ಪದ್ಯ ೩೧: ಕೌರವನನ್ನು ನಿಗ್ರಹಿಸುವುದೇಕೆ ಒಳಿತೆಂದು ಚಿತ್ರಸೇನನು ಹೇಳಿದನು?

ಹುಲಿಯ ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದರೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ (ಅರಣ್ಯ ಪರ್ವ, ೨೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ಹುಲಿಯನ್ನು ಸಂಹರಿಸಿದರೆ ಗೋವುಗಳಿಗೇಕೆ ಸಂಕಟವಾಗಬೇಕು? ಕಾಗೆಗಳನ್ನು ಹೊಡೆದರೆ ಕೋಗಿಲೆಗೇಕೆ ತೊಂದರೆಯಾಗಬೇಕು? ದುಷ್ಟರನ್ನು ನಿಗ್ರಹಿಸಿದರೆ ಸಜ್ಜನರಿಗೇಕೆ ತಲೆನೋವು ಬರಬೇಕು? ಕೌರವ ಕುಲವನ್ನು ನಿಗ್ರಹಿಸಿದರೆ ನಿನಗೇಕೆ ಹೊಟ್ಟೆ ಬೇನೆ? ಎಂದು ಚಿತ್ರಸೇನನು ಅರ್ಜುನನನ್ನು ಕೇಳಿದನು.

ಅರ್ಥ:
ಹುಲಿ: ವ್ಯಾಘ್ರ; ಮುರಿ: ಸೀಳು; ಒತ್ತು: ಆಕ್ರಮಿಸು, ಮುತ್ತು; ಪಶು: ಹಸು, ಗೋವು; ಸಂಕುಲ: ವಂಶ; ಸಂಕಟ: ತೊಂದರೆ; ವಾಯಸ: ಕಾಗೆ; ಕುಲ: ವಂಶ; ಕೈಮಾಡು: ಹೊಡೆ; ಕೋಟಲೆ: ತೊಂದರೆ; ಕೋಗಿಲೆ: ಪಿಕ; ಖಳ: ದುಷ್ಟ; ಕೊಪ್ಪರಿಸು: ತಿವಿ, ಹೊಡೆ; ಸುಜನ: ಒಳ್ಳೆಯ ಜನ; ತಲೆ: ಶಿರ; ವೇದನೆ: ನೋವು; ಜಠರ: ಹೊಟ್ಟೆ; ಶೂಲೆ: ನೋವು;

ಪದವಿಂಗಡಣೆ:
ಹುಲಿಯ +ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದರೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹುಲಿಯ ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು; ವಾಯಸಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ

ಪದ್ಯ ೨೮: ಬ್ರಹ್ಮನು ಯಾರ ಹೊಟ್ಟೆಯೊಳಗೆ ಇಳಿದನು?

ಆದುದೇ ನಿನ್ನುದರದಲಿ ಜಗ
ವಾದೊಡೀಕ್ಷಿಪೆನೆನುತಲೀ ಕಮ
ಲೋದರನು ಕಮಲಜನ ಜಠರವ ಹೊಕ್ಕು ಹೊರವಂಟು
ಭೇದಿಸಿದೆ ನಾನೆನ್ನ ಜಠರದೊ
ಳಾದ ಲೋಕವನೆಣಿಸಿ ಬಾಯೆನ
ಲಾ ದುರಾಗ್ರಹಿಯಿಳಿದನಸುರಾಂತಕನ ಜಠರದಲಿ (ಅರಣ್ಯ ಪರ್ವ, ೧೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ನಿನ್ನ ಹೊಟ್ಟೆಯಲ್ಲಿ ಜಗತ್ತು ಇರುವುದೇ? ಹಾಗಾದರೆ ಅದನ್ನು ನೋಡುತ್ತೇನೆ ಎಂದು ಶ್ರೀಹರಿಯು ಬ್ರಹ್ಮನ ಜಠರವನ್ನು ಹೊಕ್ಕು ಹೊರಬಂದು, ನಿನ್ನ ಜಠರದಲ್ಲಿರುವ ಲೋಕವನ್ನು ಪರೀಕ್ಷಿಸಿದೆ, ನನ್ನ ಜಠರದಲ್ಲಿ ಎಷ್ಟು ಲೋಕಗಳಿವೆಯೋ ಎಣಿಸಿಕೊಂಡು ಬಾ ಎಂದನು, ಆಗ ಬ್ರಹ್ಮನು ದುರಾಗ್ರಹದಿಂದ ವಿಷ್ಣುವಿನ ಹೊಟ್ಟೆಯೊಳಕ್ಕೆ ಇಳಿದನು.

ಅರ್ಥ:
ಉದರ: ಹೊಟ್ಟೆ; ಜಗ: ಜಗತ್ತು; ಈಕ್ಷಿಪೆ: ನೋಡುವೆ; ಕಮಲೋದರ: ವಿಷ್ಣು; ಕಮಲಜ: ಬ್ರಹ್ಮ; ಕಮಲ: ತಾವರೆ; ಉದರ: ಹೊಟ್ಟೆ; ಜಠರ: ಹೊಟ್ಟೆ; ಹೊಕ್ಕು: ಸೇರು; ಹೊರವಂಟು: ಹೊರಬಂದು; ಭೇದಿಸು: ಸೀಲು; ಲೋಕ: ಜಗತ್ತು; ಎಣಿಸು: ಲೆಕ್ಕ ಮಾಡು; ಬಾ: ಆಗಮಿಸು; ದುರಾಗ್ರಹ: ಮೊಂಡ; ಅಸುರಾಂತಕ: ಕೃಷ್ಣ;

ಪದವಿಂಗಡಣೆ:
ಆದುದೇ +ನಿನ್+ಉದರದಲಿ+ ಜಗವ್
ಆದೊಡ್+ಈಕ್ಷಿಪೆನ್+ಎನುತಲ್+ಈ+ ಕಮ
ಲೋದರನು +ಕಮಲಜನ +ಜಠರವ+ ಹೊಕ್ಕು +ಹೊರವಂಟು
ಭೇದಿಸಿದೆ +ನಾನ್+ಎನ್ನ +ಜಠರದೊ
ಳಾದ +ಲೋಕವನ್+ಎಣಿಸಿ+ ಬಾ+ಎನಲ್
ಆ+ ದುರಾಗ್ರಹಿ+ಇಳಿದನ್+ಅಸುರಾಂತಕನ+ ಜಠರದಲಿ

ಅಚ್ಚರಿ:
(೧) ಜಠರ, ಉದರ – ಸಮನಾರ್ಥಕ ಪದ
(೨) ಕಮಲೋದರ, ಕಮಲಜ – ಕಮಲ ಪದಗಳ ಬಳಕೆ
(೩) ಅಸುರಾಂತಕ, ಕಮಲೋದರ – ವಿಷ್ಣುವನ್ನು ಕರೆದ ಪರಿ

ಪದ್ಯ ೩೧: ಆಂಜನೇಯನು ಏನು ಹೇಳಿದನು?

ಲಲಿತ ವಚನಕೆ ನಿನ್ನ ಭುಜದ
ಗ್ಗಳಿಕೆಗಾ ಮೆಚ್ಚಿದೆನು ಹಿಮಕರ
ಕುಲ ಪವಿತ್ರರು ಜನಿಸಿದಿರಲಾ ಪಾಂಡು ಜಠರದಲಿ
ಗೆಲವು ನಿಮಗಹಿತರಲಿ ಪಾರ್ಥನ
ಕೆಲವು ದಿವಸಕೆ ಕಾಂಬಿರೆಮಗೆಯು
ಫಲಿಸಿತೀದಿನವೆಂದು ಕೊಂಡಾಡಿದನು ಹನುಮಂತ (ಅರಣ್ಯ ಪರ್ವ, ೧೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಿನ್ನ ಸುಂದರವಾದ ವಿನಯ ವಚನಗಳಿಗೆ, ಬಾಹುಬಲಕ್ಕೂ ನಾನು ಪ್ರಸನ್ನನಾಗಿದ್ದೇನೆ. ವಿಮಲವಾದ ಚಂದ್ರವಂಶದಲ್ಲಿ ಪಾಂಡುರಾಜನ ಮಕ್ಕಳಾಗಿ ಹುಟ್ಟಿದ ನೀವೈವರು ಚಂದ್ರವಂಶವನ್ನು ಪಾವನಗೊಳಿಸಿರುವಿರಿ, ನೀವು ಶತ್ರುಗಳನ್ನು ಜಯಿಸುವಿರಿ, ಕೆಲವೇ ದಿನಗಳಲ್ಲಿ ಅರ್ಜುನನನ್ನೂ ನೋಡುವಿರಿ, ನಮಗೂ ಇದು ಸುದಿನ ಸತ್ಫಲವನ್ನು ಕೊಟ್ಟಿದೆ ಎಂದು ಹನುಮಂತನು ಕೊಂಡಾಡಿದನು.

ಅರ್ಥ:
ಲಲಿತ: ಸುಂದರ; ವಚನ: ಮಾತು, ನುಡಿ; ಭುಜ: ಬಾಹು, ಬಲ; ಅಗ್ಗಳಿಕೆ: ಶ್ರೇಷ್ಠ; ಮೆಚ್ಚು: ಪ್ರಶಂಶಿಸು; ಹಿಮಕರ: ಚಂದ್ರ; ಕುಲ: ವಂಶ; ಪವಿತ್ರ: ಶುದ್ಧ; ಜನಿಸು: ಹುಟ್ಟು; ಜಠರ: ಹೊಟ್ಟೆ; ಗೆಲುವು: ಜಯ; ಅಹಿತ: ವೈರಿ; ಕೆಲವು: ಸ್ವಲ್ಪ; ದಿವಸ: ದಿನ; ಕಾಂಬಿರಿ: ಕಾಣುವಿರಿ; ಫಲಿಸು: ದೊರೆತುದು; ಕೊಂಡಾಡು: ಪ್ರಶಂಶಿಸು;

ಪದವಿಂಗಡನೆ:
ಲಲಿತ +ವಚನಕೆ +ನಿನ್ನ +ಭುಜದ್
ಅಗ್ಗಳಿಕೆಗಾ+ ಮೆಚ್ಚಿದೆನು+ ಹಿಮಕರ
ಕುಲ +ಪವಿತ್ರರು +ಜನಿಸಿದಿರಲಾ+ ಪಾಂಡು +ಜಠರದಲಿ
ಗೆಲವು +ನಿಮಗ್+ಅಹಿತರಲಿ +ಪಾರ್ಥನ
ಕೆಲವು +ದಿವಸಕೆ+ ಕಾಂಬಿರ್+ಎಮಗೆಯು
ಫಲಿಸಿತ್+ಈದಿನವ್+ಎಂದು +ಕೊಂಡಾಡಿದನು +ಹನುಮಂತ

ಅಚ್ಚರಿ:
(೧) ಭೀಮನನ್ನು ಹೊಗಳಿದ ಪರಿ – ಲಲಿತ ವಚನಕೆ ನಿನ್ನ ಭುಜದಗ್ಗಳಿಕೆಗಾ ಮೆಚ್ಚಿದೆನು ಹಿಮಕರ
ಕುಲ ಪವಿತ್ರರು ಜನಿಸಿದಿರಲಾ ಪಾಂಡು ಜಠರದಲಿ

ಪದ್ಯ ೪೩: ಧರ್ಮಜನು ಯಾರ ಜೊತೆ ರಾಜ್ಯಭಾರ ಮಾಡಲು ಅರ್ಜುನನಿಗೆ ಹೇಳಿದ?

ನಿನ್ನ ಜನನಿಯ ಜಠರದಲಿ ತಾ
ಮುನ್ನ ಜನಿಸಿದೆನೀ ಗುರುತ್ವಕೆ
ಮನ್ನಿಸಿದೆ ಸಾಕೈಸಲೇ ಸರ್ವಾಪರಾಧವನು
ಎನ್ನನೊಬ್ಬನನುಳಿಯಲುಳಿದರ
ಭಿನ್ನಸಾಹೋದರ್ಯ ಸಂಪ್ರತಿ
ಪನ್ನ ಗುಣರವರೊಡನೆ ಸುಖದಲಿ ರಾಜ್ಯ ಮಾಡೆಂದ (ಕರ್ಣ ಪರ್ವ, ೧೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಧರ್ಮಜನು ತನ್ನ ನೋವನ್ನು ಹೇಳುತ್ತಾ, ನಿನ್ನ ತಾಯಿಯ ಹೊಟ್ಟೆಯಲ್ಲಿ ನಾನು ಮೊದಲು ಜನಿಸಿದ ಕಾರಣ ನನ್ನನ್ನು ಗುರುವೆಂದು ಭಾವಿಸಿ ಇಷ್ಟು ದಿನ ಮನ್ನಿಸಿದ್ದೇ ಸಾಕು. ನಾನು ಮಾಡಿದ ಅಪರಾಧಗಳನ್ನು ಕ್ಷಮಿಸಿದುದೇ ನಿನ್ನ ಹಿರಿಮೆ. ನನ್ನನ್ನು ಏಕಾಂಗಿಯಾಗಿ ಬಿಟ್ಟು ಬಿಡು, ಉಳಿದ ನಿನ್ನ ಸಹೋದರರು ಮಹಾಗುಣಶಾಲಿಗಳು. ಆವರೊಡನೆ ನೀನು ರಾಜ್ಯವನ್ನಾಳು ಎಂದನು.

ಅರ್ಥ:
ಜನನಿ: ತಾಯಿ; ಜಠರ: ಹೊಟ್ಟೆ; ಮುನ್ನ: ಮೊದಲು; ಜನಿಸು: ಹುಟ್ಟು; ಗುರು: ಆಚಾರ್ಯ; ಮನ್ನಿಸು: ಗೌರವಿಸು; ಸಾಕು: ಇನ್ನು ಬೇಡ, ನಿಲ್ಲಿಸು; ಸರ್ವ: ಎಲ್ಲಾ; ಅಪರಾಧ: ತಪ್ಪು; ಒಬ್ಬನು: ಏಕಾಂಗಿ; ಉಳಿಯಲು: ಜೀವಿಸಲು; ಉಳಿದ: ಮಿಕ್ಕ; ಸಂಪ್ರತಿ: ತಕ್ಷಣ; ಗುಣ: ನಡತೆ; ಒಡನೆ: ಜೊತೆ; ಸುಖ: ಸೌಖ್ಯ, ಸಂತೋಷ; ಭಿನ್ನ: ಭೇದ, ಬೇರೆ; ಸಾಹೋದರ್ಯ: ಸಹೋದರ, ಭ್ರಾತೃ;

ಪದವಿಂಗಡಣೆ:
ನಿನ್ನ+ ಜನನಿಯ +ಜಠರದಲಿ +ತಾ
ಮುನ್ನ +ಜನಿಸಿದೆನ್+ಈ+ ಗುರುತ್ವಕೆ
ಮನ್ನಿಸಿದೆ +ಸಾಕ್+ಐಸಲೇ +ಸರ್ವ+ಅಪರಾಧವನು
ಎನ್ನನ್+ಒಬ್ಬನನ್+ಉಳಿಯಲ್+ಉಳಿದರ
ಭಿನ್ನ+ಸಾಹೋದರ್ಯ +ಸಂಪ್ರತಿ
ಪನ್ನ +ಗುಣರ್+ಅವರೊಡನೆ +ಸುಖದಲಿ +ರಾಜ್ಯ +ಮಾಡೆಂದ

ಅಚ್ಚರಿ:
(೧) ೪ ಸಾಲು ಒಂದೇ ಪದವಾಗಿ ರಚನೆ
(೨) ೧, ೩, ೫ ಸಾಲಿನಲ್ಲಿ ಜೋಡಿ ಪದಗಳು

ಪದ್ಯ ೨೨: ಕರ್ಣನು ಏಕೆ ಕಾಣಿಸಲಿಲ್ಲ?

ಬಳಿಕ ಹೇಳುವುದೇನು ರಣದ
ಗ್ಗಳೆಯರವದಿರು ಮುತ್ತಿದರು ಕೈ
ಚಳಕಿಗರು ಕವಿದೆಚ್ಚರೀತನನೆಂಟು ದೆಸೆಗಳಲಿ
ಲುಳಿತ ಜಲಧರಪಟಲ ಜಠರದೊ
ಳಿಳಿದ ರವಿಮಂಡಲದವೋಲರೆ
ಘಳಿಗೆ ಕರ್ಣನ ಕಾಣೆನೈ ನರನಾಥ ಕೇಳೆಂದ (ಕರ್ಣ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಯುದ್ಧದ ಸನ್ನಿವೇಶವನ್ನು ಧೃತರಾಷ್ಟ್ರನಿಗೆ ವಿವರಿಸುತ್ತಿದ್ದ ಸಂಜಯನು ಕರ್ಣನು ಗುರುಸುತನಿಗೆ ನೀವು ನಿಂತು ನೋಡಿರಿ ಎಂದು ಹೇಳಿದ ನಂತರ ಯುದ್ಧ ವಿಶಾರದರಾದ ಪಾಂಚಾಲ ಸೈನ್ಯವು ಕರ್ಣನನ್ನು ಮುತ್ತಿ ಎಂಟು ದಿಕ್ಕುಗಳಿಂದಲೂ ಅವನ ಮೇಲೆ ಬಾಣಗಳನ್ನು ಬಿಟ್ಟರು. ದಟ್ಟವಾಗಿ ಕವಿದು ಬಂದ ಮೋಡಗಳ ಮರೆಗೆ ಹೋಗಿ ಸೂರ್ಯನು ಮರೆಯಾಗುವಂತೆ ಅರ್ಧಗಳಿಗೆಯ ಕಾಲ ಕರ್ಣನು ಕಾಣಿಸಲೇ ಇಲ್ಲ ಎಂದು ವಿವರಿಸಿದನು.

ಅರ್ಥ:
ಬಳಿಕ: ನಂತರ; ಹೇಳು: ತಿಳಿಸು; ರಣ: ಯುದ್ಧ; ಅಗ್ಗ: ಶ್ರೇಷ್ಠ; ಅವದಿರು: ಅವರು; ಮುತ್ತು:ಸುತ್ತುವರೆ; ಕೈಚಳಕ: ನಿಪುಣ, ಚಾಣಾಕ್ಷ; ಕವಿ: ಆವರಿಸು; ಎಚ್ಚರ: ಹುಷಾರಾಗಿರು; ಎಂಟು: ಅಷ್ಟ; ದೆಸೆ: ದಿಕ್ಕು; ಲುಳಿ: ರಭಸ, ವೇಗ; ಜಲಧರ: ಮೋಡ; ಪಟಲ: ತೆರೆ, ಪರದೆ; ಸಮೂಹ; ಜಠರ: ಹೊಟ್ಟೆ; ಇಳಿ: ಕೆಳ್ಳಕ್ಕೆ ಬಾ, ಜಾರು; ರವಿ: ಸೂರ್ಯ; ಮಂಡಲ: ವರ್ತುಲಾಕಾರ; ಘಳಿಗೆ: ಕಾಲ; ಅರೆ: ಅರ್ಧ; ನರನಾಥ: ರಾಜ;

ಪದವಿಂಗಡಣೆ:
ಬಳಿಕ +ಹೇಳುವುದೇನು +ರಣದ್
ಅಗ್ಗಳೆಯರ್+ಅವದಿರು +ಮುತ್ತಿದರು +ಕೈ
ಚಳಕಿಗರು+ ಕವಿದೆಚ್ಚರ್+ಈತನನ್+ಎಂಟು +ದೆಸೆಗಳಲಿ
ಲುಳಿತ+ ಜಲಧರಪಟಲ+ ಜಠರದೊಳ್
ಇಳಿದ +ರವಿಮಂಡಲದವೋಲ್+ಅರೆ
ಘಳಿಗೆ +ಕರ್ಣನ +ಕಾಣೆನೈ +ನರನಾಥ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಲುಳಿತ ಜಲಧರಪಟಲ ಜಠರದೊಳಿಳಿದ ರವಿಮಂಡಲದವೋಲು

ಪದ್ಯ ೧೭: ಪ್ರಳಯಕಾಲದಲ್ಲಿ ಯಾರು ಆಲದೆಲೆಯ ಮೇಲೆ ಮಲಗಿದ್ದರು?

ಸಲಿಲಮಯವಾದಖಿಳ ಭುವನಾ
ವಳಿಯೊಳೊಮ್ಮೆ ವಿರಿಂಚಿ ತಾನೇ
ಮುಳುಗುತೈತಂದಾಲದೆಲೆ ಮಂಚದೊಳು ಪವಡಿಸಿದ
ಹೊಳೆವನಿವನಾರೆಂದು ಜಠರದೊ
ಳಿಳಿದು ತದ್ಬ್ರಹ್ಮಾಂಡ ಶತದೊಳು
ಹೊಲಬುಗಿಡೆ ಹೊಕ್ಕುಳೊಳು ಬೊಮ್ಮನನೀತನುಗುಳಿದನು (ಉದ್ಯೋಗ ಪರ್ವ, ೧೦ ಸಂಧಿ, ೧೭ ಪದ್ಯ)

ತಾತ್ಪರ್ಯ:
ಪ್ರಳಯಕಾಲದಲ್ಲಿ ಒಮ್ಮೆ ಸಮಸ್ತಲೋಕಗಳೂ ನೀರಿನಲ್ಲಿ ಮುಳುಗಿರಲು ಚತುರ್ಮುಖ ಬ್ರಹ್ಮನು ಆ ನೀರಿನಲ್ಲಿ ಮುಳುಗುತ್ತಾ ತೇಲುತ್ತಾ ಬರುತ್ತಿರಲು ಒಂದಾನೋಂದು ಆಲದೆಲೆಯ ಮಂಚದ ಮೇಲೆ ತೇಜೋಮಯನಾಗಿ ಈತನು ಮಲಗಿರಲು ಇವನು ಯಾರೆಂಬ ಕುತೂಹಲದಿಂದ ಬಾಯ ಮುಖಾಂತರ ಜಠರಕ್ಕೆ ಹೋದನು. ಅಲ್ಲಿ ಅಸಂಖ್ಯಾತ ಲೋಕಗಳನ್ನ್ ನೋಡುತ್ತಾ ಬ್ರಹ್ಮನು ದಾರಿತಪ್ಪಲು ಬ್ರಹ್ಮನನ್ನು ಹೊಕ್ಕುಳಿನ ಮೂಲಕ ಹೊರಕ್ಕೆ ತಂದನು.

ಅರ್ಥ:
ಸಲಿಲ: ಜಲ, ನೀರು; ಮಯ: ತುಂಬಿರುವ, ಆವರಿಸು; ಅಖಿಳ: ಎಲ್ಲಾ; ಭುವನ: ಜಗತ್ತು, ಪ್ರಪಂಚ; ಆವಳಿ: ಸಾಲು, ಗುಂಪು; ವಿರಿಂಚಿ: ಬ್ರಹ್ಮ; ಮುಳುಗು: ಮಿಂದು; ಎಲೆ: ಪರ್ಣ; ಮಂಚ: ಪರ್ಯಂಕ; ಪವಡಿಸು: ಮಲಗು; ಹೊಳೆ: ಪ್ರಕಾಶಿಸು; ಜಠರ: ಹೊಟ್ಟೆ; ಬ್ರಹ್ಮಾಂಡ: ವಿಶ್ವ, ಜಗತ್ತು; ಶತ: ನೂರು; ಹೊಲಬು: ದಾರಿ, ಪಥ; ಹೊಕ್ಕುಳ: ನಾಭಿ; ಬೊಮ್ಮ: ಬ್ರಹ್ಮ; ಉಗುಳು: ಹೇಳು;

ಪದವಿಂಗಡಣೆ:
ಸಲಿಲಮಯವಾದ್+ಅಖಿಳ +ಭುವನಾ
ವಳಿಯೊಳ್+ಒಮ್ಮೆ +ವಿರಿಂಚಿ +ತಾನೇ
ಮುಳುಗುತ್+ಐತಂದ್+ಆಲದೆಲೆ+ ಮಂಚದೊಳು +ಪವಡಿಸಿದ
ಹೊಳೆವನ್+ಇವನಾರೆಂದು +ಜಠರದೊಳ್
ಇಳಿದು +ತದ್ಬ್ರಹ್ಮಾಂಡ +ಶತದೊಳು
ಹೊಲಬುಗಿಡೆ+ ಹೊಕ್ಕುಳೊಳು +ಬೊಮ್ಮನನ್+ಈತನ್+ಉಗುಳಿದನು

ಅಚ್ಚರಿ:
(೧) ವಿರಿಂಚಿ, ಬೊಮ್ಮ – ಸಮನಾರ್ಥಕ ಪದ

ಪದ್ಯ ೨೩: ಕೃಷ್ಣನ ಪರಿಚಯ ಕುಮಾರವ್ಯಾಸ ಹೇಗೆ ಮಾಡಿಯಾರು?

ವೇದ ಪುರುಷನ ಸುತನ ಸುತನ ಸ
ಹೋದರನ ಹೆಮ್ಮಗನ ಮಗನ ತ
ಳೋದರಿಯ ಮಾತುಳನ ಮಾವನನತುಳ ಭುಜಬಲದಿ
ಕಾದಿ ಗೆಲಿದಣ್ಣನ ಅವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಾಯಣ (ಆದಿ ಪರ್ವ, ಸಂಧಿ ೧, ಪದ್ಯ ೨೩ )

ತಾತ್ಪರ್ಯ:
ಚತುರ್ಮುಖ ಬ್ರಹ್ಮನ ಮಗನಾದ ಮರೀಚಿಯ ಮಗನಾದ ಪೂರ್ಣಿಮನ ಸಹೋದರನಾದ ಕಶ್ಯಪನ ಹಿರಿಯ ಮಗನಾದ ಇಂದ್ರನ ಮಗನಾದ ಅರ್ಜುನನ ಪತ್ನಿಯಾದ ಸುಭದ್ರೆಯ ಸೋದರಮಾವನಾದ ಕಂಸನ ಮಾವನಾದ ಜರಾಸಂಧನನ್ನು ಮಹಾಭುಜಬಲದಿಂದ ಯುದ್ಧದಲ್ಲಿ ಗೆದ್ದ ಭೀಮನ ಅಣ್ಣನಾದ ಯುಧಿಷ್ಠಿರನ ತಾಯಿಯಾದ ಕುಂತಿಯ ನಾದಿನಿಯಾದ ದೇವಕಿಯ ಜಠರದಲ್ಲಿ ಜನಿಸಿದ ಅನಾದಿಮೂರ್ತಿಯಾದ ಗದುಗಿನ ವೇರನಾರಾಯಣನೇ (ಶ್ರೀ ಕೃಷ್ಣ ) ನಮ್ಮನ್ನು ಸಲಹು.

ಅರ್ಥ:
ವೇದ:ಅರಿವು, ಅಪೌರುಷೇಯ ವಾಕ್ಯರಾಶಿ; ಪುರುಷ: ಪರಮಾತ್ಮ; ಸುತ: ಮಗ;ಸಹೋದರ: ಭ್ರಾತೃ; ಹೆಮ್ಮಗ: ಹಿರಿಯ ಮಗ; ತಳೋದರಿ: ಭಾರ್ಯ, ಹೆಂಡತಿ; ಮಾತುಳ: ಅಮ್ಮನ ತಮ್ಮ, ಮಾವ; ಅತುಳ: ಬಹಳ; ಭುಜಬಲ: ಶಕ್ತಿಶಾಲಿ; ಕಾದಿ: ಕಾದಾಡಿ; ಗೆಲುವು: ಜಯ; ಅವ್ವೆ: ತಾಯಿ; ನಾದಿನಿ: ಗಂಡನ ತಂಗಿ; ಜಠರ: ಹೊಟ್ಟೆ; ಜನಿಸು: ಹುಟ್ಟು; ಅನಾದಿ: ಆದಿ ಅಂತ್ಯವಿಲ್ಲದ; ಸಲಹು: ಕಾಪಾಡು;

ಪದವಿಂಗಡನೆ:
ವೇದ+ ಪುರುಷನ+ ಸುತನ+ ಸುತನ+ ಸ
ಹೋದರನ+ ಹೆಮ್ಮಗನ+ ಮಗನ+ ತ
ಳೋದರಿಯ +ಮಾತುಳನ+ ಮಾವನನ್+ಅತುಳ +ಭುಜಬಲದಿ
ಕಾದಿ +ಗೆಲಿದ್+ಅಣ್ಣನ+ ಅವ್ವೆಯ
ನಾದಿನಿಯ +ಜಠರದಲಿ+ ಜನಿಸಿದ
ನಾದಿ+ ಮೂರುತಿ+ ಸಲಹೊ+ ಗದುಗಿನ+ ವೀರನಾರಾಯಣ

ಅಚ್ಚರಿ:
(೧) ಅಚ್ಚ ಕನ್ನಡದ ಸುಮಾರು 10 ಸಂಬಂಧಗಳನ್ನು ಉಪಯೋಗಿಸಿ ಒಂದು ಒಗಟಿನಹಾಗೆ ರಚಿಸಿರುವುದು
(೨) ಒಗಟಿನ ಮೂಲಕ ಕೃಷ್ಣನ ಪರಿಚಯ

ಪದ್ಯ ೩೪: ಭೀಮನು ಹೇಗೆ ಬಕಾಸುರನನ್ನು ಎದುರಿಸಲು ಸಿದ್ಧನಾದನು?

ಅರಸ ಕೇಳೈ ನಿಮ್ಮ ಭೀಮನ
ಪರಿಯನಾ ಪರಿ ಬಂಡಿ ತುಂಬಿದ
ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ
ವರ ಸಮಾಧಾನದಲಿ ಕೈದೊಳೆ
ದುರವಣಿಪ ತೇಗಿನ ತರಂಗದ
ಪರಬಲಾಂತಕನೆದ್ದುನಿಂದನು ಸಿಂಹನಾದದಲಿ (ಆದಿ ಪರ್ವ, ೧೦ ಸಂಧಿ, ೩೪ ಪದ್ಯ)

ತಾತ್ಪರ್ಯ:
ಜನಮೇಜಯ ನಿಮ್ಮ ಭೀಮನು ಯಾವ ರೀತಿ ಬಕಾಸುರನನ್ನು ಎದುರಿಸಲು ಸಿದ್ಧನಾದ ಕೇಳು, ಅಷ್ಟು ಊಟವಿದ್ದ ಆ ಬಂಡಿಯೂಟವನ್ನು ಸಂತೋಷದಿಂದ ತಿಂದು ತನ್ನ ಹೊಟ್ಟೆಯನ್ನು ಸಮಾಧಾನಪಡಿಸಿಕೊಂಡಮೇಲೆ, ಕೈತೊಳೆದು ಅಲೆಅಲೆಯಾಗಿ ತೇಗಿ ಆ ಬಲಶಾಲಿಯಾದ ಭೀಮನು ಸಿಂಹನಾದದ ಮೂಲಕ ಎದ್ದುನಿಂತನು.

ಅರ್ಥ:
ಅರಸ: ರಾಜ; ಕೇಳೈ:ಕೇಳು, ಆಲಿಸು; ಪರಿ: ರೀತಿ; ಬಂಡಿ: ಗಾಡಿ; ತುಂಬ: ಹೆಚ್ಚಳ, ಅತಿಶಯ; ಸರಕು: ಸಮಾನು(ಇಲ್ಲಿ ಊಟ); ಸಂತ: ಸಂತೋಷ; ಜಠರ: ಹೊಟ್ಟೆ; ವರ: ಶ್ರೇಷ್ಠ; ಸಮಾಧಾನ: ನೆಮ್ಮದಿ, ತೃಪ್ತಿ; ದೊಳೆ: ಸ್ವಚ್ಛಗೊಳಿಸು; ಉರವಣೆ: ಆತುರ, ರಭಸ; ತೇಗು: ಢರಕೆ ಹೊಡೆ; ತರಂಗ: ಅಲೆ; ಪರಬಲ: ಬಲಿಷ್ಠ; ಸಿಂಹ: ಕೇಸರಿ; ನಾದ: ಶಬ್ದ; ಅಂತಕ: ಸಾವು, ಮೃತ್ಯು;

ಪದವಿಂಗಡನೆ:
ಅರಸ +ಕೇಳೈ +ನಿಮ್ಮ +ಭೀಮನ
ಪರಿಯನ್+ಆ+ ಪರಿ+ ಬಂಡಿ +ತುಂಬಿದ
ಸರಕನ್+ಎಲ್ಲವ+ ಸಂತವಿಟ್ಟನು +ತನ್ನ+ ಜಠರದಲಿ
ವರ+ ಸಮಾಧಾನದಲಿ+ ಕೈದೊಳೆದ್
ಉರವಣಿಪ+ ತೇಗಿನ+ ತರಂಗದ
ಪರಬಲ+ಅಂತಕನ್+ಎದ್ದು+ನಿಂದನು +ಸಿಂಹನಾದದಲಿ

ಅಚ್ಚರಿ:
(೧) ಇದು ಜನಮೇಜಯನಿಗೆ ಹೇಳುವ ಕಥೆ ಎಂದು ಆಗಾಗ ಕುಮಾರವ್ಯಾಸ ಜ್ಞಾಪಿಸುತ್ತಾನೆ – “ಅರಸ ಕೇಳೈ”
(೨) ಹೊಟ್ಟೆ ತುಂಬಿದ ಲಕ್ಷಣ – ತೇಗು ಬರುವುದು, ಇಲ್ಲಿ ಅದರ ವರ್ಣನೆ – ಉರವಣಿಪ ತೇಗಿನ ತರಂಗದ – ಮೇಲೆಂದ ಮೇಲೆ ಜೋರಾಗಿ ತೇಗಿನ ಅಲೆಗಳು ಬಂದವು
(೩) ಭೀಮನು ಎದ್ದು ನಿಂತರೆ ಹೇಗಿರಬಹುದು ಎಂದು ವರ್ಣಿಸಲು – ಸಿಂಹನಾದದ ಪ್ರಯೋಗ
(೪) ಅಷ್ಟು ಜೋರಾಗಿ ಬಕಾಸುರನು ಅವನ ಮೇಲೆ ಎರಗಿದರು ಸವಾಕಾಶವಾಗಿ ತಾನು ಊಟವನ್ನು ಮುಗಿಸುವ ಪರಿಯ ವರ್ಣನೆ – ಆ ಪರಿ ಬಂಡಿ ತುಂಬಿದ ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ ವರ ಸಮಾಧಾನದಲಿ ಕೈದೊಳೆದ್