ಪದ್ಯ ೧೮: ಸರ್ಪಾಸ್ತ್ರವು ಹೇಗೆ ಮುನ್ನುಗ್ಗಿತು?

ಏನಹೇಳುವೆ ಬಳಿಕ ಭುವನ
ಗ್ಲಾನಿಯನು ತೆಗೆದೊಡಿದರು ವೈ
ಮಾನಿಕರು ವೆಂಠಣಿಸಿತುರಿಯಪ್ಪಳಿಸಿತಂಬರವ
ಕಾನಿಡುವ ಕಬ್ಬೊಗೆಯ ಚೂರಿಸು
ವಾನನದ ಕಟವಾಯ ಲೋಳೆಯ
ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ (ಕರ್ಣ ಪರ್ವ, ೨೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕರ್ಣನು ಸರ್ಪಾಸ್ತ್ರವನ್ನು ಬಿಟ್ಟ ನಂತರ ಲೋಕದ ಕ್ಷೋಭೆಯನ್ನು ಏನೆಂದು ಹೇಳಲಿ? ದೇವತೆಗಳು ಆಕಾಶದಲ್ಲಿ ದೂರಕ್ಕೋಡಿದರು, ಅಸ್ತ್ರಾ ಉರಿಯು ಎಲ್ಲಾ ದಿಕ್ಕುಗಳನ್ನ್ನು ಆವರಿಸಿತು, ಹೇಡೆಯನ್ನು ಚಾಚಿ ಜೇನಿನ ಗೂಡಿನಿಂದ ಜಿನುಗುವ ಜೇನುತುಪ್ಪದಂತೆ ಸರ್ಪಾಸ್ತ್ರವು ವಿಷವನ್ನು ಸುರಿಸುತ್ತಾ ಮುನ್ನುಗ್ಗಿತು.

ಅರ್ಥ:
ಬಳಿಕ: ನಂತರ; ಭುವನ: ಜಗತ್ತು; ಗ್ಲಾನಿ: ಅವನತಿ, ನಾಶ; ಓಡು: ಪಲಾಯನ; ವೈಮಾನಿಕ: ದೇವತೆ; ವಂಠಣ: ಮುತ್ತಿಗೆಹಾಕು, ಸುತ್ತುವರಿ; ಉರಿ: ಬೆಂಕಿಯ ಕಿಡಿ; ಅಪ್ಪಳಿಸು: ತಟ್ಟು, ತಾಗು; ಅಂಬರ: ಆಗಸ; ಕಾನಿಡು: ದಟ್ಟವಾಗು, ಸಾಂದ್ರವಾಗು; ಕಬ್ಬೊಗೆ: ಕರಿಯಾದ ಹೊಗೆ; ಚೂರಿಸು: ಕತ್ತರಿಸು; ಆನನ: ಮುಖ; ಕಟವಾಯಿ: ಬಾಯಿ ಕೊನೆ; ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಜೇನು: ದುಂಬಿ; ಹುಟ್ಟಿ: ಜೇನಿನ ಗೂಡು; ಬಸಿ:ಜಿನುಗು ; ವಿಷ: ನಂಜು; ಉರಗಾಸ್ತ್ರ: ಸರ್ಪಾಸ್ತ್ರ;

ಪದವಿಂಗಡಣೆ:
ಏನಹೇಳುವೆ+ ಬಳಿಕ+ ಭುವನ
ಗ್ಲಾನಿಯನು +ತೆಗೆದ್+ಓಡಿದರು +ವೈ
ಮಾನಿಕರು+ ವೆಂಠಣಿಸಿತ್+ಉರಿ +ಅಪ್ಪಳಿಸಿತ್+ಅಂಬರವ
ಕಾನಿಡುವ +ಕಬ್ಬೊಗೆಯ +ಚೂರಿಸುವ್
ಆನನದ +ಕಟವಾಯ +ಲೋಳೆಯ
ಜೇನಹುಟ್ಟಿಯ +ಬಸಿವ+ ವಿಷದಲಿ+ ಬಂದುದ್+ಉರಗಾಸ್ತ್ರ

ಅಚ್ಚರಿ:
(೧) ವಿಷವು ಹೊರಹೊಮ್ಮುತ್ತಿತ್ತು ಎಂದು ಹೇಳಲು ಜೇನಿನ ಉಪಮಾನವನ್ನು ಬಳಸಿದ ಪರಿ
(೨) ಉಪಮಾನದ ಪ್ರಯೋಗ – ಕಾನಿಡುವ ಕಬ್ಬೊಗೆಯ ಚೂರಿಸುವಾನನದ ಕಟವಾಯ ಲೋಳೆಯ ಜೇನಹುಟ್ಟಿಯ ಬಸಿವ ವಿಷದಲಿ ಬಂದುದುರಗಾಸ್ತ್ರ
(೩) ದೇವತೆಗಳನ್ನು ವೈಮಾನಿಕರು ಎಂದು ಕರೆದಿರುವುದು