ಪದ್ಯ ೭೩: ರಾಜನ ಮಾನವು ಯಾವುದರಿಂದ ಹೆಚ್ಚಾಗುತ್ತದೆ?

ಜರೆ ನರೆಯ ಮೈಸಿರಿಯ ಕುಲವೃ
ದ್ಧರನು ಹೀನಾಂಗರನು ಹಿಂಸಾ
ಚರಿತರನು ಜಾತ್ಯಂಧರನು ಧನದಾಸೆಯಳಿದವರ
ಅರಮನೆಯ ಸಂರಕ್ಷಣಾರ್ಥದೊ
ಳಿರಿಸಿದರೆ ಮಾನೋನ್ನತಿಕೆ ವಿ
ಸ್ತರಣವಹುದಿದನರಿದಿಹೈ ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೭೩ ಪದ್ಯ)

ತಾತ್ಪರ್ಯ:
ಈ ಕೆಳಗಿನ ಪಟ್ಟಿಯಲ್ಲಿರುವ ಜನರು ರಾಜನ ಬಳಿ ಇದ್ದರೆ, ರಾಜನ ಮಾನವು ಹೆಚ್ಚುತ್ತದೆ, ಎಂದು ನಾರದರು ಯುಧಿಷ್ಠಿರನಿಗೆ ಹೇಳುತ್ತಾರೆ. ಮುಪ್ಪಾಗಿ ತಲೆಕೂದಲು ಬೆಳ್ಳಗಾಗಿರುವ ಕುಲವೃದ್ಧರನ್ನೂ, ಅಂಗರಹಿತರನ್ನೂ, ಹಿಂಸೆಯಲ್ಲಿ ತೊಡಗಿದ್ದವರನ್ನೂ, ಹುಟ್ಟು ಕುರುಡರನ್ನೂ, ಹಣದ ಆಸೆಯಿಲ್ಲದವ ಅರಮನೆಯ ಸಂರಕ್ಷಣಾಕಾರ್ಯಕ್ಕೆ ನೇಮಿಸಿದರೆ, ರಾಜನ ಮಾನವು ಹೆಚ್ಚುತ್ತದೆ ಎಂದು ವಿವರಿಸಿದರು.

ಅರ್ಥ:
ಜರೆ:ಮುಪ್ಪು, ವೃದ್ಧಾಪ್ಯ; ನರೆ:ಬೆಳ್ಳಗಾದ ಕೂದಲು; ಮೈ: ಕಾಯ, ದೇಹ; ಸಿರಿ: ಸಂಪತ್ತು; ಕುಲ: ವಂಶ; ವೃದ್ಧ: ವಯಸ್ಸಾದ, ಹಿರಿಯ; ಹೀನಾಂಗ: ಅಂಗಹೀನ; ಅಂಗ: ದೇಹದ ಭಾಗ; ಹಿಂಸೆ: ನೋವು, ತೊಂದರೆ; ಚರಿತ:ನಡವಳಿಕೆ; ಜಾತ್ಯಂಧ: ಹುಟ್ಟುಕುರುಡ; ಧನ: ದುಡ್ಡು; ಆಸೆ: ಇಚ್ಛೆ; ಅರಮನೆ: ರಾಜರ ವಾಸಸ್ಥಾನ; ಸಂರಕ್ಷಣೆ: ಕಾವಲು ಕಾಯುವಿಕೆ,ಕಾಪಾಡುವಿಕೆ; ಮಾನ: ಮರ್ಯಾದೆ, ಗೌರವ; ಉನ್ನತಿ: ಹೆಚ್ಚು; ವಿಸ್ತರಣ: ಹರಡು; ಅರಿ: ತಿಳಿ; ಭೂಪಾಲ: ರಾಜ;

ಪದವಿಂಗಡಣೆ:
ಜರೆ +ನರೆಯ +ಮೈಸಿರಿಯ +ಕುಲ+ವೃ
ದ್ಧರನು +ಹೀನ+ಅಂಗರನು +ಹಿಂಸಾ
ಚರಿತರನು+ ಜಾತ್ಯಂಧರನು+ ಧನದಾಸೆ+ಅಳಿದವರ
ಅರಮನೆಯ +ಸಂರಕ್ಷಣಾರ್ಥದೊಳ್
ಇರಿಸಿದರೆ +ಮಾನ+ಉನ್ನತಿಕೆ +ವಿ
ಸ್ತರಣವಹುದ್+ಇದನ್+ಅರಿದಿಹೈ+ ಭೂಪಾಲ +ಕೇಳೆಂದ

ಅಚ್ಚರಿ:
(೧) ಜರೆ, ನರೆ – ಪ್ರಾಸ ಪದಗಳು