ಪದ್ಯ ೪: ಅಶ್ವತ್ಥಾಮನು ಹೇಗೆ ಎಚ್ಚರದಿಂದಿದ್ದನು?

ಕುಸಿದು ಜೊಮ್ಮಿನ ಜಾಡ್ಯದಲಿ ಝೊಂ
ಪಿಸಿದರಿಬ್ಬರು ರಾಯಗರುಡಿಯ
ಜಸದ ಜಹಿಯಲಿ ಸ್ವಾಮಿಕಾರ್ಯದ ಹೊತ್ತಹೊರಿಗೆಯಲಿ
ಉಸುರು ಮಿಡುಕದೆ ನಿದ್ರೆ ನೆನಹಿನ
ಮುಸುಕನುಗಿಯದೆಯಿಷ್ಟ ಸಿದ್ಧಿಯ
ವಿಷಮ ಸಮಸಂಧಿಗಳ ಸರಿವಿನೊಳಿರ್ದನಾ ದ್ರೌಣಿ (ಗದಾ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಬಳಲಿಕೆಯಿಂದ ಕೃಪ ಮತ್ತು ಕೃತವರ್ಮರು ಮಲಗಿದರು. ರಾಜರಿಗೆ ಗರುಡಿಯಾಚಾರ್ಯನಾದ, ರಾಜ್ಯಕಾರ್ಯದ ಭಾರವನ್ನು ಹೊತ್ತ ಅಶ್ವತ್ಥಾಮನು ಜೋರಾಗಿ ಉಸಿರಾಡದೆ, ನಿದ್ರೆಗೆ ಅವಕಾಶ ಕೊಡದೆ ತನ್ನ ಇಷ್ಟಸಿದ್ಧಿಯನ್ನು ಸಾಧಿಸುವ ಬಗೆಯೇನೆಂದು ಸಾಧಕ ಬಾಧಕಗಳನ್ನು ಚಿಂತಿಸುತ್ತಾ ಎಚ್ಚರದಿಂದಿದ್ದನು.

ಅರ್ಥ:
ಕುಸಿ: ಕೆಳಕ್ಕೆ ಬೀಳು; ಜೊಮ್ಮು: ನಿದ್ರೆಯ ಆವರಿಸುವ ಸ್ಥಿತಿ; ಜಾಡ್ಯ: ಸೋಮಾರಿತನ; ಝೊಂಪಿಸು: ಮೈಮರೆ, ಎಚ್ಚರ ತಪ್ಪು; ರಾಯ: ರಾಜ; ಗರುಡಿ: ವ್ಯಾಯಾಮ ಶಾಲೆ; ಜಸ: ಯಶಸ್ಸು, ಕೀರ್ತಿ; ಜಹಿ: ಸೋಲಿಸು; ಸ್ವಾಮಿ: ಒಡೆಯ; ಕಾರ್ಯ: ಕೆಲಸ; ಹೊತ್ತು: ಧರಿಸು; ಹೊರಿಗೆ: ಭಾರ; ಉಸುರು: ಶ್ವಾಸ; ಮಿಡುಕು: ಅಲುಗು, ಕದಲು; ನಿದ್ರೆ: ಶಯನ; ನಿನಹು: ಜ್ಞಾಪಕ; ಮುಸುಕ: ಆವರಿಸು; ಉಗಿ: ಹೊರಹಾಕು; ಇಷ್ಟ: ಇಚ್ಛಿಸು, ಆಸೆಪಡು; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ವಿಷಮ: ಕಷ್ಟಕರವಾದುದು; ಸಂಧಿ: ಸೇರಿಕೆ, ಸಂಯೋಗ; ಸರವು: ಜಾಡು, ದಾರಿ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ಕುಸಿದು +ಜೊಮ್ಮಿನ +ಜಾಡ್ಯದಲಿ+ ಝೊಂ
ಪಿಸಿದರ್+ಇಬ್ಬರು +ರಾಯ+ಗರುಡಿಯ
ಜಸದ+ ಜಹಿಯಲಿ+ ಸ್ವಾಮಿ+ಕಾರ್ಯದ+ ಹೊತ್ತ+ಹೊರಿಗೆಯಲಿ
ಉಸುರು +ಮಿಡುಕದೆ +ನಿದ್ರೆ +ನೆನಹಿನ
ಮುಸುಕನ್+ಉಗಿಯದೆ+ಇಷ್ಟ+ ಸಿದ್ಧಿಯ
ವಿಷಮ +ಸಮಸಂಧಿಗಳ+ ಸರಿವಿನೊಳ್+ಇರ್ದನಾ ದ್ರೌಣಿ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದಗಳು – ಜೊಮ್ಮಿನ ಜಾಡ್ಯದಲಿ ಝೊಂಪಿಸಿದರಿಬ್ಬರು
(೨) ಎಚ್ಚರದಿಂದಿರುವ ಸ್ಥಿತಿಯನ್ನು ವರ್ಣಿಸುವ ಪರಿ – ನಿದ್ರೆ ನೆನಹಿನಮುಸುಕನುಗಿಯದೆ

ಪದ್ಯ ೪೯: ಶಬರಪತಿಯು ಭೀಮನಲ್ಲಿ ಏನೆಂದು ಕೇಳಿದನು?

ತಂದ ಮಾಂಸದ ಕಂಬಿಗಳು ಪು
ಳಿಂದರೊಪ್ಪಿಸಿ ಭೀಮಸೇನನ
ಮಂದಿರವ ಸಾರಿದರು ಕಂಡರು ಜನದ ಕಳವಳವ
ಇಂದಿನೀ ಸಂಗ್ರಾಮಜಯದಲಿ
ಬಂದ ಜಾಡ್ಯವಿದೇನು ಬಿನ್ನಹ
ವೆಂದು ಸಲುಗೆ ಶಬರಪತಿ ನುಡಿಸಿದನು ಪವನಜನ (ಗದಾ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಮಾಂಸದ ಕಂಬಿಗಲನ್ನಿಳಿಸಿ ಬೇಟೆಗಾರರು ಭೀಮನ ಮನೆಗೆ ಹೋಗಿ ಜನರು ಕಳವಳಿಸುತ್ತಿದ್ದುದನ್ನು ಕಂಡರು. ಭೀಮನಲ್ಲಿ ಸಲಿಗೆಯಿಂದಿದ್ದ ಶಬರಪತಿಯು ಒಡೆಯ, ನೀವು ಇಂದಿನ ಯುದ್ಧದಲ್ಲಿ ಜಯಶಾಲಿಗಳಾಗಿದ್ದೀರಿ, ಇಂತಹ ಸಂತೋಷದ ಸಮಯದಲ್ಲಿ ಈ ಕಳವಳದ ಜಾಡ್ಯವೇಕೆ ಎಂದು ಕೇಳಿದನು.

ಅರ್ಥ:
ಮಾಂಸ: ಅಡಗು; ಕಂಬಿ: ಲೋಹದ ತಂತಿ; ಪುಳಿಂದ: ಬೇಡ; ಒಪ್ಪಿಸು: ನೀಡು; ಮಂದಿರ: ಮನೆ; ಸಾರು: ಬಳಿ ಸೇರು, ಹತ್ತಿರಕ್ಕೆ ಬರು; ಕಂಡು: ನೋಡು; ಜನ: ಮನುಷ್ಯರ ಗುಂಪು; ಕಳವಳ: ಗೊಂದಲ; ಸಂಗ್ರಾಮ: ಯುದ್ಧ; ಜಯ: ಗೆಲುವು; ಜಾಡ್ಯ: ನಿರುತ್ಸಾಹ; ಬಿನ್ನಹ: ಕೋರಿಕೆ; ಸಲುಗೆ: ಸದರ, ಅತಿ ಪರಿಚಯ; ಶಬರಪತಿ: ಬೇಟೆಗಾರರ ಒಡೆಯ; ನುಡಿಸು: ಮಾತಾದು; ಪವನಜ: ಭೀಮ;

ಪದವಿಂಗಡಣೆ:
ತಂದ +ಮಾಂಸದ +ಕಂಬಿಗಳು +ಪು
ಳಿಂದರ್+ಒಪ್ಪಿಸಿ +ಭೀಮಸೇನನ
ಮಂದಿರವ +ಸಾರಿದರು +ಕಂಡರು +ಜನದ +ಕಳವಳವ
ಇಂದಿನ್+ಈ+ ಸಂಗ್ರಾಮ+ಜಯದಲಿ
ಬಂದ +ಜಾಡ್ಯವಿದೇನು +ಬಿನ್ನಹ
ವೆಂದು +ಸಲುಗೆ +ಶಬರಪತಿ+ ನುಡಿಸಿದನು +ಪವನಜನ

ಅಚ್ಚರಿ:
(೧) ಸಂತೋಷವಾಗಿಲ್ಲ ಎಂದು ಹೇಳುವ ಪರಿ – ಇಂದಿನೀ ಸಂಗ್ರಾಮಜಯದಲಿ ಬಂದ ಜಾಡ್ಯವಿದೇನು

ಪದ್ಯ ೪೦: ಭೀಮನು ರಾಜತೇಜಸ್ಸಿನ ಬಗ್ಗೆ ಏನು ಹೇಳಿದ?

ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇರು ಬಿಕ್ಕೆಯ
ನರಸಿ ತೊಳಲ್ದುದು ಸಾಲದೇ ಹದಿಮೂರು ವತ್ಸರವು
ಉರುಕುಗೊಂಡೊಡೆ ರಾಜತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯಬಿಡಿ ಸಾಕೆಂದನಾ ಭೀಮ (ವಿರಾಟ ಪರ್ವ, ೧೦ ಸಂಧಿ, ೪೦ ಪದ್ಯ)

ತಾತ್ಪರ್ಯ:
ಹದಿಮೂರು ವರ್ಷಗಳ ಕಾಲ ಧರ್ಮವೆಂಬ ಜಾಡ್ಯದಿಂದ ನರಳಿ ಗೆಡ್ಡೆಗೆಣಸು ಬೇರುಗಳನ್ನು ಹುಡುಕುತ್ತಾ ತೊಳಲಿದುದು ಸಾಕಾಗಲಿಲ್ಲವೇ? ಇದನ್ನೇ ಮುಂದುವರಿಸುತ್ತಾ ಹೋದರೆ ನಮ್ಮ ರಾಜ ತೇಜಸ್ಸನ್ನು ನಾವು ಮೆರೆಯುವುದು ಯಾವಾಗ? ನಮ್ಮ ಮನಸ್ಸು ನಿಮಗೆ ತಿಳಿಯುವುದಿಲ್ಲ ನನ್ನ ಕೈಬಿಡಿ ಎಂದು ಭೀಮನು ಹೇಳಿದನು.

ಅರ್ಥ:
ಬರಿ: ವ್ಯರ್ಥವಾದುದು; ಧರ್ಮ: ಧಾರಣ ಮಾಡಿದುದು; ಜಾಡ್ಯ: ನಿರುತ್ಸಾಹ; ಮರೆ: ನೆನಪಿನಿಂದ ದೂರ ಮಾಡು; ವನ: ಕಾದು; ಬೇರು: ಮರ, ಗಿಡಗಳ ಅಡಿಭಾಗ; ಬಿಕ್ಕೆ: ತಿರುಪೆ, ಭಿಕ್ಷೆ; ಅರಸು: ಹುಡುಕು; ತೊಳಲು: ಬವಣೆ, ಸಂಕಟ; ಸಾಲದು: ಸಾಕು; ವತ್ಸರ: ವರ್ಷ; ಉರುಕು: ಭಯ; ತೇಜ: ಪ್ರಕಾಶ; ದಿನ: ದಿವಸ; ಅರಿ: ತಿಳಿ; ಹರಿ: ಚಲಿಸು; ಸಾಕು: ನಿಲ್ಲಿಸು;

ಪದವಿಂಗಡಣೆ:
ಬರಿಯ +ಧರ್ಮದ +ಜಾಡ್ಯದಲಿ +ಮೈ
ಮರೆದು +ವನದಲಿ +ಬೇರು +ಬಿಕ್ಕೆಯನ್
ಅರಸಿ +ತೊಳಲ್ದುದು +ಸಾಲದೇ +ಹದಿಮೂರು +ವತ್ಸರವು
ಉರುಕುಗೊಂಡೊಡೆ+ ರಾಜ+ತೇಜವ
ಮೆರೆವ+ ದಿನವೆಂದ್+ಇಹುದು +ನೀವಿನ್
ಅರಿಯಿರ್+ಎಮ್ಮನು +ಹರಿಯಬಿಡಿ+ ಸಾಕೆಂದನಾ +ಭೀಮ

ಅಚ್ಚರಿ:
(೧) ಪಾಂಡವರು ಪಟ್ಟ ಕಷ್ಟ: ವನದಲಿ ಬೇರು ಬಿಕ್ಕೆಯನರಸಿ ತೊಳಲ್ದುದು ಸಾಲದೇ ಹದಿಮೂರು ವತ್ಸರವು

ಪದ್ಯ ೫೩: ಅರ್ಜುನನ ಮನಸ್ಸಿಗೆ ಯಾವ ಜಾಡ್ಯ ಆವರಿಸಿತೆಂದ್ ಹೇಳಿದನು?

ಏಸು ಬಾಣದೊಳೆಚ್ಚೊಡೆಯು ಹೊರ
ಸೂಸಿದವು ತಾನರಿದುದಿಲ್ಲ ಮ
ಹಾಶರವ ಕಳುಹಿದರೆ ನುಂಗಿದನೊಡನರಿಯೆ ನಾನು
ಆ ಶರಾಸನ ಖಡ್ಗವನು ಕೊಳ
ಲೈಸರೊಳಗೆಚ್ಚೆತ್ತೆನೇ ಹಿಂ
ದೇಸು ಜನ್ಮದ ಜಾಡ್ಯ ಜವನಿಕೆಯೋದುದೆನಗೆಂದ (ಅರಣ್ಯ ಪರ್ವ, ೭ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಷ್ಟು ಬಾಣಗಳನ್ನು ಬಿಟ್ಟರೂ ಅವು ನಾಟದೆ ಹೊರಕ್ಕೆ ಹೋದವು. ಆಗ ನಾನು ತಿಳಿದುಕೊಳ್ಳಲಿಲ್ಲ. ದಿವ್ಯಾಸ್ತ್ರಗಳಿಂದ ಹೊಡೆದರೆ ಅವನ್ನು ನುಂಗಿ ಬಿಟ್ಟ ಆಗಲೂ ನನಗೆ ತಿಳಿಯಲಿಲ್ಲ. ಗಾಂಡೀವ ಧನುಸ್ಸನ್ನೇ ಸೆಳೆದುಕೊಂಡರೂ, ಖಡ್ಗವನ್ನೂ ಸೆಳೆದುಕೊಂಡರೂ ನನಗೆ ಎಚ್ಚರ ಬರೈಲ್ಲ. ಎಷ್ಟು ಜನ್ಮದ ಜಾಡ್ಯವು ನನ್ನ ಮತಿಗೆ ಮುಸುಕು ಹಾಕಿತೋ ಏನೋ ಎಂದು ಅರ್ಜುನನು ಹಲುಬಿದನು.

ಅರ್ಥ:
ಏಸು: ಎಷ್ಟು; ಬಾಣ: ಶರ; ಎಚ್ಚು: ಬಾಣ ಬಿಡು; ಹೊರ: ಆಚೆ; ಸೂಸು: ಎರಚು, ಚಲ್ಲು; ಅರಿ: ತಿಳಿ; ಮಹಾಶರ: ಶ್ರೇಷ್ಠವಾದ ಬಾಣ; ಕಳುಹು: ಹೊರಹಾಕು, ಬಿಡು; ನುಂಗು: ತಿನ್ನು; ಒಡನೆ: ಕೂಡಲೆ; ಅರಿ: ತಿಳಿ; ಶರಾಸನ: ಬಿಲ್ಲು; ಖಡ್ಗ: ಕತ್ತಿ; ಕೊಳಲು: ತೆಗೆದುಕೊ; ಎಚ್ಚರ: ನಿದ್ರೆಯಿಂದ ಏಳುವುದು; ಹಿಂದೆ: ಪೂರ್ವ; ಜನ್ಮ: ಜನನ; ಜಾಡ್ಯ: ಸೋಮಾರಿತನ; ಜವನಿಕೆ: ತೆರೆ, ಪರದೆ;

ಪದವಿಂಗಡಣೆ:
ಏಸು +ಬಾಣದೊಳ್+ಎಚ್ಚೊಡೆಯು +ಹೊರ
ಸೂಸಿದವು +ತಾನ್+ಅರಿದುದಿಲ್ಲ +ಮ
ಹಾಶರವ+ ಕಳುಹಿದರೆ+ ನುಂಗಿದನ್+ಒಡನ್+ಅರಿಯೆ+ ನಾನು
ಆ +ಶರಾಸನ +ಖಡ್ಗವನು+ ಕೊಳಲ್
ಐಸರೊಳಗ್+ಎಚ್ಚೆತ್ತೆನೇ +ಹಿಂದ್
ಏಸು +ಜನ್ಮದ +ಜಾಡ್ಯ +ಜವನಿಕೆಯೋದುದ್+ಎನಗೆಂದ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜನ್ಮದ ಜಾಡ್ಯ ಜವನಿಕೆಯೋದುದೆನಗೆಂದ
(೨) ಎಚ್ಚೊಡೆ, ಎಚ್ಚೆತ್ತು – ಪದಗಳ ಬಳಕೆ
(೩) ಶರಾಸನ – ಬಿಲ್ಲಿಗೆ ಬಳಸಿದ ಪದ

ಪದ್ಯ ೩೩: ಜನರು ಯಾರನ್ನು ಬೈದರು?

ಜನಪತಿಯ ಜಾಡ್ಯವನು ಭೀಮಾ
ರ್ಜುನರ ಸೈರಣೆಗಳನು ದುರ್ಯೋ
ಧನನ ದುಶ್ಚೇಷ್ಟೆಯನು ಶಕುನಿಯ ಸಾರ ಕೃತ್ರಿಮವ
ತನತನಗೆ ಕಂಡರು ಮಹೀಸುರ
ಜನಪ ವೈಶ್ಯ ಚತುರ್ಥರುಕ್ಕಿದ
ಮನದಳಲಿನಲಿ ಬೈದರಚ್ಯುತ ಹರಚತುರ್ಮುಖರ (ಸಭಾ ಪರ್ವ, ೧೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕಪಟ ದ್ಯೂತವನ್ನು ಅಲ್ಲಿ ನರೆದಿದ್ದ ಜನರು ನೋಡಿ ಅತೀವ ದುಃಖ ಪಟ್ಟರು. ಯುಧಿಷ್ಠಿರನ ಮನಸ್ಸಿನ ಮತಿಹೀನತೆಯ ಜಾಡ್ಯವನ್ನೂ, ಭೀಮಾರ್ಜುನರ ಸಹನೆಯನ್ನೂ, ದುರ್ಯೋಧನನ ದುಷ್ಟ ಚೇಷ್ಟೆಗಳನ್ನೂ, ಶಕುನಿಯ ಕೃತ್ರಿಮವನ್ನೂ ಕಂಡ ನಾಲ್ಕು ವರ್ಣದ ಜನರು ಇಂತಹ ಸ್ಥಿತಿಯನ್ನುಂಟುಮಾಡಿದ ತ್ರಿಮೂರ್ತಿಗಳನ್ನು ನಿಂದಿಸಿದರು.

ಅರ್ಥ:
ಜನಪತಿ: ರಾಜ; ಜಾಡ್ಯ: ಸೋಮಾರಿತನ; ಸೈರಣೆ: ಸಹನೆ; ದುಶ್ಚೇಷ್ಟೆ: ಕೆಟ್ಟ ಹವ್ಯಾಸ; ಸಾರ: ಶೌರ್ಯ, ಗುಣ; ಕೃತ್ರಿಮ: ಕಪಟ; ಕಂಡು: ನೋಡಿ; ಮಹೀಸುರ: ಬ್ರಾಹ್ಮಣ; ಮಹೀ: ಭೂಮಿ; ಜನಪ: ರಾಜ; ವೈಶ್ಯ: ವ್ಯಾಪಾರಿ; ಚತುರ್ಥ: ನಾಲ್ಕು; ಉಕ್ಕು: ಹೆಚ್ಚಾಗು; ಮನ: ಮನಸ್ಸು, ಚಿತ್ತ; ಅಳಲು: ನೋವು; ಬೈದರು: ಜರಿದರು, ನಿಂದಿಸು; ಅಚ್ಯುತ: ವಿಷ್ಣು, ಹರ: ಶಿವ; ಚತುರ್ಮುಖ: ಬ್ರಹ್ಮ;

ಪದವಿಂಗಡಣೆ:
ಜನಪತಿಯ+ ಜಾಡ್ಯವನು +ಭೀಮಾ
ರ್ಜುನರ+ ಸೈರಣೆಗಳನು+ ದುರ್ಯೋ
ಧನನ +ದುಶ್ಚೇಷ್ಟೆಯನು+ ಶಕುನಿಯ +ಸಾರ +ಕೃತ್ರಿಮವ
ತನತನಗೆ +ಕಂಡರು +ಮಹೀಸುರ
ಜನಪ+ ವೈಶ್ಯ+ ಚತುರ್ಥರ್+ಉಕ್ಕಿದ
ಮನದ್+ಅಳಲಿನಲಿ+ ಬೈದರ್+ಅಚ್ಯುತ +ಹರ+ಚತುರ್ಮುಖರ

ಅಚ್ಚರಿ:
(೧) ದೇವರನ್ನು ಬಯ್ಯುವ ಪರಿ – ತನತನಗೆ ಕಂಡರು ಮಹೀಸುರ ಜನಪ ವೈಶ್ಯ ಚತುರ್ಥರುಕ್ಕಿದ
ಮನದಳಲಿನಲಿ ಬೈದರಚ್ಯುತ ಹರಚತುರ್ಮುಖರ
(೨) ಜನಪತಿ, ಜನಪ – ಸಮನಾರ್ಥಕ ಪದ