ಪದ್ಯ ೧೪: ಸೈರಂಧ್ರಿಯು ಎಲ್ಲಿಗೆ ಧಾವಿಸಿದಳು?

ಕರವನೊಡೆ ಮುರುಚಿದಳು ಬಟ್ಟಲ
ಧರೆಯೊಳೀಡಾಡಿದಳು ಸತಿ ಮೊಗ
ದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ
ತರಳೆ ಹಾಯ್ದುಳು ಮೊಲೆಯ ಜಘನದ
ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು ಸಭೆಗೆ (ವಿರಾಟ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕೀಚಕನು ಹಿಡಿದ ಕೈಯನ್ನು ಹಿಂದಕ್ಕೆ ಸೆಳೆದು ಆತನ ಹಿಡಿತದಿಂದ ತಪ್ಪಿಸಿಕೊಂಡು, ಮಧುವಿನ ಪಾತ್ರೆಯನ್ನು ಅಲ್ಲೇ ಬಿಸಾಡಿ ಹಿಂದಕ್ಕೆ ತಿರುಗಿ ದ್ರೌಪದಿಯು ಅವನ ಮನೆಯ ಬಾಗಿಲನ್ನು ದಾಟಿ ಭಯದಿಮ್ದ ನದುಗಿ ಕಂಪಿಸುತ್ತಾ ಓಡಿ ಹೋದಳು. ಆಕೆಯ ಎದೆ, ನಿತಂಬಗಳ ಭಾರದಿಂದ ಅವಳ ತೆಳುವಾದ ನಡು ಮುರಿದು ಹೋಗದೇ ಎನ್ನಿಸುವಂತೆ ಅತಿವೇಗದಿಮ್ದ ವಿರಾಟನ ಸಭೆಗೆ ಬಂದಳು.

ಅರ್ಥ:
ಕರ: ಕೈ; ಒಡೆ: ಕೂಡಲೆ; ಮುರುಚು: ಹಿಂತಿರುಗಿಸು; ಬಟ್ಟಲು: ಪಾತ್ರೆ; ಧರೆ: ಭೂಮಿ; ಈಡಾಡು: ಕಿತ್ತು, ಒಗೆ, ಚೆಲ್ಲು; ಸತಿ: ಹೆಂಡತಿ; ಮೊಗ: ಮುಖ; ತಿರುಹಿ: ಹಿಂದೆಮಾದಿ ಬಾಗಿಲು: ಕದ; ದಾಂಟು: ದಾಟಿ; ಭಯ: ಅಂಜಿಕೆ; ನಡುಗು: ಕಂಪನ; ಡೆಂಡಣ: ಕಂಪಿಸು;ತರಳೆ: ಹೆಣ್ಣು; ಹಾಯ್ದು: ಮೇಲೆಬೀಳು, ಚಾಚು; ಮೊಲೆ: ಸ್ತನ; ಜಘನ:ನಿತಂಬ; ಭರ: ಹೊರೆ, ಭಾರ; ಬಡ: ತೆಳ್ಳಾಗಿರುವು; ನಡು: ಮಧ್ಯಭಾಗ; ಮುರಿ: ಸೀಳು; ವರ: ಶ್ರೇಷ್ಠ; ಸಭೆ: ದರ್ಬಾರು; ರಭಸ: ವೇಗ; ಓಡು: ಧಾವಿಸು; ಸಭಾಗ್ಯತೆ: ಒಳ್ಳೆಯ ಅದೃಷ್ಟ;

ಪದವಿಂಗಡಣೆ:
ಕರವನ್+ಒಡೆ +ಮುರುಚಿದಳು +ಬಟ್ಟಲ
ಧರೆಯೊಳ್+ಈಡಾಡಿದಳು +ಸತಿ +ಮೊಗ
ದಿರುಹಿ+ ಬಾಗಿಲ+ ದಾಂಟಿ +ಭಯದಲಿ +ನಡುಗಿ+ ಡೆಂಡಣಿಸಿ
ತರಳೆ+ ಹಾಯ್ದುಳು +ಮೊಲೆಯ +ಜಘನದ
ಭರದಿ+ ಬಡನಡು +ಮುರಿಯದಿಹುದೇ
ವರ +ಸಭಾಗ್ಯತೆಗ್+ಎನಲು +ರಭಸದೊಳ್+ಓಡಿದಳು +ಸಭೆಗೆ

ಅಚ್ಚರಿ:
(೧) ಓಟದ ವರ್ಣನೆ – ತರಳೆ ಹಾಯ್ದುಳು ಮೊಲೆಯ ಜಘನದ ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು

ಪದ್ಯ ೨೨: ಗಣಿಕೆಯರು ಹೇಗೆ ಚಲಿಸಿದರು?

ಬಲುಮೊಲೆಗಳಳ್ಳಿರಿಯಲೇಕಾ
ವಳಿಗಳನು ಕೆಲಕೊತ್ತಿ ಮೇಲುದ
ಕಳಚಿ ನಡುಗಿಸಿ ನಡುವನಂಜಿಸಿ ಜಘನ ಮಂಡಲವ
ಆಳಕನಿಕರವ ಕುಣಿಸಿ ಮಣಿಕುಂ
ಡಲವನಲುಗಿಸಿ ಹಣೆಯ ಮುತ್ತಿನ
ತಿಲಕವನು ತನಿಗೆದರಿ ನಡೆದುದು ಕೂಡೆ ಸತಿನಿವಹ (ಅರಣ್ಯ ಪರ್ವ, ೧೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಗಣಿಕೆಯರ ತುಂಬಿರುವ ಸ್ತನಗಳು ಅಲ್ಲಾಡುತ್ತಿರಲು, ಒಂದೆಳೆಯ ಸರಳನ್ನು ಪಕ್ಕಕ್ಕೆ ಸರಿಸಿ, ಅವರ ಮೇಲಿದ್ದೆ ಸೆರಗು ಕಳಚಿ ಬೀಳಲು, ನಿತಂಬವನ್ನು ಕುಣಿಸಿ, ನದುವು ಹೆದರಲು, ಮುಂಗುರುಳುಗಳು ಕುಣಿಯುತ್ತಿರಲು, ಮಣಿಕುಂಡಲಗಳು ಅಲುಗಾಡುತ್ತಿರಲು, ಹಣೆಯ ಮುತ್ತು ತಿಲಕವು ಕೆದರಲು ತರುಣಿಯರು ನಡೆದರು.

ಅರ್ಥ:
ಬಲು: ಗಟ್ಟಿ, ದೊಡ್ಡದಾದ; ಮೊಲೆ: ಸ್ತನ; ಅಳ್ಳಿರಿ: ಅಲುಗಾಡು; ಏಕಾವಳಿ: ಒಂದೆಳೆಯಸರ, ಒಂದು ಮುತ್ತಿನ ಸರ; ಕೆಲಕೊತ್ತು: ಪಕ್ಕಕ್ಕೆ ಇಡು; ಮೇಲುದು: ಸೆರಗು; ಕಳಚು: ಬಿಚ್ಚು; ನಡುಗು: ಅಲ್ಲಾಡು; ನಡು: ಮಧ್ಯಭಾಗ; ಅಂಜಿಸು: ಹೆದರಿಸು; ಜಘ: ನಿತಂಬ, ಕಟಿ; ಮಂಡಲ: ಗುಂಡಾಗಿರುವ ಪ್ರದೇಶ; ಅಳಕ: ಗುಂಗುರು ಕೂದಲು, ಮುಂಗುರುಳು; ನಿಕರ: ಗುಂಪು; ಕುಣಿಸು: ನರ್ತಿಸು; ಮಣಿ: ರತ್ನ; ಕುಂಡಲ: ಕಿವಿಯ ಆಭರಣ; ಅಲುಗಿಸು: ಅಲ್ಲಾಡಿಸು; ಹಣೆ: ಲಲಾಟ; ಮುತ್ತು: ರತ್ನ; ತಿಲಕ: ಹಣೆಯಲ್ಲಿಡುವ ಬೊಟ್ಟು; ತನಿ: ಚೆನ್ನಾಗಿ ಬೆಳೆದ, ಅತಿಶಯವಾದ; ಕೆದರು: ಹರಡು; ನಡೆ: ಚಲಿಸು; ಕೂಡೆ: ಜೊತೆ; ಸತಿ: ಹೆಣ್ಣು; ನಿವಹ: ಗುಂಪು;

ಪದವಿಂಗಡಣೆ:
ಬಲು+ಮೊಲೆಗಳ್+ಅಳ್ಳಿರಿಯಲ್+ಏಕಾ
ವಳಿಗಳನು +ಕೆಲಕ್+ಒತ್ತಿ +ಮೇಲುದ
ಕಳಚಿ +ನಡುಗಿಸಿ+ ನಡುವನ್+ಅಂಜಿಸಿ +ಜಘನ+ ಮಂಡಲವ
ಆಳಕ+ನಿಕರವ +ಕುಣಿಸಿ +ಮಣಿ+ಕುಂ
ಡಲವನಲುಗಿಸಿ ಹಣೆಯ ಮುತ್ತಿನ
ತಿಲಕವನು+ ತನಿಗೆದರಿ+ ನಡೆದುದು +ಕೂಡೆ +ಸತಿ+ನಿವಹ

ಅಚ್ಚರಿ:
(೧) ಹೆಣ್ಣಿನ ಸೌಂದರ್ಯವನ್ನು ತೋರುವ ಪದ್ಯ – ಬಲುಮೊಲೆಗಳಳ್ಳಿರಿಯಲೇಕಾ
ವಳಿಗಳನು ಕೆಲಕೊತ್ತಿ ಮೇಲುದಕಳಚಿ ನಡುಗಿಸಿ ನಡುವನಂಜಿಸಿ ಜಘನ ಮಂಡಲವ

ಪದ್ಯ ೧೧: ದ್ರೌಪದಿಯ ಸೌಂದರ್ಯವು ಕಣ್ಣನ್ನು ಹೇಗೆ ಕಟ್ಟುತ್ತಿತ್ತು?

ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಯದು
ಲಲಿತ ಮೈಕಾಂತಿಗಳಲದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ (ಆದಿ ಪರ್ವ, ೧೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ದ್ರೌಪದಿಯ ಸೌಂದರ್ಯದ ವರ್ಣನೆ ಮುಂದುವರೆದಿದೆ. ಹಿಂದಿನ ಪದ್ಯದಲ್ಲಿ ಹೇಗೆ ಸಖಿಯರು ಆಕೆಯನ್ನು ಕಂಡು ಅವಳ ರೂಪವನ್ನು ವರ್ಣಿಸಲು ಸೋತರು, ಈಗ ಜನರು ಅವಳನ್ನು ಕಂಡರೆ, ಹೇಗೆ ಅವರ ಕಣ್ಣುಗಳು ಬೇರೆಕಡೆಗೆ ನೋಡಲು ಇಚ್ಛಿಸುವುದಿಲ್ಲ ಎಂದು ಹೇಳುವ ಮೂಲಕ ದ್ರೌಪದಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. ಆಕೆಯ ಎದೆಪ್ರದೇಶ (ಸ್ತನ) ವನ್ನು ಒಮ್ಮೆ ಕಣ್ಣುಗಳು ನೋಡಿದರೆ ಮತ್ತೆ ಅಲ್ಲಿಂದ ಹೊರಬರಲು ಸಾಧ್ಯವೆ? ಆಕೆಯ ಕಣ್ಣುಗಳ್ಳನ್ನು ಒಮ್ಮೆ ನೋಡಿದರೆ ರೆಪ್ಪೆ ಹೊಡೆಯುವುದಕ್ಕೆ (ಕಣ್ಣು ಮಿಟುಕಿಸುವುದಕ್ಕೆ) ಸಮಯವೆಲ್ಲಿ? ಆಕೆಯ ಮೈಕಾಂತಿಯನ್ನು ನೋಡಿ ಅದರಲ್ಲೇ ಮುಳುಗಿದರೆ, ಅಲ್ಲಿಂದ ಪುನ: ತೆಗೆವವರಾರು? ಮತ್ತು ಆಕೆಯ ಜಘನ ಪ್ರದೇಶವನ್ನು ನೋಡಿದರೆ ಕಣ್ಣುಗಳು ಪುನ: ಮರಳಲು ಸಾಧ್ಯವೆ? ಹೀಗೆ ಆಕೆಯನ್ನು ನೋಡಿದವರಾರು ಆಕೆಯ ಸೌಂದರ್ಯವನ್ನು ನೋಡಿ ಅಲ್ಲಿಂದ ಹೊರಬರಲು ಅವರ ಕಣ್ಣುಗಳಿಗಾಗುತ್ತಿರಲಿಲ್ಲ.

ಅರ್ಥ:
ಮೊಲೆ: ಸ್ತನ; ಸಿಲುಕು: ಕಟ್ಟುಹಾಕು, ಸಿಕ್ಹಾಕಿಕೊ; ನೋಟ: ದೃಷ್ಟಿ; ಬಳಿಕ: ಮತ್ತೆ, ನಂತರ; ಪುನರಾವರ್ತಿ: ಮತ್ತೆ ಪ್ರಾರಂಭ; ಕಂಗಳು: ಕಣ್ಣು; ಕಾಮಿಸು: ಇಷ್ಟಪಡು, ಮೋಹಿಸು; ನಿಮಿಷ: ರೆಪ್ಪೆಹೊಡೆಯುವುದು, ಅತ್ಯಲ್ಪ ಕಾಲ; ಸಮಯ: ಕಾಲ; ಲಲಿತ: ಸೌಂದರ್ಯ, ಆಕರ್ಷಕ; ಕಾಂತಿ: ಕಿರಣ, ಹೊಳಪು; ಅದ್ದು: ಮುಳುಗು, ನೆನೆಯಿಸು; ತೆಗೆ: ಹೊರಹಾಕು; ಜಘನ: ನಿತಂಬ, ಕಟಿ ಪುರೋಭಾಗ, ಸೊಂಟದ ಕೆಳಗಿನ ಹಿಂಬಾಗ; ಸ್ಥಳ: ಜಾಗ; ಮುರಿ: ತಿರುಗು, ಪುನ:; ಹುಸಿ: ಸುಳ್ಳಾಗು;

ಪದವಿಂಗಡಣೆ:
ಮೊಲೆಗಳಲಿ +ಸಿಲುಕಿದೊಡೆ +ನೋಟಕೆ
ಬಳಿಕ+ ಪುನರಾವರ್ತಿಯೇ +ಕಂ
ಗಳಿಗೆ+ ಕಾಮಿಸಿದರೆಯು +ನಿಮಿಷಕೆ+ ಸಮಯ+ವೆಲ್ಲಿಯದು
ಲಲಿತ +ಮೈಕಾಂತಿಗಳಲ್+ಅದ್ದರೆ
ಮುಳುಗಿ +ತೆಗೆವವರಾರು+ ಜಘನ
ಸ್ಥಳಕೆ+ ಮುರಿದರೆ+ ಮರಳದಲೆ+ ಕಂಗಳಿಗೆ+ ಹುಸಿಯೆಂದ

ಅಚ್ಚರಿ:
(೧) ಅದ್ದರೆ, ಮುಳುಗಿ – ಸಮಾನಾರ್ಥಕ ಪದ, ಜೋಡಿಯಾಗಿ ಇದನ್ನು ಬಳಸಿರುವ ರೀತಿ ರಂಜನಿಯವಾಗಿದೆ
(೨) ಕಂಗಳಿಗೆ – ೨ ಬಾರಿ ಪ್ರಯೋಗ – ೨, ೬ ಸಾಲು
(೩) ಕಂಗಳಿಗೆ ಕಾಮಿಸಿದರೆ, ಮುರಿದರೆ ಮರಳದಲೆ – ಜೋಡಿ ಪದಗಳು