ಪದ್ಯ ೧೩: ಸುಭದ್ರೆ ಹೇಗೆ ದುಃಖಿಸಿದಳು?

ಅಳಲ ಶಿಖಿಯಲಿ ಬಾಡಿದಾನನ
ಜಲರುಹದ ಕಡುವೇದನೆಯ ಕಳ
ಕಳದ ಹಾಹಾ ರವದ ರೌದ್ರೆ ಸುಭದ್ರೆ ನಡೆತಂದು
ನೆಲಕೆ ಧೊಪ್ಪನೆ ಕೆಡೆದು ಸಭೆಯಲಿ
ಹಲುಬಿದಳು ಕೊಳುಗುಳಕೆ ಕಂದನ
ಕಳುಹಿದವರಿಗೆ ಸಂದುದೇ ಪರಿಣಾಮವೆಂದೆನುತ (ದ್ರೋಣ ಪರ್ವ, ೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಳಲಿನ ಬೆಂಕಿಯಿಂದ ಬಾಡಿದ ಮುಖಕಮಲದಲ್ಲಿ ಕಡುವೇದನೆ ಎದ್ದು ಕಾಣುತ್ತಿತ್ತು. ಎತ್ತಿದ ದನಿಯಲ್ಲಿ ಹಾಹಾಕಾರ ಮಾಡುತ್ತಾ ಭಯಂಕರ ವ್ಯಥೆಯಿಂದ ನೊಂದ ಸುಭದ್ರೆಯು ಬಂದು, ಸಭೆಯ ನಡುವೆ ಧೊಪ್ಪನೆ ಬಿದ್ದು, ನನ್ನ ಮಗನನ್ನು ಯುದ್ಧಕ್ಕೆ ಕಳಿಸಿದವರ ಇಷ್ಟವು ಪೂರ್ತಿಯಾಯಿತೇ? ಎಂದು ದುಃಖಿಸಿದಳು.

ಅರ್ಥ:
ಅಳಲು: ದುಃಖ; ಶಿಖಿ: ಬೆಂಕಿ; ಬಾಡು: ಸೊರಗು; ಆನನ: ಮುಖ; ಜಲ: ನೀರು; ಜಲರುಹ: ಕಮಲ; ಕಡು: ಬಹಳ; ವೇದನೆ: ದುಃಖ; ಕಳಕಳ: ಗೊಂದಲ; ರವ: ಶಬ್ದ; ರೌದ್ರ: ಸಿಟ್ಟು, ರೋಷ; ನಡೆತಂದು: ಬಂದು ಸೇರು; ನೆಲ: ಭೂಮಿ; ಧೊಪ್ಪನೆ: ಒಮ್ಮೆಲೆ; ಕೆಡೆ:ಬೀಳು, ಕುಸಿ; ಸಭೆ: ಓಲಗ; ಹಲುಬು: ದುಃಖಪಡು; ಕೊಳುಗುಳ: ಯುದ್ಧ; ಕಂದ: ಮಗು; ಕಳುಹು: ತೆರಳು; ಸಂದು: ಅವಕಾಶ, ಸಂದರ್ಭ; ಪರಿಣಾಮ: ಫಲ;

ಪದವಿಂಗಡಣೆ:
ಅಳಲ +ಶಿಖಿಯಲಿ +ಬಾಡಿದ್+ಆನನ
ಜಲರುಹದ +ಕಡುವೇದನೆಯ +ಕಳ
ಕಳದ +ಹಾಹಾ +ರವದ +ರೌದ್ರೆ +ಸುಭದ್ರೆ +ನಡೆತಂದು
ನೆಲಕೆ+ ಧೊಪ್ಪನೆ +ಕೆಡೆದು +ಸಭೆಯಲಿ
ಹಲುಬಿದಳು +ಕೊಳುಗುಳಕೆ+ ಕಂದನ
ಕಳುಹಿದವರಿಗೆ+ ಸಂದುದೇ +ಪರಿಣಾಮವ್+ಎಂದೆನುತ

ಅಚ್ಚರಿ:
(೧) ಸುಭದ್ರೆಯ ಮುಖದ ವರ್ಣನೆ – ಅಳಲ ಶಿಖಿಯಲಿ ಬಾಡಿದಾನನಜಲರುಹದ
(೨) ದುಃಖವನ್ನು ವ್ಯಕ್ತಪಡಿಸುವ ಪರಿ – ಹಲುಬಿದಳು ಕೊಳುಗುಳಕೆ ಕಂದನ ಕಳುಹಿದವರಿಗೆ ಸಂದುದೇ ಪರಿಣಾಮವೆಂದೆನುತ

ಪದ್ಯ ೧೨೧: ಯಾರು ಶ್ರೇಷ್ಠರು?

ಜಲಧಿಯೊಳು ದುಗ್ಧಾಬ್ಧಿ ತೀರ್ಥಾ
ವಳಿಗಳೊಳು ಸುರನದಿ ಮುನೀಶ್ವರ
ರೊಳಗೆ ವೇದವ್ಯಾಸನಾ ವ್ರತಿಗಳೊಳು ಹನುಮಂತ
ಜಲರುಹಾಕ್ಷನು ದೈವದೊಳು ಕೇ
ಳುಳಿದ ಧರಣೀಪಾಲರೊಳಗ
ಗ್ಗಳೆಯನೈ ಧರ್ಮಜನು ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೧೨೧ ಪದ್ಯ)

ತಾತ್ಪರ್ಯ:
ಸಮುದ್ರಗಳಲ್ಲಿ ಕ್ಷೀರಸಮುದ್ರ, ತೀರ್ಥಗಳಲ್ಲಿ ಗಂಗಾನದಿ, ಮುನಿಗಳಲ್ಲಿ ವೇದವ್ಯಾಸ, ವ್ರತಿಗಳಲ್ಲಿ ಹನುಮಂತ, ದೇವತೆಗಳಲ್ಲಿ ವಿಷ್ಣು, ರಾಜರಲ್ಲಿ ಧರ್ಮರಾಯ ಇವರು ಶ್ರೇಷ್ಠರು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಜಲಧಿ: ಸಮುದ್ರ; ದುಗ್ಧ: ಹಾಲು; ಅಬ್ಧಿ: ಸಮುದ್ರ; ತೀರ್ಥ:ಪವಿತ್ರವಾದ ಜಲ; ಸುರನದಿ: ಗಂಗಾ; ಮುನಿ: ಋಷಿ; ವ್ರತಿ:ನಿಯಮಬದ್ಧವಾದ ನಡವಳಿಕೆಯುಳ್ಳವನು;ಜಲ: ನೀರು; ಜಲರುಹ: ಕಮಲ; ಅಕ್ಷ: ಕಣ್ಣು; ದೈವ: ದೇವತೆ; ಧರಣಿ: ಭೂಮಿ; ಧರಣೀಪಾಲ: ರಾಜ; ಅಗ್ಗ: ಶ್ರೇಷ್ಠತೆ; ಚಿತ್ತೈಸು: ಗಮನಿಸು; ಆವಳಿ: ಗುಂಪು, ಸಾಲು;

ಪದವಿಂಗಡಣೆ:
ಜಲಧಿಯೊಳು +ದುಗ್ಧ+ಅಬ್ಧಿ +ತೀರ್ಥ
ಆವಳಿಗಳೊಳು +ಸುರನದಿ+ ಮುನೀಶ್ವರ
ರೊಳಗೆ+ ವೇದವ್ಯಾಸನಾ+ ವ್ರತಿಗಳೊಳು +ಹನುಮಂತ
ಜಲರುಹಾಕ್ಷನು +ದೈವದೊಳು +ಕೇಳ್
ಉಳಿದ +ಧರಣೀಪಾಲರೊಳಗ್
ಅಗ್ಗಳೆಯನೈ+ ಧರ್ಮಜನು +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಕಮಲಕ್ಕೆ ಜಲರುಹ, ಗಂಗೆಗೆ ಸುರನದಿ ಎಂಬ ಪದದ ಬಳಕೆ

ಪದ್ಯ ೧೪: ಪಾಂಡವರು ಕುಂಬಾರನ ಮನೆಯಲ್ಲಿ ಹೇಗೆ ಕಾಲಕಳೆಯುತ್ತಿದ್ದರು?

ಇಳಿದನಸ್ತಾಚಲಕೆ ರವಿ ನೃಪ
ತಿಲಕರೈವರು ವಿಹಿತಕೃತ್ಯಾ
ವಳಿಗಳನು ವಿಸ್ತರಿಸಿ ಕುಂತಿಯ ಚರಣಕಭಿನಮಿಸಿ
ಜಲರುಹಾಕ್ಷನ ನಾಮಕೀರ್ತನ
ಲುಳಿತ ಪರಮಾನಂದರಸದಲಿ
ಮುಳುಗಿ ಮೂಡುತ್ತಿರ್ದರಂದು ಕುಲಾಲ ಭವನದಲಿ (ಆದಿ ಪರ್ವ, ೧೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ರವಿಯು ಪಶ್ಚಿಮ ದಿಕ್ಕಿನಲಿ ಮುಳುಗಲು, ರಾಜರಿಗೆ ತಿಲಕಪ್ರಾಯರಾದ ಪಾಂಡವರು ಸಂಧ್ಯಾಕಾಲದ ಕಾರ್ಯವನ್ನು ಮುಗಿಸಿ, ಕುಂತಿಯ ಪಾದಗಳಿಗೆ ನಮಸ್ಕರಿಸಿ, ಭಗವಂತನ ನಾಮಕೀರ್ತನೆಯಲ್ಲಿ ಮುಳುಗಿ, ಪರಮಾನಂದದಲಿ ಕುಂಬಾರನ ಮನೆಯಲ್ಲಿ ಕಾಲ ಕಳೆಯುತ್ತಿದ್ದರು.

ಅರ್ಥ:
ಇಳಿದು: ಮುಳುಗಿ; ಅಸ್ತ: ಪಶ್ಚಿಮ ದಿಕ್ಕಿನ ಪರ್ವತ, ಕೊನೆ; ಅಚಲ: ಬೆಟ್ಟ; ರವಿ: ಸೂರ್ಯ; ನೃಪ: ರಾಜ; ತಿಲಕ: ಶ್ರೇಷ್ಠ; ವಿಹಿತ:ಯೋಗ್ಯವಾದುದು; ಕೃತ್ಯ: ಕೆಲಸ; ವಿಸ್ತರ: ವಿವರಣೆ; ಚರಣ: ಪಾದ; ಅಭಿನಮಿಸಿ: ವಂದಿಸಿ; ಜಲ: ನೀರು; ಅರುಹು: ಹುಟ್ಟು; ಜಲರುಹ: ಪದ್ಮ; ಅಕ್ಷ: ಕಣ್ಣು; ನಾಮ: ಹೆಸರು; ಕೀರ್ತನ: ಭಜನೆ; ಪರಮಾನಂದ: ಅತೀವ ಸಂತೋಷ; ಮುಳುಗು: ಮಿಂದು; ಕುಲಾಲ: ಕುಂಬಾರ; ಭವನ: ಮನೆ;

ಪದವಿಂಗಡಣೆ:
ಇಳಿದನ್+ಅಸ್ತ+ಅಚಲಕೆ+ ರವಿ +ನೃಪ
ತಿಲಕರ್+ಐವರು +ವಿಹಿತ+ಕೃತ್ಯಾ
ವಳಿಗಳನು +ವಿಸ್ತರಿಸಿ+ ಕುಂತಿಯ +ಚರಣಕ್+ಅಭಿನಮಿಸಿ
ಜಲ+ಅರುಹ+ಅಕ್ಷನ +ನಾಮ+ಕೀರ್ತನ
ಲುಳಿತ+ ಪರಮಾನಂದ+ರಸದಲಿ
ಮುಳುಗಿ +ಮೂಡುತ್ತಿರ್ದರಂದು+ ಕುಲಾಲ +ಭವನದಲಿ

ಅಚ್ಚರಿ:
(೧) ಜಲರುಹ – ಕಮಲವನ್ನು ವರ್ಣಿಸಿರುವ ಬಗೆ
(೨) ಚರಣಕಭಿನಮಿಸಿ – ಪಾದಗಳಿಗೆ ನಮಸ್ಕರಿಸಿ ಎಂದು ವರ್ಣಿಸಲು
(೩) ಪಾಂಡವರನ್ನು ವರ್ಣಿಸಲು ನೃಪತಿಲಕರೈವರು ಎಂದು ಉಪಯೋಗ