ಪದ್ಯ ೨೭: ಯಾರ ಕೂಗು ಆಕಾಶವನ್ನು ವ್ಯಾಪಿಸಿದವು?

ಗಾಯವಡೆದೆಕ್ಕಲನ ರಭಸದ
ಜಾಯಿಲನ ಗಳಗರ್ಜನೆಯ ಪೂ
ರಾಯದೇರಿನ ಕರಡಿ ಕಾಡಾನೆಗಳ ಕಳಕಳದ
ನೋಯಲೊರಲುವ ಶರಭ ಸಿಂಹ ಲು
ಲಾಯ ವೃಕ ಶಾರ್ದೂಲ ಶಶ ಗೋ
ಮಾಯು ಮೊದಲಾದಖಿಳ ಮೃಗರವ ತುಂಬಿತಂಬರವ (ಅರಣ್ಯ ಪರ್ವ, ೧೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಗಾಯಗೊಂಡ ಹಂದಿ, ಬೇಟೆನಾಯಿ, ಆಯುಧಗಳಿಂದ ನೊಂದ ಕರಡಿ, ಕಾಡಾನೆಗಳು, ನೋವಿನಿಂದ ಒರಲುವ ಶರಭ, ಸಿಂಹ, ಕಾಡುಕೋಣ, ತೋಳ, ಹುಲಿ, ಮೊಲ ನರಿಗಳ ಕೂಗುಗಳು ಆಕಾಶವನ್ನೆಲ್ಲಾ ವ್ಯಾಪಿಸಿದವು.

ಅರ್ಥ:
ಗಾಯ: ಪೆಟ್ಟು; ಇಕ್ಕೆಲ: ಎರಡೂ ಕಡೆ; ರಭಸ: ವೇಗ; ಜಾಯಿಲ: ನಾಯಿ; ಗಳ: ಕಂಠ; ಗರ್ಜನೆ: ಜೋರಾದ ಕೂಗು; ಪೂರಾಯ: ಪರಿಪೂರ್ಣ; ಪೂರಾಯದೇರು: ವಿಶೇಷವಾದ ಗಾಯ; ಆನೆ: ಗಜ; ಕಳಕಳ: ಗೊಂದಲ; ನೋವು: ಬೇನೆ; ಒರಲು: ಅರಚು; ಶರಭ: ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ ; ಸಿಂಹ: ಕೇಸರಿ; ಲುಲಾಯ: ಕೋಣ; ವೃಕ: ತೋಳ; ಶಾರ್ದೂಲ: ಹುಲಿ; ಶಶ: ಮೊಲ; ಗೋಮಾಯ: ಜಂಬುಕ, ನರಿ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಮೃಗ: ಪ್ರಾಣಿ; ರವ: ಶಬ್ದ; ತುಂಬು: ಆವರಿಸು; ಅಂಬರ: ಆಗಸ;

ಪದವಿಂಗಡಣೆ:
ಗಾಯವಡೆದ್+ಇಕ್ಕಲನ +ರಭಸದ
ಜಾಯಿಲನ +ಗಳ+ಗರ್ಜನೆಯ +ಪೂ
ರಾಯದೇರಿನ +ಕರಡಿ+ ಕಾಡಾನೆಗಳ+ ಕಳಕಳದ
ನೋಯಲ್+ಒರಲುವ +ಶರಭ +ಸಿಂಹ +ಲು
ಲಾಯ +ವೃಕ +ಶಾರ್ದೂಲ +ಶಶ+ ಗೋ
ಮಾಯು +ಮೊದಲಾದ್+ಅಖಿಳ +ಮೃಗರವ+ ತುಂಬಿತ್+ಅಂಬರವ

ಅಚ್ಚರಿ:
(೧) ಪ್ರಾಣಿಗಳ ಹೆಸರನ್ನು ತಿಳಿಸುವ ಪದ್ಯ – ಜಾಯಿಲ, ಗೋಮಾಯ, ಲುಲಾಯ, ವೃಕ, ಶಾರ್ದೂಲ, ಶಶ, ಸಿಂಹ, ಕರಡಿ, ಕಾಡಾನೆ, ಶರಭ

ಪದ್ಯ ೧೯: ಭೀಮನು ಬೇಟೆಗೆ ಹೇಗೆ ತಯಾರಾದನು?

ಅಂಗಚಿತ್ತವನಿತ್ತನಾ ಶಬ
ರಂಗೆ ಬಲೆಗಳ ತೆಗೆಸಿದನು ಹಸು
ರಂಗಿಯನು ತೊಟ್ಟನು ಚಡಾಳಿಸಿ ಪದದೊಳೆಕ್ಕಡವ
ಸಿಂಗಶರಭವ ನಳವಿಗೊಡಲವ
ರಂಗಳಿಯಲಡುಪಾಯ ಲೌಡಿಯ
ಜಂಗುಳಿಯ ಜೋಡಿಸಿದನಂದು ಜವಾಯ್ಲ ಜಾಯಿಲನ (ಅರಣ್ಯ ಪರ್ವ, ೧೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಬರನ ಮಾತನ್ನು ಕೇಳಿದ ಭೀಮನು ಅವನಿಗೆ ತನ್ನ ಮೈಮೇಲಿದ್ದ ಹಾರವನ್ನು ಉಡುಗೊರೆಯಾಗಿ ನೀಡಿದನು. ನಾನಾ ವಿಧವಾದ ಬಲೆಗಳನ್ನು ತೆಗೆಸಿದನು. ತಾನೇ ಹಸುರು ಬಣ್ಣದ ಅಂಗಿಯನ್ನು ತೊಟ್ಟು, ಪಾದದಲ್ಲಿ ಎಕ್ಕಡವನ್ನು ಮೆಟ್ಟಿದನು. ಸಿಂಹ, ಶರಭಗಳನ್ನೆದುರಿಸಿ ಅವುಗಳ ಬಾಯಿಗೆ ಅಗುಳಿಯನ್ನು ಹಾಕಲು ವೇಗವಾದ ಬೇಟೆ ನಾಯಿಗಳನ್ನು ಜೋಡಿಸಿದನು.

ಅರ್ಥ:
ಅಂಗ: ದೇಹದ ಭಾಗ; ಅಂಗಚಿತ್ತ: ಉಡುಗೊರೆಯಾಗಿ ತನ್ನ ಮೈ ಮೇಲಿನಿಂದ ತೆಗೆದು ಕೊಡುವ ವಸ್ತ್ರ, ಆಭರಣ ಇತ್ಯಾದಿ; ಇತ್ತನು: ನೀಡು; ಶಬರ: ಬೇಡ; ಬಲೆ: ಜಾಲ; ತೆಗೆಸು: ಹೊರತರು; ಅಂಗಿ: ವಸ್ತ್ರ; ತೊಡು: ಧರಿಸು; ಚಡಾಳಿಸು: ಜೋಡಿಸು; ಪದ: ಚರಣ; ಎಕ್ಕಡ: ಚಪ್ಪಲಿ; ಸಿಂಗ: ಸಿಂಹ; ಶರಭ: ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ; ಅಳವಿ: ವಶ; ಅಳಿ: ನಾಶ; ಅಡುಪಾಯ: ಇನ್ನೊಂದು ಉಪಾಯ; ಲೌಡಿ: ಕಬ್ಬಿಣದ ಆಯುಧ; ಜಂಗುಳಿ: ಗುಂಪು; ಜೋಡಿಸು: ಹೊಂದಿಸು; ಜವಾಯ್ಲ: ವೇಗ; ಜಾಯಿಲ: ನಾಯಿ;

ಪದವಿಂಗಡಣೆ:
ಅಂಗಚಿತ್ತವನ್+ಇತ್ತನ್+ಆ+ ಶಬ
ರಂಗೆ +ಬಲೆಗಳ +ತೆಗೆಸಿದನು +ಹಸುರ್
ಅಂಗಿಯನು +ತೊಟ್ಟನು +ಚಡಾಳಿಸಿ +ಪದದೊಳ್+ಎಕ್ಕಡವ
ಸಿಂಗ+ಶರಭವನ್+ಅಳವಿಗೊಡಲ್+ಅವರ್
ಅಂಗಳಿಯಲ್+ಅಡುಪಾಯ +ಲೌಡಿಯ
ಜಂಗುಳಿಯ +ಜೋಡಿಸಿದನ್+ಅಂದು +ಜವಾಯ್ಲ +ಜಾಯಿಲನ

ಅಚ್ಚರಿ:
(೧) ಜ ಕಾರದ ಸಾಲು ಪದ – ಜಂಗುಳಿಯ ಜೋಡಿಸಿದನಂದು ಜವಾಯ್ಲ ಜಾಯಿಲನ