ಪದ್ಯ ೨೨: ಜೈಮಿನಿ ಮುನಿಗಳ ಯಾವ ಸಮುದ್ರದಲ್ಲಿ ಮುಳುಗಿದರು?

ಬಳಿಕಲಾ ಪಾಂಡುವಿನ ಶ್ರಾದ್ಧದೆ
ನಳಿನನಾಭಾದಿಗಳು ಭೋಜಕ
ರೊಲಿದು ಹರಸಿದರಂದು ಪಾಂಡುಕುಮಾರರೈವರನು
ಕಳುಹಿದರು ಮುನಿವರರ ತಮ್ಮಯ
ನಿಳಯಕಾಗಲು ಬಳಿಕ ಜೈಮಿನಿ
ಮುಳುಗಿದನು ಪರಿತುಷ್ಟನಾದನು ಹರಿಕೃಪಾಬ್ಧಿಯಲಿ (ಅರಣ್ಯ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶ್ರಾದ್ಧ ಕಾರ್ಯಗಳೆಲ್ಲಾ ಮುಗಿದ ಮೇಲೆ, ಶ್ರೀಕೃಷ್ಣನೇ ಮೊದಲಾಗಿ ಎಲ್ಲರೂ ಊಟಮಾಡಿ, ಪಾಂಡವರನ್ನು ಆಶೀರ್ವದಿಸಿದರು. ನಂತರ ಋಷಿಗಳು ತಮ್ಮ ಆಶ್ರಮಕ್ಕೆ ಹಿಂದಿರುಗಿದರು, ಜೈಮಿನಿ ಮುನಿಗಳು ಶ್ರೀಕೃಷ್ಣನ ಕೃಪಾಸಾಗರದಲ್ಲಿ ಮುಳುಗಿ ಬಹಳವಾಗಿ ತುಷ್ಟಿಯನ್ನು ಅನುಭವಿಸಿದರು.

ಅರ್ಥ:
ಬಳಿಕ: ನಂತರ; ಶ್ರಾದ್ಧ: ತಿಥಿ; ನಳಿನನಾಭ: ವಿಷ್ಣು; ಆದಿ: ಮುಂತಾದ; ಭೋಜಕ: ಊಟಮಾದು; ಒಲಿ: ಸಮ್ಮತಿಸು; ಹರಸು: ಆಶೀರ್ವದಿಸು; ಕುಮಾರ: ಮಕ್ಕಳು; ಕಳುಹು: ಬೀಳ್ಕೊಡು; ಮುನಿ: ಋಷಿ; ನಿಳಯ: ಮನೆ; ಬಳಿಕ: ನಂತರ; ಮುಳುಗು: ಹುದುಗಿರು, ಒಳಸೇರು; ಪರಿತುಷ್ಟ: ತೃಪ್ತಿ; ಕೃಪ: ಕರುಣೆ; ಅಬ್ಧಿ: ಸಮುದ್ರ;

ಪದವಿಂಗಡಣೆ:
ಬಳಿಕಲಾ +ಪಾಂಡುವಿನ +ಶ್ರಾದ್ಧದೆ
ನಳಿನನಾಭ+ಆದಿಗಳು +ಭೋಜಕರ್
ಒಲಿದು +ಹರಸಿದರ್+ಅಂದು +ಪಾಂಡುಕುಮಾರರ್+ಐವರನು
ಕಳುಹಿದರು +ಮುನಿವರರ+ ತಮ್ಮಯ
ನಿಳಯಕಾಗಲು+ ಬಳಿಕ+ ಜೈಮಿನಿ
ಮುಳುಗಿದನು +ಪರಿತುಷ್ಟನಾದನು +ಹರಿಕೃಪಾಬ್ಧಿಯಲಿ

ಅಚ್ಚರಿ:
(೧) ನಳಿನನಾಭ, ಹರಿ – ಕೃಷ್ಣನನ್ನು ಕರೆದ ಬಗೆ

ಪದ್ಯ ೮: ಜೈಮಿನಿ ಮುನಿಗಳು ಆಮಂತ್ರಣವನ್ನು ಏಕೆ ಸ್ವೀಕರಿಸಿದರು?

ಎಂದ ನಮ್ಮಗ್ರಜನು ದೇವ ಮು
ಕುಂದನನು ಬೆಸಗೊಂಡ ಜೈಮಿನಿ
ಯೊಂದಿದಾಶ್ರಮವಾವುದೆನೆ ಕರುಣಿಸಿದನಿಂದೆಮಗೆ
ಎಂದೊಡುಬ್ಬಿದ ದೇವನನು ನೆನೆ
ದಿಂದು ದಂದುಗಬಡೆ ಕೃಪೇ ಕ್ಷಣ
ದಿಂದ ನಿಜವನು ತೋರ್ಪಭರವಿದುಯೆನುತ ಕೈಕೊಂಡ (ಅರಣ್ಯ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಭೀಮನು ಉತ್ತರಿಸುತ್ತಾ, ಮುನಿಗಳೇ, ನಮ್ಮ ಅಣ್ಣ ಧರ್ಮಜನು ಜೈಮಿನಿ ಮುನಿಗಳ ಆಶ್ರಮ ಎಲ್ಲಿರುವುದೆಂದು ಕೇಳಲು, ಕೃಷ್ಣನೇ ನಮಗೆ ನಿಮ್ಮ ಆಶ್ರಮದ ವಿಳಾಸವನ್ನು ತಿಳಿಸಿದನು. ಆಗ ಜೈಮಿನಿ ಮುನಿಗಳು ಸಂತೋಷ ಭರಿತರಾಗಿ, ಇದರಿಂದ ನಿಮ್ಮ ಕಾರ್ಯಕ್ರಮಕ್ಕೆ ಬರಲು ನನಗೇನೂ ಕಷ್ಟವಿಲ್ಲ, ನಾನು ದುಃಖಿಸುವುದೂ ಇಲ್ಲ. ನನಗೆ ದರ್ಶನ ನೀಡಬೇಕೆಂದೆ ಕೃಷ್ಣನು ಈ ಆಟವನ್ನು ಹೂಡಿದ್ದಾನೆ ಎಂದು ಯೋಚಿಸಿ ಶ್ರಾದ್ಧಕ್ಕೆ ಬರಲು ಒಪ್ಪಿಕೊಂಡರು.

ಅರ್ಥ:
ಅಗ್ರಜ: ಅಣ್ಣ; ದೇವ: ಭಗವಂತ, ಶ್ರೇಷ್ಠ; ಮುಕುಂದ: ಕೃಷ್ಣ; ಬೆಸ: ಅಪ್ಪಣೆ; ಆಶ್ರಮ: ಋಷಿಗಳ ವಾಸಸ್ಥಾನ; ಕರುಣೆ: ದಯೆ; ಉಬ್ಬು: ಹಿಗ್ಗು; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ದಂದುಗ: ದುಃಖ; ಕೃಪೆ: ದಯೆ, ಕರುಣೆ; ಕ್ಷಣ: ಆಮಂತ್ರಣ; ನಿಜ: ನೈಜ, ತನ್ನ; ತೋರ್ಪು: ತೋರಿಸು, ಗೋಚರ; ಭರ: ಆಸಕ್ತಿ; ಕೈಕೊಳ್ಳು: ಒಪ್ಪಿಕೊಳ್ಳು;

ಪದವಿಂಗಡಣೆ:
ಎಂದ +ನಮ್+ಅಗ್ರಜನು +ದೇವ +ಮು
ಕುಂದನನು +ಬೆಸಗೊಂಡ +ಜೈಮಿನಿ
ಯೊಂದಿದ್+ಆಶ್ರಮವ್+ಆವುದ್+ಎನೆ+ ಕರುಣಿಸಿದನ್+ಇಂದ್+ಎಮಗೆ
ಎಂದೊಡ್+ಉಬ್ಬಿದ +ದೇವನನು +ನೆನೆದ್
ಇಂದು +ದಂದುಗಬಡೆ+ ಕೃಪೇಕ್ಷಣ
ದಿಂದ +ನಿಜವನು+ ತೋರ್ಪ+ಭರವಿದು+ಎನುತ +ಕೈಕೊಂಡ

ಅಚ್ಚರಿ:
(೧) ವೃಷಭ ಪ್ರಾಸದ ಪ್ರಯೋಗ
(೨) ಕೃಷ್ಣನ ಲೀಲೆಯನ್ನು ಹೇಳುವ ಪರಿ – ಕೃಪೇಕ್ಷಣ ದಿಂದ ನಿಜವನು ತೋರ್ಪಭರವಿದುಯೆನುತ

ಪದ್ಯ ೫: ಭೀಮನು ಜೈಮಿನಿ ಮಹರ್ಷಿಗಳ ಬಳಿ ಹೇಗೆ ಪರಿಚಯಿಸಿ ಕೊಂಡನು?

ಎಂದ ಮಾತನು ಕೇಳಿ ಧರ್ಮಜ
ನಂದು ಕಳುಹಿದನನಿಲಜನ ನಲ
ವಿಂದಲೈ ತಂದಂಘ್ರಿಗೆರಗಿದನೊಲಿದು ಜೈಮಿನಿಗೆ
ತಂದೆ ನೀನಾರೆನಲು ಪವನಜ
ಬಂದ ಕಾರ್ಯವದೇನೆನಲು ತಾ
ಬಂದೆನಗ್ರಜ ಬೆಸನೆ ನಿಮ್ಮಡಿಗೆಂದನಾ ಭೀಮ (ಅರಣ್ಯ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತುಗಳನ್ನು ಆಲಿಸಿದ ಧರ್ಮಜನು ಕೂಡಲೆ ಭೀಮನನ್ನು ಈ ಕಾರ್ಯಕ್ಕೆ ನೇಮಿಸಿದನು. ಭೀಮನು ಜೈಮಿನಿ ಮಹರ್ಷಿಗಳನ್ನು ಶ್ರಾದ್ಧದ ಕಾರ್ಯಕ್ಕೆ ಆಮಂತ್ರಿಸಲು ಕೂಡಲೆ
ಹೊರಟು ಅವರ ಆಶ್ರಮವನ್ನು ತಲುಪಿ ಅವರ ಪಾದಗಳಿಗೆ ನಮಸ್ಕರಿಸಲು, ಜೈಮಿನಿ ಮುನಿಗಳು ಯಾರೆಂದು ಕೇಳಲು, ತಾನು ಭೀಮನೆಂದು ಪರಿಚಯಿಸಿಕೊಂಡನು. ಜೈಮಿನಿಗಳು ಮಾತನ್ನು ಮುಂದುವರಿಸುತ್ತಾ ಬರಲು ಕಾರಣವನ್ನು ಕೇಳಲು, ಭೀಮನು ತಮ್ಮ ಪಾದದರ್ಶನ ಮಾಡಲು ನಮ್ಮ ಅಣ್ಣನು ಹೇಳಿದ್ದರಿಂದ ಇಲ್ಲಿಗೆ ಬಂದೆ ಎಂದು ತಿಳಿಸಿದನು.

ಅರ್ಥ:
ಮಾತು: ನುಡಿ; ಕೇಳು: ಆಲಿಸು; ಕಳುಹಿಸು: ಬೀಳ್ಕೊಡು; ಅನಿಲಜ: ವಾಯುಪುತ್ರ (ಭೀಮ); ನಲ: ನಲಿವು, ಸಂತೋಷ; ಅಂಘ್ರಿ: ಪಾದ; ಎರಗು: ನಮಸ್ಕರಿಸು; ಒಲಿದು: ಪ್ರೀತಿಯಲಿ; ತಂದೆ: ಪಿತ; ಪವನಜ: ವಾಯುಪುತ್ರ (ಭೀಮ); ಬಂದು: ಆಗಮಿಸು; ಕಾರ್ಯ: ಕೆಲಸ; ಅಗ್ರಜ: ಅಣ್ಣ; ಬೆಸಸು: ದಯಮಾಡಿಸು; ನಿಮ್ಮಡಿ: ನಿಮ್ಮ ಚರಣ;

ಪದವಿಂಗಡಣೆ:
ಎಂದ +ಮಾತನು +ಕೇಳಿ +ಧರ್ಮಜನ್
ಅಂದು+ ಕಳುಹಿದನ್+ಅನಿಲಜನ +ನಲ
ವಿಂದಲೈ +ತಂದ್+ಅಂಘ್ರಿಗ್+ಎರಗಿದನ್+ಒಲಿದು +ಜೈಮಿನಿಗೆ
ತಂದೆ +ನೀನಾರ್+ಎನಲು +ಪವನಜ
ಬಂದ +ಕಾರ್ಯವದೇನ್+ಎನಲು+ ತಾ
ಬಂದೆನ್+ಅಗ್ರಜ+ ಬೆಸನೆ+ ನಿಮ್ಮಡಿಗ್+ಎಂದನಾ +ಭೀಮ

ಅಚ್ಚರಿ:
(೧) ಅನಿಲಜ, ಪವನಜ, ಭೀಮ – ಸಮನಾರ್ಥಕ ಪದಗಳು
(೨) ಬಂದ ಕಾರ್ಯವನ್ನು ಭೀಮನು ಹೇಳುವ ಪರಿ – ತಾ ಬಂದೆನಗ್ರಜ ಬೆಸನೆ ನಿಮ್ಮಡಿಗೆಂದನಾ ಭೀಮ

ಪದ್ಯ ೩: ಜೈಮಿನಿ ಮುನಿಗಳ ಆಶ್ರಮ ಎಲ್ಲಿತ್ತು?

ಕೇಳಿ ಧರ್ಮಜ ಕ್ಷಣವನಿತ್ತನು
ಮೇಲೆ ನಾಲ್ವರಿಗಲ್ಲಿ ಜೈಮಿನಿ
ಯಾಲಯವ ನಾವರಿಯೆವೆಂದೆನೆ ಕೃಷ್ಣ ನಸುನಗುತ
ಲೋಲಮುನಿಯಾಶ್ರಮವು ಹಿಮಗಿರಿ
ಶೈಲದೊತ್ತಿನಲಿರುವುದಲ್ಲಿಗೆ
ನೀಲಗಿರಿಯೆಂಬೊಂದು ನಗವಿದೆ ದಿವ್ಯವನದಲ್ಲಿ (ಅರಣ್ಯ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಕೃಷ್ಣನು ಧರ್ಮಜನಿಗೆ ಹೇಳಿದೊಡನೆಯೇ, ಧರ್ಮಜನು ಅಲ್ಲಿಯೇ ನೆರೆದಿದ್ದ ದುರ್ವಾಸ, ಧೌಮ್ಯ, ವ್ಯಾಸ, ಕೌಶಿಕ ಮಹರ್ಷಿಗಳನ್ನು ಆಹ್ವಾನಿಸಿದನು. ಬಳಿಕ ಜೈಮಿನಿ ಮುನಿಗಳು ಎಲ್ಲಿರುವರೋ ತಿಳಿಯದು ಎಂದು ಹೇಳಿದಾಗ, ಕೃಷ್ಣನು ನಸುನಕ್ಕು, ಹಿಮಾಚಲ ಪರ್ವತದ ಪಕ್ಕದಲ್ಲಿ ನೀಲಗಿರಿಯೆಂಬ ಪರ್ವತವಿದೆ, ಅಲ್ಲಿರುವ ದಿವ್ಯವಾದ ವನದಲ್ಲಿ ಜೈಮಿನಿಗಳ ಆಶ್ರಮವಿದೆ ಎಂದು ತಿಳಿಸಿದನು.

ಅರ್ಥ:
ಕೇಳು: ಆಲಿಸು; ಕ್ಷಣ: ಕಾಲದ ಪರಿಮಾಣ; ಮೇಲೆ: ನಂತರ; ಆಲಯ: ಮನೆ; ಅರಿ: ತಿಳಿ; ನಗು: ಸಂತಸ; ಲೋಲ: ಪ್ರೀತಿ, ಅಕ್ಕರೆ, ತಲ್ಲೀನನಾದವನು, ಆಸಕ್ತ; ಮುನಿ: ಋಷಿ; ಆಶ್ರಮ: ಋಷಿಮುನಿಗಳ ಕುಟೀರ; ಹಿಮಗಿರಿ: ಹಿಮಾಲಯ; ಗಿರಿ: ಬೆಟ್ಟ; ಶೈಲ: ಬೆಟ್ಟ; ಒತ್ತು: ಹತ್ತಿರ; ನಗ: ಬೆಟ್ಟ; ದಿವ್ಯ: ಶ್ರೇಷ್ಠ; ವನ: ಕಾಡು;

ಪದವಿಂಗಡಣೆ:
ಕೇಳಿ +ಧರ್ಮಜ +ಕ್ಷಣವನ್+ಇತ್ತನು
ಮೇಲೆ +ನಾಲ್ವರಿಗ್+ಅಲ್ಲಿ+ ಜೈಮಿನಿ
ಆಲಯವ +ನಾವ್+ಅರಿಯೆವ್+ಎಂದೆನೆ +ಕೃಷ್ಣ +ನಸುನಗುತ
ಲೋಲಮುನಿ+ಆಶ್ರಮವು +ಹಿಮಗಿರಿ
ಶೈಲದ್+ಒತ್ತಿನಲ್+ಇರುವುದ್+ಅಲ್ಲಿಗೆ
ನೀಲಗಿರಿಯೆಂಬ್+ಒಂದು +ನಗವಿದೆ+ ದಿವ್ಯ+ವನದಲ್ಲಿ

ಅಚ್ಚರಿ:
(೧) ಜೈಮಿನಿ ಮುನಿಗಳನ್ನು ಲೋಲಮುನಿ ಎಂದು ಕರೆದಿರುವುದು
(೨) ಗಿರಿ, ಶೈಲ, ನಗ – ಸಮನಾರ್ಥಕ ಪದ

ಪದ್ಯ ೨: ಶ್ರೀಕೃಷ್ಣನು ಯಾರನ್ನು ಯಾವ ಸ್ಥಾನಕ್ಕೆ ನೇಮಿಸಲು ಹೇಳಿದನು?

ಮಾಡು ವಿಶ್ವೇದೇವರಿಬ್ಬರ
ರೂಢರೀ ದೂರ್ವಾಸಧೌಮ್ಯರ
ನೋಡಿ ಮಾಡೈ ಮುಖ್ಯಕ್ಷಣದಲಿ ವ್ಯಾಸಕೌಶಿಕರ
ಮಾಡು ಪ್ರಪಿತಾಮಹರ ಠಾವಿಗೆ
ಬೇಡಿಕೊಳ್ ಜೈಮಿನಿಯನತಿಥಿಗೆ
ಮಾಡು ನಮ್ಮನು ಶ್ರಾದ್ಧರಕ್ಷೆಗೆ ಭೂಪ ಕೇಳೆಂದ (ಅರಣ್ಯ ಪರ್ವ, ೩ ಸಂಧಿ, ೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಯುಧಿಷ್ಠಿರನಿಗೆ ಶ್ರಾದ್ಧದ ಕಾರ್ಯಕ್ಕೆ ಯಾರನ್ನು ಆಹ್ವಾನಿಸಲು ತಿಳಿಸಿದನು. ದೂರ್ವಾಸರು ಮತ್ತು ಧೌಮ್ಯರನ್ನು ವಿಶ್ವೇದೇವ ಸ್ಥಾನಕ್ಕೆ ಬೇಡಿಕೊಳ್ಳಲು, ವ್ಯಾಸ ಮತ್ತು ಕೌಶಿಕರನ್ನು ಪಿತೃ, ಪಿತಾಮಹ ಸ್ಥಾನಕ್ಕೆ, ಪ್ರಪಿತಾಮಹಸ್ಥಾನಕ್ಕೆ ಜೈಮಿನಿ ಮುನಿಗಳನ್ನು ಬೇಡಿಕೋ, ಹಾಗು ನನ್ನನ್ನು ವಿಷ್ಣು ಸ್ಥಾನಕ್ಕೆ ಕರೆ ಎಂದು ಕೃಷ್ಣನು ತಿಳಿಸಿದನು.

ಅರ್ಥ:
ಮಾಡು: ನೆರವೇರಿಸು; ರೂಢ: ಬಳಕೆಯಲ್ಲಿರುವ; ನೋಡು: ವೀಕ್ಷಿಸು; ಮುಖ್ಯ: ಪ್ರಮುಖ; ಪ್ರಪಿತಾಮಹ: ಅಜ್ಜನ ತಂದೆ, ಮುತ್ತಾತ; ಠಾವು: ಸ್ಥಳ; ಬೇಡು: ಕೇಳು; ಅತಿಥಿ: ಆಮಂತ್ರಣವನ್ನು ವಿಲ್ಲದ ಬರುವ ವ್ಯಕ್ತಿ; ರಕ್ಷೆ: ಕಾಪು, ಕಾಯುವಿಕೆ; ಭೂಪ: ರಾಜ;

ಪದವಿಂಗಡಣೆ:
ಮಾಡು +ವಿಶ್ವೇದೇವರ್+ಇಬ್ಬರ
ರೂಢರ್+ಈ+ ದೂರ್ವಾಸ+ಧೌಮ್ಯರ
ನೋಡಿ ಮಾಡೈ ಮುಖ್ಯ+ಕ್ಷಣದಲಿ+ ವ್ಯಾಸ+ಕೌಶಿಕರ
ಮಾಡು +ಪ್ರಪಿತಾಮಹರ+ ಠಾವಿಗೆ
ಬೇಡಿಕೊಳ್+ ಜೈಮಿನಿಯನ್+ಅತಿಥಿಗೆ
ಮಾಡು +ನಮ್ಮನು +ಶ್ರಾದ್ಧರಕ್ಷೆಗೆ+ ಭೂಪ +ಕೇಳೆಂದ

ಅಚ್ಚರಿ:
(೧) ಮುನಿಗಳ ಹೆಸರನ್ನು ಹೇಳಿರುವ ಪರಿ – ದೂರ್ವಾಸ, ಧೌಮ್ಯ, ವ್ಯಾಸ, ಕೌಶಿಕ, ಜೈಮಿನಿ

ಪದ್ಯ ೪೩: ಯಾರನ್ನು ಹೊಗಳಲು ಶಿಶುಪಾಲನು ಭೀಷ್ಮರಿಗೆ ಹೇಳಿದನು?

ಪರಗುಣ ಸ್ತುತಿ ನಿಂದೆಗಳು ಹಿರಿ
ಯರಿಗೆ ಸಾಮ್ಯವೆ ನಿನ್ನ ಜಿಹ್ವೆಗೆ
ವರಗುಣಸ್ತವದಿಂದ ಮೇಲ್ಕಂಡೂತಿ ಹರವಹರೆ
ಹಿರಿಯರಿದೆಲಾ ಕಣ್ವ ಪೌಲಾಂ
ಗಿರಸ ಜೈಮಿನಿ ಯಾಜ್ಞವಲ್ಕ್ಯರು
ವರಸುಪೈಕದೊಳಧಿಕರಿದೆಲಾ ಭೀಷ್ಮ ಕೇಳೆಂದ (ಸಭಾ ಪರ್ವ, ೧೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪರರಗುಣಗಳನ್ನು ಹೊಗಳುವುದೂ ನಿಂದಿಸುವುದೂ ಹಿರಿಯರಿಗೆ ಒಂದೇ ಆದೀತೇ? ಇನ್ನೊಬ್ಬರನ್ನು ಹೊಗಳುವುದರಿಂದ ನಿನ್ನ ನಾಲಿಗೆಯ ತೀಟೆ ತೀರುವ ಹಾಗಿದ್ದರೆ, ಕಣ್ವ, ಪುಲಸ್ತ್ಯ, ಅಂಗೀರಸ, ಜೈಮಿನಿ, ಯಾಜ್ಞವಲ್ಕ್ಯ ಮೊದಲಾದ ಹಿರಿಯ ಋಷಿ ಸಮೂಹದಲ್ಲಿ ಹೆಚ್ಚಿನವರಿರಲಿಲ್ಲವೇ ಎಂದು ಶಿಶುಪಾಲನು ಭೀಷ್ಮರನ್ನು ಕೇಳಿದನು.

ಅರ್ಥ:
ಪರ: ಬೇರೆ; ಗುಣ: ನಡತೆ, ಸ್ವಭಾವ; ಸ್ತುತಿ: ಹೊಗಳಿಕೆ; ನಿಂದೆ: ಬಯ್ಗುಳಗಳು; ಹಿರಿ: ದೊಡ್ಡವ; ಸಾಮ್ಯ: ಸಮಾನ, ಸರಿಸಮ; ಜಿಹ್ವೆ: ನಾಲಗೆ; ವರ: ಶ್ರೇಷ್ಠ; ಸ್ತವ: ಸ್ತುತಿಸುವುದು, ಕೊಂಡಾಡುವುದು; ಹರವಸ: ಪರವಶ; ಅಧಿಕ: ಹೆಚ್ಚು; ಪೈಕ: ಗುಂಪು; ಕೇಳು: ಆಲಿಸು;

ಪದವಿಂಗಡಣೆ:
ಪರಗುಣ +ಸ್ತುತಿ +ನಿಂದೆಗಳು +ಹಿರಿ
ಯರಿಗೆ +ಸಾಮ್ಯವೆ +ನಿನ್ನ +ಜಿಹ್ವೆಗೆ
ವರಗುಣಸ್ತವದಿಂದ+ ಮೇಲ್ಕಂಡೂತಿ +ಹರವಹರೆ
ಹಿರಿಯರಿದೆಲಾ +ಕಣ್ವ+ ಪೌಲ
ಅಂಗಿರಸ+ ಜೈಮಿನಿ +ಯಾಜ್ಞವಲ್ಕ್ಯರು
ವರ+ಸುಪೈಕದೊಳ್+ಅಧಿಕರಿದೆಲಾ +ಭೀಷ್ಮ +ಕೇಳೆಂದ

ಅಚ್ಚರಿ:
(೧) ಋಷಿಗಳನ್ನು ಹೆಸರಿಸಿರುವ ಪದ್ಯ – ಕಣ್ವ, ಪುಲಸ್ತ್ಯ, ಅಂಗೀರಸ, ಜೈಮಿನಿ, ಯಾಜ್ಞವಲ್ಕ್ಯ

ಪದ್ಯ ೮: ಯಾವ ಮುನಿಗಳು ಯಾಗಕ್ಕೆ ಆಗಮಿಸಿದರು?

ಜನಪ ಕೇಳೀಚೆಯಲಿ ಬಂದುದು
ಮುನಿಗಳಾಂಗಿರ ಕಣ್ವ ಭೃಗು ಜೈ
ಮಿನಿ ಸುಮಂತ ವಸಿಷ್ಠ ಶೌನಕ ಗಾರ್ಗ್ಯ ಬೃಹದಶ್ವ
ಸನಕ ಶುಕ ಜಾಬಾಲಿ ತಿತ್ತಿರಿ
ವಿನುತ ಮಾರ್ಕಂಡೇಯ ಮುದ್ಗಲ
ತನಯ ರೋಮಶರೈಭ್ಯವತ್ಸನು ಶೈಬ್ಯ ನಾರದರು (ಸಭಾ ಪರ್ವ, ೮ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ರಾಜಸೂಯ ಯಾಗಕ್ಕೆ ರಾಜರಲ್ಲದೆ ಶ್ರೇಷ್ಠ ಮುನಿವರ್ಗವು ಆಗಮಿಸಿದರು. ಅಂಗಿರಸ, ಕಣ್ವ, ಭೃಗು, ಜೈಮಿನಿ, ಸುಮಂತ, ವಸಿಷ್ಠ, ಶೌನಕ, ಗಾರ್ಗ್ಯ, ಬೃಹದಶ್ವ, ಸನಕ, ಶುಕ, ಜಾಬಾಲಿ, ತಿತ್ತಿರಿ, ಮಾರ್ಕಂಡೇಯ, ಮೌದ್ಗಲ್ಯ, ರೋಮಶ, ರೈಭ್ಯ, ಶ್ರೀವತ್ಸ, ಶೈಬ್ಯ, ನಾರದರೇ ಮೊದಲಾದ ಋಷಿಗ್ತಳು ಆಗಮಿಸಿದರು.

ಅರ್ಥ:
ಜನಪ: ರಾಜ (ಇಲ್ಲಿ ಜನಮೇಜಯ); ಕೇಳು: ಆಲಿಸು; ಈಚೆಯಲಿ: ಇತ್ತಕಡೆ; ಬಂದುದು: ಆಗಮಿಸಿದರು; ಮುನಿ: ಋಷಿ; ತನಯ: ಮಗ;

ಪದವಿಂಗಡಣೆ:
ಜನಪ +ಕೇಳ್+ಈಚೆಯಲಿ +ಬಂದುದು
ಮುನಿಗಳ್+ಆಂಗಿರ+ ಕಣ್ವ+ ಭೃಗು +ಜೈ
ಮಿನಿ +ಸುಮಂತ +ವಸಿಷ್ಠ +ಶೌನಕ+ ಗಾರ್ಗ್ಯ +ಬೃಹದಶ್ವ
ಸನಕ+ ಶುಕ +ಜಾಬಾಲಿ +ತಿತ್ತಿರಿ
ವಿನುತ +ಮಾರ್ಕಂಡೇಯ +ಮುದ್ಗಲ
ತನಯ +ರೋಮಶ+ರೈಭ್ಯ+ವತ್ಸನು+ ಶೈಬ್ಯ+ ನಾರದರು

ಅಚ್ಚರಿ:
(೧) ೨೦ ಋಷಿಗಳ ಹೆಸರನ್ನು ಹೊಂದಿರುವ ಪದ್ಯ