದುರೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಖಡ್ಗ: ಕತ್ತಿ; ಕರಿ: ಆನೆ, ಗಜ; ಜೋಧ: ಆನೆಯ ಮೇಲೆ ಕುಳಿತು ಯುದ್ಧ ಮಾಡುವವ; ಶಸ್ತ್ರ: ಆಯುಧ; ವರ: ಶ್ರೇಷ್ಠ; ರಥ: ಬಂಡಿ; ಸಾರಥಿ: ರಥವನ್ನು ಓಡಿಸುವವ, ಸೂತ; ರಥಿಕ: ರಥದ ಮೇಲೆ ಯುದ್ಧಮಾಡುವವ; ಚಾಪ: ಬಿಲ್ಲು, ಧನುಸ್ಸು; ಮಾರ್ಗಣ: ಬಾಣ, ಅಂಬು; ಸರಳು: ಬಾಣ; ಎಚ್ಚು: ಬಾಣಬಿಡು; ನೆರೆ: ಗುಂಪು; ಕತ್ತರಿಸು: ಸೀಳು; ಕಾಲಾಳು: ಸೈನಿಕರು; ಅಳಿ: ಸಾವು; ಕೊಲ್ಲು: ಸಾಯಿಸು; ಪರಬಲ: ವೈರಿಸೈನ್ಯ;

ಪದವಿಂಗಡಣೆ:
ತುರಗ +ರಾವ್ತರಿಗ್+ಅವರ +ಖಡ್ಗಕೆ
ಕರಿಗೆ +ಜೋಧರಿಗ್+ಅವರ +ಶಸ್ತ್ರಕೆ
ವರ +ರಥಕೆ +ಸಾರಥಿಗೆ+ ರಥಿಕರ +ಚಾಪ+ಮಾರ್ಗಣಕೆ
ಸರಳನ್+ಒಂದೊಂದ್+ಎಚ್ಚು +ನೆರೆ +ಕ
ತ್ತರಿಸಿದನು +ಕಾಲಾಳನ್+ಒಂದೇ
ಸರಳಲ್+ಐನೊರ್+ಅಳಿಯೆ +ಕೊಂದನು +ಕರ್ಣ +ಪರಬಲವ

ಅಚ್ಚರಿ:
(೧) ರಾವುತ, ಜೋಧ, ರಥಿಕ – ಮೂರು ಬಗೆಯ ಯೋಧರು
(೨) ಮಾರ್ಗಣ, ಸರಳು – ಸಮನಾರ್ಥಕ ಪದ

ಪದ್ಯ ೧೬: ಭೀಮನು ಯೋಧರನ್ನು ಹೇಗೆ ಸಂಹರಿಸಿದನು?

ನೀಲಗಿರಿಗಳ ನೆಮ್ಮಿ ಘನ ಮೇ
ಘಾಳಿ ಸುರಿದವು ಮಳೆಯನೆನೆ ಶರ
ಜಾಳ ಕವಿದುದು ಗಜದ ಜೋಧರ ಝಾಡಿಯೆಸುಗೆಯಲಿ
ಕೋಲ ಕೊಂಬನೆ ಭೀಮ ಸಿಡಿಲುರಿ
ನಾಲಗೆಗೆ ನೀರೇಗುವುದು ಮೇ
ಲಾಳ ಮುರಿದನು ವಿವಿಧ ಶಸ್ತ್ರಾಸ್ತ್ರ ಪ್ರಹಾರದಲಿ (ಕರ್ಣ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ನೀಲಗಿರಿಗಳ ಶಿಖರಕ್ಕೆ ಅಂಟಿ ಮೋಡಗಳು ಮಳೆಗರೆದಂತೆ ಯೋಧರು ಬಾಣಗಳನ್ನು ಸುರಿದರು. ಸಿಡಿಲಿನ ಉರಿನಾಲಿಗೆಗೆ ನೀರು ತಡೆದೀತೇ? ಆ ಬಾಣಗಳನ್ನು ಲೆಕ್ಕಿಸದೆ ವಿವಿಧ ಶಸ್ತ್ರಾಸ್ತ್ರಗಳ ಹೊಡೆತದಿಂದ ಭೀಮನು ಯೋಧರನ್ನು ಸಂಹರಿಸಿದನು.

ಅರ್ಥ:
ಗಿರಿ: ಬೆಟ್ಟ; ನೆಮ್ಮು: ಅವಲಂಬನ, ಆಸರೆ, ಆಧಾರ; ಘನ: ಭಾರ, ಶ್ರೇಷ್ಠ; ಮೇಘಾಳಿ: ಮೋಡಗಳ ಗುಂಪು; ಸುರಿ: ವರ್ಷಿಸು, ಬೀಳು; ಮಳೆ: ವರ್ಷ; ಶರ: ಬಾಣ; ಜಾಲ: ಸಮೂಹ; ಕವಿದು: ಆವರಿಸು, ಮುಚ್ಚಳ; ಗಜ: ಆನೆ; ಜೋಧ:ಯೋಧ; ಝಾಡಿ: ರಾಶಿ; ಎಸುಗು: ಹೊರಹೊಮ್ಮು, ಚೆಲ್ಲು; ಕೋಲ: ಬಾಣ; ಕೊಂಬು: ಹೆಚ್ಚುಗಾರಿಕೆ; ಸಿಡಿಲು: ಗರ್ಜಿಸು, ಆರ್ಭಟಿಸು; ಉರಿ: ಬೆಂಕಿ; ನಾಲಗೆ: ಜಿಹ್ವೆ; ನೀರು: ಜಲ; ಏಗು: ಪ್ರಯೋಜನಕ್ಕೆ ಬರು; ಪಡೆ; ಮೇಲಾಳು: ಶ್ರೇಷ್ಠರಾದ ಸೈನಿಕರು; ಮುರಿ: ಸೀಳು; ವಿವಿಧ: ಹಲವಾರು; ಶಸ್ತ್ರಾಸ್ತ್ರ: ಆಯುಧ; ಪ್ರಹಾರ: ಹೊಡೆತ;

ಪದವಿಂಗಡಣೆ:
ನೀಲ+ಗಿರಿಗಳ +ನೆಮ್ಮಿ +ಘನ +ಮೇ
ಘಾಳಿ +ಸುರಿದವು+ ಮಳೆಯನ್+ಎನೆ +ಶರ
ಜಾಳ +ಕವಿದುದು +ಗಜದ +ಜೋಧರ +ಝಾಡಿಯೆಸುಗೆಯಲಿ
ಕೋಲ +ಕೊಂಬನೆ +ಭೀಮ +ಸಿಡಿಲುರಿ
ನಾಲಗೆಗೆ+ ನೀರ್+ಏಗುವುದು +ಮೇ
ಲಾಳ +ಮುರಿದನು +ವಿವಿಧ +ಶಸ್ತ್ರಾಸ್ತ್ರ +ಪ್ರಹಾರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀಲಗಿರಿಗಳ ನೆಮ್ಮಿ ಘನ ಮೇಘಾಳಿ ಸುರಿದವು ಮಳೆಯನೆನೆ ಶರ
ಜಾಳ ಕವಿದುದು; ಸಿಡಿಲುರಿ ನಾಲಗೆಗೆ ನೀರೇಗುವುದು
(೨) ಶರಜಾಳ, ಮೇಲಾಳ – ಪ್ರಾಸ ಪದ