ಪದ್ಯ ೭: ದೈವ ಬಲದ ಪ್ರಾಮುಖ್ಯತೆ ಎಂತಹುದು?

ದೈವಕೃಪೆಜವನಿಕೆಯ ಮರೆಗೊಂ
ಡೈವರುಳಿದರು ಮೇಲೆ ಸಾತ್ಯಕಿ
ದೈವದೊಡಹುಟ್ಟಿದನಲೇ ತಾನಿಲ್ಲಿ ಶಿಬಿರದಲಿ
ದೈವಬಲವಿನಿತಕ್ಕೆ ಕೇಳ್ ನಿ
ರ್ದೈವಬಲನಿಶ್ಶೇಷವಿನಿತೇ
ದೈವವೆತ್ತಿದ ಛಲದ ವಾಸಿಗೆ ರಾಯ ಕೇಳೆಂದ (ಗದಾ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ದೈವ ಕೃಪೆಯ ತೆರೆಯ ಮರೆಯಲ್ಲಿ ಪಾಂಡವರೈವರು ಉಳಿದರು. ಕೃಷ್ಣನ ಒಡಹುಟ್ಟಿದ ಸಾತ್ಯಕಿಯೂ ಪಾಳೆಯದಲ್ಲಿರಲಿಲ್ಲ. ದೈವಬಲ ಅವರನ್ನು ಕಾಪಾಡಿತು. ಉಳಿದ ಪಾಂಡವ ಸೇನೆಯು ದೈವ ಬಲವಿಲ್ಲದೆ, ಛಲದ ಸೇಡಿಗೆ ನಾಶವಾಯಿತೆಂದು ಹೇಳಿದನು.

ಅರ್ಥ:
ದೈವ: ಭಗವಂತ; ಕೃಪೆ: ಕರುಣೆ; ಜವನಿಕೆ: ಮುಚ್ಚುಮರೆ; ಮರೆ: ರಹಸ್ಯ; ಉಳಿ: ಜೀವಿಸು; ಒಡಹುಟ್ಟು: ಜೊತೆಯಲ್ಲಿ ಜನಿಸು; ಶಿಬಿರ: ಬಿಡಾರ; ಬಲ: ಶಕ್ತಿ; ಕೇಳ್: ಆಲಿಸು; ನಿರ್ದೈವ: ಭಗವಂತನಿಲ್ಲದ ಸ್ಥಿತಿ; ನಿಶ್ಶೇಷ: ಸಂಪೂರ್ಣವಾಗಿ ಮುಗಿದುದು, ನಾಶ; ಎತ್ತು: ಮೇಲೇಳು; ಛಲ: ದೃಢ ನಿಶ್ಚಯ; ವಾಸಿ: ಪ್ರತಿಜ್ಞೆ, ಶಪಥ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದೈವ+ಕೃಪೆ+ಜವನಿಕೆಯ +ಮರೆಗೊಂಡ್
ಐವರ್+ಉಳಿದರು +ಮೇಲೆ +ಸಾತ್ಯಕಿ
ದೈವದ್+ಒಡಹುಟ್ಟಿದನಲೇ +ತಾನಿಲ್ಲಿ +ಶಿಬಿರದಲಿ
ದೈವಬಲವ್+ಇನಿತಕ್ಕೆ+ ಕೇಳ್ +ನಿ
ರ್ದೈವಬಲ+ನಿಶ್ಶೇಷವ್+ಇನಿತೇ
ದೈವವೆತ್ತಿದ+ ಛಲದ +ವಾಸಿಗೆ +ರಾಯ +ಕೇಳೆಂದ

ಅಚ್ಚರಿ:
(೧) ದೈವ – ೫ ಸಾಲಿನ ಮೊದಲ ಪದ
(೨) ಪದಗಳ ಬಳಕೆ – ದೈವಬಲವಿನಿತಕ್ಕೆ, ನಿರ್ದೈವಬಲನಿಶ್ಶೇಷವಿನಿತೇ

ಪದ್ಯ ೩೧: ಕೌರವನೇಕೆ ಮಂತ್ರಾಕ್ಷರವನ್ನು ಮರೆತನು?

ಅರಸ ಕೇಳೈ ನಿನ್ನ ಮಗನು
ಬ್ಬರಿಸಿದನು ರೋಮಾಂಚದಲಿಗ
ಬ್ಬರಿಸುತಧಿಕಕ್ರೋಧಶಿಖಿ ಕರಣೇಂದ್ರಿಯಾದಿಗಳ
ತುರುಗಿದಂತಃಖೇದ ಮಂತ್ರಾ
ಕ್ಷರಕೆ ಜವನಿಕೆಯಾದುದೈ ನಿ
ರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ (ಗದಾ ಪರ್ವ, ೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ಈ ಘೋಷವನ್ನು ಕೇಳಿ ನಿನ್ನ ಮಗನಿಗೆ ಅತಿಶಯ ಕೋಪಾಗ್ನಿ ಉಕ್ಕಿತು. ರೋಮಾಂಚನಗೊಂಡ ಅವನ ಇಂದ್ರಿಯಗಳು ಮನಸ್ಸು ಉರಿದೆದ್ದವು. ಅಂತರಂಗದಲ್ಲಿ ದುಃಖವುಂಟಾಗಿ, ಜಲಸ್ತಂಭ ಮಂತ್ರದ ಬೀಜಾಕ್ಷರಗಳು ಮರೆತುಹೋದವು. ವೀರಾವೇಶದಿಂದ ನಿನ್ನ ಮಗನು ಕುದಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮಗ: ಸುತ; ಉಬ್ಬರ: ಅತಿಶಯ, ಹೆಚ್ಚಳ; ರೋಮಾಂಚನ: ಆಶ್ಚರ್ಯ; ಗಬ್ಬ: ಅಹಂಕಾರ, ಸೊಕ್ಕು; ಅಧಿಕ: ಹೆಚ್ಚು; ಕ್ರೋಧ: ಕೋಪ; ಶಿಖಿ: ಬೆಂಕಿ; ಕರಣ: ಜ್ಞಾನೇಂದ್ರಿಯ; ಆದಿ: ಮುಂತಾದ; ತುರುಗು: ಸಂದಣಿಸು; ಅಂತಃಖೇದ: ಒಳ ದುಃಖ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಕ್ಷರ: ಅಕಾರ ಮೊದಲಾದ ವರ್ಣ; ಜವನಿಕೆ: ತೆರೆ, ಪರದೆ; ನಿರ್ಭರ: ವೇಗ, ರಭಸ; ವೀರ: ಶೂರ; ಆವೇಶ: ರೋಷ, ಆಗ್ರಹ; ಪಲ್ಲಟ: ಮಾರ್ಪಾಟು; ಭೂಪ: ರಾಜ;

ಪದವಿಂಗಡಣೆ:
ಅರಸ +ಕೇಳೈ +ನಿನ್ನ +ಮಗನ್
ಉಬ್ಬರಿಸಿದನು +ರೋಮಾಂಚದಲಿಗ್
ಅಬ್ಬರಿಸುತ್+ಅಧಿಕ+ಕ್ರೋಧ+ಶಿಖಿ +ಕರಣೇಂದ್ರಿ+ಆದಿಗಳ
ತುರುಗಿದ್+ಅಂತಃ+ಖೇದ +ಮಂತ್ರಾ
ಕ್ಷರಕೆ +ಜವನಿಕೆಯಾದುದೈ +ನಿ
ರ್ಭರದ +ವೀರಾವೇಶದಲಿ +ಪಲ್ಲಟಿಸಿದನು +ಭೂಪ

ಅಚ್ಚರಿ:
(೧) ಮಂತ್ರವನ್ನು ಮರೆತ ಎಂದು ಹೇಳುವ ಪರಿ – ಮಂತ್ರಾಕ್ಷರಕೆ ಜವನಿಕೆಯಾದುದೈ
(೨) ದುರ್ಯೋಧನನ ಸ್ಥಿತಿ – ನಿರ್ಭರದ ವೀರಾವೇಶದಲಿ ಪಲ್ಲಟಿಸಿದನು ಭೂಪ
(೩) ಅರಸ, ಭೂಪ – ಸಮಾನಾರ್ಥಕ ಪದ, ಮೊದಲ ಮತ್ತು ಕೊನೆಯ ಪದ

ಪದ್ಯ ೨೧: ಕೃಪಾಚಾರ್ಯರು ಯಾವ ನಿವೇದನೆ ಮಾಡಿದರು?

ಉಚಿತವಿತರೇತರಗುಣಸ್ತುತಿ
ರಚನೆ ಗುಣಯುಕ್ತರಿಗೆ ವಿಜಯೋ
ಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ
ಅಚಲ ಮೂರರ ಪೈಸರದ ಬಲ
ನಿಚಯ ನಮ್ಮದು ವೀರ ಸುಭಟ
ಪ್ರಚಯ ಮುಖ್ಯರ ಮಾಡಿಯೆಂದನು ಕೃಪನು ಕುರುಪತಿಗೆ (ಶಲ್ಯ ಪರ್ವ, ೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕೃಪಾಚಾರ್ಯರು ಮಾತನಾಡುತ್ತಾ, ಪರಸ್ಪರ ಗುಣಗಳನ್ನು ಹೊಗಳುವುದು ಗುಣಯುತರ ಸ್ವಭಾವ. ವಿಜಯದ ಗಳಿಕೆಗೆ ಈ ರಾತ್ರಿ ತೆರೆಯಂತಿದೆ. ಮೊದಲ ಮೂವರು ವಿಜಯವನ್ನು ಗಳಿಸುವಲ್ಲಿ ವಿಫಲರಾದರು. ಗೆಲ್ಲಲಸಾಧ್ಯರಾದ ಮೂವರು ಗೆಲುವನ್ನು ಪಡೆಯುವಲ್ಲಿ ವಿಪಲರಾಗಿ ಜಾರಿಹೋದ ಸೈನ್ಯ ನಮ್ಮದು. ನಿವೇ ವೀರಾಗ್ರಣಿಯೊಬ್ಬನನ್ನು ಸೇನಾಧಿಪತಿಯನ್ನಾಗಿ ಮಾಡಿರಿ ಎಂದರು.

ಅರ್ಥ:
ಉಚಿತ: ಸರಿಯಾದ; ಇತರ: ಅನ್ಯರ; ಗುಣ: ನಡತೆ, ಸ್ವಭಾವ; ಸ್ತುತಿ: ಹೊಗಳು; ಯುಕ್ತ: ಕೌಶಲ; ವಿಜಯ: ಗೆಲುವು; ಉಪಚಿತ: ಯೋಗ್ಯವಾದ; ರಣ: ಯುದ್ಧ; ನಾಟಕ: ತೋರಿಕೆಯ ವರ್ತನೆ; ಜವನಿಕೆ: ತೆರೆ, ಪರದೆ; ರಜನಿ: ರಾತ್ರಿ; ಅಚಲ: ನಿಶ್ಚಲ; ಪೈಸರ: ಕುಗ್ಗುವುದು; ವೀರ: ಶೂರ; ಸುಭಟ: ಪರಾಕ್ರಮಿ; ಪ್ರಚಯ: ಒಟ್ಟು ಗೂಡಿಸುವುದು; ಮುಖ್ಯ: ಪ್ರಮುಖ; ಕುರುಪತಿ: ದುರ್ಯೋಧನ;

ಪದವಿಂಗಡಣೆ:
ಉಚಿತವ್+ಇತರೇತರ+ಗುಣಸ್ತುತಿ
ರಚನೆ +ಗುಣಯುಕ್ತರಿಗೆ+ ವಿಜಯ
ಉಪಚಿತ+ ರಣನಾಟಕಕೆ +ಜವನಿಕೆಯಾಯ್ತಲೇ +ರಜನಿ
ಅಚಲ +ಮೂರರ +ಪೈಸರದ +ಬಲ
ನಿಚಯ +ನಮ್ಮದು +ವೀರ +ಸುಭಟ
ಪ್ರಚಯ +ಮುಖ್ಯರ+ ಮಾಡಿಯೆಂದನು +ಕೃಪನು+ ಕುರುಪತಿಗೆ

ಅಚ್ಚರಿ:
(೧) ನಿಚಯ, ಪ್ರಚಯ – ಪದಗಳ ಬಳಕೆ
(೨) ರೂಪಕದ ಪ್ರಯೋಗ – ವಿಜಯೋಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ

ಪದ್ಯ ೧೩: ಸುಪ್ರತೀಕ ಗಜವು ಸೈನ್ಯದಲ್ಲಿ ಹೇಗೆ ಕೋಲಾಹಲ ಸೃಷ್ಟಿಸಿತು?

ಮೊಗದ ಜವನಿಕೆದೆಗೆದು ನೆತ್ತಿಯ
ಬಗಿದು ಕೂರಂಕುಶದಲಾನೆಯ
ಬೆಗಡುಗೊಳಿಸಲು ಬೀದಿವರಿದುದು ಸುಭಟರೆದೆಯೊದೆಯೆ
ಹಗೆಯ ಬಲದಲಿ ಹರಿದು ಸುಭಟರ
ಚಿಗುಳಿದುಳಿದುದು ತಲೆಗಳನು ಮುಗಿ
ಲಗಲದಲಿ ಹರಹಿದುದು ದಿಕ್ಕರಿ ಹೊಕ್ಕು ಮೋಹರವ (ದ್ರೋಣ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಸುಪ್ರತೀಕದ ಮುಖದ ಪರದೆಯನ್ನು ತೆಗೆದು ಚೂಪಾದ ಅಂಕುಶದಿಂದ ನೆತ್ತಿಯನ್ನು ಚುಚ್ಚಿದೊಡನೆ, ಅದು ಮುಂದೆ ನುಗ್ಗಿತು. ಪಾಂಡವ ಸೈನ್ಯದಲ್ಲಿ ಹೆಜ್ಜೆಯಿಟ್ಟು ಸುಭಟರನ್ನು ತುಳಿದು ತಲೆಗಳನ್ನು ಕಿತ್ತು ಆಕಾಶದಲ್ಲಿ ಎಸೆಯಿತು.

ಅರ್ಥ:
ಮೊಗ: ಮುಖ; ಜವನಿಕೆ: ತೆರೆ, ಪರದೆ; ತೆಗೆ: ಈಚೆಗೆ ತರು, ಹೊರತರು; ನೆತ್ತಿ: ಶಿರ; ಬಗಿ: ಸೀಳುವಿಕೆ, ಕತ್ತರಿಸುವಿಕೆ; ಕೂರಂಕುಶ: ಹರಿತವಾದ ಅಂಕುಶ; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ಆನೆ: ಗಜ; ಬೆಗಡು: ಆಶ್ಚರ್ಯ, ಬೆರಗು; ಬೀದಿ: ರಸ್ತೆ; ಸುಭಟ: ಪರಾಕ್ರಮಿ; ಎದೆ: ವಕ್ಷಸ್ಥಳ; ಒದೆ: ತಳ್ಳು; ಹಗೆ: ವೈರಿ; ಬಲ: ಶಕ್ತಿ; ಹರಿ: ಕಡಿ, ಕತ್ತರಿಸು; ಚಿಗುಳಿದುಳಿ: ಜಿಗಿಜಿಗಿಯಾಗುವಂತೆ ತುಳಿ; ತಲೆ: ಶಿರ; ಮುಗಿಲು: ಆಗಸ; ಅಗಲ: ವಿಸ್ತಾರ; ಹರಹು: ವಿಸ್ತಾರ, ವೈಶಾಲ್ಯ; ದಿಕ್ಕರಿ: ದಿಗ್ಗಜ; ಹೊಕ್ಕು: ಸೇರು; ಮೋಹರ: ಯುದ್ಧ;

ಪದವಿಂಗಡಣೆ:
ಮೊಗದ +ಜವನಿಕೆ+ತೆಗೆದು +ನೆತ್ತಿಯ
ಬಗಿದು+ ಕೂರಂಕುಶದಲ್+ಆನೆಯ
ಬೆಗಡುಗೊಳಿಸಲು+ ಬೀದಿವರಿದುದು +ಸುಭಟರ್+ಎದೆ+ಒದೆಯೆ
ಹಗೆಯ +ಬಲದಲಿ +ಹರಿದು +ಸುಭಟರ
ಚಿಗುಳಿದುಳಿದುದು +ತಲೆಗಳನು +ಮುಗಿಲ್
ಅಗಲದಲಿ +ಹರಹಿದುದು +ದಿಕ್ಕರಿ+ ಹೊಕ್ಕು +ಮೋಹರವ

ಅಚ್ಚರಿ:
(೧) ಸುಪ್ರತೀಕದ ಬಲ – ಹಗೆಯ ಬಲದಲಿ ಹರಿದು ಸುಭಟರ ಚಿಗುಳಿದುಳಿದುದು ತಲೆಗಳನು ಮುಗಿ
ಲಗಲದಲಿ ಹರಹಿದುದು

ಪದ್ಯ ೪: ಜೋಯಿಸರು ಏನು ಹೇಳಿದರು?

ಜೀಯ ಭಾಸ್ಕರ ಭೌಮರಶುಭ
ಸ್ಥಾಯಿಗಳು ಗುರು ಮಂದರಭಿಭವ
ದಾಯಿಗಳು ವಿಪರೀತ ದೆಸೆ ಬುಧ ಶುಕ್ರ ರಾಹುಗಳ
ಯಾಯಿಗಳಿಗಪಜಯ ನಿವಾಸ
ಸ್ಥಾಯಿಗೊಳ್ಳಿತು ಚಿತ್ತವಿಸಿಯೆನೆ
ಜೋಯಿಸರ ಜವನಿಕೆಗೆ ಸಿಲುಕೆನೆನುತ್ತ ಹೊರವಂಟ (ಅರಣ್ಯ ಪರ್ವ, ೨೪ ಸಂಧಿ, ೪ ಪದ್ಯ)

ತಾತ್ಪರ್ಯ:
ಜೋಯಿಸರು ಜಯದ್ರಥನಿಗೆ ತಮ್ಮ ಅಭಿಪ್ರಾಯವನ್ನು ಹೇಳುತ್ತಾ, ಒಡೆಯ, ಸೂರ್ಯ, ಕುಜರು ಅಶುಭಸ್ಥಾನಗಳಲ್ಲಿದ್ದಾರೆ, ಗುರು ಶನಿಗಳು ಪ್ರಾಜಯದಾಯಕರು, ಬುಧ, ಶುಕ್ರ ರಾಹುಗಳು ವಕ್ರಗತಿಯಲ್ಲಿದ್ದಾರೆ, ಇದರ ಫಲವಾಗಿ ಪ್ರಯಾನ ಮಾಡುವವನಿಗೆ ಸೋಲುಂಟಾಗುತ್ತದೆ, ಸ್ವಸ್ಥಾನದಲ್ಲಿದ್ದವನಿಗೆ ಒಳ್ಳೆಯದು ಸಂಭವಿಸುತ್ತವೆ, ತಾವು ಮನಸ್ಸಿಗೆ ತಂದುಕೊಂಡು ನೋಡಿರಿ, ಎಂದು ಹೇಳಲು ಜಯದ್ರಥನು, ಜೋಯಿಸರ ತೆರೆಗೆ ತಾನು ಸಿಗುವವನಲ್ಲೆಂದು ಹೇಳಿ ಹೊರಟನು.

ಅರ್ಥ:
ಜೀಯ: ಒಡೆಯ; ಭಾಸ್ಕರ: ಸೂರ್ಯ; ಭೌಮ: ಅಂಗಾರಕ, ಮಂಗಳ ಗ್ರಹ; ಅಶುಭ: ಮಂಗಳಕರವಲ್ಲದ; ಸ್ಥಾಯಿ: ಸ್ಥಾನ; ಮಂದ: ನಿಧಾನ, ಶನಿ ಗ್ರಹ; ಅಭಿಭವ: ಸೋಲು; ವಿಪರೀತ: ವಿರುದ್ಧವಾದುದು, ವ್ಯತಿರಿಕ್ತವಾದುದು; ದೆಸೆ: ದಿಕ್ಕು;ಆಯಿ: ಆರಿಸು; ಅಪಜಯ: ಸೋಲು; ನಿವಾಸ: ಮನೆ; ಸ್ಥಾಯಿ: ಸ್ಥಿರವಾಗಿರುವುದು; ಚಿತ್ತವಿಸು: ಗಮನವಿಡು; ಜೋಯಿಸ: ಜ್ಯೋತಿಷ್ಯ ಹೇಳುವವ; ಜವನಿಕೆ:ತೆರೆ, ಪರದೆ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾಗು; ಹೊರವಂಟ: ತೆರಳು;

ಪದವಿಂಗಡಣೆ:
ಜೀಯ +ಭಾಸ್ಕರ +ಭೌಮರ್+ಅಶುಭ
ಸ್ಥಾಯಿಗಳು +ಗುರು +ಮಂದರ್+ಅಭಿಭವ
ದಾಯಿಗಳು +ವಿಪರೀತ+ ದೆಸೆ+ ಬುಧ +ಶುಕ್ರ+ ರಾಹುಗಳ
ಯಾಯಿಗಳಿಗ್+ಅಪಜಯ +ನಿವಾಸ
ಸ್ಥಾಯಿಗ್+ಒಳ್ಳಿತು +ಚಿತ್ತವಿಸಿ+ಎನೆ
ಜೋಯಿಸರ +ಜವನಿಕೆಗೆ +ಸಿಲುಕೆನ್+ಎನುತ್ತ +ಹೊರವಂಟ

ಅಚ್ಚರಿ:
(೧) ಗ್ರಹಗಳ ಹೆಸರುಗಳನ್ನು ಹೇಳಿರುವ ಪರಿ – ಭಾಸ್ಕರ (ಸೂರ್ಯ) ಭೌಮ (ಅಂಗಾರಕ, ಮಂಗಳ), ಗುರು, ಮಂದರ (ಶನಿ), ಬುಧ, ಶುಕ್ರ, ರಾಹು;
(೨) ಅಶುಭ, ಅಪಜಯ, ಅಭಿಭವ – ಪದಗಳ ಬಳಕೆ

ಪದ್ಯ ೫೩: ಅರ್ಜುನನ ಮನಸ್ಸಿಗೆ ಯಾವ ಜಾಡ್ಯ ಆವರಿಸಿತೆಂದ್ ಹೇಳಿದನು?

ಏಸು ಬಾಣದೊಳೆಚ್ಚೊಡೆಯು ಹೊರ
ಸೂಸಿದವು ತಾನರಿದುದಿಲ್ಲ ಮ
ಹಾಶರವ ಕಳುಹಿದರೆ ನುಂಗಿದನೊಡನರಿಯೆ ನಾನು
ಆ ಶರಾಸನ ಖಡ್ಗವನು ಕೊಳ
ಲೈಸರೊಳಗೆಚ್ಚೆತ್ತೆನೇ ಹಿಂ
ದೇಸು ಜನ್ಮದ ಜಾಡ್ಯ ಜವನಿಕೆಯೋದುದೆನಗೆಂದ (ಅರಣ್ಯ ಪರ್ವ, ೭ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಷ್ಟು ಬಾಣಗಳನ್ನು ಬಿಟ್ಟರೂ ಅವು ನಾಟದೆ ಹೊರಕ್ಕೆ ಹೋದವು. ಆಗ ನಾನು ತಿಳಿದುಕೊಳ್ಳಲಿಲ್ಲ. ದಿವ್ಯಾಸ್ತ್ರಗಳಿಂದ ಹೊಡೆದರೆ ಅವನ್ನು ನುಂಗಿ ಬಿಟ್ಟ ಆಗಲೂ ನನಗೆ ತಿಳಿಯಲಿಲ್ಲ. ಗಾಂಡೀವ ಧನುಸ್ಸನ್ನೇ ಸೆಳೆದುಕೊಂಡರೂ, ಖಡ್ಗವನ್ನೂ ಸೆಳೆದುಕೊಂಡರೂ ನನಗೆ ಎಚ್ಚರ ಬರೈಲ್ಲ. ಎಷ್ಟು ಜನ್ಮದ ಜಾಡ್ಯವು ನನ್ನ ಮತಿಗೆ ಮುಸುಕು ಹಾಕಿತೋ ಏನೋ ಎಂದು ಅರ್ಜುನನು ಹಲುಬಿದನು.

ಅರ್ಥ:
ಏಸು: ಎಷ್ಟು; ಬಾಣ: ಶರ; ಎಚ್ಚು: ಬಾಣ ಬಿಡು; ಹೊರ: ಆಚೆ; ಸೂಸು: ಎರಚು, ಚಲ್ಲು; ಅರಿ: ತಿಳಿ; ಮಹಾಶರ: ಶ್ರೇಷ್ಠವಾದ ಬಾಣ; ಕಳುಹು: ಹೊರಹಾಕು, ಬಿಡು; ನುಂಗು: ತಿನ್ನು; ಒಡನೆ: ಕೂಡಲೆ; ಅರಿ: ತಿಳಿ; ಶರಾಸನ: ಬಿಲ್ಲು; ಖಡ್ಗ: ಕತ್ತಿ; ಕೊಳಲು: ತೆಗೆದುಕೊ; ಎಚ್ಚರ: ನಿದ್ರೆಯಿಂದ ಏಳುವುದು; ಹಿಂದೆ: ಪೂರ್ವ; ಜನ್ಮ: ಜನನ; ಜಾಡ್ಯ: ಸೋಮಾರಿತನ; ಜವನಿಕೆ: ತೆರೆ, ಪರದೆ;

ಪದವಿಂಗಡಣೆ:
ಏಸು +ಬಾಣದೊಳ್+ಎಚ್ಚೊಡೆಯು +ಹೊರ
ಸೂಸಿದವು +ತಾನ್+ಅರಿದುದಿಲ್ಲ +ಮ
ಹಾಶರವ+ ಕಳುಹಿದರೆ+ ನುಂಗಿದನ್+ಒಡನ್+ಅರಿಯೆ+ ನಾನು
ಆ +ಶರಾಸನ +ಖಡ್ಗವನು+ ಕೊಳಲ್
ಐಸರೊಳಗ್+ಎಚ್ಚೆತ್ತೆನೇ +ಹಿಂದ್
ಏಸು +ಜನ್ಮದ +ಜಾಡ್ಯ +ಜವನಿಕೆಯೋದುದ್+ಎನಗೆಂದ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜನ್ಮದ ಜಾಡ್ಯ ಜವನಿಕೆಯೋದುದೆನಗೆಂದ
(೨) ಎಚ್ಚೊಡೆ, ಎಚ್ಚೆತ್ತು – ಪದಗಳ ಬಳಕೆ
(೩) ಶರಾಸನ – ಬಿಲ್ಲಿಗೆ ಬಳಸಿದ ಪದ

ಪದ್ಯ ೭: ಅರ್ಜುನನ ಚಿತ್ತ ಶುದ್ಧಿ ಹೇಗಾಯಿತು?

ತಾನೆ ಶಿವನೋ ಮೇಣು ಶಿವನ
ಧ್ಯಾನ ತನಗದ್ವೈತದನುಸಂ
ಧಾನವಿದು ಜವನಿಕೆಯೊ ಜೀವಾತುಮನ ಜಂಬಡಕೆ
ಧ್ಯಾನವೋ ಮೇಣ್ ದ್ವೈತವೋ ತ
ಧ್ಯಾನ ಕರ್ತೃವೊ ತ್ರಿಪುಟರಹಿತನೊ
ತಾನು ಮೇಣೆನಲಾಯ್ತು ಚಿತ್ತದ ಶುದ್ಧಿಯರ್ಜುನನ (ಅರಣ್ಯ ಪರ್ವ, ೬ ಸಂಧಿ, ೭ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ತಪಸ್ಸಿನಿಂದ, ತಾನೇ ಶಿವನೋ ಅಥವ ಶಿವನ ಧ್ಯಾನವು ತನಗೆ ಅದ್ವೈತದ ಅನುಸಂಧಾನವೋ? ಜೀವಾತ್ಮನ ಅವಿದ್ಯೆಯ ಗೊಂದಲಕ್ಕೆ ಧ್ಯಾನವು ಒಂದು ಮುಸುಕೋ? ಧ್ಯಾನವೋ ಧ್ಯಾನಿಸುವವನ ಮತ್ತು ಧ್ಯೇಯಕ್ಕೆ ಸಂಬಂಧಿಸಿದ್ದೋ? ತಾನು ಧ್ಯಾನಿಸುವ ಧ್ಯಾತೃವೊ? ಹೀಗೆ ಧ್ಯಾನ, ಧ್ಯಾತೃ, ಧ್ಯೇಯಗಳಂಬ ತ್ರಿಪುಟಗಳಿಲ್ಲದ ಅಖಂಡ ಆತ್ಮನೋ ಎನ್ನುವಂತೆ ಅರ್ಜುನನ ಚಿತ್ತ ಶುದ್ಧಿಯಾಯಿತು.

ಅರ್ಥ:
ಮೇಣು: ಅಥವ; ಧ್ಯಾನ: ತಪಸ್ಸು; ಅದ್ವೈತ: ಬ್ರಹ್ಮ ಮತ್ತು ಜೀವ ಎರಡೂ ಬೇರೆಬೇರೆಯಲ್ಲ, ಒಂದೇ ಎಂದು ಪ್ರತಿಪಾದಿಸುವ ತತ್ವ; ಅನುಸಂಧಾನ: ಪರಿಶೀಲನೆ; ಜವನಿಕೆ:ತೆರೆ, ಪರದೆ; ಜೀವ: ಪ್ರಾಣ; ಆತ್ಮ: ಪರಬ್ರಹ್ಮ; ಜಂಜಡ: ತೊಂದರೆ, ಕ್ಲೇಶ; ಧ್ಯಾನ: ತಪಸ್ಸು; ಕರ್ತೃ: ಮಾಡುವವನು, ಒಡೆಯ; ತ್ರಿಪುಟ: ಧ್ಯಾನ, ಧ್ಯಾತೃ, ಧ್ಯೇಯ ಎಂಬ ಮೂರು ಅವಸ್ಥೆ; ರಹಿತ: ಇಲ್ಲದ; ಚಿತ್ತ: ಮನಸ್ಸು; ಶುದ್ಧಿ: ನಿರ್ಮಲ;

ಪದವಿಂಗಡಣೆ:
ತಾನೆ +ಶಿವನೋ +ಮೇಣು +ಶಿವನ
ಧ್ಯಾನ +ತನಗ್+ಅದ್ವೈತದ್+ಅನುಸಂ
ಧಾನವ್+ಇದು+ ಜವನಿಕೆಯೊ+ ಜೀವಾತುಮನ+ ಜಂಬಡಕೆ
ಧ್ಯಾನವೋ +ಮೇಣ್ +ದ್ವೈತವೋ +ತ
ಧ್ಯಾನ +ಕರ್ತೃವೊ +ತ್ರಿಪುಟ+ರಹಿತನೊ
ತಾನು +ಮೇಣ್+ಎನಲ್+ಆಯ್ತು +ಚಿತ್ತದ +ಶುದ್ಧಿ+ಅರ್ಜುನನ

ಅಚ್ಚರಿ:
(೧) ತ್ರಿಪುಟದ (ಧ್ಯಾನ, ಧ್ಯಾತೃ, ಧ್ಯೇಯ) ವಿವರಣೆ
(೨) ಜ ಕಾರದ ತ್ರಿವಳಿ ಪದ – ಜವನಿಕೆಯೊ ಜೀವಾತುಮನ ಜಂಬಡಕೆ

ಪದ್ಯ ೨೧: ಕರ್ಣ ಮತ್ತು ಅರ್ಜುನನ ಹಿಂದೆ ಬೆಂಬಲಕ್ಕಾಗಿ ಯಾರು ನಿಂತರು?

ಹಿಡಿಯೆ ಜವನಿಕೆ ಸಕಲಬಲ ಸಂ
ಗಡಿಸಿತೊಂದೇ ಮುಖದಲೀ ದಳ
ಗಡಣಿಸಿತು ಮುಂದಿಕ್ಕಿ ಕರ್ಣನನೇಕಮುಖವಾಗಿ
ಪಡಿಬಲಕೆ ಭೀಮಾದಿಭಟರಾ
ಕಡೆಯಲನುವಾಯ್ತೀಚೆಯಲಿ ನೆಲ
ನೊಡೆಯ ಕೃಪ ಗುರುಜಾದಿಗಳು ಕೈಗೈದೊರೊಗ್ಗಿನಲಿ (ಕರ್ಣ ಪರ್ವ, ೨೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ತೆರೆಯನ್ನು ಹಿಡಿಯಲು ಸೈನ್ಯಗಳೆಲ್ಲವು ವ್ಯವಸ್ಥಿತವಾಗಿ ನಿಂತವು. ಕರ್ಣನ್ ಹಿಂದೆ ನಿಮ್ಮ ಸೇನೆಯು ಬೆಂಬಲವಾಗಿ ನಿಂತಿತು. ಆಕಡೆ ಅರ್ಜುನನ ಸಹಾಯಕ್ಕೆ ಭೀಮನೇ ಮೊದಲಾದವರು ನಿಂತರೆ, ದುರ್ಯೋಧನ, ಕೃಪ, ಅಶ್ವತ್ಥಾಮನೇ ಮೊದಲಾದವರು ಕರ್ಣನಿಗೆ ಬೆಂಬಲವಾಗಿ ನಿಂತರು.

ಅರ್ಥ:
ಹಿಡಿ: ಮುಟ್ಟಿಗೆ, ಮುಷ್ಟಿ, ಬಂಧನ; ಜವನಿಕೆ: ಮುಚ್ಚುಮರೆ; ಸಕಲ: ಎಲ್ಲಾ; ಬಲ: ಸೈನ್ಯ; ಸಂಗಡಿಸು: ಒಟ್ಟಾಗು, ಗುಂಪಾಗು; ಮುಖ: ಆನನ; ದಳ: ಸೈನ್ಯ; ಸಂಗಡ: ಜೊತೆ, ಗುಂಪು; ಮುಖ: ಆನನ; ದಳ: ಸೈನ್ಯ; ಗಡಣಿಸು: ಗುಂಪಾಗು; ಮುಂದೆ: ಅಗ್ರ, ತುದಿ; ಪಡಿ: ಪ್ರತಿಯಾದುದು, ಎದುರು; ಆದಿ: ಮುಂತಾದ; ಭಟರು: ಸೈನ್ಯ; ಅನುವು: ಅನುಕೂಲ; ಈಚೆ: ಈ ಭಾಗದಲಿ; ನೆಲನೊಡೆಯ: ರಾಜ; ಕೃಪ: ಕರುಣೆ; ಗುರುಜ: ಅಶ್ವತ್ಥಾಮ; ಆದಿ: ಮುಂತಾದ; ಒಗ್ಗು: ಒಟ್ಟುಗೂಡು, ಗುಂಪಾಗು;

ಪದವಿಂಗಡಣೆ:
ಹಿಡಿಯೆ +ಜವನಿಕೆ +ಸಕಲ+ಬಲ +ಸಂ
ಗಡಿಸಿತ್+ಒಂದೇ +ಮುಖದಲ್+ಈ+ ದಳ
ಗಡಣಿಸಿತು +ಮುಂದಿಕ್ಕಿ +ಕರ್ಣನನ್+ಏಕಮುಖವಾಗಿ
ಪಡಿಬಲಕೆ +ಭೀಮಾದಿ+ಭಟರ್+ಆ
ಕಡೆಯಲ್+ಅನುವಾಯ್ತ್+ಈಚೆಯಲಿ +ನೆಲ
ನೊಡೆಯ +ಕೃಪ +ಗುರುಜಾದಿಗಳು +ಕೈಗೈದೊರ್+ಒಗ್ಗಿನಲಿ

ಪದ್ಯ ೯: ಎಷ್ಟು ಬಾಣಗಳನ್ನು ದುರ್ಯೋಧನ ಕರ್ಣನಿಗಾಗಿ ಕಳಿಸಿದನು?

ಸರಳ ಹೊದೆಗಳ ತುಂಬಿ ಬಂಡಿಯ
ನರಸ ಕಳುಹಿದನೆಂಟುನೂರನು
ಚರರು ಪರಿವೇಷ್ಟಿಸಿತು ಪರಿಚಾರಕರ ವಿಗ್ರಹದ
ಸರಿಸ ಸಿಂಧವನೆತ್ತಿಸುತ ಬೊ
ಬ್ಬಿರಿದು ಜವನಿಕೆವಿಡಿದು ಭೀಮನೊ
ನರನೊ ನಿಲುವವರಾರು ಬರಹೇಳೆಂದನಾ ಕರ್ಣ (ಕರ್ಣ ಪರ್ವ, ೨೧ ಸಂಧಿ, ೯ ಪದ್ಯ)

ತಾತ್ಪರ್ಯ:
ಎಂತು ನೂರು ಬಂಡಿಗಳಲ್ಲಿ ಬಾಣಗಳ ಹೊರೆಗಳನ್ನು ತುಂಬಿಸಿ ಕೌರವನು ಕರ್ಣನಿಗಾಗಿ ಕಳಿಸಿದನು. ಕರ್ಣನ ಸುತ್ತಲೂ ಪರಿವಾರದವರು ನೆರೆದರು. ಅವರಿಂದ ಧ್ವಜ ದಂಡವನ್ನೆತ್ತಿ ಕಟ್ಟಿಸಿದನು. ರಥಕ್ಕೆ ಪರದೆಯನ್ನು ಹಾಕಿಸಿ ಕರ್ಣನು ಗರ್ಜಿಸಿ, ಯುದ್ಧಕ್ಕೆ ಬರುವವರಾರು, ಭೀಮನೋ ಅರ್ಜುನನೋ, ಅವರನ್ನು ಬರಹೇಳು ಎಂದು ಕರೆದನು.

ಅರ್ಥ:
ಸರಳ: ಬಾಣ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ತುಂಬು: ಭರ್ತಿಯಾಗು; ಬಂಡಿ: ರಥ; ಅರಸ: ರಾಜ; ಕಳುಹಿಸು: ತರು, ರವಾನಿಸು; ನೂರು: ಶತ; ಚರರು: ದೂತ; ಪರಿವೇಷ್ಟಿ: ಸುತ್ತುವರಿ; ಪರಿಚಾರಕ:ಆಳು, ಸೇವಕ; ವಿಗ್ರಹ: ರೂಪ; ಯುದ್ಧ; ಸರಿಸು: ಪಕ್ಕಕ್ಕೆ ಜರುಗಿಸು; ಸಿಂಧ:ಒಂದು ಬಗೆ ಪತಾಕೆ, ಬಾವುಟ; ಬೊಬ್ಬಿರಿದು: ಗರ್ಜಿಸು, ಜೋರಾಗಿ ಕೂಗು; ಜವನಿಕೆ: ತೆರೆ, ಪರದೆ;ನರ: ಅರ್ಜುನ; ನಿಲುವವರು: ಎದುರು ಬರುವವರು, ತಡೆ; ಬರಹೇಳು: ಕರೆಸು;

ಪದವಿಂಗಡಣೆ:
ಸರಳ +ಹೊದೆಗಳ +ತುಂಬಿ +ಬಂಡಿಯನ್
ಅರಸ +ಕಳುಹಿದನ್+ಎಂಟುನೂರನು
ಚರರು+ ಪರಿವೇಷ್ಟಿಸಿತು +ಪರಿಚಾರಕರ +ವಿಗ್ರಹದ
ಸರಿಸ+ ಸಿಂಧವನ್+ಎತ್ತಿಸುತ+ ಬೊ
ಬ್ಬಿರಿದು+ ಜವನಿಕೆವಿಡಿದು+ ಭೀಮನೊ
ನರನೊ+ ನಿಲುವವರಾರು+ ಬರಹೇಳೆಂದನಾ +ಕರ್ಣ

ಅಚ್ಚರಿ:
(೧) ಕರ್ಣನು ಕರೆಯುವ ಪರಿ -ಜವನಿಕೆವಿಡಿದು ಭೀಮನೊ ನರನೊ ನಿಲುವವರಾರು ಬರಹೇಳೆಂದನಾ ಕರ್ಣ

ಪದ್ಯ ೯೩: ಭೀಮನು ದುಶ್ಯಾಸನನನ್ನು ಎಲ್ಲಿಗೆ ಅಟ್ಟಿದನು?

ಮಡದಿಯನು ಕಳುಹಿದನು ಕೆಳದಿಯ
ರೊಡನೆ ನಡೆತರೆ ನಾಕುಕಡೆಯಲಿ
ಹಿಡಿದ ಜವನಿಕೆಗಳಲಿ ಜಲರುಹವದನೆ ಗಮಿಸಿದಳು
ತುಡುಕಿ ವಾಮಾಂಘ್ರಿಯಲಿ ಹಗೆಯನು
ಮಡದಲೊದೆದನು ಬಳಿಕ ಕೌರವ
ಪಡೆಯ ಪವನಜ ಕೊಟ್ಟನಂತಕಪುರವನಾಂತರಕೆ (ಕರ್ಣ ಪರ್ವ, ೧೯ ಸಂಧಿ, ೯೩ ಪದ್ಯ)

ತಾತ್ಪರ್ಯ:
ಭೀಮನು ದ್ರೌಪದಿಯನ್ನು ಬಿಡಾರಕ್ಕೆ ಕಳುಹಿಸಿದನು. ಅವಳ ಸಖಿಯರು ಅವಳ ಸುತ್ತಲೂ ನಾಕು ಕಡೆಯಿಂದ ತೆರೆಯನ್ನು ಹಿಡಿದಿರಲು ದ್ರೌಪದಿಯು ಹೊರಟು ಹೋದಳು. ಭೀಮನು ತನ್ನ ಎಡಗಾಲಿನಿಂದ ದುಶ್ಯಾಸನನ ಭುಜವನ್ನೊದೆದು, ಸುತ್ತ ಮುತ್ತಲಿದ್ದ ಕುರುಸೇನೆಯನ್ನು ಯಮಲೋಕಕ್ಕಟ್ಟಿದನು.

ಅರ್ಥ:
ಮಡದಿ: ಹೆಂಡತಿ; ಕಳುಹಿದನು: ಹಿಂದಿರುಗು; ಕೆಳದಿ: ಗೆಳತಿ, ಸ್ನೇಹಿತೆ; ಒಡನೆ: ಜೊತೆ; ನಡೆ: ನಡೆಯುವಿಕೆ; ನಾಕು: ನಾಲ್ಕು; ಕಡೆ: ದಿಕ್ಕು; ನಾಕುಕಡೆ: ಎಲ್ಲಾಕಡೆಯಲ್ಲಿ; ಹಿಡಿ: ಮುಟ್ಟಿಗೆ, ಮುಷ್ಟಿ; ಜವನಿಕೆ: ತೆರೆ, ಪರದೆ; ಜಲರುಹ: ತಾವರೆ, ಕಮಲ; ವದನೆ: ಮುಖ; ಗಮಿಸು: ತೆರಳು; ತುಡುಕು: ಮುಟ್ಟು, ತಾಗು; ವಾಮಾಂಘ್ರಿ: ಎಡಪಾದ; ಹಗೆ: ವೈರಿ; ಮಡ: ಭುಜ; ಒದೆ: ಹೊಡೆ; ಬಳಿಕ: ನಂತರ; ಪಡೆ: ಗುಂಪು; ಪವನಜ: ಭೀಮ; ಅಂತಕ: ಯಮ; ಪುರ: ಊರು; ಅಂತರ: ದೂರ;

ಪದವಿಂಗಡಣೆ:
ಮಡದಿಯನು +ಕಳುಹಿದನು +ಕೆಳದಿಯ
ರೊಡನೆ +ನಡೆತರೆ+ ನಾಕು+ಕಡೆಯಲಿ
ಹಿಡಿದ+ ಜವನಿಕೆಗಳಲಿ+ ಜಲರುಹವದನೆ+ ಗಮಿಸಿದಳು
ತುಡುಕಿ+ ವಾಮಾಂಘ್ರಿಯಲಿ+ ಹಗೆಯನು
ಮಡದಲ್+ಒದೆದನು +ಬಳಿಕ +ಕೌರವ
ಪಡೆಯ +ಪವನಜ+ ಕೊಟ್ಟನ್+ಅಂತಕಪುರವನಾಂತರಕೆ

ಅಚ್ಚರಿ:
(೧) ದ್ರೌಪದಿಯನ್ನು ಜಲರುಹವದನೆ ಎಂದು ಕರೆದಿರುವುದು
(೨) ಜ ಕಾರದ ಜೋಡಿ ಪದ – ಜವನಿಕೆಗಳಲಿ ಜಲರುಹವದನೆ