ಪದ್ಯ ೬: ಉತ್ತರನೇಕೆ ಹೆದರಿದನು?

ಕಾಲಕೂಟದ ತೊರೆಯೊ ಮಾರಿಯ
ಗೂಳೆಯವೊ ಮೃತ್ಯುವಿನ ಗಂಟಲ
ತಾಳಿಗೆಯೊ ಭೈರವನ ಥಟ್ಟೋ ಜವನ ಜಂಗುಳಿಯೊ
ಕಾಲರುದ್ರನ ನೊಸಲ ವಹ್ನಿ
ಜ್ವಾಲೆಯೋ ಕೌರವನ ಸೇನಾ
ಜಾಲವೋ ಶಿವಯೆನುತ ಹೆದರಿದನಂದು ಸುಕುಮಾರ (ವಿರಾಟ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಉತ್ತರನು ಕೌರವರ ಸೈನ್ಯವನ್ನು ಕಂಡು ಇದೇನು ಕೌರವನ ಸೈನ್ಯವೋ ಅಥವ ಕಾಲಕೂಟದ ವಿಷದ ನದಿಯೋ, ಮಾರಿದೇವತೆಗಳು ಒಂದು ಜಾಗವನ್ನು ಬಿಟ್ಟು ಆಹಾರಕ್ಕಾಗಿ ಗುಳೇ ಹೊರಟ ರೀತಿಯಿದೆ, ಮೃತ್ಯುವಿನ ಗಂಟಲ ಕಿರುನಾಲಗೆಯೋ, ಭೈರವನ ಪರಿವಾರವೋ, ಯಮನ ಜಂಗುಲೀ, ಕಾಲರುದ್ರನ ಗಣೆಗಣ್ಣಿನ ಉರಿಯ ಜ್ವಾಲೆಯೋ ಎಂಬಂತೆ ಈ ಸೈನ್ಯವು ತೋರುತ್ತಿದೆ ಎಂದು ಚಿಂತಿಸಿ ಉತ್ತರನು ಹೆದರಿದನು.

ಅರ್ಥ:
ಕಾಲಕೂಟ: ವಿಷ, ಗರಳ; ತೊರೆ: ನದಿ; ಮಾರಿ: ಕ್ಷುದ್ರ ದೇವತೆ; ಗೂಳೆ: ಸಾಮೂಹಿಕವಾಗಿ ಊರು ಬಿಟ್ಟು ಹೋಗುವುದು; ಮೃತ್ಯು: ಸಾವು; ಗಂಟಲು: ಕಂಠ; ತಾಳಿಗೆ: ಕಿರುನಾಲಿಗೆ; ಥಟ್ಟು: ಗುಂಪು, ಸಮೂಹ; ಜಂಗುಳಿ: ಗುಂಪು; ನೊಸಲು: ಹಣೆ; ವಹ್ನಿ: ಅಗ್ನಿ; ಜ್ವಾಲೆ: ಬೆಂಕಿ; ಜಾಲ: ಗುಂಪು; ಹೆದರು: ಭಯಗೊಳ್ಳು; ಸುಕುಮಾರ: ಪುತ್ರ; ಜವ: ಯಮ;

ಪದವಿಂಗಡಣೆ:
ಕಾಲಕೂಟದ +ತೊರೆಯೊ +ಮಾರಿಯ
ಗೂಳೆಯವೊ +ಮೃತ್ಯುವಿನ+ ಗಂಟಲ
ತಾಳಿಗೆಯೊ +ಭೈರವನ+ ಥಟ್ಟೋ +ಜವನ+ ಜಂಗುಳಿಯೊ
ಕಾಲರುದ್ರನ+ ನೊಸಲ +ವಹ್ನಿ
ಜ್ವಾಲೆಯೋ +ಕೌರವನ +ಸೇನಾ
ಜಾಲವೋ +ಶಿವ+ಎನುತ +ಹೆದರಿದನ್+ಅಂದು +ಸುಕುಮಾರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಲಕೂಟದ ತೊರೆಯೊ; ಮಾರಿಯಗೂಳೆಯವೊ; ಮೃತ್ಯುವಿನ ಗಂಟಲ
ತಾಳಿಗೆಯೊ; ಭೈರವನ ಥಟ್ಟೋ ಜವನ ಜಂಗುಳಿಯೊ