ಪದ್ಯ ೨೭: ವ್ಯಾಸರು ಯಾವ ಉಪದೇಶವನ್ನು ನೀಡಿದರು?

ದೇಹ ತಾನಭಿಮನ್ಯುವೋ ದಿಟ
ದೇಹಿ ತಾನಭಿಮನ್ಯುವೋ ಜಡ
ದೇಹ ತಾನಭಿಮನ್ಯುವಲ್ಲದು ಕೆಟ್ಟರೇನಾಯ್ತು
ದೇಹವೆಂಬುದನಿತ್ಯ ನಿನ್ನವ
ರಾಹವದೊಳಳಿದವರ ಬಿಡು ಸಂ
ದೇಹವನಹಮ್ಮಮತೆಗಳ ಬೀಳ್ಕೊಟ್ಟು ನೋಡೆಂದ (ದ್ರೋಣ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ವ್ಯಾಸರು ಉಪದೇಶಿಸುತ್ತಾ, ಆ ದೇಹವು ಅಭಿಮನ್ಯುವೋ, ಆ ದೇಹವನ್ನು ಧರಿಸಿದ ಆತ್ಮನು ಅಭಿಮನ್ಯುವೋ? ದೇಹವು ಅಭಿಮನ್ಯುವಲ್ಲ, ಅದು ಹೋದರೇನಾಯಿತು? ದೇಹವು ಅನಿತ್ಯ ಯುದ್ಧದಲ್ಲಿ ಸತ್ತ ನಿನ್ನವರನ್ನು ಬಿಟ್ಟುಬಿಡು. ಈ ದುಃಖಕ್ಕೆ ನಾನು ಎಂಬ ಅಹಂಕಾರ, ನನ್ನದೆಂಬ ಮಮಕಾರಗಳೇ ಕಾರಣ. ಅಹಂಕಾರ ಮಮಕಾರಗಳನ್ನು ಬಿಟ್ಟು ಆಲೋಚಿಸು.

ಅರ್ಥ:
ದೇಹ: ತನು; ದಿಟ: ಸತ್ಯ; ಜಡ: ಅಚೇತನವಾದುದು; ಕೆಡು: ಹಾಳಾಗು; ಅನಿತ್ಯ: ಶಾಶ್ವತವಲ್ಲದ; ಆಹವ: ಯುದ್ಧ; ಅಳಿ: ಸಾವು; ಬಿಡು: ತೊರೆ; ಸಂದೇಹ: ಸಂಶಯ; ಮಮತೆ: ಪ್ರೀತಿ; ಬೀಳ್ಕೊಡು: ತೊರೆ; ನೋಡು: ವೀಕ್ಷಿಸು;

ಪದವಿಂಗಡಣೆ:
ದೇಹ +ತಾನ್+ ಅಭಿಮನ್ಯುವೋ +ದಿಟ
ದೇಹಿ+ ತಾನ್+ಅಭಿಮನ್ಯುವೋ +ಜಡ
ದೇಹ +ತಾನ್+ಅಭಿಮನ್ಯುವಲ್ಲದು+ ಕೆಟ್ಟರೇನಾಯ್ತು
ದೇಹವೆಂಬುದ್+ಅನಿತ್ಯ +ನಿನ್ನವರ್
ಆಹವದೊಳ್+ಅಳಿದವರ +ಬಿಡು +ಸಂ
ದೇಹವ್+ಅಹಮ್+ಮಮತೆಗಳ+ ಬೀಳ್ಕೊಟ್ಟು +ನೋಡೆಂದ

ಅಚ್ಚರಿ:
(೧) ದೇಹ, ಸಂದೇಹ – ಪ್ರಾಸ ಪದಗಳು
(೨) ವ್ಯಾಸರ ಉಪದೇಶ – ದೇಹವೆಂಬುದನಿತ್ಯ; ಬಿಡು ಸಂದೇಹವನಹಮ್ಮಮತೆಗಳ ಬೀಳ್ಕೊಟ್ಟು ನೋಡೆಂದ

ಪದ್ಯ ೧೪: ಕರ್ಣನು ಕೃಪಾಚಾರ್ಯರನ್ನು ಹೇಗೆ ಹಂಗಿಸಿದನು?

ಬಲ್ಲಿರೈ ಕೌರವನ ಧನವನು
ಹೊಳ್ಳಿಸಲು ಮೃಷ್ಟಾನ್ನದಿಂದವೆ
ಡೊಳ್ಳ ಬೆಳೆಸಿಯೆ ರಾಜಗುರುತನದಿಂದ ಬೆರೆತಿಹಿರಿ
ಬಿಲ್ಲವಿದ್ಯಾ ವಿಷಯ ರಿಪುಭಟ
ಮಲ್ಲರೊಡನೆಯ ಕದನವಿದು ಜಡ
ರೆಲ್ಲರಿಗೆ ಸುಲಭವೆ ಜಪಾನುಷ್ಠಾನವಲ್ಲೆಂದ (ವಿರಾಟ ಪರ್ವ, ೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕೌರವನ ಧನವನ್ನು ಬಾಚಿಕೊಂಡು, ಮೃಷ್ಟಾನ್ನ ಭೋಜನವನ್ನುಂಡು, ಡೊಳ್ಳು ಹೊಟ್ಟೆ ಬೆಳೆಸಿ, ರಾಜಗುರುಗಳೆಂದು ಬಿಂಕದಿಂದ ಬೀಗುತ್ತಿದ್ದೀರಿ, ಆದರಿದು ಧನುರ್ವಿದ್ಯೆಯ ವಿಷಯ, ಮಹಾವೀರರಾದ ಶತ್ರುಭಟರೊಡನೆ ಹೋರಾಟ, ನಿಮ್ಮಂತಹ ಜಡರಿಂದೇನು ಸಾಧ್ಯ? ಇದು ಜಪ, ಅನುಷ್ಠಾನ ಇದ್ದ ಹಾಗಲ್ಲ ಎಂದು ಕೃಪಾಚಾರ್ಯರನ್ನು ಕರ್ಣನು ಹಂಗಿಸಿದನು.

ಅರ್ಥ:
ಬಲ್ಲಿರಿ: ತಿಳಿದಿರುವಿರಿ; ಧನ: ಐಶ್ವರ್ಯ; ಹೊಳ್ಳಿಸು: ಖಾಲಿಮಾಡು; ಮೃಷ್ಟಾನ್ನ: ಹಬ್ಬದ ಊಟ; ಡೊಳ್ಳು: ಬೊಜ್ಜು ಬೆಳೆದ ಹೊಟ್ಟೆ; ಬೆಳೆಸು: ವೃದ್ಧಿಸು; ಗುರು: ಆಚಾರ್ಯ; ಬೆರೆ: ಸೇರು,ಸೊಕ್ಕು, ಗರ್ವಿಸು; ಬಿಲ್ಲು: ಚಾಪ; ವಿಷಯ: ವಿಚಾರ; ರಿಪುಭಟ: ವೈರಿ ಸೈನ್ಯ; ಮಲ್ಲ: ಜಟ್ಟಿ; ಕದನ: ಯುದ್ಧ; ಜಡ: ಆಲಸ್ಯ; ಸುಲಭ: ಕಷ್ಟವಲ್ಲದುದು; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಅನುಷ್ಠಾನ: ಆಚರಣೆ;

ಪದವಿಂಗಡಣೆ:
ಬಲ್ಲಿರೈ +ಕೌರವನ +ಧನವನು
ಹೊಳ್ಳಿಸಲು +ಮೃಷ್ಟಾನ್ನದಿಂದವೆ
ಡೊಳ್ಳ+ ಬೆಳೆಸಿಯೆ +ರಾಜಗುರುತನದಿಂದ +ಬೆರೆತಿಹಿರಿ
ಬಿಲ್ಲವಿದ್ಯಾ+ ವಿಷಯ +ರಿಪು+ಭಟ
ಮಲ್ಲರೊಡನೆಯ +ಕದನವಿದು +ಜಡ
ರೆಲ್ಲರಿಗೆ +ಸುಲಭವೆ +ಜಪಾನುಷ್ಠಾನವ್+ಅಲ್ಲೆಂದ

ಅಚ್ಚರಿ:
(೧) ಕೃಪಾಚಾರ್ಯರನ್ನು ಹಂಗಿಸುವ ಪರಿ – ಮೃಷ್ಟಾನ್ನದಿಂದವೆ ಡೊಳ್ಳ ಬೆಳೆಸಿಯೆ ರಾಜಗುರುತನದಿಂದ ಬೆರೆತಿಹಿರಿ

ಪದ್ಯ ೨೨: ಊರ್ವಶಿಯು ಏಕೆ ಕರಗಿದಳು?

ವಿಕಳಮತಿಯೋ ಮೇಣಿವ ನಪುಂ
ಸಕನೊ ಜಡನೋ ಶ್ರೋತ್ರಿಯನೊ ಬಾ
ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ
ವಿಕಟ ತಪಸಿನ ದೇವ ದೈತ್ಯರ
ಮಕುಟವಾಂತದು ವಾಮಪಾದವ
ನಕಟ ಕೆಟ್ಟೆನಲಾಯೆನುತ ಕರಗಿದಳು ನಳಿನಾಕ್ಷಿ (ಅರಣ್ಯ ಪರ್ವ, ೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನನ ಭಾವನೆಯನ್ನು ಕಂಡು, ಊರ್ವಶಿಯು ಅರ್ಜುನನನ್ನು ನೋಡಿ, ಇವನೇನು ಮತಿಹೀನನೋ, ಅಥವ ನಪುಂಸಕನೋ, ತಿಳುವಳಿಕೆಯಿಲ್ಲದವನೋ, ಬ್ರಾಹ್ಮಣನೋ, ಪರರಿಗೆ ಬಾಧೆಕೊಡುವ ಸ್ವಭಾವದವನೋ, ನೀಚನೋ, ದುಷ್ಟನೋ, ಮಾನವಾಕಾರವಿರುವ ಇನ್ನೇನೋ? ಮಹಾ ತಪಸ್ಸನ್ನು ಮಾಡಿದ ದೇವ ದಾನವರು ಬಂದು ತಮ್ಮ ಕಿರೀಟವನ್ನು ಎಡಪಾದಕ್ಕೆ ಇಟ್ಟು ನನ್ನನ್ನು ಬೇಡಿಕೊಳ್ಳುತ್ತಿದ್ದರು, ಅಂತಹ ನಾನು ಈಗ ಕೆಟ್ಟೆನಲ್ಲಾ ಎಂದು ಚಿಂತಿಸುತ್ತಾ ಊರ್ವಶಿಯು ಕರಗಿಹೋದಳು.

ಅರ್ಥ:
ವಿಕಳ:ಭ್ರಮೆ, ಭ್ರಾಂತಿ; ಮತಿ: ಬುದ್ಧಿ; ಮೇಣ್: ಅಥವ; ನಪುಂಸಕ: ಕೊಜ್ಜೆ, ಷಂಡ, ಖೋಜಾ, ನಿರ್ವೀರ್ಯ; ಜಡ: ಆಲಸ್ಯ, ಅಚೇತನ; ಶ್ರೋತ್ರಿ: ಬ್ರಾಹ್ಮಣ; ಬಾಧಕ: ತೊಂದರೆ ಕೊಡುವವ; ಖಳ: ಕ್ರೂರ; ಖೂಳ: ದುಷ್ಟ; ಮಾನವ: ನರ; ವಿಕಾರ: ಕುರೂಪ; ವಿಕಟ: ವಿಕಾರ, ಸೊಕ್ಕಿದ; ತಪಸ್ಸು: ಧ್ಯಾನ; ದೇವ: ಸುರರು; ದೈತ್ಯ: ರಾಕ್ಷಸ; ಮಕುಟ: ಕಿರೀಟ; ವಾಮಪಾದ: ಎಡ ಕಾಲು; ಅಕಟ: ಅಯ್ಯೋ; ಕೆಟ್ಟೆ: ಹಾಳಾಗು; ಕರಗು: ನೀರಾಗಿಸು, ಕನಿಕರ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ವಿಕಳಮತಿಯೋ +ಮೇಣ್+ಇವ +ನಪುಂ
ಸಕನೊ+ ಜಡನೋ +ಶ್ರೋತ್ರಿಯನೊ +ಬಾ
ಧಕನೊ+ ಖಳನೋ +ಖೂಳನೋ+ ಮಾನವ+ ವಿಕಾರವಿದೊ
ವಿಕಟ +ತಪಸಿನ +ದೇವ +ದೈತ್ಯರ
ಮಕುಟವಾಂತದು +ವಾಮಪಾದವನ್
ಅಕಟ+ ಕೆಟ್ಟೆನಲಾ+ಎನುತ +ಕರಗಿದಳು +ನಳಿನಾಕ್ಷಿ

ಅಚ್ಚರಿ:
(೧) ಅರ್ಜುನನನ್ನು ನೋಡಿದ ಬಗೆ – ವಿಕಳಮತಿ, ನಪುಂಸಕ, ಜಡ, ಶ್ರೋತ್ರಿ, ಬಾಧಕ, ಖಳ, ಖೂಳ, ವಿಕಾರ
(೨) ಊರ್ವಶಿಯ ಹಿರಿಮೆ – ವಿಕಟ ತಪಸಿನ ದೇವ ದೈತ್ಯರ ಮಕುಟವಾಂತದು ವಾಮಪಾದವ

ಪದ್ಯ ೨೪: ಯಾರಿಗೆ ಪರಲೋಕವು ಲಭಿಸುವುದಿಲ್ಲ?

ಕ್ರೂರರಿಗೆ ಶಠರಿಗೆ ವೃಥಾಹಂ
ಕಾರಿಗಳಿಗತಿ ಕುಟಿಲರಿಗೆಯುಪ
ಕಾರಿಯಪಘಾತರಿಗೆ ಭೂತದ್ರೋಹಿಜೀವರಿಗೆ
ಜಾರರಿಗೆ ಜಡರಿಗೆ ನಿಕೃಷ್ಟಾ
ಚಾರರಿಗೆ ಪಿಸುಣರಿಗೆ ಧರ್ಮವಿ
ದೂರರಿಗೆ ಕಲಿಪಾರ್ಥ ಕೇಳ್ಪರಲೋಕವಿಲ್ಲೆಂದ (ಅರಣ್ಯ ಪರ್ವ, ೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕೇಳು ಅರ್ಜುನ, ಈ ಜನ್ಮದಲ್ಲಿ ಕ್ರೂರಿಗಳಿಗೆ, ದುಷ್ಟರಿಗೆ, ಕೇವಲ ಅಹಂಕಾರವನ್ನು ಪ್ರದರ್ಶಿಸುವವರಿಗೆ, ಅತಿ ಮೋಸಮಾಡುವವರಿಗೆ, ಉಪಕಾರಿಗಳಿಗೆ ಅಪಕಾರಮಾಡುವವರಿಗೆ, ಪ್ರಾಣಿಗಳಿಗೆ ದ್ರೋಹಮಾಡುವವರು, ವ್ಯಭಿಚಾರರಿಗೆ, ಆಲಸ್ಯ ಸ್ವಭಾವದವರಿಗೆ, ಕೀಳು ನಡತೆಯವರಿಗೆ, ಚಾಡಿಕೋರರಿಗೆ, ಧರ್ಮದಿಂದ ದೂರವುಳಿದವರಿಗೆ ಪರಲೋಕವಿಲ್ಲ ಎಂದು ಧರ್ಮಜನು ಅರ್ಜುನನಿಗೆ ಹೇಳಿದನು.

ಅರ್ಥ:
ಕ್ರೂರಿ: ನಿರ್ದಯಿ, ನಿಷ್ಕರುಣಿ; ಶಠ: ದುಷ್ಟ, ಧೂರ್ತ; ವೃಥಾ: ಸುಮ್ಮನೆ; ಅಹಂಕಾರ: ಮದ; ಅತಿ: ಬಹಳ; ಕುಟಿಲ: ಮೋಸ; ಉಪಕಾರ: ಸಹಾಯ; ಅಪಘಾತ: ಅನಾಹುತ; ಭೂತ: ಪ್ರಾಣಿ; ದ್ರೋಹ: ಮೋಸ; ಜೀವ: ಬದುಕುವ; ಜಾರ: ವ್ಯಭಿಚಾರಿ, ಹಾದರಿಗ; ಜಡ: ಆಲಸ್ಯ; ನಿಕೃಷ್ಟ: ನೀಚ, ಕೀಳು ಮನುಷ್ಯ; ಪಿಸುಣ: ಚಾಡಿಕೋರ; ಧರ್ಮ: ಧಾರಣೆ ಮಾಡಿದುದು, ನಿಯಮ; ವಿದೂರ: ಬಹಳ ಅಂತರ; ಕಲಿ: ಶೂರ; ಪರಲೋಕ: ಬೇರೆ ಲೋಕ;

ಪದವಿಂಗಡಣೆ:
ಕ್ರೂರರಿಗೆ +ಶಠರಿಗೆ +ವೃಥ+ಅಹಂ
ಕಾರಿಗಳಿಗ್+ಅತಿ +ಕುಟಿಲರಿಗೆ+ಉಪ
ಕಾರಿ+ಅಪಘಾತರಿಗೆ+ ಭೂತದ್ರೋಹಿ+ಜೀವರಿಗೆ
ಜಾರರಿಗೆ +ಜಡರಿಗೆ+ ನಿಕೃಷ್ಟಾ
ಚಾರರಿಗೆ+ ಪಿಸುಣರಿಗೆ+ ಧರ್ಮ+ವಿ
ದೂರರಿಗೆ+ ಕಲಿಪಾರ್ಥ+ ಕೇಳ್ಪರಲೋಕವ್+ಇಲ್ಲೆಂದ

ಅಚ್ಚರಿ:
(೧) ಕೆಟ್ಟ ಮನುಷ್ಯರ ಲಕ್ಷಣ – ಕ್ರೂರ, ಜಾರ, ಪಿಸುಣ, ಭೂತದ್ರೋಹಿ, ಕುಟಿಲ, ಅಹಂ
ಕಾರಿ, ನಿಕೃಷ್ಟ, ಜಡ