ಪದ್ಯ ೫೩: ಶಾಪದಿಂದ ಒಳಿತಾಗುವುದೆಂದು ಹೇಗೆ ಇಂದ್ರನು ಹೇಳಿದನು?

ಖೋಡಿಯಿಲ್ಲೆಲೆ ಮಗನೆ ಚಿಂತಿಸ
ಬೇಡ ನಿಮ್ಮಜ್ಞಾತದಲಿ ನೆರೆ
ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ
ಕೂಡಿತಿದು ಪುಣ್ಯದಲಿ ಸುರಸತಿ
ಮಾಡಿದಪಕೃತಿ ನಿನ್ನ ಭಾಷೆಯ
ಬೀಡ ಸಲಹಿದುದರಿಯೆ ನೀ ಸಾಹಿತ್ಯನಲ್ಲೆಂದ (ಅರಣ್ಯ ಪರ್ವ, ೯ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ಊರ್ವಶಿಯ ಶಾಪದಿಂದ ನಿನಗಾವ ಹಾನಿಯೂ ಇಲ್ಲ, ನಿಪುಣರಾದ ಶತ್ರುಗಳು ನಿನ್ನನ್ನು ಹುಡುಕುತ್ತಾ ಬಂದಾಗ ಅವರ ದೃಷ್ಟಿ ಬಾಣಗಳಿಂದ ನಪುಂಸಕತನದ ಕವಚವು ನಿನ್ನನ್ನು ಕಾಪಾಡುತ್ತದೆ. ಊರ್ವಶಿಯು ಶಾಪಕೊಟ್ಟದ್ದು ನಿನ್ನ ಪೂರ್ವ ಜನ್ಮದ ಪುಣ್ಯದಿಂದಲೇ ಆಯಿತು. ಅವಳ ಅಪಕಾರ ನಿಮ್ಮ ಪ್ರತಿಜ್ಞೆಯನ್ನುಳಿಸಿಕೊಡುತ್ತದೆ ಎನ್ನುವುದನ್ನು ತಿಳಿಯದವನು ನೀನು ಎಂದು ಇಂದ್ರನು ಅರ್ಜುನನನ್ನು ಸಂತೈಸಿದನು.

ಅರ್ಥ:
ಖೋಡಿ: ದುರುಳತನ; ಮಗ: ಸುತ; ಚಿಂತಿಸು: ಯೋಚಿಸು; ಅಜ್ಞಾತ: ತಿಳಿಯದ; ನೆರೆ: ಗುಂಪು; ಜೋಡು: ಜೊತೆ; ಜಾಣಾಯ್ಲ: ಬುದ್ಧಿವಂತ, ಜಾಣ; ರಿಪು: ವೈರಿ; ಜನ: ಮನುಷ್ಯರ ಗುಂಪು; ದೃಷ್ಟಿ: ನೋಟ; ಶರ: ಬಾಣ; ಹತಿ: ಹೊಡೆತ; ಕೂಡು: ಸೇರು; ಪುಣ್ಯ: ಸದಾಚಾರ; ಸುರಸತಿ: ಅಪ್ಸರೆ; ಅಪಕೃತಿ: ಕೆಟ್ಟ ಕಾರ್ಯ; ಭಾಷೆ: ನುಡಿ; ಬೀಡು: ವಸತಿ; ಸಲಹು: ಕಾಪಾಡು; ಅರಿ: ತಿಳಿ; ಸಾಹಿತ್ಯ: ಸಾಮಗ್ರಿ, ಸಲಕರಣೆ;

ಪದವಿಂಗಡಣೆ:
ಖೋಡಿ+ಇಲ್ಲೆಲೆ +ಮಗನೆ +ಚಿಂತಿಸ
ಬೇಡ +ನಿಮ್ಮ್+ಅಜ್ಞಾತದಲಿ +ನೆರೆ
ಜೋಡಲಾ +ಜಾಣಾಯ್ಲ +ರಿಪುಜನ+ ದೃಷ್ಟಿ +ಶರಹತಿಗೆ
ಕೂಡಿತ್+ಇದು +ಪುಣ್ಯದಲಿ+ ಸುರಸತಿ
ಮಾಡಿದ್+ಅಪಕೃತಿ +ನಿನ್ನ +ಭಾಷೆಯ
ಬೀಡ +ಸಲಹಿದುದ್+ಅರಿಯೆ+ ನೀ +ಸಾಹಿತ್ಯನಲ್ಲೆಂದ

ಅಚ್ಚರಿ:
(೧) ಶಾಪವು ಹೇಗೆ ಉಪಕಾರ ಎಂದು ಹೇಳುವ ಪರಿ – ನಿಮ್ಮಜ್ಞಾತದಲಿ ನೆರೆ ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ
(೨) ಸುರಸತಿ, ಶರಹತಿ – ಪ್ರಾಸ ಪದಗಳು