ಪದ್ಯ ೨: ಸರೋವರದಲ್ಲಿ ಯಾವ ರೀತಿ ತಳಮಳವಾಯಿತು?

ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು (ಗದಾ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಆ ಮಹಾ ಶಬ್ದಕ್ಕೆ ಸರೋವರದ ತಲದ ಮಳಲು ಮೇಲೆದ್ದು ನೀರು ಕದಡಿತು. ಜಲಚರಕಗಳು ವೈರವನ್ನು ಮರೆತು ಒಟ್ಟಾಗಿ ಮೇಲಕ್ಕೆ ನೆಗೆದವು. ಕಮಲಪುಷ್ಪಗಳಲ್ಲಿದ್ದ ದುಂಬಿಗಳು ಬೆದರಿ ಅಲ್ಲಿಯೇ ಅಡಗಿಕೊಂಡವು. ಹಂಸಗಳು ಹಾರಿಹೋದವು. ಚಕ್ರವಾಕ ಪಕ್ಷಿಗಳು ಜಾರಿಕೊಂಡು ಆಚೆಗೆ ಹೋದವು.

ಅರ್ಥ:
ತಳಮಳ: ಗೊಂದಲ; ಮೊಗೆ: ಹೊರಹಾಕು; ಕದಡು: ಬಗ್ಗಡ, ರಾಡಿ, ಕಲಕಿದ ದ್ರವ; ಕೊಳ: ಸರೋವರ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ನಿಚಯ: ಗುಂಪು; ಬೊಬ್ಬುಳಿ: ನೀರುಗುಳ್ಳೆ; ಉಬ್ಬು: ಅತಿಶಯ, ಹೆಚ್ಚಾಗು; ನೆಗೆ: ಜಿಗಿ; ವಿಗತ: ಮರೆತ; ವೈರ: ಶತ್ರು, ಹಗೆತನ; ದಳ: ಸೈನ್ಯ; ಬಿಗಿ: ಗಟ್ಟಿ,ದೃಢ; ಅಂಬುಜ: ತಾವರೆ; ಅಡಗು: ಬಚ್ಚಿಟ್ಟುಕೊಳ್ಳು; ಅಳಿ: ದುಂಬಿ; ನಿಕರ: ಗುಂಪು; ಹಾರು: ಲಂಘಿಸು; ಹಂಸ: ಮರಾಲ; ಜವಾಯಿಲತನ: ವೇಗ, ಕ್ಷಿಪ್ರತೆ; ಜಗುಳು: ಜಾರು, ಸಡಿಲವಾಗು; ಜಕ್ಕವಕ್ಕಿ: ಚಕ್ರವಾಕ ಪಕ್ಷಿ; ಆವಳಿ: ಗುಂಪು;

ಪದವಿಂಗಡಣೆ:
ತಳಮಳಲ +ಮೊಗೆಮೊಗೆದು +ಕದಡಿತು
ಕೊಳನ +ಜಲಚರ+ನಿಚಯವ್+ಈ+ ಬೊ
ಬ್ಬುಳಿಕೆ +ಮಿಗಲೊಬ್ಬುಳಿಕೆ+ ನೆಗೆದವು+ ವಿಗತ+ ವೈರದಲಿ
ದಳವ +ಬಿಗಿದ್+ಅಂಬುಜದೊಳ್+ಅಡಗಿದವ್
ಅಳಿ+ನಿಕರ +ಹಾರಿದವು +ಹಂಸಾ
ವಳಿ +ಜವಾಯಿಲತನದಿ +ಜಗುಳ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧) ನಿಕರ, ನಿಚಯ, ಆವಳಿ – ಸಮಾನಾರ್ಥಕ ಪದ
(೨) ಜ ಕಾರದ ತ್ರಿವಳಿ ಪದ – ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು

ಪದ್ಯ ೧೭: ನಾರಾಯಣಾಸ್ತ್ರದ ತಾಪ ಎಂತಹದು?

ಒಳಗೆ ಜಲಚರವೊದರೆ ಕುದಿದುದು
ಜಲಧಿ ಕಾದುದು ಧರಣಿ ಸೀದುದು
ಕುಲಗಿರಿಗಳುರೆ ಸಿಡಿದು ಸೀಕರಿವೋಯ್ತು ವನನಿಕರ
ನೆಲಕೆ ದಾಡೆಯ ಕೊಟ್ಟು ಕುಂಭ
ಸ್ಥಳವ ತೆಗೆದವು ದಿಗಿಭತತಿ ಹೆಡೆ
ನಳಿಯೆ ಮಣಿಗಳಲಾಂತನವನಿಯನುರಗಪತಿಯಂದು (ದ್ರೋಣ ಪರ್ವ, ೧೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರದ ಕಾವಿಗೆ ಸಮುದ್ರವು ಕುದಿದು ಜಲಚರಗಳು ನೋವಿನಿಂದ ಒದರಿದವು. ಭೂಮಿ ಅರಣ್ಯಗಳು ಸೀದುಹೋದವು. ಕುಲಪರ್ವತಗಳು ಸಿಡಿದವು. ಅಷ್ಟ ದಿಗ್ಗಜಗಳು ತಾಪವನ್ನು ತಾಳಲಾರದೆ ನೆತ್ತಿಯನ್ನು ತಗ್ಗಿಸಿ ದಾಡೆಯಿಂದ ಭೂಮಿಯನ್ನು ಎತ್ತಿ ಹಿಡಿದವು. ಆದಿಶೇಷನು ಹೆಡೆಬಾಗಿ ಮಣಿಗಳಿಂದಲೇ ಭೂಮಿಯನ್ನು ಹೊತ್ತನು.

ಅರ್ಥ:
ಒಳಗೆ: ಆಂತರ್ಯ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ಕುದಿ: ಮರಳು; ಜಲಧಿ: ಸಾಗರ; ಕಾದು: ಬಿಸಿಯಾಗು; ಧರಣಿ: ಭೂಮಿ; ಸೀದು: ಕರಕಲಾಗು; ಕುಲಗಿರಿ: ದೊಡ್ಡ ಬೆಟ್ಟ; ಉರೆ: ಹೆಚ್ಚು; ಸಿಡಿ: ಸೀಳು; ಸೀಕರಿ: ಸೀಕಲು, ಕರಿಕು; ವನ: ಕಾಡು; ನಿಕರ: ಗುಂಪು; ನೆಲ: ಭೂಮಿ; ದಾಡೆ: ದವಡೆ, ಒಸಡು; ಕೊಟ್ಟು: ನೀದು; ಕುಂಭಸ್ಥಳ: ಆನೆಯ ನೆತ್ತಿ; ತೆಗೆ: ಹೊರತರು; ದಿಗಿಭ: ದಿಕ್ಕಿನ ಆನೆ, ದಿಗ್ಗಜ; ತತಿ: ಗುಂಪು; ಹೆಡೆ: ಹಾವಿನ ಬಿಚ್ಚಿದ ತಲೆ, ಫಣಿ; ನಳಿ: ಬಾಗು; ಮಣಿ: ಬೆಲೆಬಾಳುವ ರತ್ನ; ಅವನಿ: ಭೂಮಿ; ಉರಗಪತಿ: ಆದಿಶೇಷ;

ಪದವಿಂಗಡಣೆ:
ಒಳಗೆ +ಜಲಚರವೊದರೆ +ಕುದಿದುದು
ಜಲಧಿ +ಕಾದುದು +ಧರಣಿ+ ಸೀದುದು
ಕುಲಗಿರಿಗಳ್+ಉರೆ +ಸಿಡಿದು +ಸೀಕರಿವೋಯ್ತು +ವನ+ನಿಕರ
ನೆಲಕೆ +ದಾಡೆಯ +ಕೊಟ್ಟು +ಕುಂಭ
ಸ್ಥಳವ +ತೆಗೆದವು +ದಿಗಿಭತತಿ+ ಹೆಡೆ
ನಳಿಯೆ +ಮಣಿಗಳಲಾಂತನ್+ಅವನಿಯನ್+ಉರಗಪತಿ+ಅಂದು

ಅಚ್ಚರಿ:
(೧) ಕುದಿದುದು, ಕಾದುದು, ಸೀದುದು, ಸಿಡಿದು – ಪದಗಳ ಬಳಕೆ
(೨) ಒಂದೇ ಪದದ ಪ್ರಯೋಗ – ಮಣಿಗಳಲಾಂತನವನಿಯನುರಗಪತಿಯಂದು