ಪದ್ಯ ೨೩: ಉತ್ತರೆಯ ಗರ್ಭವನ್ನು ಯಾವುದು ರಕ್ಷಿಸಲು ಅಣಿಯಾಯಿತು?

ಜಗವ ಹೂಡುವ ಮೇಣ್ ಚತುರ್ದಶ
ಜಗದ ಜೀವರನೂಡಿಯುಣಿಸುವ
ಜಗವನಂತರ್ಭಾವದಲಿ ಬಲಿಸುವ ಗುಣತ್ರಯದ
ಸೊಗಡು ತನ್ನ ಸಹಸ್ರಧಾರೆಯ
ಝಗೆಯೊಳೆನಿಪ ಮಹಾಸುದರ್ಶನ
ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ (ಗದಾ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಜಗತ್ತನ್ನು ಸೃಷ್ಟಿಸಿ, ಹದಿನಾಲ್ಕು ಲೋಕಗಳ ಜೀವರನ್ನು ಸಲಹುವ, ಸಂಹರಿಸುವ ಮಾಯೆಯ ತ್ರಿಗುಣಗಲ ವಾಸನೆಯನ್ನು ತನ್ನ ಸಾವಿರ ಧಾರೆಗಳ ಬೆಳಕಿನಲ್ಲಿ ಧರಿಸುವ ಸುದರ್ಶನ ಚಕ್ರವು ಉತ್ತರೆಯ ಗರ್ಭವನ್ನಾವರಿಸಿ ರಕ್ಷಿಸಲನುವಾಯಿತು.

ಅರ್ಥ:
ಜಗ: ಜಗತ್ತು; ಹೂಡು: ಅಣಿಗೊಳಿಸು, ಸಿದ್ಧಪಡಿಸು; ಮೇಣ್: ಅಥವ; ಚತುರ್ದಶ: ಹದಿನಾಲ್ಕು; ಜೀವ: ಪ್ರಾಣ; ಊಡು: ಆಧಾರ, ಆಶ್ರಯ; ಉಣಿಸು: ತಿನ್ನಿಸು; ಭಾವ: ಭಾವನೆ, ಚಿತ್ತವೃತ್ತಿ; ಬಲಿಸು: ಗಟ್ಟಿಪಡಿಸು; ಗುಣ: ನಡತೆ, ಸ್ವಭಾವ; ತ್ರಯ: ಮೂರು; ಸೊಗಡು: ಕಂಪು, ವಾಸನೆ; ಸಹಸ್ರ: ಸಾವಿರ; ಧಾರೆ: ವರ್ಷ; ಝಗೆ: ಹೊಳಪು, ಪ್ರಕಾಶ; ಸುದರ್ಶನ: ವಿಷ್ಣುವಿನ ಕೈಯಲ್ಲಿರುವ ಆಯುಧಗಳಲ್ಲಿ ಒಂದು, ಚಕ್ರಾಯುಧ; ಬಿಗಿ: ಭದ್ರವಾಗಿರುವುದು; ಸುತ್ತಲು: ಎಲ್ಲಾ ಕಡೆ; ವೇಢೆ: ಆಕ್ರಮಣ; ಗರ್ಭ: ಹೊಟ್ಟೆ;

ಪದವಿಂಗಡಣೆ:
ಜಗವ +ಹೂಡುವ +ಮೇಣ್ +ಚತುರ್ದಶ
ಜಗದ +ಜೀವರನ್+ಊಡಿ+ಉಣಿಸುವ
ಜಗವನ್+ಅಂತರ್ಭಾವದಲಿ +ಬಲಿಸುವ +ಗುಣ+ತ್ರಯದ
ಸೊಗಡು +ತನ್ನ +ಸಹಸ್ರ+ಧಾರೆಯ
ಝಗೆಯೊಳೆನಿಪ+ ಮಹಾಸುದರ್ಶನ
ಬಿಗಿದು +ಸುತ್ತಲು +ವೇಢೆಯಾಯ್ತ್+ಉತ್ತರೆಯ +ಗರ್ಭದಲಿ

ಅಚ್ಚರಿ:
(೧) ಜಗ – ೧-೩ ಸಾಲಿನ ಮೊದಲ ಪದ
(೨) ಸುದರ್ಶನದ ವಿವರ – ಸಹಸ್ರಧಾರೆಯ ಝಗೆಯೊಳೆನಿಪ ಮಹಾಸುದರ್ಶನ

ಪದ್ಯ ೩೨: ಯಾರು ಜಗತ್ತಿನ ಸಂರಕ್ಷಕರು?

ಒಂದು ಮುಖದಲಿ ಜಗವ ಹೂಡುವ
ನೊಂದು ಮುಖದಲಿ ಜಗವ ಸಲಹುವ
ನೊಂದು ಮುಖದಲಿ ಬೇಳುವನು ನಯನಾಗ್ನಿಯಲಿ ಜಗವ
ಕೊಂದು ಹಗೆಯಲ್ಲೀತ ಸಲಹಿದ
ನೆಂದು ಮೋಹಿತನಲ್ಲ ಪರಮಾ
ನಂದ ನೀ ಹರಿಯಿದಕೆ ಕಾರಣವಿಲ್ಲ ನಿನಗೆಂದ (ಭೀಷ್ಮ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನ ಅಳಲಿಗೆ ಭೀಷ್ಮರು ಉತ್ತರಿಸುತ್ತಾ, ಎಲೈ ಅರ್ಜುನ ಹರಿಯು ಒಂದು ಮುಖದಿಂದ ಬ್ರಹ್ಮನಾಗಿ ಈ ಜಗತ್ತನ್ನು ಸೃಷ್ಟಿಸುತ್ತಾನೆ, ಇನ್ನೊಂದು ಮುಖದಿಂದ ವಿಷ್ಣುವಾಗಿ ಈ ಜಗತ್ತನ್ನು ಕಾಪಾಡುತ್ತಾನೆ, ಮತ್ತೊಂದು ಮುಖದಿಂದ ರುದ್ರನಾಗಿ ತನ್ನ ಹಣೆಗಣ್ಣಿನ ಬೆಂಕಿಯಿಂದ ಈ ಜಗತ್ತನ್ನು ಸಂಹರಿಸುತ್ತಾನೆ. ಕೋಮ್ದರೂ ಇವನು ಶತ್ರುವಲ್ಲ, ಕಾಪಾಡಿದರೂ ಇವನು ಮೋಹಿತನಲ್ಲ. ಇವನು ಪರಮಾನಂದ ಸ್ವರೂಪನು, ಆದುದರಿಂದ ಕೊಲ್ಲುವುದೂ ಸಾಯುವುದೂ ನಿನಗೆ ಸಂಬಂಧಿಸಿದುದಲ್ಲ.

ಅರ್ಥ:
ಮುಖ: ಆನನ; ಜಗ: ಪ್ರಪಂಚ; ಹೂಡು: ಅಣಿಗೊಳಿಸು, ಸಿದ್ಧಗೊಳಿಸು; ಸಲಹು: ಕಾಪಾಡು; ಬೇಳು: ಸುಟ್ಟುಹಾಕು, ನಾಶಪಡಿಸು; ನಯನ: ಕಣ್ಣು; ಅಗ್ನಿ: ಬೆಂಕಿ; ಜಗ: ಪ್ರಪಂಚ; ಕೊಂದು: ಸಾಯಿಸು; ಹಗೆ: ವೈರತ್ವ; ಸಲಹು: ಕಾಪಾಡು; ಮೋಹ: ಆಸೆ; ಆನಂದ: ಸಂತಸ; ಕಾರಣ: ನಿಮಿತ್ತ;

ಪದವಿಂಗಡಣೆ:
ಒಂದು +ಮುಖದಲಿ +ಜಗವ+ ಹೂಡುವನ್
ಒಂದು +ಮುಖದಲಿ +ಜಗವ +ಸಲಹುವನ್
ಒಂದು+ ಮುಖದಲಿ +ಬೇಳುವನು +ನಯನಾಗ್ನಿಯಲಿ +ಜಗವ
ಕೊಂದು +ಹಗೆಯಲ್ಲೀತ+ ಸಲಹಿದನ್
ಎಂದು +ಮೋಹಿತನಲ್ಲ+ ಪರಮಾ
ನಂದನ್ +ಈ +ಹರಿಯಿದಕೆ+ ಕಾರಣವಿಲ್ಲ +ನಿನಗೆಂದ

ಅಚ್ಚರಿ:
(೧) ಒಂದು, ಕೊಂದು, ಎಂದು – ಪ್ರಾಸ ಪದಗಳು
(೨) ಒಂದು ಮುಖದಲಿ – ೧-೩ ಸಾಲಿನ ಮೊದಲ ಪದಗಳು