ಪದ್ಯ ೩೫: ಕೌರವನು ಭೀಮನ ಮೇಲೆ ಹೇಗೆ ಆಕ್ರಮಣ ಮಾಡಿದನು?

ಅವನಿಪತಿ ಕೇಳ್ ಭೀಮಸೇನನ
ತಿವಿಗುಳನು ತಪ್ಪಿಸಿ ಸುಯೋಧನ
ಕವಿದು ನಾಭಿಗೆ ತೋರಿ ಜಂಘೆಗೆ ಹೂಡಿ ಝಳಪದಲಿ
ಲವಣಿಯಲಿ ಲಳಿಯೆದ್ದು ಹೊಯ್ದನು
ಪವನಜನ ಭುಜಶಿರವ ಸೀಸಕ
ಕವಚವಜಿಗಿಜಿಯಾಗೆ ಬೀಳೆನುತರಸ ಬೊಬ್ಬಿರಿದ (ಗದಾ ಪರ್ವ, ೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಭೀಮನ ತಿವಿತವನ್ನು ತಪ್ಪಿಸಿಕೊಂಡು ಕೌರಾನು ನಾಭಿಗೆ ಗುರಿಯಿಟ್ಟು ಜಂಘೆಗೆ ಹೂಡಿ, ಮೇಲೆ ಹಾರಿ ಭೀಮನ ತಲೆ, ಭುಜಗಳಿದ್ದ ಸೀಸಕ, ಕವಚಗಳನ್ನು ಪುಡಿಪುಡಿಯಾಗುವಂತೆ ಹೊಡೆದು ಗರ್ಜಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳ್: ಆಲಿಸು; ತಿವಿ: ಚುಚ್ಚು; ತಪ್ಪಿಸು: ಸುಳ್ಳಾಗು; ಕವಿ: ಆವರಿಸು; ನಾಭಿ: ಹೊಕ್ಕಳು; ತೋರು: ಪ್ರಕಟಿಸು; ಜಂಘೆ: ತೊಡೆ; ಝಳಪ: ವೇಗ; ಲವಣಿ: ಕಾಂತಿ; ಲಳಿ: ರಭಸ; ಎದ್ದು: ಮೇಲೆ ಬಂದು; ಹೊಯ್ದು: ಹೊಡೆ; ಪವನಜ: ಭೀಮ; ಭುಜ: ಬಾಹು; ಶಿರ: ತಲೆ; ಸೀಸಕ: ಶಿರಸ್ತ್ರಾಣ; ಕವಚ: ಹೊದಿಕೆ; ಜಿಗಿಜಿಯಾಗಿ: ಪುಡಿಯಾಗಿ; ಬೀಳು: ಎರಗು, ಬಾಗು; ಬೊಬ್ಬಿರಿ: ಗರ್ಜಿಸು; ಅರಸ: ರಾಜ;

ಪದವಿಂಗಡಣೆ:
ಅವನಿಪತಿ +ಕೇಳ್ +ಭೀಮಸೇನನ
ತಿವಿಗುಳನು+ ತಪ್ಪಿಸಿ+ ಸುಯೋಧನ
ಕವಿದು +ನಾಭಿಗೆ +ತೋರಿ +ಜಂಘೆಗೆ +ಹೂಡಿ +ಝಳಪದಲಿ
ಲವಣಿಯಲಿ +ಲಳಿಯೆದ್ದು+ ಹೊಯ್ದನು
ಪವನಜನ +ಭುಜ+ಶಿರವ +ಸೀಸಕ
ಕವಚವ+ಜಿಗಿಜಿಯಾಗೆ +ಬೀಳೆನುತ್+ಅರಸ +ಬೊಬ್ಬಿರಿದ

ಅಚ್ಚರಿ:
(೧) ಲ ಕಾರದ ಜೋಡಿ ಪದ – ಲವಣಿಯಲಿ ಲಳಿಯೆದ್ದು
(೨) ಅವನಿಪತಿ, ಅರಸ – ಸಮಾನಾರ್ಥಕ ಪದ

ಪದ್ಯ ೫೫: ಅಭಿಮನ್ಯುವು ಗಾಲಿಯಿಂದ ಹೇಗೆ ಯುದ್ಧ ಮಾಡಿದನು?

ಸುರಿವ ರಕುತದ ಸರಿಯ ಸೆರಗಿನೊ
ಳೊರಸಿ ರಥದಚ್ಚುಗಳನೊದೆದನು
ತಿರುಹಿ ಗಾಲಿಯ ತೆಗೆದು ಮುಂಗೈಗೊಂಡು ನಡೆನಡೆದು
ಅರಿಬಲವನಿಡೆ ಮುಗ್ಗಿ ಕೆಡೆದುದು
ತುರಗವಜಿಗಿಜಿಯಾದುದಿಭ ತತಿ
ಯುರುಳಿದವು ಹೊರಳಿದವು ಹೂಣಿಗರಟ್ಟೆ ಸಮರದಲಿ (ದ್ರೋಣ ಪರ್ವ, ೬ ಸಂಧಿ, ೫೫ ಪದ್ಯ)

ತಾತ್ಪರ್ಯ:
ಸುರಿಯುತ್ತಿದ್ದ ರಕ್ತವನ್ನು ಸೆರಗಿನಿಂದ ಒರೆಸಿಕೊಂಡು ಕಾಲಿನಿಂದ ತನ್ನ ರಥದ ಗಾಲಿಗಳನ್ನು ಒದೆದು, ಗಾಲಿಯನ್ನು ಮುಂಗೈಯಲ್ಲಿ ತೆಗೆದುಕೊಂಡು ಶತ್ರುಬಲವನ್ನು ಅಪ್ಪಳಿಸಲು ಆನೆ, ಕುದುರೆ, ಯೋಧರು ಕೆಳಗುರುಳಿ ಹೊರಳಿದರು.

ಅರ್ಥ:
ಸುರಿ: ಬೀಳುವ, ವರ್ಷ; ರಕುತ: ನೆತ್ತರು; ಸರಿ: ಹೋಗು, ಗಮಿಸು; ಸೆರಗು: ಬಟ್ಟೆ; ಒರಸು: ಸಾರಿಸು, ಅಳಿಸು; ರಥ: ಬಂಡಿ; ಅಚ್ಚು: ಚಕ್ರ; ಒದೆ: ತಳ್ಳು; ತಿರುಹಿ: ತಿರುಗಿಸು; ಗಾಲಿ: ಚಕ್ರ; ತೆಗೆ: ಹೊರತರು; ಮುಂಗೈ: ಹಸ್ತ; ಕೈಕೊಂಡು: ಧರಿಸು; ನಡೆ: ಚಲಿಸು; ಅರಿ: ವೈರಿ; ಬಲ: ಸೈನ್ಯ; ಮುಗ್ಗು: ಮುನ್ನುಗ್ಗು; ಕೆಡೆ: ಬೀಳು, ಕುಸಿ; ತುರಗ: ಅಶ್ವ; ಇಭ: ಆನೆ; ತತಿ: ಗುಂಪು; ಉರುಳು: ಬೀಳು; ಹೊರಳು: ತಿರುವು, ಬಾಗು; ಹೂಣಿಗ:ಬಾಣವನ್ನು ಹೂಡುವವನು, ಬಿಲ್ಲುಗಾರ; ಸಮರ: ಯುದ್ಧ; ಅಟ್ಟು: ಓಡಿಸು;

ಪದವಿಂಗಡಣೆ:
ಸುರಿವ +ರಕುತದ +ಸರಿಯ +ಸೆರಗಿನೊಳ್
ಒರಸಿ +ರಥದ್+ಅಚ್ಚುಗಳನ್+ಒದೆದನು
ತಿರುಹಿ +ಗಾಲಿಯ +ತೆಗೆದು +ಮುಂಗೈಗೊಂಡು +ನಡೆನಡೆದು
ಅರಿಬಲವನಿಡೆ +ಮುಗ್ಗಿ +ಕೆಡೆದುದು
ತುರಗವ+ಜಿಗಿಜಿಯಾದುದ್+ಇಭ +ತತಿ
ಉರುಳಿದವು +ಹೊರಳಿದವು +ಹೂಣಿಗರಟ್ಟೆ+ ಸಮರದಲಿ

ಅಚ್ಚರಿ:
(೧) ಅಭಿಮನ್ಯುವಿನ ಶೌರ್ಯದ ಪರಾಕಾಷ್ಟೆ – ರಥದಚ್ಚುಗಳನೊದೆದನು ತಿರುಹಿ ಗಾಲಿಯ ತೆಗೆದು ಮುಂಗೈಗೊಂಡು ನಡೆನಡೆದು
(೨) ಉರುಳಿದವು, ಹೊರಳಿದವು – ಪ್ರಾಸ ಪದಗಳು