ಪದ್ಯ ೨೬: ಕ್ಷಮೆಗೆ ಮಿತಿಯೆಂಬು ಇರಬೇಕೆ?

ನೀರು ಹೊರಗಿಕ್ಕುವುದು ಮೂರೇ
ಬಾರಿ ಬಳಿಕದು ಪಾಪಿ ಝಾಡಿಸೆ
ಸೈರಿಸದು ಅನ್ಯಾಯ ಬಹುಳತೆಗೇನ ಮಾಡುವೆನು
ಸೈರಣೆಗೆ ತಾನವಧಿಯಿಲ್ಲಾ
ಪೌರುಷದ ಬಗೆ ಬಂಜೆಯಾಯಿತು
ಆರಯಿಕೆಯಲಿ ಜುಣುಗಿ ಜಾರುವಿರೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕ್ಷಮೆಗೂ ಒಂದು ಮಿತಿ ಇದೆ. ತನ್ನಲ್ಲಿ ಮುಳುಗಿದವನನ್ನು ನೀರು ಮೂರು ಬಾರಿ ಮಾತ್ರ ಮೇಲಕ್ಕೆತ್ತುತ್ತದೆ. ನಾಲ್ಕನೆಯ ಬಾರಿ ಝಾಡಿಸಿದರೆ ಮುಳುಗಿಸಿಯೇ ಬಿಡುತ್ತದೆ. ಅನ್ಯಾಯ ಮಿತಿಮೀರಿರುವ ಈಗ ನಾನೇನು ಮಾಡಲಿ, ಸೈರಣೆಗೂ ಒಂದು ಮಿತಿಯಿಲ್ಲವೇ? ಪೌರುಷವು ಬಂಜೆಯಾಯಿತೆ? ನ್ಯಾಯ ವಿಮರ್ಶೆಯಲ್ಲಿ ಮೆಲ್ಲನೆ ಜಾರಿಕೊಂಡು ಹೋಗುತ್ತಿರುವಿರಿ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ನೀರು: ಜಲ; ಹೊರಗೆ: ಆಚೆ; ಬಾರಿ: ಸರದಿ; ಬಳಿಕ: ನಂತರ; ಪಾಪಿ: ದುಷ್ಟ; ಝಾಡಿಸು: ಜೋರಾಗಿ ತಳ್ಳು; ಸೈರಿಸು: ತಾಳ್ಮೆ; ಅನ್ಯಾಯ: ಸರಿಯಲ್ಲದ; ಬಹುಳತೆ: ಹೆಚ್ಚು; ಅವಧಿ: ಕಾಲ; ಪೌರುಷ: ವೀರತನ; ಬಗೆ: ರೀತಿ; ಬಂಜೆ: ಮಕ್ಕಳಿಲ್ಲದ ಸ್ಥಿತಿ; ಆರಯಿಕೆ: ನೋಡಿಕೊಳ್ಳು; ಜುಣುಗು: ಜಾರಿಕೊಳು; ಜಾರು: ಕೆಳಗೆ ಬೀಳು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ನೀರು +ಹೊರಗಿಕ್ಕುವುದು +ಮೂರೇ
ಬಾರಿ +ಬಳಿಕದು +ಪಾಪಿ +ಝಾಡಿಸೆ
ಸೈರಿಸದು+ ಅನ್ಯಾಯ +ಬಹುಳತೆಗೇನ+ ಮಾಡುವೆನು
ಸೈರಣೆಗೆ+ ತಾನ್+ಅವಧಿಯಿಲ್ಲಾ
ಪೌರುಷದ+ ಬಗೆ +ಬಂಜೆಯಾಯಿತು
ಆರಯಿಕೆಯಲಿ +ಜುಣುಗಿ +ಜಾರುವಿರೆಂದಳ್+ಇಂದುಮುಖಿ

ಅಚ್ಚರಿ:
(೧) ಲೋಕದ ನುಡಿ – ನೀರು ಹೊರಗಿಕ್ಕುವುದು ಮೂರೇಬಾರಿ ಬಳಿಕದು ಪಾಪಿ ಝಾಡಿಸೆ ಸೈರಿಸದು
(೨) ಪೌರುಷವು ಕಡಿಮೆಯಾಯಿತೆ ಎಂದು ಹೇಳಲು – ಪೌರುಷದ ಬಗೆ ಬಂಜೆಯಾಯಿತು

ಪದ್ಯ ೫೬: ಧರ್ಮರಾಯನ ಸ್ಥಿತಿ ಹೇಗಿತ್ತು?

ಹಣುಗಿತರಸನ ವದನ ತಾಳಿಗೆ
ಯೊಣಗಿತವನಿಗೆ ನಟ್ಟದಿಟ್ಟಿಯ
ಮಣಿದ ನೆನಹಿನ ಮುರಿದ ಮಹಿಮೆಯ ತಾಗಿದಪದೆಸೆಯ
ಜುಣುಗಿದುಬ್ಬಿನ ಸತ್ಯದಲಿ ಕೇ
ವಣಿಸಿದರಿವಿನ ವಿಕೃತ ಕರ್ಮದ
ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ (ಸಭಾ ಪರ್ವ, ೧೭ ಸಂಧಿ, ೫೬ ಪದ್ಯ)

ತಾತ್ಪರ್ಯ:
ಧರ್ಮರಾಯನ ಮುಖವು ಬಾಡಿತು, ಗಂಟಲು ಒಣಗಿತು, ದೃಷ್ಟಿಯು ಭೂಮಿಯ ಕಡೆಗೇ ಇತ್ತು. ಅವನ ಆಲೋಚನೆ ತಲೆಕೆಳಗಾಗಿತ್ತು. ಅವನ ಹಿರಿಮೆಯು ಮುರಿದು ಬಿದ್ದಿತ್ತು. ದುರ್ದೆಸೆಯು ಆವರಿಸಿತ್ತು. ಉತ್ಸಾಹವು ಜಾರಿಹೋಗಿತ್ತು. ಸತ್ಯಪಾಲನೆಯಲ್ಲಿಯೇ ನಟ್ಟ ಮನಸ್ಸಿನ ಪಾಪಕರ್ಮದ ಕುಣಿಕೆಗೆ ಸಿಕ್ಕು ಅತ್ತಿತ್ತ ಓಲಾಡುತ್ತಿದ್ದ ಅವನು ದುಃಖವನ್ನು ಹೊತ್ತು ಕುಳಿತಿದ್ದನು.

ಅರ್ಥ:
ಹಣುಗು: ಹಿಂಜರಿ, ಹೊಂಚು; ಅರಸ: ರಾಜ; ವದನ: ಮುಖ; ತಾಳಿಗೆ: ಗಂಟಲು; ಒಣಗು: ಬಾಡು, ನೀರಿಲ್ಲದ ಸ್ಥಿತಿ; ನಟ್ಟ: ನಡು, ಒಳಹೊಕು; ದಿಟ್ಟಿ: ಲಕ್ಷ್ಯ, ಗಮನ, ಕಣ್ಣು; ಮಣಿ: ಬಾಗು; ನೆನಹು: ಯೋಚನೆ; ಮುರಿ: ಸೀಳು; ಮಹಿಮೆ: ಹಿರಿಮೆ; ತಾಗು: ಸೋಕು; ಅಪದೆಸೆ: ದುರ್ದಸೆ; ಜುಣುಗು: ನುಣುಚಿಕೊಳ್ಳುವಿಕೆ, ಜಾರಿಕೊಳು; ಉಬ್ಬು: ಹಿಗ್ಗು; ಸತ್ಯ: ನಿಜ, ದಿಟ; ಕೇವಣಿ: ಮೆಟ್ಟುವುದು; ಅರಿವು: ತಿಳಿವು; ವಿಕೃತ: ಮನಸ್ಸಿನ ವಿಕಾರ, ವಿಚಿತ್ರ; ಕರ್ಮ: ಕಾರ್ಯ; ಕುಣಿಕೆ: ಹಗ್ಗದ ತುದಿಯಲ್ಲಿ ಹಾಕಿದ ಗಂಟು; ಒಲೆ: ತೂಗಾಡು; ಅರಸ: ರಾಜ; ಹೊತ್ತು: ಬೆಂದು ಹೋಗು; ದುಗುಡ: ದುಃಖ;

ಪದವಿಂಗಡಣೆ:
ಹಣುಗಿತ್+ಅರಸನ +ವದನ +ತಾಳಿಗೆ
ಒಣಗಿತ್+ಅವನಿಗೆ +ನಟ್ಟ+ದಿಟ್ಟಿಯ
ಮಣಿದ +ನೆನಹಿನ +ಮುರಿದ+ ಮಹಿಮೆಯ +ತಾಗಿದ್+ಅಪದೆಸೆಯ
ಜುಣುಗಿದ್+ಉಬ್ಬಿನ +ಸತ್ಯದಲಿ+ ಕೇ
ವಣಿಸಿದ್+ಅರಿವಿನ +ವಿಕೃತ +ಕರ್ಮದ
ಕುಣಿಕೆಗ್+ಒಲೆದೊಲೆದ್+ಅರಸನಿದ್ದನು +ಹೊತ್ತ +ದುಗುಡದಲಿ

ಅಚ್ಚರಿ:
(೧) ಧರ್ಮರಾಯನ ಸ್ಥಿತಿ – ಕೇವಣಿಸಿದರಿವಿನ ವಿಕೃತ ಕರ್ಮದ ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ