ಪದ್ಯ ೨೮: ಭೀಮನು ಹನುಮನನ್ನು ಹೇಗೆ ಹೊಗಳಿದನು?

ಜರುಗಿನಲಿ ಜಾಂಬೂನದದ ಸಂ
ವರಣೆಕಾರಂಗೆಡೆಯೊಳಿರ್ದುದು
ಪರಮನಿಧಿ ಮಝಪೂತು ಪುಣ್ಯೋದಯದ ಫಲವೆನಗೆ
ಸರಸಿಯೆತ್ತಲು ಗಂಧವೆತ್ತಲು
ಬರವಿದೆತ್ತಣದೆತ್ತ ಘಟಿಸಿದು
ದರರೆ ಮಾರುತಿ ತಂದೆ ನೀನೆಂದೆನುತ ಬಣ್ಣಿಸಿದ (ಅರಣ್ಯ ಪರ್ವ, ೧೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಜರುಗಿನಲ್ಲಿ ಚಿನ್ನದ ಕಣಗಳನ್ನು ಆಯ್ದುಕೊಳ್ಳುತ್ತಿದ್ದವನಿಗೆ ಹತ್ತಿರದಲ್ಲೇ ಮಹಾನಿಧಿಯು ಸಿಕ್ಕಂತಾಯಿತು. ನನ್ನ ಪುಣ್ಯದ ಫಲವು ಉದಿಸುವ ಕಾಲವಿದು. ಎಲ್ಲಿಯ ಸರೋವರ? ಎಲ್ಲಿಯ ಸುಗಂಧ? ಅದನ್ನನುಸರಿಸಿ ನಾನೇಕೆ ಈ ದಾರಿಯಲ್ಲಿ ಬಂದೆ, ಇವೆಲ್ಲಾ ಒಂದುಗೂಡಿ ತಂದೆ ಆಂಜನೇಯ ನಿನ್ನ ದರ್ಶನವಾಯಿತು ಎಂದು ಭೀಮನು ಹನುಮಂತನನ್ನು ಹೊಗಳಿದನು.

ಅರ್ಥ:
ಜರುಗು: ಚಿನ್ನದ ಸಣ್ಣ ಸಣ್ಣ ಕಣಗಳು ಬೆರೆತಿರುವ ಮಣ್ಣು; ಜಾಂಬೂನದ: ಚಿನ್ನ, ಸುವರ್ಣ; ಸಂವರಣೆ: ಸಂಗ್ರಹ, ಶೇಖರಣೆ; ಪರಮನಿಧಿ: ಶ್ರೇಷ್ಠವಾದ ಐಶ್ವರ್ಯ; ಮಝಪೂತು: ಭಲೇ; ಪುಣ್ಯ: ಸದಾಚಾರ; ಉದಯ: ಹುಟ್ಟು; ಫಲ: ಪ್ರಯೋಜನ; ಸರಸಿ: ಸರೋವರ; ಗಂಧ: ಪರಿಮಳ; ಬರವು: ಆಗಮನ; ಎತ್ತಣ: ಎಲ್ಲಿ; ಘಟಿಸು: ಸೇರು, ಕೂಡು; ಮಾರುತಿ: ಹನುಮಂತ; ತಂದೆ: ಪಿತ; ಬಣ್ಣಿಸು: ವಿವರಿಸು;

ಪದವಿಂಗಡಣೆ:
ಜರುಗಿನಲಿ +ಜಾಂಬೂನದದ+ ಸಂ
ವರಣೆಕಾರಂಗೆಡೆಯೊಳ್+ಇರ್ದುದು
ಪರಮನಿಧಿ+ ಮಝಪೂತು+ ಪುಣ್ಯೋದಯದ +ಫಲವೆನಗೆ
ಸರಸಿಯೆತ್ತಲು +ಗಂಧವೆತ್ತಲು
ಬರವಿದ್+ಎತ್ತಣದೆತ್ತ+ ಘಟಿಸಿದುದ್
ಅರರೆ +ಮಾರುತಿ +ತಂದೆ +ನೀನೆಂದೆನುತ+ ಬಣ್ಣಿಸಿದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜರುಗಿನಲಿ ಜಾಂಬೂನದದ ಸಂವರಣೆಕಾರಂಗೆಡೆಯೊಳಿರ್ದುದು
ಪರಮನಿಧಿ

ಪದ್ಯ ೪೨: ಗಗನಚುಂಬಿ ನೇರಲೆ ಮರದ ವೈಶಿಷ್ಟ್ಯಗಳೇನು?

ಅದರ ಫಲ ಹೇರಾನೆಗಳ ತೋ
ರದಲಿಹವು ಗಿರಿಸಾರಶಿಲೆಗಳ
ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ
ಅದು ಸುಧಾಮಯವಾಯ್ತು ಜಂಬೂ
ನದಿ ಜಲಸ್ಪರ್ಶದಲಿ ಜಾಂಬೂ
ನದ ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು (ಸಭಾ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಗಗನಚುಂಬಿ ನೇರಳೆ ಮರದ ಹಣ್ಣುಗಳು ಆನೆಯಗಾತ್ರವನ್ನು ಹೊಂದಿತ್ತು. ಆ ಹಣ್ಣು ಕೆಳಗೆ ಕಬ್ಬಿಣದ ಕಲ್ಲುಗಳ ಮೇಲೆ ಬಿದ್ದು, ಒಡೆದು ಅದರ ರಸವು ಅತಿಶಯ ಪ್ರಮಾಣದಲಿ ಹರಿದು ಹೊಳೆಯಾಯಿತು. ಆ ರಸವು ಅಮೃತ ಸಮಾನವಾಗಿತ್ತು. ಆ ಹೊಳೆಯ ಎರಡು ದಡಗಳು ಬಂಗಾರವಾದವು.

ಅರ್ಥ:
ಫಲ: ಹಣ್ಣು; ಹೇರ: ಹೆಚ್ಚು, ದೊಡ್ಡ; ಆನೆ: ಕರಿ; ತೋರು: ಕಾಣಿಸು; ಗಿರಿ: ಬೆಟ್ಟ; ಶಿಲ: ಕಲ್ಲು; ಹೊದರು: ಗುಂಪು; ಹೊಳೆ: ಸರೋವರ; ರಸ: ದ್ರವ; ಲಾಲಾ, ಮಧು; ಸುಧ: ಅಮೃತ; ಸುವರ್ಣ: ಚಿನ್ನ; ನದಿ: ಹೊಳೆ; ತಡ: ದಡ; ಜಲ: ನೀರು; ಸ್ಪರ್ಶ: ಮುಟ್ಟು; ಬಿದ್ದು: ಕೆಳಗೆ ಬೀಳು; ಒಡೆದು: ಚೂರಾಗು;

ಪದವಿಂಗಡಣೆ:
ಅದರ + ಫಲ +ಹೇರ್+ಆನೆಗಳ+ ತೋ
ರದಲ್+ಇಹವು +ಗಿರಿಸಾರ+ಶಿಲೆಗಳ
ಹೊದರಿನಲಿ+ ಬಿದ್ದೊಡೆದು +ಹೊಳೆಯಾದುದು +ಮಹಾರಸದ
ಅದು +ಸುಧಾಮಯವಾಯ್ತು +ಜಂಬೂ
ನದಿ+ ಜಲಸ್ಪರ್ಶದಲಿ+ ಜಾಂಬೂ
ನದ +ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು

ಅಚ್ಚರಿ:
(೧) “ಜ” ಕಾರದ ಪದಗಳ ರಚನೆ – ಜಂಬೂನದಿ ಜಲಸ್ಪರ್ಶದಲಿ ಜಾಂಬೂನದ
(೨) ಹೊಳೆ, ನದಿ – ಸಮನಾರ್ಥಕ ಪದ