ಪದ್ಯ ೨೮: ಕೃಷ್ಣನು ಯಾವ ಸಲಹೆಯನ್ನು ನೀಡಿದನು?

ನುಡಿದ ಕಾಲಾವಧಿಗೆ ಜರೆ ತೆರೆ
ಯಡಸಿದವು ಜಾಣಿನಲಿ ಸತ್ಯವ
ನಡೆಸಿದಿರಿ ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದರೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ (ಅರಣ್ಯ ಪರ್ವ, ೧೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ನೀವು ಮಾತುಕೊಟ್ಟ ಅರಣ್ಯವಾಸದ ಅವಧಿಗೆ ಮುಪ್ಪು ಬಂದಿದೆ. ಕೆಲವೇ ದಿನಗಳು ಈಗ ಉಳಿದಿವೆ. ಇಷ್ಟು ದಿನ ಜಾಣತನದಿಂದ ಸತ್ಯಮಾರ್ಗದಲ್ಲಿ ನಡೆದಿದ್ದೀರಿ, ಕೊನೆಯಲ್ಲಿ ಹಿರಿಮೆಯನ್ನು ಕಳೆದುಕೊಳ್ಳಬೇಡಿ. ಕರ್ಣನೇ ಮೊದಲಾದ ಕುಹಕಿಗಳು ದುಡುಕಿ ಆ ಕೃತ್ಯವನ್ನು ಮಾಡಲು ಬಂದರೆ ನೀವು ದುಡುಕದೆ ನಿಧಾನಿಸೆ, ಧರ್ಮದ ದಡವನ್ನು ಸೇರಿದರೆ ವಿಜಯ ಮಾರ್ಗದಲ್ಲಿ ಕ್ಷಿಪ್ರವಾಗಿ ಮುಂದುವರೆಯುವಿರಿ ಎಂದು ಶ್ರೀಕೃಷ್ಣನು ಎಚ್ಚರಿಸಿ ಆಶೀರ್ವದಿಸಿದನು.

ಅರ್ಥ:
ನುಡಿ: ಮಾತಾಡು; ಕಾಲ: ಸಮಯ; ಅವಧಿ: ಗಡು, ಸಮಯದ ಪರಿಮಿತಿ; ಜರೆ: ಮುಪ್ಪು; ತೆರೆ: ತೆಗೆ, ಬಿಚ್ಚು; ಅಡಸು: ಬಿಗಿಯಾಗಿ ಒತ್ತು; ಜಾಣಿನಲಿ: ಬುದ್ಧಿವಂತಿಕೆ; ಸತ್ಯ: ದಿಟ;ನಡೆಸು: ಮುನ್ನಡೆ, ಚಲಿಸು; ಕಡೆ: ಕೊನೆ; ಉನ್ನತಿ: ಏಳಿಗೆ; ಕೆಡಿಸು: ಹಾಳುಮಾಡು; ಕಡು: ವಿಶೇಷ, ಅಧಿಕ; ಮನ: ಮನಸ್ಸು; ಆದಿ: ಮುಂತಾದ; ಕೈ: ಹಸ್ತ; ದುಡುಕು: ಆತುರ, ಅವಸರ; ಧರ್ಮ: ಧಾರಣೆ ಮಾಡಿದುದು; ತಡಿ:ದಡ, ತೀರ; ಜಾರು: ಬೀಳು; ಜಯ: ಗೆಲುವು; ಅಧ್ವ: ದಾರಿ, ಮಾರ್ಗ; ಜಂಘಾಲ: ಶೀಘ್ರ ಓಟದ, ಚಿಗರೆ; ಅರಹು: ತಿಳಿ;

ಪದವಿಂಗಡಣೆ:
ನುಡಿದ +ಕಾಲ+ಅವಧಿಗೆ +ಜರೆ +ತೆರೆ
ಯಡಸಿದವು +ಜಾಣಿನಲಿ +ಸತ್ಯವ
ನಡೆಸಿದಿರಿ +ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದರೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ

ಅಚ್ಚರಿ:
(೧) ಅರಣ್ಯವಾಸ ಅಂತ್ಯದಲ್ಲಿದೆ ಎಂದು ಹೇಳಲು – ನುಡಿದ ಕಾಲಾವಧಿಗೆ ಜರೆ ತೆರೆ
ಯಡಸಿದವು
(೨) ಕೃಷ್ಣನ ಸಲಹೆ – ಧರ್ಮದತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ