ಪದ್ಯ ೨೮: ದುರ್ಯೋಧನನು ತನ್ನ ಸ್ಥಿತಿಯ ಬಗ್ಗೆ ಏನು ಹೇಳಿದ?

ಕೇಳು ಸಂಜಯ ಪೂರ್ವ ಸುಕೃತದ
ಸಾಳಿವನವೊಣಗಿದೊಡೆ ಭಾರಿಯ
ತೋಳುಗುತ್ತಿನ ಜಯಲಕುಮಿ ಜಂಗಳವ ಜಾರಿದಡೆ
ಭಾಳಲಿಪಿಗಳ ಲೆಕ್ಕವನು ಪ್ರತಿ
ಕೂಲವಿಧಿ ಪಲ್ಲಟಿಸಿ ಬರೆದಡೆ
ಹೇಳಿ ಫಲವೇನೆನುತ ತುಂಬಿದನರಸ ಕಂಬನಿಯ (ಗದಾ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಆಗ ದುರ್ಯೋಧನನು ಕಂಬನಿಗಳಿಂದ ತುಂಬಿದವನಾಗಿ, ಸಂಜಯ ಕೇಳು, ಪೂರ್ವ ಪುಣ್ಯದ ಭತ್ತದ ಗದ್ದೆ ಒಣಗಿ ಹೋದರೆ, ಭಾರಿಯ ತೋಳ ಬಂದಿಯನ್ನು ಹಾಕಿಕೊಂಡಿದ್ದ ಜಯಲಕ್ಷ್ಮಿಯ ತೋಳು ಸಡಲವಾಗಿಸಿ ಜಾರಿಬಿದ್ದರೆ, ಹಣೆಯಮೇಲೆ ಬರೆದಿದ್ದ ಲಿಪಿಗಳ ಲೆಕ್ಕಾಚಾರವನ್ನು ವಿಧಿಯ ವಿರೋಧದಿಂದ ತಿರುವು ಮುರುವಾಗಿ ಬರೆದರೆ, ಏನು ಹೇಳಿ ಏನು ಪ್ರಯೋಜನ ಎಂದು ತನ್ನ ಸ್ಥಿತಿಯ ಬಗ್ಗೆ ಸಂಜಯನಿಗೆ ಹೇಳಿದನು.

ಅರ್ಥ:
ಕೇಳು: ಆಲಿಸು; ಪೂರ್ವ: ಹಿಂದೆ; ಸುಕೃತ: ಒಳ್ಳೆಯ ಕೆಲಸ; ಶಾಳಿವನ: ಬತ್ತದ ಗದ್ದೆ; ಒಣಗು: ಜೀವವಿಲ್ಲದ; ಭಾರಿ: ದೊಡ್ಡ; ತೋಳು: ಬಾಹು; ಜಯ: ಗೆಲುವು; ಜಂಗಳ: ಸಡಿಲವಾಗಿ; ಜಾರು: ಕೆಳಗೆ ಬೀಳು; ಭಾಳ: ಹಣೆ; ಲಿಪಿ: ಬರಹ; ಲೆಕ್ಕ: ಎಣಿಕೆ; ಪ್ರತಿಕೂಲ: ಅನುಕೂಲವಲ್ಲದುದು, ವ್ಯತಿರಿಕ್ತವಾದುದು; ವಿಧಿ: ನಿಯಮ; ಪಲ್ಲಟ: ಬದಲಾವಣೆ; ಬರೆ: ಲಿಖಿಸು; ಹೇಳು: ತಿಳಿಸು; ಫಲ: ಪ್ರಯೋಜನ; ತುಂಬು: ಭರ್ತಿ ಮಾಡು; ಅರಸ: ರಾಜ; ಕಂಬನಿ: ಕಣ್ಣೀರು;

ಪದವಿಂಗಡಣೆ:
ಕೇಳು +ಸಂಜಯ +ಪೂರ್ವ +ಸುಕೃತದ
ಸಾಳಿವನ+ಒಣಗಿದೊಡೆ +ಭಾರಿಯ
ತೋಳುಗುತ್ತಿನ+ ಜಯಲಕುಮಿ +ಜಂಗಳವ +ಜಾರಿದಡೆ
ಭಾಳ+ಲಿಪಿಗಳ+ ಲೆಕ್ಕವನು +ಪ್ರತಿ
ಕೂಲವಿಧಿ +ಪಲ್ಲಟಿಸಿ +ಬರೆದಡೆ
ಹೇಳಿ +ಫಲವೇನ್+ಎನುತ +ತುಂಬಿದನ್+ಅರಸ +ಕಂಬನಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪೂರ್ವ ಸುಕೃತದಸಾಳಿವನವೊಣಗಿದೊಡೆ