ಪದ್ಯ ೫೭: ಜಂಬೂದ್ವೀಪದಲ್ಲಿ ಎಷ್ಟು ವರುಷಗಳಿವೆ?

ವರುಷವೊಂಬತ್ತಾಗಿಹುದು ವಿ
ಸ್ತರದ ಜಂಬೂದ್ವೀಪವೊಂದೇ
ವರುಷವೇಳಾಗಿಹವು ತಾ ಶತ ಸಂಖ್ಯೆಯಾದ್ವೀಪ
ನಿರುತಕಡೆಯದ್ವೀಪವೆಂಬುದು
ವರುಷವೆರಡಾಗಿರಲು ಮಾನಸ
ಗಿರಿಯದರ ನಡುವಿಹುದು ಚಕ್ರದ ಕಂಬಿಯಂದದಲಿ (ಅರಣ್ಯ ಪರ್ವ, ೮ ಸಂಧಿ, ೫೭ ಪದ್ಯ)

ತಾತ್ಪರ್ಯ:
ಜಂಬೂದ್ವೀಪದಲ್ಲಿ ಒಂಬತ್ತು ವರ್ಷಗಳಿವೆ. ಉಳಿದವುಗಳಲ್ಲಿ ಹಲವು ದ್ವೀಪಗಳಿವೆ. ಕಡೆಯ ದ್ವೀಪದಲ್ಲಿ ಎರಡು ವರ್ಷಗಳಿವೆ. ಅಲ್ಲಿ ಚಕ್ರದ ಕಂಬಿಯಂತೆ ಮಾನಸಗಿರಿಯಿದೆ.

ಅರ್ಥ:
ವರುಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ವಿಸ್ತರ: ವಿಸ್ತಾರ, ಅಗಲ; ದ್ವೀಪ: ನೀರಿನಿಂದ ಆವರಿಸಿಕೊಂಡಿರುವ ಭೂಭಾಗ; ನಿರುತ: ನಿಶ್ಚಯ; ಗಿರಿ: ಬೆಟ್ಟ; ನಡು: ಮಧ್ಯ; ಚಕ್ರ: ಗಾಲಿ; ಕಂಬಿ: ಉಕ್ಕಿನ ಸಲಾಕಿ;

ಪದವಿಂಗಡಣೆ:
ವರುಷವ್+ಒಂಬತ್ತಾಗಿಹುದು +ವಿ
ಸ್ತರದ +ಜಂಬೂ+ದ್ವೀಪವ್+ಒಂದೇ
ವರುಷವ್+ಏಳಾಗಿಹವು +ತಾ +ಶತ+ ಸಂಖ್ಯೆಯಾ+ದ್ವೀಪ
ನಿರುತಕಡೆಯ+ ದ್ವೀಪವೆಂಬುದು
ವರುಷವ್+ಎರಡಾಗಿರಲು +ಮಾನಸ
ಗಿರಿ+ಅದರ +ನಡುವಿಹುದು +ಚಕ್ರದ +ಕಂಬಿಯಂದದಲಿ

ಪದ್ಯ ೫೪: ಸಮುದ್ರಗಳ ವಿಸ್ತಾರವೆಷ್ಟು?

ಲಕ್ಕ ಜಂಬೂದ್ವೀಪವಾಪರಿ
ಲಕ್ಕ ಲವಣ ಸಮುದ್ರ ನಾಲಕು
ಲಕ್ಕ ದ್ವೀಪ ಪ್ಲಕ್ಷ ವಿಕ್ಷು ಸಮುದ್ರವೊಂದಾಗಿ
ಲಕ್ಕವೆಂಟುಸುಶಾಲ್ಮಲಿಯು ಸುರೆ
ಲಕ್ಕ ಷೋಡಶ ಕುಶಘೃತಂಗಳು
ಲಕ್ಕಮೂವತ್ತೆರಡು ಕ್ರೌಂಚದ್ವೀಪ ದಧಿಗೂಡಿ (ಅರಣ್ಯ ಪರ್ವ, ೮ ಸಂಧಿ, ೫೪ ಪದ್ಯ)

ತಾತ್ಪರ್ಯ:
ಜಂಬೂದ್ವೀಪ ಲವಣ ಸಮುದ್ರಗಳು ಒಂದೊಂದು ಲಕ್ಷ ಯೋಜನ ವಿಸ್ತಾರ. ಪ್ಲಕ್ಷ ಇಕ್ಷು ಸಮುದ್ರಗಳು ನಾಲ್ಕು ಲಕ್ಷ. ಶಾಲ್ಮಲಿದ್ವೀಪ ಸುರಾಸಮುದ್ರಗಳು ಎಂತು ಲಕ್ಷ, ಕುಶದ್ವೀಪ ಘೃತ ಸಮುದ್ರಗಳು ಹದಿನಾರು ಲಕ್ಷ, ಕ್ರೌಂಚದ್ವೀಪ ದಧಿಸಮುದ್ರಗಳು ಮುವತ್ತೆರಡು ಲಕ್ಷ.

ಅರ್ಥ:
ಲಕ್ಕ: ಲಕ್ಷ; ದ್ವೀಪ: ನೀರಿನಿಂದ ಆವರಿಸಿಕೊಂಡಿರುವ ಭೂಭಾಗ; ಲವಣ: ಉಪ್ಪು; ಸಮುದ್ರ: ಸಾಗರ; ಷೋಡಶ: ಹದಿನಾರು; ಘೃತ: ತುಪ್ಪ; ದಧಿ: ಮೊಸರು;

ಪದವಿಂಗಡಣೆ:
ಲಕ್ಕ +ಜಂಬೂ+ದ್ವೀಪವ್+ಆ+ಪರಿ
ಲಕ್ಕ +ಲವಣ+ ಸಮುದ್ರ +ನಾಲಕು
ಲಕ್ಕ+ ದ್ವೀಪ +ಪ್ಲಕ್ಷವ್+ಇಕ್ಷು+ ಸಮುದ್ರವೊಂದಾಗಿ
ಲಕ್ಕವ್+ಎಂಟು+ಸುಶಾಲ್ಮಲಿಯು +ಸುರೆ
ಲಕ್ಕ +ಷೋಡಶ +ಕುಶ+ಘೃತಂಗಳು
ಲಕ್ಕ+ಮೂವತ್ತೆರಡು +ಕ್ರೌಂಚ+ದ್ವೀಪ +ದಧಿಗೂಡಿ

ಅಚ್ಚರಿ:
(೧) ಲಕ್ಕ – ೬ ಸಾಲಿನ ಮೊದಲ ಪದ
(೨) ೧, ೨, ೪, ೮, ೧೬, ೩೨ – ಸಂಖ್ಯೆಗಳ ಬಳಕೆ

ಪದ್ಯ ೪೧: ಭೂಮಂಡಲ ಮಧ್ಯದಲ್ಲಿ ಯಾವ ಖಂಡವಿದೆ?

ಧಾರಿಣಿಯ ನಡುಬಳಸಿ ಬೆಳೆದಿಹ
ಮೇರು ಗಿರಿಯನು ಬಳಸಿ ವೃತ್ತಾ
ಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ
ಮೇರೆಯಾಗಿಹ ಗಿರಿಕುಲಂಗಳ
ತೋರದಗಲವನುನ್ನತಂಗಳ
ಸಾರ ಹೃದಯರು ಬಲ್ಲರೈ ಕಲಿಪಾರ್ಥ ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಭೂಮಂಡಲ ಮಧ್ಯದಲ್ಲಿರುವ ಮೇರುಪರ್ವತದ ಸುತ್ತಲೂ ಜಂಬೂದ್ವೀಪದ ನವಖಂಡಗಳು ವೃತ್ತಾಕಾರವಾಗಿವೆ. ಈ ಗಿರಿಗಳ ಎತ್ತರ ಹರಹುಗಳನ್ನು ಬಲ್ಲ ಪುಣ್ಯಾತ್ಮರು ಇದ್ದಾರೆ.

ಅರ್ಥ:
ಧಾರಿಣಿ: ಭೂಮಿ; ನಡು: ಮಧ್ಯ; ಬಳಸು: ಆವರಿಸುವಿಕೆ; ಬೆಳೆ: ಬೆಳೆದುದು; ಗಿರಿ: ಬೆಟ್ಟ; ವೃತ್ತ: ಬಳಸಿದ, ಸುತ್ತುವರಿದ; ಎಸೆ: ತೋರು; ದ್ವೀಪ: ನೀರಿನಿಂದ ಆವರಿಸಿದ ಭೂಭಾಗ; ನವ: ಹೊಸ; ಖಂಡ: ತುಂಡು, ಚೂರು; ಮೇರೆ: ಎಲ್ಲೆ, ಗಡಿ; ಗಿರಿ: ಬೆಟ್ಟ; ತೋರು: ಗೋಚರಿಸು; ಅಗಲ: ವಿಸ್ತಾರ; ಉನ್ನತ: ಹಿರಿಯ, ಉತ್ತಮ; ಸಾರ: ರಸ; ಹೃದಯ: ವಕ್ಷಸ್ಥಳ; ಬಲ್ಲರು: ತಿಳಿದವರು; ಕಲಿ: ಶೂರ;

ಪದವಿಂಗಡಣೆ:
ಧಾರಿಣಿಯ +ನಡುಬಳಸಿ +ಬೆಳೆದಿಹ
ಮೇರು +ಗಿರಿಯನು +ಬಳಸಿ +ವೃತ್ತಾ
ಕಾರವಾಗ್+ಎಸೆದಿಹುದು +ಜಂಬೂದ್ವೀಪ +ನವಖಂಡ
ಮೇರೆಯಾಗಿಹ +ಗಿರಿಕುಲಂಗಳ
ತೋರದಗಲವನ್+ಉನ್ನತಂಗಳ
ಸಾರ +ಹೃದಯರು +ಬಲ್ಲರೈ+ ಕಲಿಪಾರ್ಥ+ ಕೇಳೆಂದ

ಅಚ್ಚರಿ:
(೧) ಜಂಬೂದ್ವೀಪ – ಮೇರು ಗಿರಿಯನು ಬಳಸಿ ವೃತ್ತಾಕಾರವಾಗೆಸೆದಿಹುದು ಜಂಬೂದ್ವೀಪ ನವಖಂಡ