ಪದ್ಯ ೨೧: ಧೃತರಾಷ್ಟ್ರನು ಸಂಜಯನಿಗೆ ಯಾವ ಪ್ರಶ್ನೆಗಳನ್ನಿಟ್ಟನು?

ಹೋಗಿ ತಳುವಿದೆ ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ ಪಾಂಡವ
ರಾಗುಹೋಗೇನಾಯ್ತು ಶಕುನಿಯ ಹಯದ ಮೋಹರವ
ತಾಗಿ ಮುರಿದನೆ ಭೀಮನೀ ಮೇ
ಲ್ಪೋಗಿನಾಹವವೇನು ರಾಯನ
ತಾಗು ಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ (ಗದಾ ಪರ್ವ, ೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮಾತನಾಡುತ್ತಾ, ಸಂಜಯ ಹೋದವನು ಬಹಳ ತಡವಾಗಿ ಬಂದೆ. ಜಯಲಕ್ಷ್ಮಿಯು ಕೌರವನನ್ನು ತ್ಯಜಿಸಿ ಹೋದಳೇ? ಪಾಂಡವರ ಆಗುಹೋಗುಗಳೇನು? ಶಕುನಿಯ ಕುದುರೆಗಳ ದಳವನ್ನು ಭೀಮನು ಆಕ್ರಮಿಸಿ ಮುರಿದನೇ? ಕೌರವನ ಗತಿಯೇನು ಎಂದು ಪ್ರಶ್ನಿಸಿದನು.

ಅರ್ಥ:
ಹೋಗು: ತೆರಳು; ತಳುವು: ನಿಧಾನಿಸು; ನೀಗು: ನಿವಾರಿಸಿಕೊಳ್ಳು, ಪರಿಹರಿಸು; ಜಯಲಕ್ಷ್ಮಿ: ವಿಜಯಲಕ್ಷ್ಮಿ; ಆಗುಹೋಗು: ವಿಚಾರ; ಹಯ: ಕುದುರೆ; ಮೋಹರ: ಯುದ್ಧ; ತಾಗು: ಮುಟ್ಟು; ಮುರಿ: ಸೀಳು; ಆಹವ: ಯುದ್ಧ; ರಾಯ: ರಾಜ; ಥಟ್ಟು: ಗುಂಪು; ಹೇಳು: ಗೊತ್ತುಮಾಡು;

ಪದವಿಂಗಡಣೆ:
ಹೋಗಿ+ ತಳುವಿದೆ +ಕೌರವೇಂದ್ರನ
ನೀಗಿದಳೆ +ಜಯಲಕ್ಷ್ಮಿ+ ಪಾಂಡವರ್
ಆಗುಹೋಗೇನಾಯ್ತು +ಶಕುನಿಯ +ಹಯದ +ಮೋಹರವ
ತಾಗಿ +ಮುರಿದನೆ +ಭೀಮನೀ +ಮೇ
ಲ್ಪೋಗಿನ್+ಆಹವವೇನು +ರಾಯನ
ತಾಗು +ಥಟ್ಟೇನಾಯ್ತು +ಸಂಜಯ +ತಿಳಿಯ+ಹೇಳೆಂದ

ಅಚ್ಚರಿ:
(೧) ಧೃತರಾಷ್ಟ್ರನು ಕೌರವನು ಜಯಿಸನು ಎಂದು ಯೋಚಿಸಿದ ಎಂದು ಹೇಳುವ ಪರಿ – ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ
(೨) ಮೋಹರ, ಆಹವ – ಸಮಾನಾರ್ಥಕ ಪದ

ಪದ್ಯ ೧೯: ಅಶ್ವತ್ಥಾಮನು ಯಾರನ್ನು ಸೇನಾಧಿಪತಿಗೆ ಸೂಚಿಸಿದನು?

ಧರಣಿಪತಿ ಚಿತ್ತೈಸು ಸೇನಾ
ಧುರವನೀವುದು ಮದ್ರಭೂಪತಿ
ಗೆರವಲಾ ಜಯಲಕ್ಷ್ಮಿ ಬಳಿಕಾ ಪಾಂಡುತನಯರಿಗೆ
ಸುರನದೀಜ ದ್ರೋಣ ರಾಧೇ
ಯರಿಗೆ ಸರಿಮಿಗಿಲಿಂದು ಮಾದ್ರೇ
ಶ್ವರ್ನುಳಿಯೆ ದೊರೆಯಾರು ದಿಟ್ಟರು ನಮ್ಮ ಥಟ್ಟಿನಲಿ (ಶಲ್ಯ ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು, ಅರಸ ಕೇಳು, ಸೇನಾಧಿಪತ್ಯವನ್ನು ಶಲ್ಯನಿಗೆ ಕೊಡು. ಜಯಲಕ್ಷ್ಮಿ ಅವನ ಬಳಿಯಿದ್ದಾಳೆ. ಪಾಂಡವರನ್ನೆದುರಿಸಲು ಮದ್ರದೇಶದ ರಾಜನಾದ ಶಲ್ಯನು ಭೀಷ್ಮ, ದ್ರೋಣ, ಕರ್ಣರಿಗೆ ಸರಿಸಮಾನನಾದವನು. ನಮ್ಮ ಸೈನ್ಯದಲ್ಲಿ ಅವನಿಗಿಂತ ಪರಾಕ್ರಮಶಾಲಿಗಳಾರಿದ್ದಾರೆ ಎಂದು ಕೇಳಿದನು.

ಅರ್ಥ:
ಧರಣಿಪತಿ: ರಾಜ; ಚಿತ್ತೈಸು: ಕೇಳು; ಧುರ: ಸಿರಿ, ಸಂಪತ್ತು, ಕಾಳಗ; ಈವುದು: ನೀಡು; ಭೂಪತಿ: ರಾಜ; ಎರವು: ಸಾಲ, ಕಡ; ಜಯಲಕ್ಷ್ಮಿ: ವಿಜಯಲಕ್ಷ್ಮಿ; ಬಳಿಕ: ನಂತರ; ತನಯ: ಮಕ್ಕಳು; ಸುರನದೀಜ: ಭೀಷ್ಮ; ರಾಧೇಯ: ಕರ್ಣ; ಸರಿಮಿಗಿಲು: ಸಮಾನ; ಉಳಿ: ಜೀವಿಸು; ದೊರೆ: ರಾಜ; ದಿಟ್ಟ: ಧೈರ್ಯಶಾಲಿ; ಥಟ್ಟು: ಗುಂಪು;

ಪದವಿಂಗಡಣೆ:
ಧರಣಿಪತಿ+ ಚಿತ್ತೈಸು +ಸೇನಾ
ಧುರವನ್+ಈವುದು +ಮದ್ರ+ಭೂಪತಿಗ್
ಎರವಲಾ +ಜಯಲಕ್ಷ್ಮಿ +ಬಳಿಕಾ +ಪಾಂಡು+ತನಯರಿಗೆ
ಸುರನದೀಜ +ದ್ರೋಣ +ರಾಧೇ
ಯರಿಗೆ+ ಸರಿಮಿಗಿಲಿಂದು +ಮಾದ್ರೇ
ಶ್ವರನುಳಿಯೆ +ದೊರೆಯಾರು +ದಿಟ್ಟರು +ನಮ್ಮ +ಥಟ್ಟಿನಲಿ

ಅಚ್ಚರಿ:
(೧) ಧರಣಿಪತಿ, ಭೂಪತಿ – ಸಮಾನಾರ್ಥಕ ಪದ

ಪದ್ಯ ೮೭: ಯುದ್ಧದಲ್ಲಿ ಮದುವೆಯ ಸಂಭ್ರಮ ಹೇಗೆ ಕಂಡಿತು?

ಕೊಳುಗುಳದ ಜಯಲಕ್ಷ್ಮಿಗಾಯಿತು
ಚಲನಸುತನಲಿ ಮದುವೆಯೆನೆ ಮಂ
ಗಳಮುಹೂರ್ತಕದೊಳಗೆ ಮುಳುಗಿದ ಘಳಿಗೆವಟ್ಟಿಲೆನೆ
ತಲೆ ಕಪಾಲದ ಸಾಲಶೋಣಿತ
ಜಲದಲಂದೊಪ್ಪಿದವು ರಣದೊಳು
ಕಳದೊಳದ್ಭುತರಚನೆ ಮಿಗೆ ಸೌರಂಭ ರಂಜಿಸಿತು (ಕರ್ಣ ಪರ್ವ, ೧೯ ಸಂಧಿ, ೮೭ ಪದ್ಯ)

ತಾತ್ಪರ್ಯ:
ಯುದ್ಧದಲ್ಲಿ ಭೀಮನಿಗೆ ಜಯಲಕ್ಷಿಯೊಡನೆ ವಿವಾಹವಾಯಿತು, ದುಶ್ಯಾಸನ ವಧೆಯ ಮಂಗಳ ಮುಹೂರ್ತದಲ್ಲಿ ರಣರಂಗದಲ್ಲಿ ರಕ್ತದಿಂದ ತೋಯ್ದ ತಲೆಬುರುಡೆಗಳು ಅದ್ಭುತ ರಚನೆಯಾಗಿಕಂಡು ಸಂಭ್ರಮದ ಕಳೆಯನ್ನು ಬೀರಿತು.

ಅರ್ಥ:
ಕೊಳುಗುಳ: ಯುದ್ಧ, ರಣರಂಗ; ಜಯಲಕ್ಷ್ಮಿ: ವಿಜಯಶ್ರೀ, ವಿಜಯಲಕ್ಷ್ಮಿ; ಚಲನಸುತ: ವಾಯುಸುತ (ಭೀಮ); ಮದುವೆ: ವಿವಾಹ; ಮಂಗಳ: ಶುಭ; ಮುಹೂರ್ತ: ಸಮಯ; ಮುಳುಗು: ತೋಯು; ಘಳಿಗೆ: ಸಮಯ, ಅವಧಿ; ತಲೆ: ಶಿರ; ಕಪಾಲ: ತಲೆಯೋಡು, ತಲೆಬುರುಡೆ; ಸಾಲ: ಸಾಲು, ಆವಳಿ; ಶೋಣಿತ: ರಕ್ತ; ಜಲ: ನೀರು; ಒಪ್ಪು: ಶೋಭಿಸು, ಅನುಮತಿಸು; ರಣ: ಯುದ್ಧ; ಕಳ: ರಣರಂಗ; ಅದ್ಭುತ: ಆಶ್ಚರ್ಯ; ರಚನೆ: ನಿರ್ಮಾಣ, ಸೃಷ್ಟಿ; ಮಿಗೆ: ಮತ್ತು, ಅಧಿಕ; ಸೌರಂಭ: ಸಂಭ್ರಮ, ಸಡಗರ; ರಂಜಿಸು: ಹೊಳೆ, ಪ್ರಕಾಶಿಸು;
ಗಳಿಗೆಬಟ್ಟಲು: ಕಾಲಗಣನೆಯ ಒಂದು ಸಾಧನ;

ಪದವಿಂಗಡಣೆ:
ಕೊಳುಗುಳದ +ಜಯಲಕ್ಷ್ಮಿಗ್+ಆಯಿತು
ಚಲನಸುತನಲಿ+ ಮದುವೆ+ಎನೆ+ ಮಂ
ಗಳ+ಮುಹೂರ್ತಕದೊಳಗೆ +ಮುಳುಗಿದ +ಘಳಿಗೆವಟ್ಟಿಲೆನೆ
ತಲೆ+ ಕಪಾಲದ +ಸಾಲ+ಶೋಣಿತ
ಜಲದಲಂತ್+ಒಪ್ಪಿದವು +ರಣದೊಳು
ಕಳದೊಳ್+ಅದ್ಭುತ+ರಚನೆ +ಮಿಗೆ+ ಸೌರಂಭ+ ರಂಜಿಸಿತು

ಅಚ್ಚರಿ:
(೧) ಭೀಮನನ್ನು ಚಲನಸುತ ಎಂದು ಕರೆದಿರುವುದು
(೨) ರಣರಂಗವನ್ನು ಮದುವೆಯ ಸಂಭ್ರಮಕ್ಕೆ ಹೋಲಿಸಿರುವ ಕವಿಯ ಕಲ್ಪನೆ

ಪದ್ಯ ೩೪: ಕರ್ಣನು ತಾನು ರಾಜನಾಗಲು ಅನರ್ಹನೆಂದು ಕುಂತಿಗೇಕೆ ಹೇಳಿದನು?

ಮಕ್ಕಳೈವರಿಗಾಂ ಹಿರಿಯನಿದು
ತಕ್ಕ ಮಾತೆಲೆ ತಾಯೆ ಸಂದೇ
ಹಕ್ಕೆ ನೆಲೆಯಿಲ್ಲದು ನಿಲಲಿ ಧಾರಿಣಿಯ ಬಯಸುವೊಡೆ
ತಕ್ಕುದೇ ದಾತಾರನರಸಿಯೊ
ಳೊಕ್ಕತನವಿರಲಾರು ಮೆಚ್ಚುವ
ರಕ್ಕ ಹೇಳೌ ಹೇಸಳೇ ಜಯಲಕ್ಷ್ಮಿ ತನಗೆಂದ (ಉದ್ಯೋಗ ಪರ್ವ, ೧೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ನಿನ್ನ ಐವರು ಮಕ್ಕಳಿಗೂ ನಾನು ಹಿರಿಯ, ಇದು ಒಪ್ಪುವ ಮಾತೆ ಇದರಲ್ಲೇನನುಮಾನವಿಲ್ಲ. ಅ ಅದರೆ ಈ ಭೂಮಿಗೆ ಒಡೆಯನಾಗಲು ಬಯಸುವುದು ಸರಿಯೇ? ಒಡೆಯ ಕೌರವ ಸತಿಯೊಡನೆ ಬಾಳುವೆ ಮಾಡಿದರೆ ಯಾರು ತಾನೆ ಮೆಚ್ಚುತ್ತಾರೆ? ಜಯಲಕ್ಷ್ಮಿಯು ನನ್ನನ್ನು ಕಂಡು ಅಸಹ್ಯಪಡುವುದಿಲ್ಲವೇ ಅಕ್ಕಾ ಹೇಳು ಎಂದು ಕರ್ಣನು ಕುಂತಿಗೆ ಹೇಳಿದನು.

ಅರ್ಥ:
ಮಕ್ಕಳು: ಪುತ್ರ/ಪುತ್ರಿ; ಹಿರಿ: ದೊಡ್ಡವ; ತಕ್ಕ: ಸರಿಯಾದ; ಮಾತು: ನುಡಿ; ಸಂದೇಹ: ಸಂಶಯ; ನೆಲೆ: ಆಶ್ರಯ, ಆಧಾರ; ನಿಲು: ಇರು, ಉಳಿ; ಧಾರಿಣಿ: ಭೂಮಿ; ಬಯಸು: ಇಷ್ಟಪಡು; ತಕ್ಕು: ಸರಿಯೇ; ದಾತಾರ: ಆಶ್ರಯದಾತ; ಅರಸಿ: ರಾಣಿ; ಒಕ್ಕತನ: ಕೂಡಿ ಬಾಳುವೆ ಮಾಡುವುದು; ಮೆಚ್ಚು: ಇಷ್ಟಪಡು; ಹೇಸು: ಅಸಹ್ಯ, ಜುಗುಪ್ಸೆ; ಜಯ: ವಿಜಯ, ಗೆಲುವು;

ಪದವಿಂಗಡಣೆ:
ಮಕ್ಕಳೈವರಿಗಾಂ +ಹಿರಿಯನ್+ಇದು
ತಕ್ಕ +ಮಾತ್+ಎಲೆ +ತಾಯೆ +ಸಂದೇ
ಹಕ್ಕೆ +ನೆಲೆಯಿಲ್ಲದು +ನಿಲಲಿ+ ಧಾರಿಣಿಯ +ಬಯಸುವೊಡೆ
ತಕ್ಕುದೇ +ದಾತಾರನ್+ಅರಸಿಯೊಳ್
ಒಕ್ಕತನವ್+ಇರಲ್+ಆರು+ ಮೆಚ್ಚುವರ್
ಅಕ್ಕ +ಹೇಳೌ +ಹೇಸಳೇ +ಜಯಲಕ್ಷ್ಮಿ+ ತನಗೆಂದ

ಅಚ್ಚರಿ:
(೧) ಕುಂತಿಯನ್ನು ತಾಯಿ, ಅಕ್ಕ ಎಂದು ಕರೆದಿರುವುದು